ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯವಸ್ಥೆಯನ್ನೇ ಬದಲಿಸಬಲ್ಲದು ಹೊಸ ದಲಿತ ತಲೆಮಾರು!

ದಲಿತರ ವಿರುದ್ಧ ದೌರ್ಜನ್ಯದ ಮನೋರೋಗಕ್ಕೆ ಇದೆ ರಾಜಕೀಯ ಪಕ್ಷಗಳ ಪೋಷಣೆ; ಕಾಯ್ದೆ ಬಲಪಡಿಸುವುದೊಂದೇ ಪ್ರಬಲ ಚಿಕಿತ್ಸೆ
Last Updated 14 ಏಪ್ರಿಲ್ 2019, 8:58 IST
ಅಕ್ಷರ ಗಾತ್ರ

ಇಂಡಿಯಾದಲ್ಲಿ ದಲಿತರ ಮೇಲೆ ಸಾವಿರಾರು ವರ್ಷಗಳಿಂದ ಅಡೆತಡೆಯಿಲ್ಲದೆ ನಡೆಯುತ್ತಿರುವ ಜಾತಿಮೂಲದ ಹಿಂಸೆಗಳಿಗೆ ಕೊನೆ ಹಾಡಲೇಬೇಕೆಂದು, ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ರೂಪುಗೊಂಡ ಸಂವಿಧಾನ ಪರಿಚ್ಛೇದಗಳನ್ನು ರೂಪಿಸಿತು. ಅದರ ಫಲವಾಗಿ ರೂಪುಗೊಂಡ ಕಾಯ್ದೆಯೇ ‘ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಆ್ಯಕ್ಟ್-1955.’ 1989ರಲ್ಲಿ ವಿ.ಪಿ. ಸಿಂಗ್ ನೇತೃತ್ವದ ಸರ್ಕಾರ ಇನ್ನಷ್ಟು ಬಲವಾದ ‘ಶೆಡ್ಯೂಲ್ಡ್ ಕ್ಯಾಸ್ಟ್ ಅಂಡ್ ಟ್ರೈಬ್ಸ್ ಅಟ್ರಾಸಿಟಿ ಪ್ರಿವೆನ್ಷನ್ ಆ್ಯಕ್ಟ್’ ಜಾರಿಗೆ ತಂದಿತು.

ಆದರೆ ಸಂವಿಧಾನ ಜಾರಿಗೆ ಬಂದು ಹಲವು ದಶಕಗಳಾದರೂ ದಲಿತರನ್ನು ಹಿಂಸಿಸುವ ಫ್ಯೂಡಲ್ ಹಾಗೂ ಜಾತೀಯ ಶಕ್ತಿಗಳು ಪ್ರಬಲವಾಗಿಯೇ ಇವೆ. ದಲಿತರ ಮೇಲೆ ನೇರ ಹಾಗೂ ತೆರೆಮರೆಯ ಅವಮಾನಗಳು ಮುಂದುವರಿದಿವೆ. ದಲಿತರ ಕಷ್ಟಗಳಿಗೆ ಕೊನೆ ಹಾಡಬೇಕಾದ ಅಸ್ಪೃಶ್ಯತಾ ನಿವಾರಣಾ ಕಾನೂನುಗಳ ಜಾರಿಯ ವಾಸ್ತವ ಸ್ಥಿತಿಯನ್ನು ಕರ್ನಾಟಕದ ಸದನದಲ್ಲಿ ನಡೆದ ಮೂರು ಚರ್ಚೆಗಳು ಬಿಚ್ಚಿಡುತ್ತವೆ:

1964ರಲ್ಲಿ ಮೈಸೂರು ವಿಧಾನಸಭೆಯಲ್ಲಿ ಶಾಂತವೇರಿ ಗೋಪಾಲಗೌಡರು, ‘ಪೊಲೀಸು ಇಲಾಖೆಗೆ ಈ ಅಸ್ಪೃಶ್ಯತಾ ನಿವಾರಣಾ ಕಾನೂನು ಇದೆ ಎನ್ನುವುದರ ಅರಿವಾಗಲೀ, ಇದನ್ನು ಅಕ್ಷರಶಃ ಕಾರ್ಯಗತ ಮಾಡಬೇಕು ಎನ್ನುವ ಕಳಕಳಿಯಾಗಲೀ ಇಲ್ಲ. ಯಾವುದಾದರೂ ಇಂಥ ಸಂದರ್ಭವನ್ನು ಅವರ ಗಮನಕ್ಕೆ ತಂದರೆ ಅವರು ಕೂಡ ಸವರ್ಣ ಹಿಂದೂಗಳಂತೆ, ಅವರ ಮನೋಭಾವದಂತೆ ವರ್ತಿಸುತ್ತಾರೆ’ ಎಂದಿದ್ದರು. ದಲಿತರಿಗೆ ಹೋಟೆಲಿನ ಹೊರಗೆ ಪ್ರತ್ಯೇಕ ಲೋಟದಲ್ಲಿ ಟೀ ಕೊಡುತ್ತಿದ್ದುದರ ವಿರುದ್ಧ ದೂರು ಕೊಡಲು ಹೋದ ದಲಿತರಿಗೆ ಪೊಲೀಸರ ಸಾಮಾನ್ಯ ಪ್ರತಿಕ್ರಿಯೆಯನ್ನೂ ಅವರು ಪ್ರಸ್ತಾಪಿಸಿದ್ದರು: ‘ಇದಕ್ಕೆಲ್ಲ ದೊಡ್ಡ ಕೇಸು ಹಾಕಬೇಕೋ? ಹೋಟೆಲಿನ ಹೊರಗಡೆ ಕುಳಿತು ಕರಟಿಗೆಯಲ್ಲಿ ಟೀ ಕುಡಿದು ಹೋಗುವುದಕ್ಕೆ ಆಗುವುದಿಲ್ಲವೋ? ದೊಡ್ಡ ಕೇಸು ಹಾಕುವುದಕ್ಕೆ ಬಂದ’ ಎಂದು ಪೊಲೀಸರು ಅವರನ್ನು ಕಳಿಸಿಬಿಡುತ್ತಾರೆ. ಈ ಕಾನೂನನ್ನು ಜಾರಿ ಮಾಡುವುದಕ್ಕೆ ಯಾವ ಪ್ರಯತ್ನವನ್ನೂ ಮಾಡಿಲ್ಲ’.

1990ರಲ್ಲಿ ಮಂಗಳೂರಿನ ಪಣಂಬೂರು ನಂದಕೇಶ್ವರ ದೇವಾಲಯದಲ್ಲಿ ರಥೋತ್ಸವದ ದಿನ ಸಾಮೂಹಿಕ ಊಟದ ಪಂಕ್ತಿಯಿಂದ ದಲಿತ ಮಹಿಳೆಯೊಬ್ಬರನ್ನು ಬಲವಂತವಾಗಿ ಹೊರದಬ್ಬಲಾಯಿತು. ಆಗ ಡಾ. ಸಿದ್ಧಲಿಂಗಯ್ಯನವರು ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಕೇಳಿದ ಪ್ರಶ್ನೆ: ‘ಈ ಬಗ್ಗೆ ನಾಗರಿಕ ಹಕ್ಕುಗಳ ಘಟಕ ಏನು ಮಾಡುತ್ತಿದೆ? ಅಸ್ಪೃಶ್ಯತಾ ನಿವಾರಣಾ ಕಾನೂನು ಜಾರಿಯಲ್ಲಿ ಇದೆಯೇ ಅಥವಾ ಸತ್ತಿದೆಯೇ? ಇದರ ಬಗ್ಗೆ ಸರ್ಕಾರ ಉತ್ತರ ಹೇಳಬೇಕು.’

2003ರಲ್ಲಿ ವಿಧಾನ ಪರಿಷತ್ತಿನಲ್ಲಿ ಡಾ. ಎಲ್. ಹನುಮಂತಯ್ಯನವರು ಉಪ್ಪಿನಂಗಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬ್ರಹ್ಮ ಕಳಶೋತ್ಸವದ ಸಂದರ್ಭದ ಸಂತರ್ಪಣೆಯಲ್ಲಿ ಊಟಕ್ಕೆ ಕೂತಿದ್ದ ದಲಿತರನ್ನು ಹೊರ ಹಾಕಿದಾಗ ಪೊಲೀಸರು ಅಸ್ಪೃಶ್ಯತಾ ನಿವಾರಣಾ ಕಾನೂನಿನಡಿ ಕ್ರಮ ಕೈಗೊಳ್ಳದಿದ್ದುದನ್ನು ಸಭೆಯ ಗಮನಕ್ಕೆ ತಂದರು. ‘ತಪ್ಪಿತಸ್ಥರಿಗೆ ಶಿಕ್ಷೆ ಕೊಡುವ ಅಂಕಿ ಅಂಶಗಳನ್ನು ಗಮನಿಸಿದರೆ, 100ಕ್ಕೆ 98 ಕೇಸ್‍ಗಳನ್ನು ಪ್ರೂವ್ ಮಾಡದೆ ಇರತಕ್ಕಂತಹ ಪರಿಸ್ಥಿತಿ’ ಇರುವುದನ್ನೂ ಅವರು ವಿಷಾದದಿಂದ ಗುರುತಿಸಿದರು.

ಕಳೆದ ನಲವತ್ತು ವರ್ಷಗಳಿಂದ ಇಂಥ ಸಾವಿರಾರು ಘಟನೆಗಳ ವಿರುದ್ಧ ಜವಾಬ್ದಾರಿಯುತ ರಾಜಕಾರಣಿಗಳು, ದಲಿತರು, ಪ್ರಗತಿಪರರು ಪ್ರತಿಭಟಿಸುತ್ತಲೇ ಇದ್ದಾರೆ. ಸದನದಲ್ಲಿ ಈ ವಿಷಯಗಳನ್ನು ಪ್ರಸ್ತಾಪಿಸಿದ್ದರಿಂದ, ದಲಿತ ಸಂಘಟನೆಗಳ ಶಕ್ತಿಯಿಂದಾಗಿ, ದಲಿತರ ಮೇಲೆ ದೌರ್ಜನ್ಯ ಎಸಗುವವರು ಆಗಾಗ್ಗೆ ಹಿಂಜರಿದಿದ್ದಾರೆ. ದಲಿತರನ್ನು ಅವಮಾನಿಸಿ ಹಿಂಸಾನಂದ ಪಡೆಯುವ ಜಾತಿಮನಸ್ಸುಗಳು ಸ್ವಲ್ಪವಾದರೂ ಅಳುಕಿರುವುದು ಕಾನೂನಿನ ಭಯಕ್ಕೇ. ಆದರೆ ಈಚೆಗೆ ಇಂಡಿಯಾದ ಜಾತೀಯ ಅಹಂಕಾರ ಕೋಮುವಾದದಿಂದಾಗಿ ಮತ್ತೆ ಬಲಿತಿದೆ; ಪ್ರಬಲ ಜಾತಿಗಳ ಜಮೀನ್ದಾರಿ ಸೊಕ್ಕಿಗೆ ಮತ್ತೆ ರೆಕ್ಕೆ ಬಂದಿದೆ. ಆ ದುರಹಂಕಾರ ಅಲ್ಪಸಂಖ್ಯಾತರ ವಿರುದ್ಧ, ದಲಿತರ ವಿರುದ್ಧ ತಿರುಗುತ್ತಿರುತ್ತದೆ. ದಲಿತರು ತಾವು ಹೇಳಿದ ಕೆಲಸ ಮಾಡಬೇಕು ಎಂದು ಹ್ಞೂಂಕರಿಸುತ್ತಿದ್ದ ಶಕ್ತಿಗಳೇ ಇವತ್ತು ಪರಿಶಿಷ್ಟ ಜಾತಿಯ ರಾಥೋಡ್ ಕುದುರೆಯೇರಿದ್ದಕ್ಕೆ ಹ್ಞೂಂಕರಿಸುತ್ತಿವೆ. ಈ ಮನೋರೋಗಕ್ಕೆ ರಾಜಕೀಯ ಪಕ್ಷಗಳ ಪೋಷಣೆಯೂ ಇದೆ.

ಸಾವಿರಾರು ವರ್ಷಗಳಿಂದ ಇಳಿದು ಬಂದಿರುವ ಈ ರೋಗವನ್ನು ಹಿಮ್ಮೆಟ್ಟಿಸಲು ಈ ಕಾಯ್ದೆಯನ್ನು ಇನ್ನಷ್ಟು ಬಲಪಡಿಸಬೇಕು; ವಿಚಾರಣೆ ಮಾಡುವ ಕೋರ್ಟುಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ದೌರ್ಜನ್ಯ ಮಾಡಿ ನುಣುಚಿಕೊಂಡಿರುವ ಪ್ರಕರಣಗಳನ್ನು ಮತ್ತೆ ವಿಚಾರಣೆಗೆ ಒಳಪಡಿಸಬೇಕು. ಇದನ್ನೆಲ್ಲ ಬಿಟ್ಟು ಕಾಯ್ದೆಯನ್ನೇ ದುರ್ಬಲಗೊಳಿಸಿದರೆ ಸಮಾನತೆಯ ಹೋರಾಟಕ್ಕೆ ದೊಡ್ಡ ಹಿನ್ನಡೆಯಾಗುತ್ತದೆ; ದೌರ್ಜನ್ಯ ಮಾಡುವವರಿಗೆ ಕುಮ್ಮಕ್ಕು ನೀಡಿದಂತಾಗುತ್ತದೆ. ಅಷ್ಟೇ ಅಲ್ಲ, ಕೌಟುಂಬಿಕ ಹಿಂಸೆ ಮುಂತಾದವನ್ನು ತಡೆಯಲೆತ್ನಿಸುವ ಇನ್ನಿತರ ದೌರ್ಜನ್ಯ ವಿರೋಧಿ ಕಾಯ್ದೆಗಳಿಗೂ ಇದು ಹಿನ್ನಡೆಯನ್ನುಂಟು ಮಾಡುತ್ತದೆ.

ಈ ದೃಷ್ಟಿಯಿಂದ, ಸುಪ್ರೀಂ ಕೋರ್ಟಿನ ಮಧ್ಯಪ್ರವೇಶ ಅಸ್ಪೃಶ್ಯತಾ ನಿವಾರಣಾ ಕಾಯ್ದೆಯನ್ನು ದುರ್ಬಲಗೊಳಿಸುತ್ತದೆಂದು ದಲಿತರು ದೇಶದಾದ್ಯಂತ ವ್ಯಕ್ತಪಡಿಸುತ್ತಿರುವ ಆಕ್ರೋಶಕ್ಕೆ ಹಲವು ಬೇರುಗಳಿವೆ. ಅದರಲ್ಲೂ‌, ಸಂವಿಧಾನವನ್ನು ಬದಲಾಯಿಸುತ್ತೇವೆಂಬ ಅಹಂಕಾರದ ಮಾತುಗಳು ಆಳುವ ಪಕ್ಷದವರಿಂದ ಬರುತ್ತಿರುವ ಕಾಲದಲ್ಲಿ, ಈ ಮಹತ್ತರ ಕಾಯ್ದೆಯ ಮರುಪರಿಶೀಲನೆ ದಲಿತರ ಆತಂಕವನ್ನು ಹೆಚ್ಚಿಸಿದೆ. ಸವರ್ಣೀಯರ ಅಸಹನೆ ಹಾಗೂ ರಾಜಕೀಯ ಪಕ್ಷಗಳ ಚಿತಾವಣೆಯಿಂದಾಗಿ ಅಂಬೇಡ್ಕರ್ ಪ್ರತಿಮೆಗಳನ್ನು ವಿರೂಪಗೊಳಿಸುವ, ಕೇಸರಿ ಬಳಿಯುವ ವಿಕೃತಿಗಳೂ ದಲಿತರನ್ನು ಕೆರಳಿಸಿವೆ. ದಲಿತರ ಗಮನವನ್ನು ಬೇರೆಡೆ ಸೆಳೆಯಲು ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ ಬರಹಗಳು ಪ್ರತ್ಯಕ್ಷವಾಗುತ್ತಿವೆ. ಖಾಸಗೀಕರಣದಿಂದಾಗಿ ದಲಿತರ ಉದ್ಯೋಗದ ಹಕ್ಕು ಮೊಟಕಾಗುತ್ತಿದೆ. ಬಡ್ತಿ, ಮೀಸಲಾತಿಗಳ ಕಗ್ಗಂಟು ಸೃಷ್ಟಿಯಾಗಿದೆ. ದೇಶದಾದ್ಯಂತ ಸರ್ಕಾರಿ ವಲಯದಲ್ಲಿ ಉದ್ಯೋಗ ಸೃಷ್ಟಿ ಕುಸಿದಿದೆ. ಜಾತಿಯ ಕಾರಣದಿಂದಾಗಿ ಉದ್ಯೋಗ ನಿರಾಕರಿಸುವ ಹೀನತನ ಹೆಚ್ಚುತ್ತಿದೆ. ದಲಿತರ ರಾಜಕೀಯ ಅವಕಾಶಗಳನ್ನು ಕಸಿದುಕೊಳ್ಳಲಾಗುತ್ತಿದೆ. ಇವೆಲ್ಲ ಕಾರಣಗಳಿಂದಾಗಿ, ಶಿಕ್ಷಣ ಪಡೆದ ಸ್ವಾಭಿಮಾನಿ ಹೊಸ ದಲಿತ ತಲೆಮಾರು ಪ್ರಬಲ ಜಾತಿಗಳೆದುರು ಬಾಗಲು ನಿರಾಕರಿಸುತ್ತಾ ಹಿಂದೆಂದಿಗಿಂತಲೂ ತೀವ್ರವಾಗಿ ತಿರುಗಿ ಬೀಳುತ್ತಿದೆ. ಈ ಸಿಟ್ಟಿನಿಂದ ಕೆಲವು ದುಡುಕುಗಳಾಗಿದ್ದರೂ ಈ ಸಿಟ್ಟಿಗೆ ಅರ್ಥವಿದೆ. ವ್ಯವಸ್ಥೆಯನ್ನು ಬದಲಾಯಿಸಬಲ್ಲ ಶಕ್ತಿಯಿದೆ.

ಒಂದೆಡೆ, ಅಸ್ಪೃಶ್ಯತಾ ತಡೆ ಕಾಯ್ದೆಯನ್ನು ತೆಳುವಾಗಿಸುವುದರ ವಿರುದ್ಧ ಹೋರಾಡುತ್ತಿರುವ ದಲಿತರ ಮೇಲೆ ಭೀಕರ ಹಲ್ಲೆಗಳಾಗಿವೆ. ಅದರ ಹಿಂದೆಯೇ, ಬಿಹಾರದಲ್ಲಿ ಸವರ್ಣೀಯರು ಮೀಸಲಾತಿಯ ವಿರುದ್ಧ ಗಲಾಟೆಯೆಬ್ಬಿಸಿ ಮತ್ತೊಂದು ಬಗೆಯ ಹಲ್ಲೆ ಶುರು ಮಾಡಿದ್ದಾರೆ. ಸಮಾನಾವಕಾಶಗಳ ಸೃಷ್ಟಿಯ ವಿರುದ್ಧ ನಡೆಯುತ್ತಿರುವ ಈ ಎರಡೂ ಯೋಜಿತ ಹಲ್ಲೆಗಳನ್ನು ದಲಿತರಷ್ಟೇ ಅಲ್ಲ, ಹಿಂದುಳಿದ ವರ್ಗಗಳು, ಮಹಿಳೆಯರು, ಸಾಮಾಜಿಕ ನ್ಯಾಯದ ಫಲಾನುಭವಿಗಳು ಎಚ್ಚರದಿಂದ ಗಮನಿಸಬೇಕು. ದೇಶದ ಎಲ್ಲ ದುರ್ಬಲ ವರ್ಗಗಳ ಮೇಲೆ ನಡೆಯುತ್ತಿರುವ ಹಲ್ಲೆಗಳಿವು.

ಹಲವು ದಿಕ್ಕುಗಳಲ್ಲಿ ವಿಫಲವಾದ ಕೇಂದ್ರ ಸರ್ಕಾರ ಹಾಗೂ ಅದರ ಬಾಲಂಗೋಚಿಗಳು ತಮ್ಮ ಪತನದ ಮುನ್ಸೂಚನೆಯನ್ನು ಅರಿತು ಹುಟ್ಟುಹಾಕುತ್ತಿರುವ ಕೃತಕ ಗೊಂದಲಗಳ ಕಾಲದಲ್ಲಿ ದಲಿತರು ಹಾಗೂ ಹಿಂದುಳಿದ ವರ್ಗಗಳು ತಮ್ಮ ಚಿಂತನೆ ಹಾಗೂ ಕ್ರಿಯೆಗಳಲ್ಲಿ ಬಾಬಾಸಾಹೇಬರಂತೆ ಸ್ಪಷ್ಟ ಮುನ್ನೋಟವಿಟ್ಟುಕೊಂಡು ಮುನ್ನಡೆಯಬೇಕಾದ ಅಗತ್ಯವಿದೆ. ಇವತ್ತು ಸುಪ್ರೀಂ ಕೋರ್ಟಿನಲ್ಲಿ ಕೇಂದ್ರ ಸರ್ಕಾರ ಮಂಡಿಸಿರುವ ಮರುಪರಿಶೀಲನೆಯ ಅರ್ಜಿಯಲ್ಲಿ ಕೊಟ್ಟಿರುವ ಕಾರಣಗಳು ತೀರಾ ತೆಳುವಾದವು. ಈ ಕಾಯ್ದೆಯ ಅನಿವಾರ್ಯವನ್ನಾಗಲೀ ಅದರ ಮೂಲ ತತ್ವವನ್ನಾಗಲೀ ಈ ಅರ್ಜಿ ಪ್ರಸ್ತಾಪಿಸಿಲ್ಲ. ಇವತ್ತು ನ್ಯಾಯಾಂಗವಾಗಲೀ ಸರ್ಕಾರಗಳಾಗಲೀ ನಿಜಕ್ಕೂ ತಲೆ ಕೆಡಿಸಿಕೊಳ್ಳಬೇಕಾಗಿರುವುದು - ಅಸ್ಪೃಶ್ಯತಾ ನಿವಾರಣಾ ಕಾನೂನು ಇಲ್ಲಿಯವರೆಗೆ ಯಾಕೆ ಸರಿಯಾಗಿ ಜಾರಿಯಾಗಿಲ್ಲ ಹಾಗೂ ದಲಿತರ ಮೇಲಿನ ದೌರ್ಜನ್ಯ ಯಾಕೆ ಹೆಚ್ಚುತ್ತಲೇ ಇದೆ ಎಂಬುದರ ಬಗ್ಗೆ. ಇಂಥ ದೌರ್ಜನ್ಯಗಳ ಬೃಹತ್ ಸಂಖ್ಯೆಯ ಎದುರು ಶಿಕ್ಷೆಯ ಪ್ರಮಾಣ ಯಾಕೆ ಶೇಕಡ ಐದಕ್ಕಿಂತ ಕಡಿಮೆಯಿದೆ ಎಂಬುದನ್ನು ಎಲ್ಲರೂ ಕಣ್ಣು ತೆರೆದು ನೋಡಬೇಕು. ಇವತ್ತು ಅಸ್ಪೃಶ್ಯತಾ ನಿವಾರಣಾ ಕಾನೂನು ದುರ್ಬಲವಾದರೆ, ಇನ್ನು ಮುಂದೆ ಸಮಾನತೆಯ ಆಶಯಗಳನ್ನು ರಕ್ಷಿಸಬಲ್ಲ ಇಂಥ ಅನೇಕ ಕಾನೂನುಗಳಿಗೆ ಕುತ್ತು ಬರಲಿದೆ ಎಂಬ ಗೋಡೆ ಬರಹವನ್ನು ಎಲ್ಲ ಜಾತಿಗಳ ದುರ್ಬಲ ವರ್ಗಗಳು ಹಾಗೂ ಮಹಿಳೆಯರು ಸ್ಪಷ್ಟವಾಗಿ ಓದಿಕೊಳ್ಳಬೇಕು.

**

ಹುನ್ನಾರ ಗಮನಿಸಬೇಕು

ಕುದುರೆ ಸವಾರಿ ಮಾಡಿದ್ದಕ್ಕೆ ರಾಥೋಡ್ ಮೇಲೆ ನಡೆದ ಹಲ್ಲೆಯಲ್ಲಿರುವ ಸೂಚನೆಯನ್ನು ಎಲ್ಲರೂ ಸರಿಯಾಗಿ ಗಮನಿಸಬೇಕು: ದಲಿತರ ವಿಮೋಚನೆಗಾಗಿ ಸಂವಿಧಾನ ಕೊಟ್ಟಿರುವ ಹಕ್ಕುಗಳನ್ನು ತಾವೂ ಪಡೆದ ಕೆಲವು ‘ಸ್ಪೃಶ್ಯ’ ಸಮುದಾಯಗಳು ತಾವು ‘ಸೇಫ್’ ಎಂದು ಭಾವಿಸುತ್ತಾ, ದಲಿತರ ಮೇಲಿನ ಹಲ್ಲೆಗಳ ಸಂದರ್ಭದಲ್ಲಿ ಮೌನ ತಾಳುತ್ತಾ ಬಂದಿವೆ.

ಇದೀಗ ಈ ಹಲ್ಲೆಗಳು ತಮ್ಮ ಮೇಲೂ ತಿರುಗುತ್ತಿರುವುದನ್ನು, ಈ ಹಲ್ಲೆಯ ಆಳದಲ್ಲಿ ತಮ್ಮ ಸವಲತ್ತು
ಗಳನ್ನೂ ಕಿತ್ತುಕೊಳ್ಳುವ ಹುನ್ನಾರವಿರುವುದನ್ನು ಈ ಸಮುದಾಯಗಳು ಗಮನಿಸಬೇಕು. ಆದ್ದರಿಂದಲೇ ಪರಿಶಿಷ್ಟ ಜಾತಿ, ಪಂಗಡಗಳ ಎಲ್ಲ ಉಪಜಾತಿಗಳು ಹಾಗೂ ಹಿಂದುಳಿದ ಜಾತಿಗಳು ಅಸ್ಪೃಶ್ಯತಾ ವಿರೋಧಿ ಕಾಯ್ದೆಯ ಸಂರಕ್ಷಣೆಗೆ ಮುಂದಾಗಬೇಕಾದ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT