ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಲಭ್ಯ ವಂಚಿತ ಮಜಗಾಂವ

ಮಧ್ಯ ರಾತ್ರಿವರೆಗೆ ನೀರಿಗಾಗಿ ಕಾಯುವುದು ಇಲ್ಲಿ ನಿತ್ಯದ ಕಾಯಕ
Last Updated 2 ಏಪ್ರಿಲ್ 2018, 6:03 IST
ಅಕ್ಷರ ಗಾತ್ರ

ಬೆಳಗಾವಿ: ಕುಡಿಯುವ ನೀರಿಗಾಗಿ ಪರದಾಟ, ಹಾಳಾದ ರಸ್ತೆಗಳಲ್ಲಿಯೇ ಸಂಚಾರ, ಕೊಳಚೆ ತುಂಬಿಕೊಂಡು ದುರ್ಗಂಧ ಬೀರುತ್ತಿರುವ ಗಟಾರಗಳು...  ಇದು, ಸಮಸ್ಯೆಗಳ ಕೂಪದಲ್ಲಿ ಮುಳುಗಿರುವ ಪಾಲಿಕೆಯ ಒಂದನೇ ವಾರ್ಡ್‌ನ ದುಸ್ಥಿತಿ.ಪ್ರತಿ ಬೇಸಿಗೆಯಲ್ಲಿ ಮಾರ್ಚ್‌ನಿಂದ ಮೂರು ತಿಂಗಳವರೆಗೆ ನೀರಿಗಾಗಿ ಜನ ಹಗಲು ರಾತ್ರಿ ಎನ್ನದೇ ನಳ, ಕೊಳವೆ ಬಾವಿಗಳ ಬಳಿ ಸಾಲಾಗಿ ನಿಲ್ಲವಂಥ ಪರಿಸ್ಥಿತಿ ಇಲ್ಲಿದೆ. ನಿರಂತರ ನೀರು ಪೂರೈಕೆ ಯೋಜನೆಯ ಭಾಗ್ಯವೂ ಇಲ್ಲಿನ ನಿವಾಸಿಗಳಿಗೆ ಇಲ್ಲವಾಗಿದೆ.‘ಮಧ್ಯರಾತ್ರಿ 2 ರ ಸುಮಾರಿಗೆ ನೀರು ಬಿಡಲಾಗುತ್ತದೆ. ಆದರೆ, ಇದು ನಿರ್ದಿಷ್ಟವಲ್ಲ. ಒಮ್ಮೊಮ್ಮೆ ಬರದೆಯೂ ಇರಬಹುದು. ಹಾಗಿದ್ದರೂ ಕೊಡ ಹಿಡಿದು ನೀರಿಗಾಗಿ ಕಾಯುವ ಸ್ಥಿತಿ ಮಾತ್ರ ತಪ್ಪಿಲ್ಲ’ ಎಂದು ಗಣಪತಿ ಗಲ್ಲಿ ನಿವಾಸಿ ಕಸ್ತೂರಿ ಮೇತ್ರಿ ಹೇಳಿದರು.

‘ಪಾಲಿಕೆಯು ಒಳಚರಂಡಿ ವ್ಯವಸ್ಥೆ ಮಾಡಿಲ್ಲ. ಇರುವ ಗಟಾರಗಳನ್ನೂ ಸ್ವಚ್ಛಗೊಳಿಸಿಲ್ಲ. ಉದ್ಯಮಬಾಗ್‌ ಕಡೆಯಿಂದ ಬರುವ ನೀರು ಸರಾಗವಾಗಿ ಹರಿದು ಮುಖ್ಯ ಕಾಲುವೆ ಸೇರುವಂತೆ ಮಾಡಬೇಕು ಎಂಬ ಬೇಡಿಕೆ ಹತ್ತು ವರ್ಷಗಳಿಂದಲೂ ಈಡೇರಿಲ್ಲ’ ಎಂಬುದು ಸ್ಥಳೀಯರ ಆರೋಪ.

‘ಐದಾರು ವರ್ಷದಿಂದ ರಸ್ತೆ ಸುಧಾರಣೆ ಕಂಡಿಲ್ಲ. ಹಿಂದಿನ ಶಾಸಕರು ರಸ್ತೆ, ತೆರೆದ ಗಟಾರದ ಕಾಮಗಾರಿ ಮಾಡಿಸಿದ್ದರು. ಈಗಿನ ಶಾಸಕರು ಇತ್ತ ಬಂದಿಲ್ಲ. ಬ್ರಹ್ಮ ದೇವಸ್ಥಾನ ಬದಿಯ ಕೆರೆಯ ಸುತ್ತಲಿನ ಕೆರೆ ಗೋಡೆ ಕುಸಿಯುತ್ತಿದೆ. ನಿರಂತರ ನೀರು ತುಂಬಿಕೊಂಡಿರುತ್ತಿದ್ದ ಈ ಕೆರೆಯ ಪುನಶ್ಚೇತನಕ್ಕೆ ಯಾರೂ ಆಸಕ್ತಿ ವಹಿಸಿಲ್ಲ. ದುಡಿವ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರ ಬೇಡಿಕೆಗಳೂ ಈಡೇರಿಲ್ಲ’ ಎಂದು ಸ್ಥಳೀಯ ನಿವಾಸಿ ಸಚಿನ್ ದೂರಿದರು.

ಈ ಕುರಿತು ಪ್ರತಿಕ್ರಿಯಿಸಿದ ನಗರ ಪಾಲಿಕೆ ಸದಸ್ಯ ಮಲ್ಲಸರ್ಜ ಬಳಗಣ್ಣವರ, ‘ನಾಲ್ಕು ವರ್ಷಗಳಲ್ಲಿ ಹಿಂದೂ, ಜೈನ ಸಮಾಜದ ಸ್ಮಶಾನಗಳನ್ನು ಸುಧಾರಣೆ ಮಾಡಿಸಿದ್ದೇವೆ. ಅಂಬೇಡ್ಕರ್‌ ಗಲ್ಲಿ, ಗಂಗಾಯ ಗಲ್ಲಿಗಳ ರಸ್ತೆ, ಗಟಾರ ನಿರ್ಮಾಣದ ಕೆಲಸಗಳೆಲ್ಲ ಮುಗಿದಿವೆ. ರಾಯಣ್ಣ ನಗರ 4ನೇ ಕ್ರಾಸ್‌, ಕಲ್ಮೇಶ್ವರನಗರ 3ನೇ ಕ್ರಾಸ್‌ ರಸ್ತೆ, ಗಟಾರಗಳ ಕಾಮಗಾರಿಗೆ ಗುತ್ತಿಗೆ ಕೊಡಲಾಗಿದೆ. ಶೀಘ್ರವೇ ಕೆಲಸ ಆರಂಭವಾಗಲಿದೆ’ ಎಂದು ಹೇಳಿದರು. ‘ರಾಯಣ್ಣನಗರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಇದರಿಂದ ಕೊಳವೆಬಾವಿ ಕೊರೆಸುವುದಕ್ಕೆ ಆಗುತ್ತಿಲ್ಲ. ಆದ್ದರಿಂದ ಕೆಲಭಾಗಗಳಲ್ಲಿ ನೀರಿನ ಸಮಸ್ಯೆ ಆಗಿದೆ. ಪರಿಹಾರಕ್ಕಾಗಿ ಪಾಲಿಕೆಯಿಂದ ಯೋಜನೆ ಸಿದ್ಧಪಡಿಸಲಾಗಿದೆ’ ಎಂದು ತಿಳಿಸಿದರು.

ವಾರ್ಡ್‌ ವ್ಯಾಪ್ತಿ

ನಗರದ ದಕ್ಷಿಣ ಭಾಗದ ಕೊನೆಯಲ್ಲಿರುವ ಭಾಗವೇ ಮಜಗಾಂವ. ಇದರ ಬಹುತೇಕ ಭಾಗ ಮಹಾನಗರ ಪಾಲಿಕೆಯ ವಾರ್ಡ್‌ ಸಂಖ್ಯೆ 1ರಲ್ಲಿದೆ. ಉತ್ತರದಲ್ಲಿ ಅನಗೋಳ ರಸ್ತೆ, ಸರ್ವೆ ನಂಬರ್‌ 53ರಲ್ಲಿಯ ಮಲ್ಲಪ್ಪ ಪೂಜಾರಿ ಮನೆಯಿಂದ ಕುಬೇರ ಬಿಲ್ಡಿಂಗ್‌ ಮಜಗಾಂವ ರಸ್ತೆವರೆಗೆ ಇದೆ. ಪೂರ್ವದಲ್ಲಿ ಸರ್ವೆ ನಂಬರ 53ರ ಮಲ್ಲಪ್ಪ ಪೂಜಾರಿ ಮನೆಯಿಂದ ಕಲ್ಮೇಶ್ವರ ನಗರದ ಬ್ರಹ್ಮದೇವ ದೇವಸ್ಥಾನವರೆಗೆ. ದಕ್ಷಿಣದಲ್ಲಿ ಸರ್ವೆ ನಂಬರ್‌ 201ರ ಚಂದ್ರು ಸೈಬಣ್ಣವರ ಮನೆಯಿಂದ ಚಾವಡಿ ಗಲ್ಲಿ ಬ್ರಹ್ಮ ದೇವಸ್ಥಾನದವರೆಗೆ, ಪಶ್ಚಿಮದಲ್ಲಿ ಕುಬೇರ ಬಿಲ್ಡಿಂಗ್‌ನಿಂದ ರಾಯಣ್ಣ ನಗರ, ವಾಲ್ಮಿಕಿ ಗಲ್ಲಿ, ಚಂದ್ರು ಸೈಬಣ್ಣವರ ಮನೆಯವರೆಗೆ.

**

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮೊದಲ ಆದ್ಯತೆ ಕೊಡಲಾಗಿದೆ. ಅದಕ್ಕಾಗಿ ಪರ್ಯಾಯ ಅವಕಾಶಗಳಿಗೆ ಪ್ರಯತ್ನಿಸಲಾಗುತ್ತಿದೆ – ಮಲ್ಲಸರ್ಜ, ಬಳಗಣ್ಣವರ ಪಾಲಿಕೆ ಸದಸ್ಯ

**

ಐದು ವರ್ಷದಿಂದ ಅಭಿವೃದ್ಧಿ ಕೆಲಸ ನಡೆದಿಲ್ಲ. ಗಟಾರದ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಕುಡಿವ ನೀರು ಪೂರೈಕೆಯಾಗುತ್ತಿಲ್ಲ – ಲಕ್ಷ್ಮಣ ಅನಗೋಳಕರ, ಮಜಗಾಂವ ನಿವಾಸಿ.

**

ಆರ್‌.ಎಲ್‌. ಚಿಕ್ಕಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT