ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯ್ತನ ಎಂದರೆ ಮಾರ್ಕೆಟಿಂಗ್ ಅಲ್ಲ; 'ಗೃಹಲಕ್ಷ್ಮಿ' ಮುಖಪುಟದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ

Last Updated 1 ಮಾರ್ಚ್ 2018, 17:00 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳಾ ದಿನಾಚರಣೆಯ ಪ್ರಯುಕ್ತ ಮಲಯಾಳಂ ಪಾಕ್ಷಿಕ ಗೃಹಲಕ್ಷ್ಮಿ ಮುಖಪುಟದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ನಮ್ಮನ್ನು ದುರುಗಟ್ಟಿ ನೋಡಬೇಡಿ, ನಾವು ಹಾಲುಣಿಸುತ್ತಿದ್ದೇವೆ, ಕೇರಳದ ಜನತೆಗೆ ಅಮ್ಮಂದಿರ ಮಾತು ಎಂಬ ಶೀರ್ಷಿಕೆಯೊಂದಿಗೆ ಗೃಹಲಕ್ಷ್ಮಿಯಲ್ಲಿ ಪ್ರಕಟವಾದ ಆ ಚಿತ್ರದ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.

ಅಮ್ಮ ಮಗುವಿಗೆ ಹಾಲುಣಿಸುತ್ತಿರುವ ಚಿತ್ರ ಇದಾಗಿದ್ದು, ತೆರೆದೆದೆಯ ಚಿತ್ರವನ್ನು ಪ್ರಕಟಿಸಿದ್ದಕ್ಕಾಗಿ ಕೆಲವರು ಆಕ್ಷೇಪ ವ್ಯಕ್ತ ಪಡಿಸಿದರೆ ಇನ್ನು ಕೆಲವರು ಹಾಲುಣಿಸುವಾಗ ಅಮ್ಮ ಮಗುವಿನತ್ತ ಗಮನ ಹರಿಸಬೇಕೇ ಹೊರತು ಕ್ಯಾಮೆರಾ ನೋಡಿ ಪೋಸ್ ಕೊಡುವುದಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ನಟಿ, ಲೇಖಕಿ, ಅಂಕಣಗಾರ್ತಿ ಮತ್ತು  ಗಗನಸಖಿ ಆಗಿರುವ ಜೀಲೂ ಜೋಸೆಫ್ ಈ ಕವರ್ ಚಿತ್ರದಲ್ಲಿ ಮಾಡೆಲ್ ಆಗಿ ಕಾಣಿಸಿಕೊಂಡಿದ್ದಾರೆ. ಸೀರೆ ಉಟ್ಟು, ಕತ್ತಿನಲ್ಲಿ ಕರಿಮಣಿ ಸರ, ಹಣೆಯಲ್ಲಿ ಸಿಂಧೂರ ತೊಟ್ಟ ಮಹಿಳೆಯೊಬ್ಬಳು ರವಿಕೆ ಬಿಚ್ಚಿ ಮಗುವಿಗೆ ಹಾಲುಣಿಸುವ ಚಿತ್ರವಾಗಿದೆ ಇದು, ಆದಾಗ್ಯೂ, ಬೆಳ್ಳಗೆ ಇರುವ ನಟಿಯನ್ನೇ ಇದಕ್ಕೆ ಆಯ್ಕೆ ಮಾಡಿರುವುದು ಯಾಕೆ? ಎಂಬ ಪ್ರಶ್ನೆಯನ್ನೂ ಕೆಲವು ನೆಟಿಜನ್‌‍ಗಳು ಕೇಳುತ್ತಿದ್ದಾರೆ,
ಸಾಮಾಜಿಕ ಮಾಧ್ಯಮಗಳಲ್ಲಿ ಪರ ವಿರೋಧ ಚರ್ಚೆ
