ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅರ್ಹರಿಗೆ ಸಿಗದ ಆರ್‌ಟಿಇ’

ಆರ್‌ಟಿಇ ಕಾರ್ಯಪಡೆ ಸಂಚಾಲಕ ನಾಗಸಿಂಹ ಜಿ.ರಾವ್‌ ಬೇಸರ
Last Updated 3 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅರ್ಹ ಬಡವರಿಗೆ ಶಿಕ್ಷಣ ಹಕ್ಕು ಕಾಯ್ದೆಯ (ಆರ್‌ಟಿಇ) ಪ್ರಯೋಜನ ತಲುಪುತ್ತಿಲ್ಲ ಎಂದು ಆರ್‌ಟಿಇ ಕಾರ್ಯಪಡೆಯ ಸಂಚಾಲಕ ನಾಗಸಿಂಹ ಜಿ.ರಾವ್‌ ಬೇಸರ ವ್ಯಕ್ತಪಡಿಸಿದರು.

ಕಾರ್ಯಪಡೆ ವತಿಯಿಂದ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಆರ್‌ಟಿಇ ದಿನಾಚರಣೆ’ ಮತ್ತು ‘ಆರ್‌ಟಿಇ ಅವಲೋಕನ ಸಭೆ’ ಉದ್ದೇಶಿಸಿ ಅವರು ಮಾತನಾಡಿದರು.

‘ಮೊದಲೆಲ್ಲ ಅತೀ ಬಡವರು ಕರೆ ಮಾಡಿ ಸೀಟು ಸಿಕ್ಕಿಲ್ಲ ಎಂದು ದೂರುತ್ತಿದ್ದರು. ಈಗ ಬರುವ ಕರೆಗಳ ಧ್ವನಿಯೇ ಬೇರೆ. ಹಣ ಕೊಡುತ್ತೇವೆ. ಹೇಗಾದರೂ ಮಾಡಿ ಸೀಟು ಕೊಡಿಸಿ ಎನ್ನುತ್ತಾರೆ. ವರ್ಷ ಕಳೆದಂತೆ ಹೆಚ್ಚು ಜನರಿಗೆ ತಲುಪಬೇಕಾದ ಕಾಯ್ದೆ ತಪ್ಪು ದಾರಿಯಲ್ಲಿ ಸಾಗುತ್ತಿದೆ. ಜನರ ಜವಾ
ಬ್ದಾರಿ ಇಲ್ಲಿ ಬಹಳ ಮುಖ್ಯ’ ಎಂದರು.

‘ಕಾಯ್ದೆ ಜಾರಿಯಾಗಿ 8 ವರ್ಷಗಳಾದರೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಸೂಕ್ತ ಮಾಹಿತಿ ಇಲ್ಲ. ಅದಕ್ಕಾಗಿ ಕಾರ್ಯಪಡೆಯ ಅನುಭವದ ಆಧಾರದ ಮೇಲೆ ಎಂಟು ಶಿಫಾರಸುಗಳನ್ನು ಆಯೋಗಕ್ಕೆ ನೀಡಿದ್ದೇವೆ. ಇವುಗಳನ್ನು ಜಾರಿಗೊಳಿಸಿ ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿಯಬೇಕು’ ಎಂದು ಒತ್ತಾಯಿಸಿದರು.

ದಕ್ಷಿಣ ಭಾರತ ಮಾನವ ಹಕ್ಕುಗಳ ಶಿಕ್ಷಣ ಮತ್ತು ಸಂರಕ್ಷಣಾ ಸಂಸ್ಥೆಯ (ಸಿಕ್ರಂ) ಮಾರ್ಗರೇಟ್‌, ‘ಪೋಷಕರನ್ನು ಕೊಳ್ಳೆ ಹೊಡೆಯಲು ಖಾಸಗಿ ಶಾಲೆಗಳು ಪ್ರತಿ ದಿನ ಹೊಸ ತಂತ್ರಗಳನ್ನು ರೂಪಿಸುತ್ತಿವೆ. ಪ್ರತಿಷ್ಠಿತ ಶಾಲೆಯೊಂದು ಮಕ್ಕಳನ್ನು ಶಾಲೆಗೆ ದಾಖಲಿಸಕೊಳ್ಳಲು ಮಾತು ಮತ್ತು ಶ್ರವಣ ಪರೀಕ್ಷೆ ಮಾಡಿಸಿ ಪ್ರಮಾಣ ಪತ್ರ ತರಬೇಕು ಎಂದು ಹೇಳುತ್ತಿದೆ. ಇದು ನೇರವಾಗಿ ಮಕ್ಕಳ ಹಕ್ಕುಗಳ ಉಲ್ಲಂಘನೆ. ಈ ಬಗ್ಗೆ ತನಿಖೆ ಆಗಬೇಕು’ ಎಂದರು.

‘ಅಧಿಕಾರಿಗಳು ವಿಷಯ ತಿಳಿಯದೆ ತಪ್ಪು ಮಾಹಿತಿ ನೀಡುವುದರಿಂದ ಸರ್ಕಾರ ಹೊಣೆ ಹೊರಬೇಕಾಗಿದೆ. ಆರ್‌ಟಿಇ ಪಾಲನೆಯಲ್ಲಿ ಅಧಿಕಾರಿಗಳ ಪಾತ್ರ ಬಹಳ ಮುಖ್ಯ. ಮಕ್ಕಳ ಹಕ್ಕುಗಳ ರಕ್ಷಣೆ ಶಿಕ್ಷಣ ಸಂಸ್ಥೆಗೆ ಸೀಮಿತವಾಗಿಲ್ಲ. ಸಮಾಜವೂ ಇದರಲ್ಲಿ ಭಾಗಿಯಾಗಬೇಕು. ಆರ್‌ಟಿಇ ವ್ಯಾಖ್ಯಾನ ದಾರಿ ತಪ್ಪದಂತೆ ಎಲ್ಲರೂ ಎಚ್ಚರ ವಹಿಸಬೇಕು’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣ ಆಯೋಗದ ಅಧ್ಯಕ್ಷೆ ಡಾ.ಕೃಪಾ ಅಮರ್ ಆಳ್ವ ಹೇಳಿದರು.

ಕಾರ್ಯಪಡೆ ಪ್ರತಿ ವರ್ಷ ಆರ್‌ಟಿಇ ಮಕ್ಕಳಿಗೆ ಸ್ಪಂದಿಸುವ ಉತ್ತಮ ಶಾಲೆ ಆಯ್ಕೆ ಮಾಡಿ, ಪುರಸ್ಕರಿಸುತ್ತದೆ. ಈ ಬಾರಿ ‘ವಾಸವಿ ಶಾಲೆ’ ಆಯ್ಕೆ ಮಾಡಿ, ಪ್ರಾಂಶುಪಾಲರಾದ ಸರಸ್ವತಿ ಅವರನ್ನು ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT