ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಗಡ ರಾಜಕೀಯಕ್ಕೆ ಫ್ಲೋರೈಡ್ ಆಹಾರ

ದಶಕಗಳಿಂದಲೂ ಬಗೆಹರಿಯದ ಸಮಸ್ಯೆ; ಯಾವ ಜನಪ್ರತಿನಿಧಿಗಳ ಆಯ್ಕೆಯಿಂದಲೂ ಲಾಭವಿಲ್ಲ ಎನ್ನುವ ಜನ
Last Updated 11 ಏಪ್ರಿಲ್ 2018, 13:08 IST
ಅಕ್ಷರ ಗಾತ್ರ

ಪಾವಗಡ: ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳ ಹಳದಿ ಬಣ್ಣದ ಹಲ್ಲುಗಳನ್ನು ನೋಡಿ ನೀವು ಪಾವಗಡದವರು ಅಲ್ಲವೇ ಎಂದು ಗುರುತಿಸುವಷ್ಟರ ಮಟ್ಟಿಗೆ ಫ್ಲೋರೈಡ್ ತಾಲ್ಲೂಕಿನ ಜನರ ಮೇಲೆ ಪ್ರಭಾವ ಬೀರಿದೆ.

ವಿದ್ಯಾರ್ಥಿಗಳ ತಲೆಯಲ್ಲಿ ಬಿಳಿ ಕೂದಲು, ಬಾಗಿದ ಸೊಂಟ, ಸೊಟ್ಟಗಿರುವ ಕೈ, ಕಾಲುಗಳು, ಬಿಳಚಿಕೊಂಡಿರುವ ಚರ್ಮ ಯುವಕರನ್ನು ಮುದುಕರನ್ನಾಗಿಸಿದೆ. ಚಿಕ್ಕ ಪುಟ್ಟ ಅಪಘಾತಗಳಾದರೂ ಮೂಳೆ ಮುರಿಯುತ್ತದೆ. ಇದೆಲ್ಲದಕ್ಕೂ ಫ್ಲೋರೈಡ್ ನೀರಿನ ಸೇವನೆಯೇ ಪ್ರಮುಖ ಕಾರಣ.

ಜನರನ್ನು ಕಾಡುತ್ತಿರುವ ಫ್ಲೋರೈಡ್ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಇಲ್ಲಿಯವರೆಗೆ ಆಯ್ಕೆಯಾಗಿರುವ ವಿವಿಧ ಪಕ್ಷಗಳ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಇದನ್ನು ಆಯಾ ಪಕ್ಷಗಳ ಕಾರ್ಯಕರ್ತರೂ ಒಪ್ಪಿಕೊಳ್ಳುವರು.

ಚುನಾವಣೆ ಬಂದಿತು ಅಂದರೆ ಫ್ಲೋರೈಡ್ ನೀರಿನ ಸಮಸ್ಯೆ ಎಲ್ಲರಿಗೂ ಮತಕೇಳುವ ವಿಷಯವಾಗುತ್ತದೆ. ಪ್ರತಿ ವಿಧಾನಸಭಾ ಚುನಾವಣೆಗಳಲ್ಲಿ ಎಲ್ಲ ಅಭ್ಯರ್ಥಿಗಳು ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುತ್ತೇವೆ ಎಂದು ಆಶ್ವಾಸನೆಗಳ ಮಳೆ ಸುರಿಸುವರು. ತಾಲ್ಲೂಕಿನ ಜನರನ್ನು ಹಗಲಿರುಳು ಕಾಡುತ್ತಿರುವ ನೀರಿನ ಸಮಸ್ಯೆಯನ್ನು ದಶಕಗಳಿಂದಲೂ ಪ್ರಚಾರದ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಆದರೆ ಜನರು ಭರವಸೆಗಳನ್ನು ಕೇಳಿ ಕೇಳಿ ರೋಸಿದ್ದಾರೆ.

ಜಿಲ್ಲೆಯಲ್ಲಿಯೇ ತಾಲ್ಲೂಕು ಹೆಚ್ಚಿನ ಅಂಗವಿಕಲರನ್ನು ಹೊಂದಿದೆ. 4,500 ಅಂಗವಿಕಲರಿದ್ದಾರೆ. ಇವರಲ್ಲಿ ಮೂಳೆ ಸಂಬಂಧಿ ದೈಹಿಕ ನ್ಯೂನತೆಯಿಂದ ಬಳಲುತ್ತಿರುವವರ ಸಂಖ್ಯೆ ಗಣನೀಯ.

ಫ್ಲೋರೈಡ್ ಹೆಚ್ಚಲು ಕಾರಣ: ತಾಲ್ಲೂಕಿನಲ್ಲಿ ಹೆಸರಿಗೆ ಮಾತ್ರ ಉತ್ತರ ಪಿನಾಕಿನಿ ನದಿ ಇದೆ. ಪಿನಾಕಿನಿ ಮೈದುಂಬಿ ಹರಿದು ದಶಕಗಳೇ ಕಳೆದಿವೆ. ಇದನ್ನು ಹೊರತು ಪಡಿಸಿದರೆ ಕುಡಿಯಲು, ಬಳಕೆಗೆ, ವ್ಯವಸಾಯಕ್ಕೆ ಅಂತರ್ಜಲವೇ ಆಧಾರ. ಸಾವಿರಾರು ಅಡಿ ಆಳ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುವುದಿಲ್ಲ. ಅಲ್ಪ ಪ್ರಮಾಣದಲ್ಲಿ ಬೀಳುವ ಮಳೆ ನೀರು ಕೆರೆ ಅಂಗಳವನ್ನು ತಲುಪುವುದಿಲ್ಲ. ಮಳೆ ಅಭಾವ, ನದಿಗಳು ಇಲ್ಲದಿರುವುದು, ಕೆರೆ ತುಂಬದ ಕಾರಣ ಸಾವಿರ ಅಡಿ ಆಳದ ಫ್ಲೋರೈಡ್ ಪೂರಿತ ಅಂತರ್ಜಲವನ್ನೇ ಜನರು ಅವಲಂಬಿಸಿದ್ದಾರೆ.

‘30 ವರ್ಷದ ಯುವಕರು ಫ್ಲೋರೈಡ್ ನೀರು ಸೇವನೆಯಿಂದ ಇದ್ದಕ್ಕಿದ್ದಂತೆ ನಡೆಯಲಾಗದೆ ಮೂಲೆ ಸೇರಿದ ನಿದರ್ಶನಗಳಿವೆ. ಇತರರಂತೆ ಕೆಲಸ ಮಾಡಲಾಗದ ಅಂಗವಿಕಲರ ಪಟ್ಟಿಗೆ ಸೇರುತ್ತಾರೆ. ಹೀಗಾಗಿ ಅಂಗವಿಕಲರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ’ ಎನ್ನುತ್ತಾರೆ ವಿವಿಧೋದ್ಧೇಶ ಪುನರ್ವಸತಿ ಕಾರ್ಯಕರ್ತ ಮೈಲಾರಪ್ಪ.

‘ಒಂದೆರೆಡು ವರ್ಷ ಫ್ಲೋರೈಡ್ ನೀರು ಸೇವಿಸಿದರೆ ದೇಹದ ಮೇಲೆ ಪರಿಣಾಮ ಆಗುವುದಿಲ್ಲ. ಆದರೆ ದಶಕಗಳ ಕಾಲ ಸೇವಿಸಿದರೆ ಫ್ಲೋರೈಡ್ ಅಂಶ ದೇಹದಲ್ಲಿ ಸಂಗ್ರಹವಾಗುತ್ತದೆ. ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಬೆನ್ನು ಬಾಗುವುದು, ಕೈ, ಕಾಲು ಆಡಿಸಲು ಸಾಧ್ಯವಾಗದಿರುವುದು, ಇತ್ಯಾದಿ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಕಿಡ್ನಿಯಲ್ಲಿ ಕಲ್ಲು ಉತ್ಪತ್ತಿಗೆ ಫ್ಲೋರೈಡ್ ಪ್ರೇರಕ. ಹುಣಸೆ, ನೆಲ್ಲಿ, ನಿಂಬೆಯಂತಹ ಹುಳಿ ಪದಾರ್ಥಗಳನ್ನು ಸೇವಿಸುವುದರಿಂದ ಫ್ಲೋರೈಡ್ ಪರಿಣಾಮಗಳನ್ನು ನಿಯಂತ್ರಿಸಬಹುದು’ ಎಂದು ತಾಲ್ಲೂಕು ವೈದ್ಯಾಧಿಕಾರಿ ವೆಂಕಟೇಶಮೂರ್ತಿ ತಿಳಿಸಿದರು.

‘ಶಿಬಿರಗಳ ಮೂಲಕ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ನಡೆಯಲಾಗದವರಿಗೆ ಇಲಾಖೆಯಿಂದ ವೀಲ್ ಚೇರ್ ವಿತರಿಸಲಾಗುತ್ತಿದೆ. ಅಂಗನವಾಡಿ, ಶಾಲಾ, ಕಾಲೇಜುಗಳ ಮಕ್ಕಳಿಗೆ ಶುದ್ಧೀಕರಿಸಿದ ನೀರು ಸರಬರಾಜು ಮಾಡುವಂತೆ ಸಂಬಂಧಿಸಿದವರಿಗೆ ಸೂಚಿಸಲಾಗುತ್ತಿದೆ’ ಎಂದರು.

‘2011ರಲ್ಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೆ. ತಾತ್ಕಾಲಿಕವಾಗಿ ಶುದ್ಧೀಕರಣ ಘಟಕ ಅಳವಡಿಸುವುದಾಗಿ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು. ಇದೀಗ ತುಂಗಭದ್ರಾ ಹಿನ್ನೀರಿನಿಂದ ಕುಡಿಯುವ ನೀರು ಪೂರೈಸುವ ಯೋಜನೆಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ತಡ ಮಾಡದೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಒತ್ತು ನೀಡಬೇಕು’ ಎಂದು ರಾಷ್ಟ್ರೀಯ ಕಿಸಾನ್ ಸಂಘದ ರಾಜ್ಯ ಘಟಕದ ಅಧ್ಯಕ್ಷ ನಾಗಭೂಷಣರೆಡ್ಡಿ ಆಗ್ರಹಿಸುವರು.

ತಾಲ್ಲೂಕಿನಾದ್ಯಂತ 247 ನೀರು ಶುದ್ಧೀಕರಣ ಘಟಕಗಳಿವೆ. ಸಮರ್ಪಕ ನಿರ್ವಹಣೆ ಇಲ್ಲದೆ ಇವುಗಳಲ್ಲಿ ಬಹುತೇಕ ಕೆಲಸ ಮಾಡುತ್ತಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಘಟಕಗಳು ನಿರುಪಯುಕ್ತವಾಗಿವೆ ಎಂಬ ಆರೋಪ ಗ್ರಾಮೀಣ ಜನರದ್ದು.

ಕುಡಿಯುವ ನೀರಿನ ಜತೆಗೆ ಪಟ್ಟಣ ವಾಸಿಗಳು ಬಳಕೆಯ ನೀರಿಗಾಗಿ ಪರದಾಡಬೇಕಿದೆ. ಬೇಸಿಗೆ ಸಮೀಪಿಸುತ್ತಿದ್ದಂತೆ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗುತ್ತದೆ. ಸಾಕಷ್ಟು ಬಡಾವಣೆಗಳಿಗೆ 10 ರಿಂದ 15 ದಿನಗಳಿಗೆ ಒಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಕನುಮಲ ಚೆರುವು, ಆಪ್ ಬಂಡೆ, ಬೆಟ್ಟದ ಸುತ್ತ ಮುತ್ತಲ ಪ್ರದೇಶದವರಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ದಶಕಗಳಿಂದ  ನೀರಿನ ಸಮಸ್ಯೆ ಬಗೆಹರಿಸುವತ್ತ ಯಾವ ಜನಪ್ರತಿನಿಧಿಯೂ ಗಮನಹರಿಸಿಲ್ಲ ಎಂಬ ಆರೋಪ ಸಾರ್ವಜನಿಕರದ್ದು. ₹ 15 ಕೋಟಿ ವೆಚ್ಚದಲ್ಲಿ ನಾಗಲಮಡಿಕೆಯಿಂದ ಪಟ್ಟಣಕ್ಕೆ ನೀರು ತರುವ ಯೋಜನೆ ವಿಫಲವಾಯಿತು. ಪಟ್ಟಣ ವ್ಯಾಪ್ತಿಯಲ್ಲಿ ಸಾವಿರ ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ನಾಗಲಮಡಿಕೆಯಿಂದ ನೀರು ತರಬೇಕು, ಇಲ್ಲವೇ ಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆಸಿ ಅಲ್ಲಿಂದ ನೀರು ಪೂರೈಸುವ ಯೋಜನೆಗೆ ಚಾಲನೆ ನೀಡಬೇಕು ಎನ್ನುವುದು ಹಲವರ ಆಗ್ರಹ.

‘ನೀರಿನ ಅಭಾವದ ಜತೆಗೆ ಸಿಬ್ಬಂದಿ ಕೊರತೆಯಿಂದ ಸಮಸ್ಯೆ ಹೆಚ್ಚಿದೆ. 6 ಮಂದಿ ನೀರುಗಂಟಿ, 4 ನಿರ್ವಾಹಕರು, 4 ಮಂದಿ ಸಹಾಯಕ ನಿರ್ವಾಹಕರ ಹುದ್ದೆಗಳು ಖಾಲಿ ಇವೆ. 20 ವರ್ಷದ ಹಿಂದೆ ಇದ್ದಷ್ಟೇ ಸಿಬ್ಬಂದಿ ಈಗಲೂ ಇದ್ದಾರೆ. ಪಂಪ್ ಹೌಸ್‌ಗಳು, ಜನಸಂಖ್ಯೆ ಹೆಚ್ಚಿದೆ. ಹೀಗಾಗಿ ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿಲ್ಲ’ ಎಂದು ಶಾಂತಿ ನಗರದ ನಿವಾಸಿ ರಾಜು ಆರೋಪಿಸುವರು.

ನೀರಿನ ಘಟಕಕ್ಕೆ ಒತ್ತು

ಕುಡಿಯುವ ನೀರಿಗಾಗಿ ಪಕ್ಷದಿಂದ ಪಾದಯಾತ್ರೆ ನಡೆಸಲಾಗಿದೆ. ಎರಡು ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ನಿಯೋಗ ಕರೆದೊಯ್ಯಲಾಗಿತ್ತು. 65 ಸಂಘ, ಸಂಸ್ಥೆಗಳ ಜತೆ ತಹಶೀಲ್ದಾರ್ ಕಚೇರಿ ಮುಂದೆ ನಡೆದ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದೆವು.ವಿಧಾನ ಸಭೆ ಕಲಾಪದಲ್ಲಿ ಶಾಸಕರು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದಾರೆ. ತಾಲ್ಲೂಕಿನಾದ್ಯಂತ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲು ಶಾಸಕರು ಒತ್ತು ನೀಡಿದ್ದಾರೆ ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಎನ್.ಬಲರಾಮರಾಮರೆಡ್ಡಿ ತಿಳಿಸಿದರು.

₹ 1.5 ಸಾವಿರ ಕೋಟಿ ಅನುದಾನ

ಬಿಜೆಪಿ ಸರ್ಕಾರ ಆಡಳಿತದಲ್ಲಿ ಇದ್ದಾಗ ಕುಡಿಯುವ ನೀರಿಗಾಗಿ ಪಟ್ಟಣದಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಲಾಗಿತ್ತು. ಭದ್ರಾ ಮೇಲ್ದಂಡೆ ಯೋಜನೆಗೆ ₹ 1.5 ಸಾವಿರ ಕೋಟಿ ಅನುದಾನ ಮಂಜೂರು ಮಾಡಿದ್ದರು. ಆಗಿನ ಸಂಸದ ಜನಾರ್ದನ ಸ್ವಾಮಿ ಇದಕ್ಕೆ ಶ್ರಮಿಸಿದ್ದರು. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದಾಗ ತುಂಗಭದ್ರಾ ಹಿನ್ನೀರಿನಿಂದ ನೀರು ಹರಿಸುವ ಯೋಜನೆಯ ಸಮೀಕ್ಷೆ ನಡೆಸಿ, ಸಮಗ್ರ ಯೋಜನಾ ವರದಿ ತಯಾರಿಸಲಾಗಿತ್ತು. ಈ ಎಲ್ಲದರ ಬಗ್ಗೆ ನಮ್ಮ ಬಳಿ ಆಧಾರಗಳು ಇವೆ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಟಿ.ಗಿರೀಶ್ ತಿಳಿಸಿದರು.

ನೀರಿಲ್ಲ

ಬಡಾವಣೆಗೆ ನೀರು ಸರಬರಾಜು ಮಾಡಿ 3 ತಿಂಗಳಾಗಿದೆ. ವೃದ್ಧರು, ಕೈಲಾಗದವರು ಸಾಕಷ್ಟು ಕಷ್ಟ ಪಡಬೇಕು. ಮುನ್ನೂರಿಂದ ನಾಲ್ಕು ನೂರು ರೂಪಾಯಿ ಕೊಟ್ಟು ಟ್ಯಾಂಕರ್ ನೀರು ಕೊಳ್ಳಬೇಕಿದೆ. ನೀರು ಕೊಳ್ಳಲಾಗದ ಬಡವರ ಸ್ಥಿತಿ ಚಿಂತಾಜನಕ – ರಮೀಜಾ, ರೈನ್ ಗೇಜ್ ಬಡಾವಣೆ, ಪಾವಗಡ

ಸಿ.ಎಂಗೆ ಮನವಿ

ತುಂಗಭದ್ರಾ ಹಿನ್ನೀರಿನಿಂದ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಜಾರಿ ಮಾಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ್ದೇವೆ. ಮಾಜಿ ಸಚಿವ ವೆಂಕಟರವಣಪ್ಪ ಅವರು ಯೋಜನೆ ಜಾರಿ ಮಾಡುವಂತೆ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ ಎಂದು ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಜಿ.ಎಸ್.ಸುದೇಶ್ ಕುಮಾರ್ ತಿಳಿಸಿದರು.

**

ಶುದ್ಧೀಕರಣ ಘಟಕ ಸ್ಥಗಿತಗೊಂಡಿದೆ. ಖಾಸಗಿ ಕಂಪನಿಗಳಿಂದ ನೀರು ಕೊಳ್ಳಲಾಗುತ್ತಿದೆ. ಮನೆ ಹತ್ತಿರ ಶುದ್ಧೀಕರಣ ಘಟಕ ಇದ್ದರೂ ಉಪಯೋಗವಿಲ್ಲ – ರಾಧಾ, ನಜೀರ್ ಸಾಬ್ ರಸ್ತೆ, ವೈ.ಎನ್.ಹೊಸಕೋಟೆ.

**

–ಜಯಸಿಂಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT