ಭಾನುವಾರ, ಮೇ 31, 2020
27 °C

‘ದೌರ್ಜನ್ಯಕ್ಕೆ ಒಳಗಾದವರಿಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು ವಿಫಲ’ ಉಗ್ರಪ್ಪ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ದೌರ್ಜನ್ಯಕ್ಕೆ ಒಳಗಾದವರಿಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು ವಿಫಲ’ ಉಗ್ರಪ್ಪ ಅಸಮಾಧಾನ

ಉಡುಪಿ: ‘ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಪರಿಹಾರ ನೀಡುವ ಯೋಜನೆಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿಯೇ ಇಲ್ಲ. ಪರಿಣಾಮ ಸಂತ್ರಸ್ತರು ಸೌಲಭ್ಯದಿಂದ ವಂಚಿತರಾಗಿದ್ದಾರೆ’ ಎಂದು ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ತಜ್ಞರ ಸಮಿತಿ ಅಧ್ಯಕ್ಷ ವಿ.ಎಸ್‌. ಉಗ್ರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಭಾನುವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು, ದೌರ್ಜನ್ಯ ಪ್ರಕರಣಗಳಲ್ಲಿ ಪರಿಹಾರ ನೀಡಲು ಇರುವ ಅವಕಾಶಗಳು ಯಾವುವು, ಪೋಕ್ಸೊ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ವಿಚಾರಣೆ ಎಷ್ಟು ದಿನದಲ್ಲಿ ಪೂರ್ಣಗೊಳ್ಳಬೇಕು, ಕೇಂದ್ರದ ನಿರ್ಭಯಾ ನಿಧಿಯ ಬಳಕೆ ಹೇಗೆ ಎಂಬ ಪ್ರಶ್ನೆಗಳನ್ನು ಕೇಳಿದರು. ಆದರೆ ಅಧಿಕಾರಿಗಳು ಸಮರ್ಪಕವಾದ ಉತ್ತರ ನೀಡದಿದ್ದಾಗ ತರಾಟೆಗೆ ತೆಗೆದುಕೊಂಡರು.

‘ಪೊಲೀಸ್ ಅಧಿಕಾರಿಗಳು, ಪಬ್ಲಿಕ್ ಪ್ರಾಸಿಕ್ಯೂಟರ್, ಪೋಕ್ಸೊ ಕಾಯ್ದೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವರಿಗೂ ಕಾನೂನಿನ ಕೆಲವು ಮುಖ್ಯ ಅಂಶಗಳ ಬಗ್ಗೆ ಮಾಹಿತಿಯೇ ಇಲ್ಲ. ಹೀಗಾದರೆ ಜಿಲ್ಲೆಯ ಜನರಿಗೆ ನ್ಯಾಯ ಕೊಡಿಸಲು ಸಾಧ್ಯವಾಗದು. ಜನರನ್ನು ಕೃಷ್ಣನೇ ಕಾಪಾಡಬೇಕು’ ಎಂದರು.

‘ಅತ್ಯಾಚಾರ ಪ್ರಕರಣಗಳಲ್ಲಿ 60ರಿಂದ 90 ದಿನಗಳಲ್ಲಿ ಆರೋಪಪಟ್ಟಿ ಸಲ್ಲಿಸಬೇಕು, ಆ ನಂತರ 60 ದಿನಗಳಲ್ಲಿ ವಿಚಾರಣೆ ಮುಗಿಯಬೇಕು. ಇಂತಹ ಕಾನೂನಿನ ಪ್ರಮುಖ ಅಂಶಗಳು ಗೊತ್ತಿಲ್ಲದಿದ್ದರೆ ಹೇಗೆ’ ಎಂದು ಪ್ರಶ್ನಿಸಿದರು.

‘ಅತ್ಯಾಚಾರ, ಆಸಿಡ್ ದಾಳಿ ಹಾಗೂ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರಿಗೆ ನಿರ್ಭಯಾ ನಿಧಿ, ಸ್ಥೈರ್ಯ ನಿಧಿಯಲ್ಲಿ ಪರಿಹಾರ ನೀಡಲು ಅವಕಾಶ ಇದೆ. ಆದರೆ, ಅದನ್ನು ಬಳಸಿಕೊಂಡು ಸಂತ್ರಸ್ತರಿಗೆ ಪರಿಹಾರ ಮೊತ್ತ ನೀಡಿಲ್ಲ. ತುರ್ತು ಪರಿಹಾರ ನಿಧಿ ₹25.000 ನೀಡಲು ಅವಕಾಶ ಇದ್ದರೂ ಕೇವಲ ₹5,000, 10,000 ನೀಡಲಾಗಿದೆ. ಜಿಲ್ಲಾಡಳಿತವೇ ಪರಿಹಾರದ ಹಣ ನೀಡಿ ನಂತರ ಅದನ್ನು ಕೇಂದ್ರ ಸರ್ಕಾರದಿಂದ ಪಡೆದುಕೊಳ್ಳಬಹುದು. ಅದನ್ನೂ ಮಾಡಿಲ್ಲ. ಅನಾಥ ಮಕ್ಕಳಿಗೆ ಪಾಲನಾ ವೆಚ್ಚ ನೀಡಲು ಅವಕಾಶ ಇದ್ದರೂ ಸಂಪೂರ್ಣವಾಗಿ ಬಳಸಿಕೊಳ್ಳುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಿದರೆ ಮಾತ್ರ ಜನರಿಗೆ ನ್ಯಾಯ ಕೊಡಿಸಲು ಸಾಧ್ಯ ಎಂದು ಅವರು ಹೇಳಿದರು. ಪೋಕ್ಸೊ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ 22 ಪ್ರಕರಣ ತೀರ್ಪು ಹೊರ ಬಂದಿದ್ದು, 3 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವಿಜಯ ಪೂಜಾರಿ ಮಾಹಿತಿ ನೀಡಿದರು. ಇದರಿಂದ ಅಸಮಾಧಾನಗೊಂಡ ಅವರು ‘ಶಿಕ್ಷೆಯ ಪ್ರಮಾಣ ಕಡಿಮೆಯಾದಾಗ ಅಪರಾಧ ಎಸುಗುವವರಿಗೆ ಧೈರ್ಯ ಬರುತ್ತದೆ. ಅಪರಾಧ ಮಾಡಿ ಜಾಮೀನು ಪಡೆದರೆ ಸಾಕು ಎಂಬ ಭಾವನೆ ಬಂದರೆ ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತದೆ’ ಎಂದರು.

‘ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡಲಾಗುತ್ತದೆ. ಆದರೆ ನ್ಯಾಯಾಲಯದಲ್ಲಿ ಅವರು ವ್ಯತಿರಿಕ್ತ ಸಾಕ್ಷಿ ಹೇಳಿ ಪ್ರಕರಣದ ಆರೋಪಿಗಳು ಖುಲಾಸೆಯಾದರೆ ಪರಿಹಾರದ ಹಣವನ್ನು ವಾಪಸ್ ಪಡೆಯಲು ಅವಕಾಶ ಇದೆ. ಖುಲಾಸೆಯಾದ ಇಂತಹ ಪ್ರಕರಣಗಳ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದೀರ’ ಎಂದು ಸಮಿತಿ ಸದಸ್ಯ ಚಂದ್ರಮೌಳಿ ಅವರು ಹಿರಿಯ ಪಬ್ಲಿಕ್ ಪ್ರಾಸಿಕ್ಯೂಟರ್ ಶಾಂತಿಬಾಯಿ ಅವರಿಗೆ ಪ್ರಶ್ನಿಸಿದರು.

ಇಲ್ಲ ಎಂಬ ಉತ್ತರ ಬಂದಾಗ ಅಸಮಾಧಾನ ವ್ಯಕ್ತಪಡಿಸಿದ ಅವರು, ‘ಸರ್ಕಾರದ ಹಣ ಅನಗತ್ಯವಾಗಿ ಪೋಲಾಗುವುದನ್ನು ತಡೆಯುವುದು ಸಹ ನಿಮ್ಮ ಕರ್ತವ್ಯ. ಅಂತಹ ಪ್ರಕರಣಗಳಿದ್ದಾಗ ಮಾಹಿತಿ ನೀಡಿ’ ಎಂದರು.

ಕೌಟುಂಬಿಕ ದೌಜ್ಯನ್ಯ ಪ್ರಕರಣಗಳಲ್ಲಿ ನ್ಯಾಯ ಕೊಡಿಸುವಲ್ಲಿ ಸಂರಕ್ಷಣಾಧಿಕಾರಿ ಪಾತ್ರ ದೊಡ್ಡದು. ಆದರೆ ಜಿಲ್ಲೆಯಲ್ಲಿ ಒಬ್ಬರೂ ಸಂರಕ್ಷಣಾಧಿಕಾರಿ ಇಲ್ಲ. ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ಆ ಹೊಣೆ ವಹಿಸಿರುವುದು ಸರಿಯಲ್ಲ ಎಂದು ಸಮಿತಿ ಸದಸ್ಯೆ ಜ್ಯೋತಿ ಹೇಳಿದರು. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಎಸ್ಪಿ ಲಕ್ಷ್ಮಣ್ ನಿಂಬರಗಿ ಇದ್ದರು.

* * 

ಸಮಿತಿ ಇನ್ನೊಂದು ತಿಂಗಳಿನಲ್ಲಿ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಈಗಾಗಲೇ ಮಧ್ಯಂತರ ವರದಿ ಸಲ್ಲಿಸಲಾಗಿದೆ.

ವಿ.ಎಸ್. ಉಗ್ರಪ್ಪ

ಸಮಿತಿ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.