ಬುಧವಾರ, ಫೆಬ್ರವರಿ 19, 2020
24 °C
ಅರಣ್ಯ ಇಲಾಖೆಯಿಂದ ಹಮ್ಮಿಗಿ, ಚಿಕ್ಕವಡ್ಡಟ್ಟಿ ಗ್ರಾಮಗಳಲ್ಲಿ ಕೃತಕ ಹೊಂಡಗಳ ನಿರ್ಮಾಣ

ಕಪ್ಪತಗುಡ್ಡ: ವನ್ಯಪ್ರಾಣಿಗಳಿಗೆ ಜೀವಜಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಪ್ಪತಗುಡ್ಡ: ವನ್ಯಪ್ರಾಣಿಗಳಿಗೆ ಜೀವಜಲ

ಮುಂಡರಗಿ: ಸತತ ಬರ ಮತ್ತು ಮಳೆ ಕೊರತೆಯಿಂದ ತಾಲ್ಲೂಕಿನ ಕಪ್ಪತಗುಡ್ಡ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿದ್ದ ಜಲ ಮೂಲಗಳು ಬರಿದಾಗಿವೆ. ಅರಣ್ಯ ಪ್ರದೇಶದಲ್ಲಿರುವ ಪ್ರಾಣಿ ಪಕ್ಷಿಗಳು ನೀರಿಲ್ಲದೆ ಪರದಾಡುವಂತಾಗಿದೆ. ಅರಣ್ಯ ಇಲಾಖೆಯು ಕಪ್ಪತಗುಡ್ಡದ ಆಯ್ದ ಭಾಗಗಳಲ್ಲಿ ಹೊಂಡಗಳನ್ನು ನಿರ್ಮಿಸಿದ್ದು, ಇಲ್ಲಿ ನೀರು ತುಂಬಿಸಲಾಗಿದೆ.‘ಮೊದಲು ಇಂತಹ ಕೃತಕ ಗುಂಡಿಗಳನ್ನು ನಿರ್ಮಿಸಿ ಅದಕ್ಕೆ ಪ್ಲಾಸ್ಟಿಕ್‌ ಹೊದಿಕೆ ಹಾಕಲಾಗುತ್ತಿತ್ತು. ಆದರೆ, ಪ್ಲಾಸ್ಟಿಕ್‌ನಿಂದ ಬಿಸಿಲಿಗೆ ನೀರು ಕಾದು ಸದಾ ಬಿಸಿಯಾಗಿರುತ್ತಿತ್ತು. ಇದನ್ನು ಪ್ರಾಣಿಗಳು ಕುಡಿಯಲು ಹಿಂದೇಟು ಹಾಕುತ್ತಿದ್ದವು.ಈ ಬಾರಿ ಅರಣ್ಯ ಇಲಾಖೆ ಸಿಮೆಂಟ್‌ನಿಂದ ಕೃತಕ ಹೊಂಡಗಳನ್ನು ನಿರ್ಮಿಸಿದೆ.ತಾಲ್ಲೂಕಿನ ಹಮ್ಮಿಗಿ ಹಾಗೂ ಚಿಕ್ಕವಡ್ಡಟ್ಟಿ ಗ್ರಾಮಗಳಿಲ್ಲಿ ಒಟ್ಟು ಐದು ನೀರಿನ ಹೊಂಡಗಳನ್ನು ನಿರ್ಮಿಸಲಾಗಿದ್ದು, ಇವುಗಳಲ್ಲಿ ನಾಲ್ಕು ದೊಡ್ಡ ಹಾಗೂ ಒಂದು ಕಿರು ತೊಟ್ಟಿ ಇದೆ. 2ಮೀಟರ್ ಸುತ್ತಳತೆಯ, 2-ರಿಂದ 3 ಅಡಿ ಆಳದ ಈ ತೊಟ್ಟಿ ನಿರ್ಮಾಣಕ್ಕೆ ತಲಾ ₹30ಸಾವಿರ ಖರ್ಚು ಮಾಡಲಾಗಿದೆ. ‌10 ಮೀಟರ್ ಸುತ್ತಳತೆಯ 4 ಅಡಿ ಆಳದ ದೊಡ್ಡ ತೊಟ್ಟಿಗಳನ್ನು ನಿರ್ಮಿಸಲು ತಲಾ ₹1.20 ಲಕ್ಷ ಖರ್ಚಾಗಿದೆ.

ಕಪ್ಪತಗುಡ್ಡದಲ್ಲಿರುವ ಪವನ ವಿದ್ಯುತ್ ಕಂಪೆನಿಗಳು ಹಾಗೂ ಎಲ್ಎನ್‌ಟಿ ನೆರವಿನಿಂದ ಟ್ಯಾಂಕರ್ ಮೂಲಕ ಈ ಹೊಂಡಗಳಿಗೆ ನಿಯಮಿತ ವಾಗಿ ನೀರು ತುಂಬಿಸಲಾಗುತ್ತಿದೆ.ತೊಟ್ಟಿಗಳನ್ನು ಸಿಮೆಂಟಿನಿಂದ ನಿರ್ಮಿಸಿರುವುದರಿಂದ ಅದರಲ್ಲಿ ಸಂಗ್ರಹಿಸಿದ ನೀರು ಸದಾ ತಣ್ಣಗಿರುತ್ತದೆ.ಗುಡ್ಡದಲ್ಲಿರುವ ಚಿರತೆ, ಕಾಡುಹಂದಿ, ನರಿ, ಕತ್ತೆಕಿರುಬ, ನವಿಲು, ಮೊಲ ಮೊದಲಾದ ಪ್ರಾಣಿಗಳು ರಾತ್ರಿ ಹೊತ್ತಿನಲ್ಲಿ ಇಲ್ಲಿ ನೀರು ಕುಡಿದು ಹೋಗುತ್ತವೆ. ಪ್ರಾಣಿಗಳು ನೀರು ಕುಡಿಯುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.ಮಳೆ ಪ್ರಾರಂಭವಾಗುವವರೆಗೆ ಹೊಂಡಗಳಿಗೆ ನೀರು ತುಂಬಿಸಲಾಗುತ್ತದೆ ಎಂದು ತಿಳಿಸಲಾಗಿದೆ.

**

ಸರ್ಕಾರ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಕಪ್ಪತಗುಡ್ಡ ಹಾಗೂ ಅಲ್ಲಿರುವ ವನ್ಯ ಸಂಪತ್ತನ್ನು ಸಂರಕ್ಷಿಸಲಾಗುವುದು – ಮಹಾಂತೇಶ ನ್ಯಾಮತಿ, ವಲಯ ಅರಣ್ಯ ಅಧಿಕಾರಿ.

**

ಕಾಶೀನಾಥ ಬಿಳಿಮಗ್ಗದ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)