ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಹೋರಾಟಕ್ಕೆ ದಾರಿದೀವಿಗೆ

Last Updated 7 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ತೂರಬೇಡಿ ಹೆಣ್ತನದ ಘನತೆಯ

ತೂರಬೇಡಿ ಗಾಳಿಗೆ ಹೆಣ್ತನದ ಘನತೆಯ

ಜೀವ ಕೊಡುವ ಜೀವವಿದು ಕಡಿಮೆ ಯಾರಿಗೆ?

ನಾಚಬೇಡಿ ಹೆಣ್ತನಕೆ ತಲೆ ಎತ್ತಿ ನಿಲ್ಲಿರಿ

ನಾಚಬೇಕು ತುಳಿದವರು ಮನುಜಾತಿಗೆ ಸೇರಿದವರು.

ಕರ್ನಾಟಕದಲ್ಲಿ ಎಪ್ಪತ್ತು-ಎಂಬತ್ತರ ದಶಕದ ಮಹಿಳಾ ಚಳವಳಿಯ ಸಂದರ್ಭದಲ್ಲಿ ವಿಜಯಾ ದಬ್ಬೆ ಬರೆದ ಈ ಹಾಡಿನ ಸಾಲುಗಳು ಒಂದು ರೀತಿಯಲ್ಲಿ ಮಹಿಳಾ ಚಳವಳಿಯ ಮ್ಯಾನಿಫೆಸ್ಟೋ ಆಗಿದ್ದವು. ಹೆಣ್ಣಿನ ಘನತೆಯನ್ನು ಎತ್ತಿ ಹಿಡಿಯುವ ಮತ್ತು ಅವಳ ದಮನಕ್ಕೆ ಕಾರಣಗಳನ್ನು ಸಂಶೋಧಿಸುತ್ತಾ ಹೊರಟ ಆ ಕಾಲದ ಮಹಿಳಾ ಚಳವಳಿಯ ಸಂದರ್ಭದಲ್ಲಿ ಆರಂಭವಾದ (1978ರಲ್ಲಿ) ಮೈಸೂರಿನ ‘ಸಮತಾ ವೇದಿಕೆ’ ತನ್ನ ಹಲವಾರು ಸಾಮೂಹಿಕ ಮಹಿಳಾಪರ ಚಟುವಟಿಕೆಗಳ ಮೂಲಕ ಮಹಿಳಾ ಚಳವಳಿಗೆ ಗಟ್ಟಿ ನೆಲೆಯನ್ನು ಒದಗಿಸಿತ್ತು. ರತಿರಾವ್, ಮೀರಾ ನಾಯಕ್ ಅವರುಗಳೊಂದಿಗೆ ಈ ಚಳವಳಿಯ ಮುಂಚೂಣಿಯಲ್ಲಿದ್ದ ವಿಜಯಾ ದಬ್ಬೆ, ತಮ್ಮ ಮಾತು, ಬರಹ ಮತ್ತು ಸಂಘಟಿತ ಕ್ರಿಯೆಯ ಮೂಲಕ ಕರ್ನಾಟಕದ ಮಹಿಳಾ ಚಳವಳಿಗೆ ಮಾಸದ ಹೆಜ್ಜೆ ಗುರುತುಗಳನ್ನು ಬಿಟ್ಟಿದ್ದಾರೆ.

1951ರ ಜೂನ್ ತಿಂಗಳಿನಲ್ಲಿ ಹಾಸನ ಜಿಲ್ಲೆಯ ದಬ್ಬೆ ಗ್ರಾಮದಲ್ಲಿ ಜನಿಸಿದ ವಿಜಯಾ, ಮೈಸೂರಿನಲ್ಲಿ ಉನ್ನತ ವಿದ್ಯಾಭ್ಯಾಸ ಮತ್ತು ಅಧ್ಯಾಪನ ವೃತ್ತಿ ಹಾಗೂ ಸಾಹಿತ್ಯಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ನಡೆಸಿದವರು. ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕನ್ನಡ ಅಧ್ಯಾಪಕಿಯಾಗಿ ಕಾರ್ಯನಿರ್ವಹಿಸಿದ ಅವರು, ಕನ್ನಡ ಸಾಹಿತ್ಯದ ಕಲಿಕೆಗೆ ಹೊಸ ದೃಷ್ಟಿಯನ್ನು ತೋರಿದರು. ಅಪಾರ ಮಮತೆಯ ಶಿಷ್ಯಕೋಟಿ ಹೊಂದಿದ್ದರು.

ಸ್ತ್ರೀವಾದವು ಕನ್ನಡದ ಸಾಹಿತ್ಯ ಕ್ಷೇತ್ರದಲ್ಲಿ ಬೀಜವಾಗಿ ಮೊಳಕೆಯೊಡೆಯುವ ಸಂದರ್ಭದಲ್ಲಿ ಈ ಕ್ಷೇತ್ರದಲ್ಲಿ ವಿಜಯಾ ನಡೆಸಿದ ಬಿತ್ತನೆ ಅಮೂಲ್ಯವಾದದ್ದು. ನಮ್ಮ ಸಾಹಿತ್ಯ ಸಂದರ್ಭದಲ್ಲಿನ ‘ಸ್ತ್ರೀ ಅಸ್ಮಿತೆ’ಯನ್ನು ಕುರಿತಂತೆ ಜಿಜ್ಞಾಸೆ ನಡೆಸಿ, ಸ್ತ್ರೀವಾದಿ ವಿಮರ್ಶೆಯ ರೂಪವನ್ನು ಕಟ್ಟಿಕೊಡುವುದರಲ್ಲಿ ಮುಂದಾದರು. ಈ ಜಿಜ್ಞಾಸೆಯ ಮೂಲಕ ‘ಸಂಸ್ಕೃತಿಯ ಪುನರ್‌ರಚನೆ’ ಮಾಡುವುದು ಅವರ ಮುಖ್ಯ ಗುರಿಯಾಗಿದ್ದು ಅವರ ಬರವಣಿಗೆಗಳು ಆ ದಿಕ್ಕಿನತ್ತ ಇಟ್ಟ ಖಚಿತ ಹೆಜ್ಜೆಗಳಾಗಿದ್ದವು ಎಂಬುದರಲ್ಲಿ ಅನುಮಾನವೇ ಇಲ್ಲ. ಸ್ತ್ರೀಸಂಸ್ಕೃತಿಯ ಪುನರ್‌ರಚನೆಯ ಹಾದಿಯಲ್ಲಿ ಸಂಶೋಧನೆ ಮತ್ತು ಅಧ್ಯಯನದ ಮೂಲಕ ಸ್ತ್ರೀಪರಂಪರೆಯ ಚರಿತ್ರೆಯನ್ನು ಕಟ್ಟುವ ಕಾರ್ಯದ ಅನಿವಾರ್ಯ ಮತ್ತು ಪ್ರಾಮುಖ್ಯವನ್ನು ಅರಿತಿದ್ದ ವಿಜಯಾ, ಆಧುನಿಕ ಕನ್ನಡದ ಆರಂಭದ ಲೇಖಕಿಯರಾದ ನಂಜನಗೂಡು ತಿರುಮಲಾಂಬ ಮತ್ತು ಶ್ಯಾಮಲಾ ಬೆಳಗಾಂವಕರ್‌ ಮುಂತಾದವರ ಬದುಕು-ಬರಹದ ಸಂಶೋಧನೆಯಿಂದ ಕನ್ನಡ ಸ್ತ್ರೀವಾದಿ ಸಾಹಿತ್ಯದ ಜ್ಞಾನಭಂಡಾರಕ್ಕೆ ಅಮೂಲ್ಯವಾದ ಕೊಡುಗೆಗಳನ್ನು ಸೇರಿಸಿದ್ದಾರೆ. ಹಾಗೆಯೇ ಅವರ ಶಿಷ್ಯೆಯರ ಮೂಲಕ ನಡೆಸಿದ ಕಲ್ಯಾಣಮ್ಮ ಮತ್ತು ಸರಸ್ವತಿಬಾಯಿ ರಾಜವಾಡೆಯವರ ಅಧ್ಯಯನಗಳು ಕನ್ನಡ ಮಹಿಳಾ ಸಾಹಿತ್ಯವನ್ನು ಶ್ರೀಮಂತವಾಗಿಸಿವೆ.

ಆನಂತರ ವಿಜಯಾ ಆರಂಭಿಸಿದ ‘ಸಮತಾ ಅಧ್ಯಯನಕೇಂದ್ರ’ ಮತ್ತು ಅದರ ಸಾಮಾಜಿಕ ಜಾಗೃತಿಯ ಚಟುವಟಿಕೆಗಳು ರಾಜ್ಯವ್ಯಾಪಿ ಪರಿಣಾಮ ಬೀರು
ವಂತಹವೇ ಆಗಿವೆ. ಸರಳತೆ ಮತ್ತು ಸ್ಪಷ್ಟತೆ– ಇವು ಅವರ ಬರವಣಿಗೆ ಮತ್ತು ಭಾಷಣದ ಪ್ರಮುಖ ಗುಣಗಳು. ಮೆದುವಾದ ಮಾತಿನಲ್ಲಿ ಅವರು ಮಾತನಾಡಲು ನಿಂತರೆ ನಿರರ್ಗಳವಾಗಿ ಮತ್ತು ಸೋದಾಹರಣವಾಗಿ ಸಾಗುತ್ತಿದ್ದ ಅವರ ಭಾಷಣ ಎಂತಹವರನ್ನೂ ಮಂತ್ರಮುಗ್ಧಗೊಳಿಸುತ್ತಿತ್ತು.

ಕರ್ನಾಟಕದಾದ್ಯಂತ ಹಲವಾರು ಮಹಿಳಾ ಶಿಬಿರ, ಸಂಕಿರಣ, ಸಂಘಟನೆಗಳನ್ನು ವ್ಯವಸ್ಥಿತವಾಗಿ ಯೋಜಿಸಿದರು. ಹಾಗೆಯೇ ಕರ್ನಾಟಕದ ಉದ್ದಕ್ಕೂ ಕ್ರಿಯಾಶೀಲವಾಗಿದ್ದ ಲೇಖಕಿಯರ ಸಂಘಟನೆಗಳು, ವಿಶ್ವವಿದ್ಯಾಲಯಗಳು, ಅಕಾಡೆಮಿಗಳು ಮತ್ತು ಸಾಂಸ್ಕೃತಿಕ ಸಂಘಟನೆಗಳೊಂದಿಗೆ ಸೇರಿ ಅವರು ಸ್ತ್ರೀವಾದಕ್ಕೆ ನೀಡಿದ ತಾತ್ವಿಕ ಚೌಕಟ್ಟನ್ನು ಇಂದು ಕನ್ನಡದ ಸಾರಸ್ವತಲೋಕ ಸ್ಮರಿಸಿಕೊಳ್ಳುತ್ತಿದೆ. ಅನಾಥ ಹೆಣ್ಣು ಮಕ್ಕಳ ಪುನರ್ವಸತಿ ಯೋಜನೆಯಾಗಿ ರೂಪುಗೊಂಡ ‘ಶಕ್ತಿಧಾಮ’ ಸಂಸ್ಥೆಯ ಪದಾಧಿಕಾರಿಯಾಗಿಯೂ ದುಡಿದರು. ಇವರ ಅದಮ್ಯ ಶಕ್ತಿಗೆ ಸವಾಲೊಡ್ಡುವಂತೆ 1999ರಲ್ಲಿ ಅವರ ಬದುಕಿನಲ್ಲಿ ಎರಗಿ ಬಂದ ರಸ್ತೆ ಅಪಘಾತ ಅವರ ಕ್ರಿಯಾಶೀಲತೆಗೆ ತಡೆಯೊಡ್ಡಿದ್ದು ಮಾತ್ರ ವಿಷಾದಕರ.

‘ಎಪ್ಪತ್ತರ ದಶಕದಲ್ಲಿ ಆರಂಭವಾದ ಸ್ತ್ರೀ ನೇತೃತ್ವದ ಮಹಿಳಾ ಚಳವಳಿಯು ಮಧ್ಯಮವರ್ಗ ಮತ್ತು ಮೇಲು ಜಾತಿಗಳ ಮಹಿಳೆಯರ ಕೈಯಲ್ಲಿತ್ತು’ ಎಂದು ಇಂದು ಟೀಕಿಸುವವರೂ ಇದ್ದಾರೆ. ಅದೊಂದು ಚಾರಿತ್ರಿಕ ಸತ್ಯವೇ ಆದರೂ, ಸಮತಾ ವೇದಿಕೆಯೂ ಸೇರಿದಂತೆ ಅಂದಿನ ಇತರ ಮಹಿಳಾ ಸಂಘಟನೆಗಳು ಎತ್ತಿಕೊಂಡ ವರದಕ್ಷಿಣೆ, ವಧುದಹನದಂತಹ ಕೌಟುಂಬಿಕ ಸಮಸ್ಯೆಗಳು ಮತ್ತು ಅತ್ಯಾಚಾರದಂತಹ ವಿಷಯಗಳು ಕಾನೂನಿನ ತಿದ್ದುಪಡಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದವೆಂಬುದನ್ನು ಮರೆಯಲಾಗದು. ಮಹಿಳೆಯರ ಸ್ವಂತಿಕೆ ಮತ್ತು ಅಸ್ಮಿತೆಗಾಗಿ ನಡೆದ ಚಳವಳಿಗಳು ಮಹಿಳಾ ಸಬಲೀಕರಣಕ್ಕೆ ದಾರಿ ಮಾಡಿಕೊಟ್ಟವು ಎಂಬುದನ್ನು ಯಾರೂ ಅಲ್ಲಗಳೆಯಲಾಗದು. ಮಹಿಳಾ ಅಧ್ಯಯನವೆಂಬುದು ಶೈಕ್ಷಣಿಕ ವಿಷಯವೇ ಆಗಿಲ್ಲದ ಸಂದರ್ಭದಲ್ಲಿ ಮಹಿಳಾ ಅಧ್ಯಯನಕ್ಕೆ ಮತ್ತು ಮಹಿಳಾ ಹೋರಾಟಕ್ಕೆ ಬೇಕಾದ ಅಸ್ತಿಭಾರವನ್ನು ನಿರ್ಮಿಸಿದ್ದು ಈ ಕಾಲಘಟ್ಟದ ಮಹಿಳಾ ಚಳವಳಿಯ ಕೊಡುಗೆಯಾಗಿದೆ.

‘ನಾನು ನೀನು ಅವಳು ಇವಳು ಹೆಣ್ಣಾಗಿ ನೊಂದವರು

ಕೈಗೆ ಕೈ ಜೋಡಿಸವ್ವ ಹೊಸ ಜಗತ್ತು ನಮ್ಮದು’

ಜೆರಾಕ್ಸ್ ಇಲ್ಲದ ಕಾಲದಿಂದ ನಡೆದು ಬಂದ ಮಹಿಳಾ ಚಳವಳಿ ಇಂದು ಸಾಮಾಜಿಕ ಜಾಲತಾಣಗಳ ಹಾಗೂ ಮಲ್ಟಿ ಚಾನೆಲ್‍ಗಳ ಕಾಲದವರೆಗೆ ವ್ಯಾಪಕವಾಗಿ ಬೆಳೆದಿದೆ. ‘ಮಹಿಳೆಯರೇ ಒಗ್ಗೂಡಿ’ ಎನ್ನುತ್ತಿದ್ದ ಕಾಲದಿಂದ ಇಂದು ‘ನೆಟ್‌ವರ್ಕಿಂಗ್’ ಯುಗಕ್ಕೆ ಕಾಲಿಟ್ಟಿದೆ. ಹೆಣ್ಣಿನ ನೋವಿನ ವೈವಿಧ್ಯವನ್ನು ಗ್ರಹಿಸುವಲ್ಲಿ ಮಹಿಳಾ ಚಳವಳಿ ಮುಂದಾಗಿದೆ. ಜಾತಿ ಪ್ರಶ್ನೆ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಪ್ರಶ್ನೆಗಳನ್ನು ಗಂಭೀರವಾಗಿ ಪರಿಗಣಿಸುತ್ತಾ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ; ಹೆಚ್ಚು ಇನ್‍ಕ್ಲೂಸಿವ್ ಆಗಿದೆ. ದಮನಿತರ ನೇತೃತ್ವದಲ್ಲಿ ದಮನಿತರ ಸಮಸ್ಯೆಗಳನ್ನೆತ್ತಿಕೊಂಡು ಮಹಿಳಾ ಚಳವಳಿ ನಡೆ
ಯುತ್ತಿದೆ. ವಿಜಯಾ ಗುರುತಿಸಿದ ‘ಮನುಜಾತಿ’ಗೆ ಸೇರಿದ ಜನರ ಲಜ್ಜೆಗೆಟ್ಟ ವರ್ತನೆಗಳು ಇಂದೂ ಅದೇ ಸಂವಿಧಾನವೋ ಎನ್ನುವ ರೀತಿಯಲ್ಲಿ ಮುಂದುವರೆದಿವೆ. ಹೀಗಾಗಿ ಹೆಣ್ಣುಗಳ ಎಲ್ಲ ನೋವಿನ ವಿರುದ್ಧ ನಡೆಸಬೇಕಾದ ಹೋರಾಟಕ್ಕೆ ವಿಜಯಾ ಅವರ ಬದುಕು– ನೆನಪು ದಾರಿದೀವಿಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT