ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವರ್ಷಪೂರ್ತಿ ದುಡಿಯುವ ಮಣ್ಣಿನ ಮಗ’

Last Updated 1 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನನ್ನ ಹೆಸರು ರಾಜಶೇಖರ. ವರ್ಷ ಪೂರ್ತಿ ದುಡಿವ ಮಣ್ಣಿನ ಮಗ ನಾನು. ಕುಂಬಾರಿಕೆಯೇ ನನ್ನ ವೃತ್ತಿ. ಬಿ.ಕಾಂ, ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಮತ್ತು ಮಾಸ್ಟರ್‌ ಆಫ್‌ ಪಾಟ್ರಿ ಇನ್‌ ಡಿಪ್ಲೊಮಾ ಓದಿದ್ದೀನಿ. ಹುಟ್ಟಿ ಬೆಳದದ್ದೆಲ್ಲ ಇಲ್ಲೆ. ಪಾಟ್ರಿ ಟೌನ್‌ನ ನಿವಾಸಿ.

ನಾಲ್ಕುತಲೆಮಾರುಗಳಿಂದ ಕುಂಬಾರಿಕೆಯನ್ನು ಮುಂದುವರಿಸಿಕೊಂಡು ಬಂದಿದ್ದೀವಿ. ನನಗೀಗ ಐವತ್ತು ವರ್ಷ, 43 ವರ್ಷಗಳಿಂದ ಮಣ್ಣಿನ ಒಡನಾಟ ನನ್ನದು.

1992–93ರ ಸಮಯದಲ್ಲಿ ಕೆಲಸಕ್ಕಾಗಿ ಅಲೆದು ಅಲೆದು ಚಪ್ಪಲಿ ಸವೆದವು ವಿನಾ ಉದ್ಯೋಗ ಸಿಗಲಿಲ್ಲ. ಎಲ್ಲೆಲ್ಲೂ ನಿರಾಸೆಯೇ ಎದುರಾಯಿತು. ಹಿರಿಯರು ನಡೆಸಿಕೊಂಡು ಬಂದ ಕುಂಬಾರಿಕೆಯನ್ನೇ ನಾನು ಯಾಕೆ ಮುಂದುವರಿಸಿಕೊಂಡು ಹೋಗಬಾರದು ಅಂದುಕೊಂಡು, ಮಾಸ್ಟರ್‌ ಆಫ್‌ ಪಾಟ್ರಿ ಇನ್‌ ಡಿಪ್ಲೊಮಾ ಓದಿದೆ.

ಅದಕ್ಕೂ ಮುನ್ನ ಚಿಕ್ಕಂದಿನಿಂದಲೇ ಅಪ್ಪ –ಅಮ್ಮನ ಜತೆಗೆ ಕುಂಬಾರಿಕೆ ಕೆಲಸ ಮಾಡುತ್ತಲೇ ವಿದ್ಯಾಭ್ಯಾಸ ಮಾಡಿದೆ. ಬೆಳಗ್ಗೆ 5ಗಂಟೆಯಿಂದ 8 ರವರೆಗೆ ಕುಂಬಾರಿಕೆ ಕೆಲಸ ಮಾಡಿಯೇ ಕಾಲೇಜು ಮೆಟ್ಟಿಲು ಹತ್ತೋದು, ಸಂಜೆ ಕಾಲೇಜು ಮುಗಿದ ನಂತರ 4ಗಂಟೆಯಿಂದ ರಾತ್ರಿ 10ಗಂಟೆವರೆಗೂ ಮತ್ತೆ ಇದೇ ಕೆಲಸ ನಿರಂತರವಾಗಿ ನಡೆಯುತ್ತಿತ್ತು.

ನಾವು ಐದು ಜನ ಅಣ್ಣ ತಮ್ಮಂದಿರು, ಒಬ್ಬಳು ತಂಗಿ ಎಲ್ಲರೂ ಹೀಗೆ ಕೆಲಸ ಮಾಡಿಕೊಂಡೇ ಓದಿದ್ದೀವಿ. ಸದ್ಯ ಅವರೆಲ್ಲ ಬೇರೆ ಬೇರೆ ಕೆಲಸ ಮಾಡಿಕೊಂಡಿದ್ದಾರೆ.

ನನ್ನ ಹೆಂಡ್ತಿ ಟೆರಾಕೋಟಾ ವಿನ್ಯಾಸಕಿ. ಮಡಕೆಯನ್ನೂ ಮಾಡ್ತಾಳೆ. ದೊಡ್ಡ ಮಗಳು ಕೂಡಾ ಟೆರಾಕೋಟಾ ಆಭರಣ ವಿನ್ಯಾಸಕಿ. ಚಿಕ್ಕ ಮಗಳು ದ್ವಿತೀಯ ಪಿಯುಸಿ ಓದಿದ್ದಾಳೆ. ಬ್ಯಾಚುಲರ್‌ ಆಫ್‌ ಫೈನ್‌ ಆರ್ಟ್ಸ್‌ ಓದುವ ಆಸೆ ಅವಳದ್ದು. ಹಾಗಾಗಿ ಚಿತ್ರಕಲಾ ಪರಿಷತ್ತಿಗೆ ಸೇರಿಸುವ ಆಸೆ ಇದೆ. 

ಹೆಂಡ್ತಿ ಮಕ್ಕಳು ಎಲ್ಲರೂ ಸೇರಿ ಒಂದು ದಿನಕ್ಕೆ ₹4,000ದಿಂದ ₹5,000 ತನಕ ದುಡಿತೀವಿ. ಖರ್ಚೆಲ್ಲ ಕಳೆದು  ತಿಂಗಳಿಗೆ ₹40,000 ಸಂಪಾದನೆ ಆಗತ್ತೆ. ಸದ್ಯ ಬೇಸಿಗೆಕಾಲ ಮಡಕೆಗಳಿಗೆ ಒಂದಷ್ಟು ಬೇಡಿಕೆ ಇದೆ. ಈ ಸೀಜನ್‌ ಬಿಟ್ರೆ ಬೇರೆ ಯಾವ ಸೀಜನ್‌ನಲ್ಲೂ ಮಡಿಕೆಗಳಿಗೆ ಅಷ್ಟೊಂದು ಬೇಡಿಕೆ ಇರಲ್ಲ.

ಆದ್ರೆ, ಹೋಟೆಲ್‌ನವರು ಲಸ್ಸಿ, ಮಜ್ಜಿಗೆ, ಐಸ್‌ಕ್ರೀಮ್‌ಗಾಗಿ ಚಿಕ್ಕಚಿಕ್ಕ ಮಣ್ಣಿನ ಬಟ್ಟಲುಗಳನ್ನು ಖರೀದಿಸುವುದು ಜಾಸ್ತಿ. ದಿನನಿತ್ಯದ ಗ್ರಾಹಕರು ಅವರೇ ನಮಗೆ. ಆರ್ಡರ್‌ ಕೊಟ್ಟಿರ್ತಾರೆ. ಹೋಲ್‌ಸೇಲ್‌ ದರದಲ್ಲಿ ಒಂದು ಮಣ್ಣಿನ ಬಟ್ಟಲಿಗೆ ₹3ನಂತೆ ಮಾರಾಟ ಮಾಡ್ತೀವಿ. ಹಾಗಾಗಿ ಇವುಗಳನ್ನೇ ಹೆಚ್ಚೆಚ್ಚು ತಯಾರು ಮಾಡ್ತೀವಿ.

ಸದ್ಯಕ್ಕೆ ಹೊಸಕೋಟೆಯಿಂದ ಮಣ್ಣು ಪೂರೈಕೆ ಆಗತ್ತೆ. ತಿಂಗಳಿಗೆ ಎರಡು ಟ್ರಕ್‌ ಜೇಡಿ ಮಣ್ಣು ಬರುತ್ತೆ. ಒಂದು ಟ್ರಕ್‌ ಮಣ್ಣಿಗೆ ₹8000, ಎರಡು–ಮೂರು ಟನ್‌ನಷ್ಟು ಮಣ್ಣು ಇರುತ್ತೆ. ಅದರಲ್ಲಿ ಶೇ 20ರಷ್ಟು ಮಣ್ಣು ತ್ಯಾಜ್ಯ. ಮಣ್ಣನ್ನು ಮಷೀನ್‌ಗೆ ಹಾಕಿ ಹದಗೊಳಿಸಿ ಮಡಕೆ ಮಾಡೋಕೆ ನಾಲ್ಕೈದು ದಿನ ಬೇಕಾಗತ್ತೆ. ಶ್ರಮಪಟ್ಟರೆ ಮಾತ್ರ ಹೊಟ್ಟೆಗೆ ಅನ್ನ ಸಿಕ್ಕೊದು ಅಲ್ವಾ?. ಮಣ್ಣಿನೊಂದಿಗೆ ಕೆಲಸ ಮಾಡೋದರಲ್ಲಿ ಒಂಥರಾ ಖುಷಿ ಇದೆ. ಮನಸು, ಆರೋಗ್ಯನೂ ಚೆನ್ನಾಗಿ ಇರತ್ತೆ. ಇದು ಸಮಾಜಕ್ಕೂ ಒಳ್ಳೇದು, ಜನರು ಮಣ್ಣಿನ ಪಾತ್ರೆಗಳನ್ನು ಹೆಚ್ಚಾಗಿ ಬಳಸಿದ್ರೆ ಅವರ ಆರೋಗ್ಯಕ್ಕೂ ಒಳ್ಳೇದು.

ಸುಮಾರು ಮೂರು ನಾಲ್ಕು ವರ್ಷಗಳಿಂದ ಮಣ್ಣಿನ ಪಾತ್ರೆಗಳನ್ನು ಬಳಸುವುದು ಫ್ಯಾಷನ್‌ ಆಗಿದೆ. ಹಾಗಾಗಿ ಮಣ್ಣಿನ ಸಾಮಗ್ರಿಗಳಿಗೆ ಬೇಡಿಕೆ ಹೆಚ್ಚಾಗ್ತಾ ಇದೆ. ನಶಿಸಿ ಹೋಗ್ತಾ ಇದ್ದ ಕುಂಬಾರಿಕೆಗೆ ಮತ್ತೆ ಮರು ಜೀವ ಬಂದಿದೆ. ಇಲ್ಲಿ ನಮಗೆ ಯಾರದ್ದೂ ಕಿರಿಕಿರಿ ತಾಪತ್ರಯಗಳಿಲ್ಲ. ಶ್ರಮ, ವಿದ್ಯೆ, ಬುದ್ಧಿ ಇದ್ರೆ ಏನಾದ್ರೂ ಮಾಡಬಲ್ಲೆವು. ಹಗಲಿರುಳೆನ್ನದೆ ದುಡಿಬಹುದು. ನಮಗೆ ‘ವರ್ಷ ಪೂರ್ತಿ ಸೀಜನ್ನೇ’. ಸಂಪಾದನೆಗೆ ಇತಿಮಿತಿ ಅನ್ನುವುದು ಇರಲ್ಲ. ಮನಸು ಮಾಡಿದ್ರೆ ಲಕ್ಷಾಧಿಪತಿನೂ ಆಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT