ಸೋಮವಾರ, ಏಪ್ರಿಲ್ 19, 2021
31 °C

ಶತಮಾನದ ವಿಜ್ಞಾನಿ ಇನ್ನಿಲ್ಲ

ಪಿಟಿಐ Updated:

ಅಕ್ಷರ ಗಾತ್ರ : | |

ಶತಮಾನದ ವಿಜ್ಞಾನಿ ಇನ್ನಿಲ್ಲ

ಲಂಡನ್‌ (ಎಎಫ್‌ಪಿ): ದೈಹಿಕ ನ್ಯೂನತೆಯ ನಡುವೆಯೂ ಅಸಾಮಾನ್ಯ ಜ್ಞಾನದಿಂದ ಜಗದ್ವಿಖ್ಯಾತರಾಗಿದ್ದ ಬ್ರಿಟಿಷ್‌ ಖಭೌತವಿಜ್ಞಾನಿ ಸ್ಟೀಫನ್‌ ಹಾಕಿಂಗ್‌ (76) ಬುಧವಾರ ಕೊನೆಯುಸಿರೆಳೆದರು.

ಇದರೊಂದಿಗೆ ಐದು ದಶಕಗಳ ಕಾಲ ತಮ್ಮನ್ನು ಕಾಡುತ್ತಿದ್ದ ನರರೋಗದ ವಿರುದ್ಧ ಹಾಕಿಂಗ್‌ ನಡೆಸಿದ್ದ ಹೋರಾಟ ಕೊನೆಗೊಂಡಿತು.

ಕೇಂಬ್ರಿಡ್ಜ್‌ ನಗರದ ತಮ್ಮ ನಿವಾಸದಲ್ಲಿ ಬುಧವಾರ ಬೆಳಗಿನ ಜಾವ ಸ್ಟೀಫನ್‌ ಹಾಕಿಂಗ್‌ ನೆಮ್ಮದಿಯಾಗಿ ಕೊನೆಯುಸಿರೆಳೆದರು ಎಂದು ಅವರ ಮಕ್ಕಳಾದ ಲೂಸಿ, ರಾಬರ್ಟ್ ಮತ್ತು ಟಿಮ್‌ ತಿಳಿಸಿದ್ದಾರೆ.

ಬ್ರಹ್ಮಾಂಡದ ಉಗಮ, ಬಿಗ್‌ ಬ್ಯಾಂಗ್ ಥಿಯರಿ (ಮಹಾಸ್ಫೋಟ) ಮತ್ತು ಕಪ್ಪುರಂಧ್ರ ಸಿದ್ಧಾಂತಗಳಿಂದ ಶತಮಾನದ ವಿಜ್ಞಾನಿ ಎಂದು ಹಾಕಿಂಗ್‌ ಅವರನ್ನು ಪರಿಗಣಿಸಲಾಗಿತ್ತು. ಸರ್‌ ಐಸಾಕ್‌ ನ್ಯೂಟನ್‌ ಮತ್ತು ಅಲ್ಬರ್ಟ್‌ ಐನ್‌ಸ್ಟೀನ್‌ ನಂತರ ಜಗತ್ತು ಕಂಡ ಅತ್ಯಂತ ಅಸಾಮಾನ್ಯ ವಿಜ್ಞಾನಿ ಎಂದು ಹಾಕಿಂಗ್‌ ಅವರನ್ನು ಗೌರವಿಸಲಾಗಿತ್ತು.

21ನೇ ವಯಸ್ಸಿನಲ್ಲಿಯೇ ‘ಅಮಿಯೊಟ್ರೊಫಿಕ್‌ ಲ್ಯಾಟರಲ್‌ ಸ್ಕ್ಲೆರೊಸಿಸ್‌ (ಎಎಲ್‌ಎಸ್‌) ಎಂಬ ನರರೋಗಕ್ಕೆ ತುತ್ತಾಗಿದ್ದ ಅವರು, ದೇಹದ ಮೇಲೆ ಸ್ವಾಧೀನ ಕಳೆದುಕೊಂಡು ಗಾಲಿಕುರ್ಚಿಯಲ್ಲಿಯೇ ಬಹುತೇಕ ಜೀವನ ಕಳೆದರು.

ಮಾತನಾಡುವ ಶಕ್ತಿ ಕಳೆದಕೊಂಡಿದ್ದ ಹಾಕಿಂಗ್‌, ಗಾಲಿಕುರ್ಚಿಯಲ್ಲಿ ಅಳವಡಿಸಿದ್ದ ಕಂಪ್ಯೂಟರ್‌ನಲ್ಲಿ ತಮ್ಮ ಭಾವನೆಗಳನ್ನು ಬರೆದು ತಿಳಿಸುತ್ತಿದ್ದರು. ಇದಕ್ಕಾಗಿ ಅವರು ಅಕ್ಷರಗಳಿಗೆ ಧ್ವನಿಯ ರೂಪ ನೀಡುವ ಯಂತ್ರದ ಮೊರೆ ಹೋಗಿದ್ದರು.

‘ನಾನು 21 ವರ್ಷದವನಾಗಿದ್ದಾಗಲೇ ನನ್ನ ಜೀವನ ಮುಗಿದು ಹೋಯಿತು. ಎಲ್ಲ ನಿರೀಕ್ಷೆಗಳು ಪಾತಾಳಕ್ಕೆ ಕುಸಿದವು. ನಾನು ಹೆಚ್ಚು ದಿನ ಬದುಕುವುದಿಲ್ಲ ಎಂಬ ಸತ್ಯ ನನಗೆ ಗೊತ್ತು. ಅಲ್ಲಿಂದ ಮುಂದೆ ದೊರೆತಿದ್ದೆಲ್ಲ ಬೋನಸ್‌’ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು.

ನೊಬೆಲ್‌ ಪ್ರಶಸ್ತಿ ದೊರೆತಿಲ್ಲ: ಹಾಕಿಂಗ್‌ ಮಂಡಿಸಿದ ಕಪ್ಪುರಂಧ್ರಗಳ ಸಿದ್ಧಾಂತವನ್ನು ವಿಜ್ಞಾನಿಗಳು ಒಪ್ಪಿದರೂ ಖಭೌತ ದಿಗ್ಗಜನಿಗೆ ವಿಜ್ಞಾನ ಕ್ಷೇತ್ರದ ಪ್ರತಿಷ್ಠಿತ ಮತ್ತು ಅತ್ಯುನ್ನತ ನೊಬೆಲ್‌ ಪ್ರಶಸ್ತಿ ದೊರೆತಿರಲಿಲ್ಲ.

ಬ್ರಹ್ಮಾಂಡದ ಉಗಮ ಮತ್ತು ಕಪ್ಪುರಂಧ್ರಗಳು ಅವರ ಅಚ್ಚುಮೆಚ್ಚಿನ ವಿಷಯಗಳಾಗಿದ್ದವು. ‘ಹಿಗ್ಗುತ್ತಿರುವ ಬ್ರಹ್ಮಾಂಡದ ಗುಣಲಕ್ಷಣ’ ವಿಷಯ ಕುರಿತು ಕೆಂಬ್ರಿಡ್ಜ್‌ ವಿಶ್ವವಿದ್ಯಾಲಯದಲ್ಲಿ ಖಭೌತ ವಿಜ್ಞಾನದಲ್ಲಿ ಡಾಕ್ಟರೇಟ್‌ ಪದವಿ ಪಡೆದಿದ್ದರು.

32ನೇ ವಯಸ್ಸಿನಲ್ಲಿಯೇ ಬ್ರಿಟನ್‌ನ ಪ್ರಸಿದ್ಧ ರಾಯಲ್‌ ಸೊಸೈಟಿಯ ಸದಸ್ಯರಾದ ಅವರು, ಅತ್ಯಂತ ಚಿಕ್ಕ ವಯಸ್ಸಿನ ಸದಸ್ಯ ಎಂಬ ಹೆಗ್ಗಳಿಕೆ ಪಡೆದಿದ್ದರು.

ನೆಮ್ಮದಿ ಇರದ ಬದುಕು: ಹಾಕಿಂಗ್‌ ಆರೋಗ್ಯದಂತೆ ಅವರ ವೈವಾಹಿಕ ಜೀವನ ಕೂಡ ನೆಮ್ಮದಿಯಿಂದ ಕೂಡಿರಲಿಲ್ಲ. 1965ರಲ್ಲಿ ಜೇನ್‌ ವೈಲ್ಡ್‌ ಅವರನ್ನು ವಿವಾಹವಾದ ಅವರಿಗೆ ಲೂಸಿ, ರಾಬರ್ಟ್ ಮತ್ತು ಟಿಮ್‌ ಎಂಬ ಮೂವರು ಮಕ್ಕಳಿದ್ದಾರೆ. 25 ವರ್ಷಗಳ ನಂತರ ದಾಂಪತ್ಯ ಕೊನೆಗೊಂಡಿತ್ತು.

1995ರಲ್ಲಿ ತಮ್ಮ ಶುಶ್ರೂಷಕಿ ಎಲೇನ್‌ ಮ್ಯಾಸನ್‌ ಅವರನ್ನು ವರಿಸಿದರಾದರೂ ಆ ದಾಂಪತ್ಯವೂ ಹೆಚ್ಚು ಕಾಲ ಬಾಳಲಿಲ್ಲ.

ವಿಚ್ಛೇದನದಲ್ಲಿ ಕೊನೆಗೊಂಡಿತು.

2014ರಲ್ಲಿ ಸ್ಟೀಫನ್‌ ಹಾಕಿಂಗ್‌ ಜೀವನ ಆಧಾರಿತ ’ದಿ ಥಿಯರಿ ಆಫ್‌ ಎವರಿಥಿಂಗ್‌’ ಇಂಗ್ಲಿಷ್‌ ಚಿತ್ರ ಬಿಡುಗಡೆಯಾಗಿತ್ತು. ಜೇಮ್ಸ್‌ ಮಾರ್ಷ್‌ ನಿರ್ದೇಶನದ ಈ ಚಿತ್ರದಲ್ಲಿ ಹಾಕಿಂಗ್‌ ಪಾತ್ರದಲ್ಲಿ ನಟಿಸಿದ್ದ ಬ್ರಿಟನ್‌ ನಟ ಎಡ್ಡಿ ರೆಡ್‌ಮೇನ್‌ ಆಸ್ಕರ್‌ ಪ್ರಶಸ್ತಿ ಗಳಿಸಿದ್ದರು.

ಪ್ರಯೋಗಕ್ಕೆ ಒಡ್ಡಿಕೊಂಡಿದ್ದರು: ಹಾಕಿಂಗ್‌ ಅವರದ್ದು ಸದಾ ಪ್ರಯೋಗಕ್ಕೆ ತುಡಿಯುವ ಕ್ರಿಯಾಶೀಲ ಮತ್ತು ಸೃಜನಾತ್ಮಕ ಮನೋ

ಭಾವ. ತಮ್ಮ 65ನೇ ವಯಸ್ಸಿನಲ್ಲಿ ಅವರು ತಮ್ಮನ್ನು ಪ್ರಯೋಗಕ್ಕೆ ಒಡ್ಡಿಕೊಂಡಿದ್ದರು.

2007ರಲ್ಲಿ ನ್ಯೂಟನ್‌ನ ಗುರುತ್ವಾಕರ್ಷಣೆ ನಿಯಮ ಪರೀಕ್ಷಿಸಲು ಅಮೆರಿಕದಲ್ಲಿ ಅತ್ಯಂತ ಹಗುರ ವಿಮಾನದಲ್ಲಿ ಹಾರಾಟ ನಡೆಸಿದ್ದರು. ವಿಜ್ಞಾನ ಜಗತ್ತು ಅವರ ಈ ಸಾಹಸವನ್ನು ನಿಬ್ಬೆರಗಾಗಿ ನೋಡಿತ್ತು. ದೈಹಿಕ ನ್ಯೂನತೆ ಸಾಧನೆಗೆ ಅಡ್ಡಿಯಾಗಲಾರವು ಎಂದು ಅವರು ಸಾಧಿಸಿ ತೋರಿಸಿದ್ದರು.

ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನ ಬೆಳವಣಿಗೆ ಮಾನವ ಕುಲದ ವಿನಾಶಕ್ಕೆ ಕಾರಣವಾಗಬಹುದು ಎಂದು ಅವರು ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು.

ಮಾನವೀಯತೆಯ ಮೂರ್ತಿ: ‘ಹಾಕಿಂಗ್‌ ಅಸಾಮಾನ್ಯ ವಿಜ್ಞಾನಿಯಾಗಿದ್ದರು. ಅದಕ್ಕಿಂತಲೂ ಹೆಚ್ಚು ಅವರೊಬ್ಬ ಮಾನವೀಯತೆಯ ಮೂರ್ತಿ

ಯಾಗಿದ್ದರು. ಜಗತ್ತಿಗೆ ಅವರು ನೀಡಿದ ಕೊಡುಗೆ ಶತಮಾನಗಳ ಕಾಲ ಉಳಿಯಲಿದೆ’ ಎಂದು ಬ್ರಿಟನ್‌ ಪ್ರಧಾನಿ ಥೆರೆಸಾ ಮೇ ಟ್ವೀಟ್‌ ಮಾಡಿದ್ದಾರೆ.

ಚೀನಾ, ಭಾರತ ಸೇರಿದಂತೆ ಅನೇಕ ರಾಷ್ಟ್ರಗಳ ಗಣ್ಯರು, ವಿಜ್ಞಾನಿಗಳು, ವಿದ್ಯಾರ್ಥಿಗಳು ಕಂಬನಿ ಮಿಡಿದಿದ್ದಾರೆ.

‘ಅವರಲ್ಲಿ ಅಪಾರ ಹಾಸ್ಯಪ್ರಜ್ಞೆ ಇತ್ತು. ಅವರೊಂದಿಗೆ ಕೆಲಸ ಮಾಡುವುದೇ ಒಂದು ವಿಭಿನ್ನ ಅನುಭವ. ಅವರ ಬಳಿಕಲಿಯಲು ಅವಕಾಶ ದೊರೆತಿದ್ದು ನನ್ನ ದೊಡ್ಡ ಸೌಭಾಗ್ಯ’ ಎಂದು ಜಸ್ಟಿನ್‌ಹೇವರ್ಡ್‌ ಎಂಬ ಅವರ ಹಳೆಯ ವಿದ್ಯಾರ್ಥಿ ಪ್ರತಿಕ್ರಿಯಿಸಿದ್ದಾನೆ.

‘ನಿಷ್ಕ್ರಿಯವಾಗಿದ್ದ ಅವರ ಜಡ ದೇಹದಲ್ಲಿ ಚೂರಿಗಿಂತಲೂ ಹರಿತವಾದ ಮಿದುಳುಇತ್ತು. ಅದು ಸದಾ ಕಾಲ ಈ ಬ್ರಹ್ಮಾಂಡದ ಉಗಮದ ಹಿಂದಿನ ರಹಸ್ಯಗಳನ್ನು ಶೋಧಿಸುತಿತ್ತು’ ಎಂದು ಹಾಕಿಂಗ್‌ ಅವರಬಗ್ಗೆ ಸಹೋದ್ಯೋಗಿ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

***

ಹಿಂಡಿ ಹಿಪ್ಪೆ ಮಾಡಿದ್ದ ರೋಗ

ಲಂಡನ್‌: ಖಭೌತ ವಿಜ್ಞಾನಿ ಸ್ಟೀಫನ್‌ ಹಾಕಿಂಗ್‌ ಅವರನ್ನು ‘ಅಮಿಯೊಟ್ರೋಫಿಕ್‌ ಲ್ಯಾಟರೆಲ್‌ ಸ್ಕ್ಲೆರೊಸಿಸ್‌ (ಎಎಲ್‌ಎಸ್‌) ಎಂಬ ಅಪರೂಪದ ನರರೋಗ ಹಿಂಡಿ ಹಿಪ್ಪೆ ಮಾಡಿತ್ತು. ಇದರಿಂದಾಗಿ ಅವರು ಜೀವನ ಪರ್ಯಂತ  ಗಾಲಿಕುರ್ಚಿ ಅವಲಂಬಿಸಿದ್ದರು.

ವೈದ್ಯಕೀಯ ಭಾಷೆಯಲ್ಲಿ ‘ಎಎಲ್‌ಎಸ್‌’ ಮತ್ತು ‘ಮೋಟಾರ್‌ ನ್ಯೂರಾನ್‌ ಡೀಸಿಜ್‌ (ಎಂಎನ್‌ಡಿ)’ ಎಂದು ಕರೆಯಲಾಗುವ ಈ ರೋಗವನ್ನು ಸಾಮಾನ್ಯವಾಗಿ‘ಲೌ ಗೆರ್ಹಿಗ್‌ ಡೀಸಿಜ್‌’ ಎಂಬ ಹೆಸರಿನಿಂದಲೂ ಗುರುತಿಸಲಾಗುತ್ತದೆ.

1941ರಲ್ಲಿ ಈ ರೋಗದಿಂದ ಮೃತಪಟ್ಟ ಬೇಸ್‌ಬಾಲ್‌ ದಿಗ್ಗಜ ಲೌ ಗೆರ್ಹಿಗ್‌ ಸಾವನ್ನಪ್ಪಿದ ನಂತರ ಈ ರೋಗವನ್ನು ಆತನ ಹೆಸರಿನಿಂದ ಕರೆಯಲಾಗುತ್ತಿದೆ.

ಹಾಕಿಂಗ್‌ ಕೂಡ ಇದಕ್ಕೆ ಹೊರತಾಗಿಲ್ಲ. ಅವರು ಅಷ್ಟು ಸುಲಭವಾಗಿ ಈ ರೋಗಕ್ಕೆ ಸೋತು ಶರಣಾಗಲಿಲ್ಲ. ಸುಮಾರು ಐದು ದಶಕಗಳ ಕಾಲ ಅದದೊಂದಿಗೆ ನಿತ್ಯ ನಿರಂತರವಾಗಿ ಛಲ ಬಿಡದೆ ಸೆಣಸಾಟ ನಡೆಸಿದ್ದರು.

ಸ್ನಾಯು ನಿಷ್ಕ್ರಿಯ: ಸ್ವಾಧೀನ ತಪ್ಪಿದ ದೇಹ

ಈ ರೋಗ ಮಾನವನ ಸ್ನಾಯುಗಳನ್ನು ನಿಯಂತ್ರಿಸುವ ಮಿದುಳು ಮತ್ತು ಬೆನ್ನುಹುರಿಯ ಮುಖ್ಯ ನರಕೋಶಗಳನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ. ನರಕೋಶಗಳು ನಿಷ್ಕ್ರಿಯವಾಗುವುದರಿಂದ ಮಿದುಳಿಗೆ ಸ್ನಾಯುಗಳ ಮೇಲಿನ ನಿಯಂತ್ರಣ ಸಂಪೂರ್ಣವಾಗಿ ಕಳೆದು ಹೋಗುತ್ತದೆ. ಬೆನ್ನುಹುರಿ ಕೆಲಸ ಮಾಡುವುದಿಲ್ಲ. ರೋಗಿ ಪಾರ್ಶ್ವವಾಯು ಪೀಡಿತನಾಗುತ್ತಾನೆ. ಚಲನವಲನ, ಮಾತುಗಳ ಮೇಲೆ ಸ್ವಾಧೀನ ಕಳೆದುಕೊಳ್ಳುತ್ತಾನೆ.

ಸಾಮಾನ್ಯವಾಗಿ ರೋಗ ಪತ್ತೆಯಾದ ಎರಡು ಅಥವಾ ಮೂರು ವರ್ಷಗಳಲ್ಲಿ ರೋಗಿಸಾವನ್ನಪ್ಪುತ್ತಾನೆ. ಕೇವಲ ಐದರಷ್ಟು ರೋಗಿಗಳು ಮಾತ್ರ 20 ವರ್ಷ ಬದುಕುತ್ತಾರೆ.ಅದಕ್ಕೆ ನಿರ್ದಿಷ್ಟ ಕಾರಣ ಏನು ಎಂಬುವುದು ವೈದ್ಯರು ಮತ್ತು ವಿಜ್ಞಾನಿಗಳಿಗೆಇದುವರೆಗೂ ಗೊತ್ತಿಲ್ಲ.

ಅಮೆರಿಕ ಮತ್ತು ಯುರೋಪ್‌ನಲ್ಲಿ ಪ್ರತಿ ವರ್ಷ ಒಂದು ಲಕ್ಷ ಜನರಲ್ಲಿ ಒಬ್ಬರುಇಲ್ಲವೇ ಇಬ್ಬರಲ್ಲಿ ಮಾತ್ರ ಈ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. 55 ರಿಂದ 65ವಯೋಮಾನದವರಲ್ಲಿ ಇದು ಹೆಚ್ಚಾಗಿ ಗೋಚರಿಸುತ್ತದೆ. ಈ ರೋಗಕ್ಕೆ ತುತ್ತಾದ ಹೆಚ್ಚಿನ ರೋಗಿಗಳು ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ ಉದಾಹರಣೆಗಳಿವೆ.

ಮದ್ದಿಲ್ಲದ ರೋಗ: ಇದುವರೆಗೂ ಈ ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲವೇ ಮದ್ದು ಇಲ್ಲ. ಗುಣಲಕ್ಷಣಗಳನ್ನು ನಿಯಂತ್ರಣದಲ್ಲಿ ಇಡಲು ಕೆಲವು ಪರ್ಯಾಯ ಚಿಕಿತ್ಸಾ ಮಾರ್ಗಗಳಿವೆ.

ಶೇ 90–95 ಪ್ರಕರಣಗಳಲ್ಲಿ ಇದುವರೆಗೂ ಈ ರೋಗಕ್ಕೆ ಕಾರಣ ಏನು ಎಂದು ತಿಳಿದು ಬಂದಿಲ್ಲ. ಕೇವಲ ಶೇ 5ರಿಂದ 10 ರಷ್ಟು ರೋಗಿಗಳಲ್ಲಿ ಮಾತ್ರ ಆನುವಂಶಿಕವಾಗಿ ಈ ರೋಗ ಕಾಣಿಸಿಕೊಳ್ಳುತ್ತದೆ. ಪ್ರಸಿದ್ಧ ಇಂಗ್ಲಿಷ್‌ ರಂಗಕರ್ಮಿಗಳಾದ ಸ್ಯಾಮ್‌ ಶೆಫರ್ಡ್‌, ಜಾನ್‌ ಸ್ಟೋನ್‌, ಜಾಜ್‌ ಸಂಗೀತಗಾರ ಚಾರ್ಲ್ಸ್‌ ಮಿಂಗಸ್‌ ಕೂಡ ಈ ರೋಗಕ್ಕೆ ಬಲಿಯಾದವರು.

ಐಸ್‌ ಬಕೆಟ್‌ ಚಾಲೆಂಜ್‌: ಎಎಲ್‌ಎಸ್‌ ಬಗ್ಗೆ  ಜನಜಾಗೃತಿ ಮೂಡಿಸಲು 2014ರಲ್ಲಿ ‘ಐಸ್‌ ಬಕೆಟ್‌ ಚಾಲೆಂಜ್‌’ ಆರಂಭಿಸಲಾಯಿತು. ಮೈಮೇಲೆ ಬಕೆಟ್‌ ತಣ್ಣೀರು ಸುರಿದುಕೊಳ್ಳುವ ಆಂದೋಲನದಲ್ಲಿ ಗಣ್ಯರು ಪಾಲ್ಗೊಂಡಿದ್ದರು. ನಂತರ ಈ ರೋಗದ ಬಗ್ಗೆ ಜಾಗೃತಿ ಮೂಡಿತು.

ಹಾಕಿಂಗ್‌ ಪ್ರಸಿದ್ಧ ಕೃತಿಗಳು

* 1998– ‘ಬ್ರೀಫ್‌ ಹಿಸ್ಟರಿ ಆಫ್‌ ಟೈಮ್‌’ (ಬ್ರಹ್ಮಾಂಡದ ಮೂಲ ನಿಯಮ ವಿವರಿಸುವ ಈ ಪುಸ್ತಕ ಅತ್ಯಂತ ಹೆಚ್ಚು ಮಾರಾಟವಾದ ಪುಸ್ತಕ ಎಂಬ ಹೆಗ್ಗಳಿಕೆ ಹೊಂದಿದೆ)

*2001–ದಿ ಯುನಿವರ್ಸ್‌ ಇನ್‌ ಎ ನಟ್‌ಶೆಲ್‌

*2007–ಜಾರ್ಜ್ಸ್‌ ಸಿಕ್ರೇಟ್‌ ಕೀ ಟು ದಿ ಯುನಿವರ್ಸ್‌

(ಮಗಳು ಲೂಸಿ ಜತೆ ಸೇರಿ ರಚನೆ)

* ಪಿಂಕ್‌ ಫ್ಲಾಯ್ಡ್‌ ಹಾಡುಗಳಲ್ಲಿಯೂ ಅವರು ಧ್ವನಿ

ನೀಡಿದ್ದು, ಸಾಕ್ಷ್ಯಚಿತ್ರ ದಲ್ಲೂ ನಟಿಸಿದ್ದಾರೆ.

ಹಾಸ್ಯ ಪ್ರಜ್ಞೆಯ ವಿಜ್ಞಾನಿ

ಸಂಶೋಧನೆ, ಆವಿಷ್ಕಾರಗಳ ಹೊರತಾಗಿ ಸ್ಟೀಫನ್‌ ಹಾಕಿಂಗ್ ಹಾಸ್ಯಪ್ರಜ್ಞೆ ಮತ್ತು ಹೇಳಿಕೆಗಳಿಂದಲೂ ಪ್ರಸಿದ್ಧ

ರಾಗಿದ್ದರು. ಅವರ ಕೆಲವು ಆಯ್ದ ಹೇಳಿಕೆಗಳು ಇಲ್ಲಿವೆ.

* 21ನೇ ವರ್ಷದಲ್ಲಿ ರೋಗ ಕಾಡಲು ಆರಂಭಿಸಿದಾಗ ನನ್ನ ಎಲ್ಲ ನಿರೀಕ್ಷೆಗಳು ಪಾತಾಳಕ್ಕೆ ಕುಸಿದವು. ಅಲ್ಲಿಂದ ಮುಂದೆ ದೊರೆತಿದ್ದೆಲ್ಲ ಬೋನಸ್‌

* ನನ್ನ ಗುರಿ ತುಂಬಾ ಸರಳ. ಬ್ರಹ್ಮಾಂಡವನ್ನು ಸಂಪೂರ್ಣವಾಗಿ ಅರಿತು

ಕೊಳ್ಳಬೇಕು ಅಷ್ಟೇ. ಅದು ಏಕೆ ಮತ್ತು ಹೇಗೆ ಉಗಮವಾಗಿದೆ ಎಂದು ತಿಳಿದುಕೊಳ್ಳಬೇಕಿದೆ

* ಪುರಾತನ ಕಾಲದ ಕೃತಕ ಬುದ್ಧಿಮತ್ತೆಯಿಂದಲೇ ನಾವು ಅಸ್ತಿತ್ವ ಕಂಡುಕೊಂಡಿದ್ದೇವೆ. ಆದರೆ, ಹೊಸ ಕೃತಕ ಬುದ್ಧಿಮತ್ತೆಯು ಮಾನವ ಜನಾಂಗದ ವಿನಾಶಕ್ಕೆ ಕಾರಣವಾಗಲಿದೆ

*ಬಾಹ್ಯಾಕಾಶ ಪ್ರವೇಶಿಸದಿದ್ದರೆ ಮಾನವ ಕುಲಕ್ಕೆ ಭವಿಷ್ಯ ಇಲ್ಲ

*ನಾವು ವಾಸಿಸುವ ಈ ಭೂಮಿ ಮತ್ತು ಮನಕುಲ ಸದಾ ಜಾಗತಿಕ ತಾಪಮಾನ, ಅಣ್ವಸ್ತ್ರಗಳು, ಕೃತಕ ಬುದ್ಧಿಮತ್ತೆ, ಅಪಾಯಕಾರಿ ರೋಗಾಣುವಿನಂತಹ ಆತಂಕಗಳನ್ನು ಎದುರಿಸುತ್ತಲೇ ಬದುಕುತ್ತಿದೆ

***

ಹಾಕಿಂಗ್ ಹಾದಿ

* ಜನವರಿ 8,1942: ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ನಲ್ಲಿ ಜನನ

*1962: ಆಕ್ಸ್‌ಫರ್ಡ್‌ ವಿ.ವಿಯಿಂದ ಭೌತಶಾಸ್ತ್ರದಲ್ಲಿ ಪದವಿ.

* ‘ಹಿಗ್ಗುತ್ತಿರುವ ಬ್ರಹ್ಮಾಂಡದ ಗುಣಲಕ್ಷಣ’ ವಿಷಯ ಕುರಿತು ಕೆಂಬ್ರಿಡ್ಜ್‌ ವಿಶ್ವವಿದ್ಯಾಲಯದಲ್ಲಿ ಖಭೌತ ವಿಜ್ಞಾನದಲ್ಲಿ ಡಾಕ್ಟರೇಟ್‌ ಪದವಿ

*1963: ಜೇನ್‌ ವೈಲ್ಡ್‌ ಜತೆ ಮದುವೆ. 25 ವರ್ಷಗಳ ದಾಂಪತ್ಯ ಜೀವನದಲ್ಲಿ ಮೂವರು ಮಕ್ಕಳ ಜನನ

*1979: ಕೆಂಬ್ರಿಡ್ಜ್‌ ವಿಶ್ವವಿದ್ಯಾಲಯದಲ್ಲಿ ಗಣಿತ ಪ್ರಾಧ್ಯಾಪಕರಾಗಿ ನೇಮಕ ಮತ್ತು 30 ವರ್ಷ ಕೆಲಸ

*1985: ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಸ್ಟೀಫನ್‌ ಹಾಕಿಂಗ್‌ ಅವರಿಗೆ ಧ್ವನಿಪೆಟ್ಟಿಗೆಯ ಶಸ್ತ್ರಚಿಕಿತ್ಸೆ. ಧ್ವನಿ ಕಳೆದುಕೊಂಡ ಹಾಕಿಂಗ್‌

*ಮಾತು ಕಳೆದುಕೊಂಡ ನಂತರ ಸಂವಹನಕ್ಕಾಗಿ ಕ್ರಮೇಣ ಕಂಪ್ಯೂಟರ್‌ ಮತ್ತು ಅಕ್ಷರಗಳಿಗೆ ಧ್ವನಿಯ ರೂಪ ನೀಡುವ ಯಂತ್ರದ ಮೇಲೆ ಅವಲಂಬನೆ

* 1995: ಜೇನ್‌ ವೈಲ್ಡ್‌ ಜತೆಗಿನ 25 ವರ್ಷಗಳ ದಾಂಪತ್ಯ ಅಂತ್ಯ. ಮಾಜಿ ಶುಶ್ರೂಷಕಿ ಎಲೇನ್‌ ಮ್ಯಾಸನ್‌ ಜತೆ ವಿವಾಹ. ಹಲವು ವರ್ಷಗಳ ನಂತರ ವಿಚ್ಛೇದನ

* 1988: ಬ್ರಹ್ಮಾಂಡ ಸೃಷ್ಟಿಯ ಮೂಲ ಸಿದ್ಧಾಂತವನ್ನುಜನಸಾಮಾನ್ಯರಿಗೂ ಅತ್ಯಂತ ಸುಲಭವಾಗಿ ಅರ್ಥೈಸಿಕೊಳ್ಳು

ವಂತೆ ವಿವರಿಸಿದ ‘ಎ ಬ್ರೀಫ್‌ ಹಿಸ್ಟರಿ ಆಫ್‌ ಟೈಮ್ಸ್‌’ ಪುಸ್ತಕ ರಚನೆ.

* 2007: ಅಮೆರಿಕದಲ್ಲಿ ಅತ್ಯಂತ ಲಘು ವಿಮಾನದಲ್ಲಿ ಹಾರಾಟ. ಬಾಹ್ಯಾಕಾಶದಲ್ಲಿ ಹಗುರ ನೌಕೆ ಬಳಕೆಯ ಪ್ರಯೋಗಕ್ಕೆ ನಾಂದಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.