ಮಂಗಳವಾರ, ಜುಲೈ 14, 2020
24 °C

ನಿವೃತ್ತಿ ವಯಸ್ಸು ಏರಿಕೆ ಪರಿಹಾರವೇ?

ಡಾ. ಉದಯ ಕುಮಾರ ಇರ್ವತ್ತೂರು Updated:

ಅಕ್ಷರ ಗಾತ್ರ : | |

ನಿವೃತ್ತಿ ವಯಸ್ಸು ಏರಿಕೆ ಪರಿಹಾರವೇ?

ಕಾಲೇಜು ಅಧ್ಯಾಪಕರ ನಿವೃತ್ತಿ ವಯಸ್ಸನ್ನು 60 ರಿಂದ 62 ವರ್ಷಕ್ಕೆ ಮತ್ತು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರ ನಿವೃತ್ತಿ ವಯಸ್ಸನ್ನು 62 ರಿಂದ 65 ವರ್ಷಕ್ಕೆ ಏರಿಸುವ ಸಂಬಂಧದ ಪ್ರಸ್ತಾವ ಅಂತಿಮ ರೂಪು ಪಡೆಯುತ್ತಿರುವ ಈ ಹಂತದಲ್ಲಿ ಅಧ್ಯಾಪಕನಾಗಿ ಕೆಲವು ವಿಚಾರಗಳನ್ನು ಚರ್ಚೆಗೆ ಒಳಪಡಿಸುವ ಇರಾದೆಯಿಂದ ಈ ಲೇಖನ ಬರೆಯುತ್ತಿದ್ದೇನೆ. ಈ ಕುರಿತಂತೆ ಸಾರ್ವಜನಿಕ ವಲಯದಲ್ಲಿ ಒಂದೆಡೆಯಿಂದ ಸಮರ್ಥನೆ, ಇನ್ನೊಂದೆಡೆಯಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ಎರಡೂ ವಾದಗಳ ಮಧ್ಯೆ ಕಳೆದುಹೋಗಿರುವ ಕೆಲವು ಸಂಗತಿಗಳನ್ನು ಮುನ್ನೆಲೆಗೆ ತರುವುದು ಈ ಲೇಖನದ ಉದ್ದೇಶ.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ‘ಹಿರಿಯ ವಿದ್ವಾಂಸರು ನಿವೃತ್ತರಾಗುವುದರಿಂದ ಅವರ ಸ್ಥಾನಗಳನ್ನು ತುಂಬಬಲ್ಲ ಸಮರ್ಥ, ಅನುಭವಿ ವ್ಯಕ್ತಿಗಳು ಇಲ್ಲದಿರುವ ಕಾರಣ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರ ನಿವೃತ್ತಿ ವಯಸ್ಸನ್ನು ಏರಿಸಬೇಕು’ ಎನ್ನುವುದು ಒಂದು ವಾದ. ಈ ವಾದದಲ್ಲಿ ಖಂಡಿತವಾಗಿಯೂ ಹುರುಳಿದೆ. ಏಕೆಂದರೆ, ಯಾವುದೇ ಒಂದು ಅಧ್ಯಯನ ವಿಭಾಗ ಸಮರ್ಥವಾಗಿ ಕಾರ್ಯ ನಿರ್ವಹಿಸಬೇಕಾದರೆ ಅನುಭವಿಗಳ, ಹಿರಿಯರ, ವಿದ್ವಾಂಸರ ಅಗತ್ಯವಿದೆ. ಆದರೆ, ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ಈ ರೀತಿ ವಯೋಮಿತಿ ಏರಿಸುತ್ತಾ ಹೋಗುವುದು ಪರಿಹಾರವೇ? ಎಷ್ಟರವರೆಗೆ ನಾವು ವಯೋಮಿತಿಯನ್ನು ಏರಿಸುತ್ತಾ ಹೋಗಬಹುದು? 65 ವರ್ಷ, 70 ವರ್ಷ, 85 ವರ್ಷ? ಯಾವುದೇ ವಿಭಾಗದಲ್ಲಿ ಈ ರೀತಿಯ ಸಂದರ್ಭಗಳಿದ್ದಾಗ, ಸಮಸ್ಯೆಗಳಿದ್ದಾಗ ಸರ್ಕಾರವು ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಬದಲಿಗೆ ಅರ್ಹರನ್ನು ತಕ್ಷಣ ನೇಮಕ ಮಾಡಬೇಕು.

1. ಒಂದೊಮ್ಮೆ ಹಿರಿಯರು, ಅನುಭವಿಗಳ ಅಗತ್ಯವಿದೆ ಎನ್ನುವುದರಲ್ಲಿ ನಿಜವಾದ ಸಾಮಾಜಿಕ ಕಳಕಳಿ ಇದೆ ಎಂದಾದರೆ ಈಗಾಗಲೇ ನಿವೃತ್ತರಾಗಿರುವ, ಆರೋಗ್ಯ ಕಾಪಾಡಿಕೊಂಡಿರುವ ಹಿರಿಯರನ್ನು ಸಂದರ್ಶಕ ಪ್ರಾಧ್ಯಾಪಕರಾಗಿ ಏಕೆ ನೇಮಿಸಿಕೊಳ್ಳಬಾರದು. ಅವರಿಂದ ವಾರಕ್ಕೆ ಕನಿಷ್ಠ 6 ಗಂಟೆಗಳ ಬೋಧನೆ ದೊರೆಯುವಂತೆ ಮಾಡಬಹುದಲ್ಲವೇ? ಇದಕ್ಕಾಗಿ ಹೆಚ್ಚುವರಿ ಆರ್ಥಿಕ ಹೊರೆಯೂ ಉಂಟಾಗದು. ಆದ್ದರಿಂದ ಆಸಕ್ತಿಯಿರುವ ನಿವೃತ್ತ ಅಧ್ಯಾಪಕರು ಅವರು ಬಯಸುವ ಸಂಸ್ಥೆಗಳಲ್ಲಿ ವಾರಕ್ಕೆ ಗರಿಷ್ಠ 6 ಗಂಟೆಗಳ ಕಾಲ ಬೋಧನೆ ಮಾಡುವ ವ್ಯವಸ್ಥೆಯನ್ನು ಸರ್ಕಾರ ಮಾಡಬಹುದಾಗಿದೆ.

2. ನಿವೃತ್ತಿಯ ಅಂಚಿನಲ್ಲಿರುವ ಪ್ರಾಧ್ಯಾಪಕರು ಗರಿಷ್ಠ ವೇತನ ಪಡೆಯುವ ಹಂತದಲ್ಲಿರುತ್ತಾರೆ. ಅವರನ್ನು ಸೇವೆಯಲ್ಲಿ ಮುಂದುವರಿಸಿದಲ್ಲಿ ಸರ್ಕಾರಕ್ಕೆ ಉಂಟಾಗುವ ಆರ್ಥಿಕ ಹೊರೆಯೂ ದೊಡ್ಡದು. ಬಹಳ ದೊಡ್ಡ ಸಂಖ್ಯೆಯ ಅರ್ಹ ಯುವ, ಪ್ರತಿಭಾವಂತ ಅಧ್ಯಾಪಕರು ಲಭ್ಯವಿರುವ ಕಾರಣ ಅಂತಹವರಿಗೆ ಉದ್ಯೋಗ ನೀಡುವುದು ಹೆಚ್ಚು ಸೂಕ್ತ. ಹೊಸದಾಗಿ ನೇಮಕ ಮಾಡಿಕೊಂಡರೆ, ಅಂಥವರ ವೇತನ ಸಹಜವಾಗಿಯೇ ಕಡಿಮೆ ಇರುತ್ತದೆ. ಅದರಿಂದ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆಯೂ ಇರದು. ನಿರುದ್ಯೋಗ ಸಮಸ್ಯೆಯಿಂದ ಈಗಾಗಲೇ ಹೈರಾಣಾಗಿರುವ ಯುವಕರಿಗೆ ಉದ್ಯೋಗ ನೀಡದೆ, ಅವಕಾಶವಂಚಿತರನ್ನಾಗಿ ಮಾಡುವುದು ಎಷ್ಟು ಸರಿ?

3. ಹಿರಿಯ ಅಧ್ಯಾಪಕರು ನಿವೃತ್ತಿಯ ಅಂಚಿಗೆ ಬರುವ ಹೊತ್ತಿಗೆ ಅವರಲ್ಲಿ ಕೆಲವರು ಪರಮ ಆಲಸಿಗಳು, ಸಿನಿಕರೂ ಆಗಿರುವುದನ್ನು ನಾವು ಗಮನಿಸಬಹುದು. ಯಾವುದೇ ಜವಾಬ್ದಾರಿ ನೀಡಿದರೂ ಆರೋಗ್ಯದ ಕಾರಣ, ಕೌಟುಂಬಿಕ ಕಾರಣದಂಥ ಕುಂಟು ನೆಪಗಳನ್ನು ನೀಡುತ್ತಾರೆ. ಸಂಬಳ ಎಣಿಸಲು ಮಾತ್ರ ಉತ್ಸಾಹ ಉಳಿಸಿಕೊಂಡಿರುವ ಇಂಥ ಪ್ರಭೃತಿಗಳಿಂದ ಉನ್ನತ ಶಿಕ್ಷಣಕ್ಕೆ ಯಾವ ಸೇವೆ ಲಭ್ಯವಾಗಲು ಸಾಧ್ಯ? ಇಂತಹ ವರ್ಗವನ್ನು ತಿಂಗಳಿಗೆ ಲಕ್ಷಗಟ್ಟಲೆ ಸಂಬಳ ಹಾಗೂ ಇನ್ನಿತರ ಸವಲತ್ತು ನೀಡಿ ಸರ್ಕಾರ ಮತ್ತು ಸಮಾಜ ಯಾವ ಪುರುಷಾರ್ಥಕ್ಕಾಗಿ ಸಹಿಸಬೇಕಿದೆ?

4. ಬಹಳಷ್ಟು ಪ್ರಾಧ್ಯಾಪಕರು ಸೇವಾವಧಿಯಲ್ಲಿ ಉಪನ್ಯಾಸ, ಪರೀಕ್ಷೆ, ಸಾಹಿತ್ಯ ಸೇವೆಯ ಹೆಸರಿನಲ್ಲಿ ನಿರಂತರ ತಿರುಗಾಟದಲ್ಲಿಯೇ ಕಾಲ ಕಳೆಯುತ್ತಾರೆ. ವಿದ್ಯಾರ್ಥಿಗಳ ಕೈಗೆ ಸಿಕ್ಕಿದರೆ ಅದೇ ಪುಣ್ಯ! ಅಂಥವರ ಸಂಖ್ಯೆ ಕಡಿಮೆಯೇನಲ್ಲ. ತಮ್ಮೆಲ್ಲ ಕೆಲಸಗಳನ್ನು ಸಂಶೋಧನಾ ಸಹಾಯಕರಿಗೋ, ವಿದ್ಯಾರ್ಥಿಗಳಿಗೋ ವಹಿಸಿ, ಪತ್ರಿಕೆಗಳಲ್ಲಿ ಮಾತ್ರ ಸದಾ ಮಿಂಚುತ್ತಾ ‘ಖ್ಯಾತನಾಮ’ರಾಗಿರುತ್ತಾರೆ. ಇಂತಹವರ ಸೇವೆ ಯಾರಿಗೆ ಅವಶ್ಯಕ ಎನ್ನುವ ಪ್ರಶ್ನೆಗೂ ಉತ್ತರ ಹುಡುಕಬೇಕಿದೆ.

5. ಕಾಯಕನಿಷ್ಠ ಅಧ್ಯಾಪಕರಲ್ಲಿ ಕೆಲವರು ತಾವೇ ಸಂಸ್ಥೆಯ ಮಟ್ಟಕ್ಕೆ ಬೆಳೆದು, ಪ್ರಶಸ್ತಿ–ಸನ್ಮಾನಗಳಿಗೆ ಹಾತೊರೆಯದೆ, ಕರ್ತವ್ಯವನ್ನು ತಪಸ್ಸಿನಂತೆ ನಿರ್ವಹಿಸುತ್ತಿದ್ದಾರೆ.

ಉನ್ನತ ಶಿಕ್ಷಣ ವ್ಯವಸ್ಥೆಯ ಘನತೆ ಇಂಥವರಿಂದಲೇ ಇನ್ನೂ ಉಳಿದಿರುವುದು. ಆದರೆ ಈ ವರ್ಗಕ್ಕೆ ಒಳಪಡುವ ಅನೇಕರು ದಣಿವರಿಯದೆ ದುಡಿದು, ಜವಾಬ್ದಾರಿಯನ್ನು ಹೊತ್ತು, ಸಂಕಟಗಳನ್ನು ಅನುಭವಿಸಿ ಹೈರಾಣಾಗಿದ್ದಾರೆ. ಅವರನ್ನು ಕೇಳಿದರೆ, ‘ಸಾಕಪ್ಪಾ ಈ ಸಹವಾಸ... ನಿವೃತ್ತಿಯಾದರೆ ಸಾಕು; ನೆಮ್ಮದಿಯ ನಿಟ್ಟುಸಿರು

ಬಿಡುತ್ತೇವೆ’ ಎಂದು ಉತ್ತರಿಸಿಯಾರು.

ಹಿರಿಯರ, ಅನುಭವಿಗಳ, ಜ್ಞಾನವಂತರ ಸೇವೆ, ಮಾರ್ಗದರ್ಶನ ಉನ್ನತ ಶಿಕ್ಷಣಕ್ಕೆ ಮಾತ್ರವಲ್ಲ ಎಲ್ಲ ರಂಗಗಳಿಗೂ ಅಗತ್ಯವಿದೆ. ಆದರೆ ಅಂತಹ ಹಿರಿಯರು ಯಾರು,

ಅವರ ಆಯ್ಕೆ, ಅಭಿಪ್ರಾಯ ಏನು ಎನ್ನುವುದನ್ನು ತಿಳಿದುಕೊಳ್ಳಬೇಕಿದೆ. ಒಂದುವೇಳೆ ಇಂತಹ ವಿದ್ವಾಂಸರ ಸೇವೆಯನ್ನು ಬಳಸಿಕೊಳ್ಳುವುದಿದ್ದರೆ ಅವರ ನಿವೃತ್ತಿಯ

ವಯಸ್ಸು ಏರಿಸುತ್ತಾ ಹೋಗುವುದರ ಬದಲಿಗೆ ಸೂಕ್ತವಾದ ಪರ್ಯಾಯ ಮಾರ್ಗ ಒಂದನ್ನು ರೂಪಿಸಬೇಕು. ಆ ದಿಸೆಯಲ್ಲಿ ನನಗನಿಸುವ ಒಂದು ಸಲಹೆಯನ್ನು ಇಲ್ಲಿ ಸೂಚಿಸಬಯಸುತ್ತೇನೆ.

ಎಲ್ಲಾ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಸರ್ಕಾರವು ಒಂದು ಉನ್ನತ ಶಿಕ್ಷಣ ಸಲಹಾ ಮಂಡಳಿಯನ್ನು ನಿವೃತ್ತ ಕುಲಪತಿಯೊಬ್ಬರ ಅಧ್ಯಕ್ಷತೆಯಲ್ಲಿ ರಚಿಸಬೇಕು. ಆ ಸಮಿತಿಗೆ ಸಾಮಾಜಿಕ ಕಳಕಳಿಯಿರುವ, ಶಿಕ್ಷಣ ಕ್ಷೇತ್ರದ ಅನುಭವವಿರುವ ನಾಲ್ವರು ಸದಸ್ಯರನ್ನು ನಾಮಕರಣ ಮಾಡಬೇಕು. ನಿವೃತ್ತಿಗೆ ಒಂದು ವರ್ಷವಿರುವಾಗಲೇ,

ಸೇವೆಯಲ್ಲಿ ಮುಂದುವರಿಯಲು ಬಯಸುವ ಅಧ್ಯಾಪಕರು ತಮ್ಮ ಇಚ್ಛೆಯನ್ನು ಈ ಸಮಿತಿಗೆ ಲಿಖಿತವಾಗಿ ತಿಳಿಸಬೇಕು. ಸಮಿತಿಯು ಅಧ್ಯಾಪಕರು ಸೇವೆ ಸಲ್ಲಿಸುತ್ತಿರುವ ಸಂಸ್ಥೆಯ ಆಡಳಿತ ಮಂಡಳಿ, ಅವರ ಸೇವಾ ದಾಖಲೆ ಮತ್ತು ವಿದ್ಯಾರ್ಥಿಗಳಿಗೆ ಅಂತಹ ಅಧ್ಯಾಪಕರ ಬಗೆಗಿರುವ ಅಭಿಪ್ರಾಯಗಳನ್ನು ಪಡೆಯಬೇಕು. ಅದರ ಆಧಾರದ ಮೇಲೆ ಸೇವೆಯನ್ನು ಮುಂದುವರಿಸುವ ಬಗ್ಗೆ ತೀರ್ಮಾನಿಸಬಹುದು. ನಿವೃತ್ತಿ ವಯಸ್ಸನ್ನು ಸಾರಾಸಗಟಾಗಿ ಏರಿಸುವುದರಿಂದ ಉನ್ನತ ಶಿಕ್ಷಣಕ್ಕೆ ದೊಡ್ಡ ಪ್ರಯೋಜನವೇನೂ ಆಗಲಿಕ್ಕಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.