ಮಗುವಿಗೆ ಎದೆಹಾಲುಣಿಸುವ ಅಮ್ಮನನ್ನು ಯಾರೂ ದುರುಗುಟ್ಟಿನೋಡುವುದಿಲ್ಲ, ಈ ರೀತಿಯ ಚಿತ್ರ ಪ್ರಕಟಿಸುವ ಮೂಲಕ ಮಾತೃಭೂಮಿ ಗೃಹಲಕ್ಷ್ಮಿ ಮಾರ್ಕೆಟಿಂಗ್ ತಂತ್ರ ಮಾಡಿದೆ ಎಂದು ಕೆಲವರು ಆರೋಪಿಸಿದ್ದಾರೆ, ಮಗುವಿಗೆ ಎದೆ ಹಾಲುಣಿಸುವ ಅಮ್ಮನನ್ನು ನೋಡಿದರೆ ಗಂಡಸರಿಗೆ ಕಾಮೋದ್ರೇಕ ಉಂಟಾಗುತ್ತದೆ ಎಂದು ಹೇಳುವ ಮೂಲಕ ಗೃಹಲಕ್ಷ್ಮಿ ಮಾರ್ಕೆಟಿಂಗ್ ತಂತ್ರ ಹೂಡಿದ್ದು ನಾಚಿಕೆಗೇಡು, ಅಮ್ಮ ಮಗುವಿಗೆ ಹಾಲುಣಿಸುವುದು ಜಗತ್ತಿನ ಸುಂದರ ದೃಶ್ಯಗಳಲ್ಲೊಂದು, ಅಮ್ಮಂದಿರ ಮೇಲೆ ಗೌರವವಿರುತ್ತದೆಯೇ ಹೊರತು ಈ ರೀತಿ ಕೆಟ್ಟ ರೀತಿಯಲ್ಲಿ ಯಾರೂ ನೋಡುವುದಿಲ್ಲ ಎಂದು ನೆಟಿಜನ್‍ಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ,
ಹಣೆಯಲ್ಲಿ ಸಿಂಧೂರ ಇಲ್ಲದೇ ಮಗುವಿಗೆ ಹಾಲುಣಿವ ಧೈರ್ಯ ಮಹಿಳೆಯರಿಗೆ ಯಾವಾಗ ಬರುವುದೋ ಎಂದು ಈ ಚಿತ್ರದ ಛಾಯಾಗ್ರಾಹಕ ಮತ್ತು ನಿರ್ದೇಶಕ ಪ್ರತಾಪ್ ಜೋಸೆಫ್ ತಮ್ಮ ಫೇಸ್‍ಬುಕ್‍ನಲ್ಲಿ ಬರೆದಿದ್ದಾರೆ, 
ನನಗೆ ಇಬ್ಬರು ಮಕ್ಕಳಿದ್ದಾರೆ, ನನ್ನ ಹೆಂಡತಿ ಆ ಮಕ್ಕಳಿಗೆ ಸಾರ್ವಜನಿಕ ಸ್ಥಳಗಳಲ್ಲಿಯೂ, ಬಸ್ಸಿನಲ್ಲಿಯೂ, ರೈಲಿನಲ್ಲಿಯೂ ಹಾಲುಣಿಸಿದ್ದನ್ನು ನೋಡಿದ್ದೇನೆ, ಯಾರೊಬ್ಬರೂ ಆಗ ಬಂದು ಇಣುಕಿ ನೋಡಿಲ್ಲ, ಆದರೆ ಈಗ ನೋಡಿದ ಹಾಲುಣಿಸುವ ಆ ಚಿತ್ರ ತಾಯ್ತನ ಅಲ್ಲ ಇನ್ನೇನನ್ನೋ ಹೇಳುವಂತಿದೆ,  ಅಮ್ಮ ಮತ್ತು ಮಗು ಎಂಬುದು ಭಾವನಾತ್ಮಕ ಸಂಗತಿ, ಅದನ್ನು ಕೇವಲ ಶೋ ಆಗಿ ಮಾಡಬಾರದು, ಈಕಡೆ ಒಮ್ಮೆ ನೋಡಿ ಎಂದು ಎಲ್ಲರಿಗೂ ತೋರಿಸಿಕೊಡುವಾಗ ಸ್ರವಿಸುವುದು ಹಾಲಲ್ಲ ಇನ್ನೇನೋ ಆಗಿರಬಹುದು ಅಮ್ಮ ಅಮ್ಮನಾಗಿಯೇ ಇರಲಿ. ಆ ಒಳ್ಳೆಯತನವನ್ನೂ ಮಾರಾಟ ಮಾಡಬೇಡಿ, ಮಾತೃಭೂಮಿ..ಆ ಹೆಸರಿನಲ್ಲಿಯೂ ಅಮ್ಮ ಇದ್ದಾಳೆ ಎಂದು ಸಿನಿಮಾ ನಿರ್ದೇಶಕ ಅಲಿ ಅಕ್ಬರ್ ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದಿದ್ದಾರೆ.
ಅದೇ ವೇಳೆ ಅವಿವಾಹಿತೆಯಾದ ನಟಿಯೊಬ್ಬಳು ಮಗುವಿಗೆ ಮೊಲೆಯೂಡಿಸಿರುವುದು ಸರಿಯಲ್ಲ. ಇದು ಮಾರಾಟ ತಂತ್ರವೇ ಹೊರತು ಎದೆಹಾಲುಣಿಸಲು ಪ್ರೇರೇಪಿಸುವ ಕ್ರಿಯೆ ಅಲ್ಲ ಎಂದು ನೆಟಿಜನ್‍ಗಳು ಕಿಡಿ ಕಾರಿದ್ದಾರೆ,
ಫೇಸ್‍ಬುಕ್‍ನಲ್ಲಿ ಟ್ರೋಲ್

ಮಾನವ ಹಕ್ಕುಗಳ ಆಯೋಗಕ್ಕೆ ದೂರು
ಗೃಹಲಕ್ಷ್ಮಿಯಲ್ಲಿ ಪ್ರಕಟವಾದ ಚಿತ್ರದ ವಿರುದ್ಧ ಜಿಯಾಸ್ ಜಮಾಲ್ ಎಂಬವರು ಮಕ್ಕಳ ಹಕ್ಕು ಮತ್ತು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ,  ಗೃಹಲಕ್ಷ್ಮಿ  ಸಂಪಾದಕ, ಕವರ್ ಮಾಡೆಲ್  ಜೀಲೂ ಜೋಸೆಫ್, ಮಗುವಿನ ಪೋಷಕರ ವಿರುದ್ಧ ದೂರು ನೀಡಿರುವುದಾಗಿ ಈಸ್ಟ್ ಕೋಸ್ಟ್ ಮಲಯಾಳಂ ಆನ್‍ಲೈನ್ ಪತ್ರಿಕೆ ವರದಿ ಮಾಡಿದೆ.
ನನ್ನ ದೇಹ, ನನ್ನ ಹಕ್ಕು: ಜೀಲೂ ಜೋಸೆಫ್
ಪ್ರಯಾಣ ವೇಳೆಗಳಲ್ಲಿ ಮಗುವಿಗೆ ಎದೆಹಾಲುಣಿಸಲು  ಮಹಿಳೆಯರು ಕಷ್ಟ ಪಡುತ್ತಿರುವುದನ್ನು ನೋಡಿದ್ದೇನೆ, ಮನೆಯಲ್ಲಾದರೂ ಅಷ್ಟೇ ಮಗುವಿಗೆ ಹಾಲುಣಿಸುವಾಗ ಹಿರಿಯರು ಎದೆಗೆ ಟವೆಲ್ ನಿಂದಾದರೂ ಮುಚ್ಚಿಕೋ ಎಂದು ಹೇಳಿತ್ತಾರೆ, ಹಿಂದಿನ ಕಾಲದಲ್ಲಿ ಪ್ರೀತಿಸುವುದು ಕೂಡಾ ತಪ್ಪು  ಎಂದು ಪರಿಗಣಿಸಲಾಗುತ್ತಿತ್ತು, ಈಗ ಕಾಲ ಬದಲಾಗಿದೆ, ಪ್ರೀತಿಯಲ್ಲಿ ಬೀಳದವರು ಯಾರೂ ಇರಲ್ಲ, ಇದು ಕಾಲದಲ್ಲುಂಟಾದ ಬದಲಾವಣೆ, ಪ್ರೀತಿಸಿದರೆ ಕೆಟ್ಟ ಹೆಸರು ಬರುತ್ತದೆ ಎಂಬ ಅಂಜಿಕೆಯೂ ದೂರವಾಗಿದೆ, ಅದೇ ರೀತಿ ಎದೆಹಾಲುಣಿಸುವುದು ಮತ್ತು ಮುಟ್ಟಾಗುವಿಕೆ ಕೂಡಾ.
ನಾನು ವಿವಾಹಿತೆಯಲ್ಲ. ನನಗೆ ಮಗೂವೂ ಇಲ್ಲ. ಗೃಹಲಕ್ಷ್ಮಿ ಅಭಿಯಾನದ ಅಸೈನ್‍ಮೆಂಟ್‌‍ಗೆ ಕರೆ ಬಂದಾಗ ನಾನು ಸಂಕೋಚವಿಲ್ಲದೆಯೇ ಒಪ್ಪಿಕೊಂಡೆ.   ನಾನು ಮಾಡುತ್ತಿರುವುದು ತಪ್ಪಲ್ಲ ಎಂದು ನನಗೆ ತಿಳಿದಿತ್ತು. ಕೆಟ್ಟ ಹೆಸರು ಬರುತ್ತದೆ  ಅಥವಾ ಇನ್ಯಾರೋ ಏನೋ ಹೇಳುತ್ತಾರೆ ಎಂದು ಭಯದಿಂದ ನನ್ನ ಮನಸ್ಸಿಗೆ ಅನಿಸಿದ್ದನ್ನು ಮಾಡದೆ ಇರುವುದು ಬೇಡ ಎಂದು ನನ್ನ ಮನಸ್ಸು ಹೇಳಿತ್ತು. ಈ ಅಭಿಯಾನ ಅಥವಾ ಈ ಚಿತ್ರದಿಂದಾಗಿ ನನಗೆ ಬರುವ ಟೀಕೆಗಳನ್ನು ನಾನು ಸಂತೋಷದಿಂದ ಸ್ವೀಕರಿಸುತ್ತೇನೆ.
ತಮ್ಮ ಮಗುವಿಗೆ ಪೂರ್ಣ ಸ್ವಾತಂತ್ರ್ಯದಿಂದ ಅಭಿಮಾನದಿಂದ  ಹಾಲುಣಿಸಲು ಬಯಸುವ ಎಲ್ಲ ಅಮ್ಮಂದಿರಿಗಾಗಿ, ನಿಮ್ಮ ಬದುಕಿನ ಆ ಸುಂದರ ನಿಮಿಷವನ್ನು ಒಂದು ಚಿತ್ರದಲ್ಲಿ ಸೆರೆ ಹಿಡಿದು  ಕಾಪಿಡಲು ಧೈರ್ಯವಿರುವ ಅಮ್ಮಂದಿರಿಗಾಗಿ! ನಿರ್ಧಾರ ಮತ್ತು ಬಯಕೆಯ ಹೆಸರಲ್ಲಿ ಸಾಕಷ್ಟು ಟೀಕೆಗಳಿಗೆ ಒಳಗಾದ ಜಗಳಗಂಟಿ ಹೆಣ್ಣು ನಾನು.  ಆದರೆ ನನಗಿಷ್ಟವಾದ ರೀತಿಯಲ್ಲಿ ಯಾರನ್ನೂ ನೋಯಿಸದೆ ಸಂತೋಷವಾಗಿ ಬದುಕುವ ಮತ್ತು ಬದುಕಲು ಪ್ರೇರೇಪಿಸಲು ನಾನು ದಿಟ್ಟತನದಿಂದ ಸಿದ್ಧಳಾಗಿದ್ದೆನೆ,
ಮುಟ್ಟಾಗುವಿಕೆ ಅಥವಾ ಋತುಚಕ್ರ  ತಪ್ಪೇನೂ ಅಲ್ಲ. ಆದರೂ ನಾವು ಮಹಿಳೆಯರು ಅದೊಂದು ತಪ್ಪು ಎಂಬಂತೆ ನೋಡುತ್ತೇವೆ. ಈ ರೀತಿಯ ಆಲೋಚನೆಗಳನ್ನು ಬದಲಿಸಬೇಕಾದವರು ನಾವೇ ಅಲ್ಲವೇ? ಅಂಗಡಿಯವರಲ್ಲಿ ಸ್ಟೇಫ್ರೀ ಕೊಡಿ ಎಂದು ಹೇಳಿ ಆ ಪ್ಯಾಕೆಟ್‍ನ್ನು ಕವರ್ ಮಾಡದೆ ಹಾಗೆಯೇ ಖರೀದಿಸಿಕೊಂಡು ಹೋಗಬೇಕಾದವರು ನಾವಲ್ಲವೇ?. ಅಪ್ಪನಾದ ಗಂಡಸು ತಮ್ಮ ಮಗಳಲ್ಲಿ ನಿನಗಿನ್ನೂ ಮುಟ್ಟಾಗಿಲ್ಲವೇ ಎಂದು ಕೇಳುವುದು ಯಾವಾಗ?  ಎಷ್ಟು ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಇದೆ?  ಎಷ್ಟು ಗಂಡು ಮಕ್ಕಳು ತಮ್ಮ ಬಟ್ಟೆ ಒಗೆಯಲು ಕಲಿತಿದ್ದಾರೆ?
ಎಲ್ಲದಕ್ಕಿಂತಲೂ ಮಿಗಿಲಾಗಿ ನನ್ನನ್ನೇ ನಾನು ಹೆಚ್ಚು ಪ್ರೀತಿಸುತ್ತೇನೆ. ನನ್ನ ದೇಹ ನನ್ನ ಹಕ್ಕು. ನನ್ನ ದೇಹದ ಯಾವುದೇ ಅಂಗವನ್ನು ನಾನು ದ್ವೇಷಿಸುವುದಿಲ್ಲ. ನನ್ನ ಶರೀರದ ಬಗ್ಗೆ ನನಗೆ ನಾಚಿಕೆಗೇಡೂ ಇಲ್ಲ. ಕಣ್ಣು, ಮೂಗು, ಕೈಯಂತೆಯೇ ನನ್ನ ದೇಹದ ಇತರ ಭಾಗಗಳು ಕೂಡಾ. ಇದನ್ನೆಲ್ಲಾ ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿಲ್ಲ. ಎಲ್ಲರಿಗೂ ತಿಳಿದಿರುವ,  ಸರಿಯಾದ ಕೆಲಸವನ್ನು ಮಾಡುವುದಕ್ಕೆ ಹೆದರುವುದೇತಕೆ? ನಮ್ಮನ್ನು ಪಾತಾಳಕ್ಕೆ ತಳ್ಳಿದರೂ ಅಲ್ಲಿಯೂ ಖುಷಿ ಪಡುವುದು ತಿಳಿದಿರಬೇಕು. ಹಾಗಾದರೆ ಮಾತ್ರವಲ್ಲವೇ ಸಾಯುವ ಹೊತ್ತಲ್ಲೂ ನಾವು ನಮ್ಮ ಬದುಕು ಬದುಕಿದ್ದೇವೆ ಎಂಬ ಅನುಭವ ನಮಗುಂಟಾಗುವುದು ಎಂದು ಜೀಲೂ ಪ್ರತಿಕ್ರಿಯೆಯನ್ನು ಮಾತೃಭೂಮಿ ಆನ್‍ಲೈನ್ ಪತ್ರಿಕೆ ಪ್ರಕಟಿಸಿದೆ
ಮಹಿಳೆಯರಿಂದ ಶ್ಲಾಘನೆ
ಭಾರತದಲ್ಲಿ  ಎದೆ ಹಾಲುಣಿಸುವುದೂ ಸಮಸ್ಯೆ ಎಂಬಂತೆ ಪರಿಗಣಿಸಲ್ಪಟ್ಟಿರುವಾಗ ಹಾಲುಣಿಸುವ ಬೋಲ್ಡ್ ಚಿತ್ರವನ್ನು ಪ್ರಕಟಿಸಿದ್ದಕ್ಕಾಗಿ ಗೃಹಲಕ್ಷ್ಮಿ ಪಾಕ್ಷಿಕವನ್ನು ಹಲವಾರು ಮಹಿಳೆಯರು ಶ್ಲಾಘಿಸಿದ್ದಾರೆ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT