ಬಿಲ್ಲುಗಾರ್ತಿಯ ‘ಗುರಿ’ಗೆ ಕನ್ನಡತಿಯ ‘ಮನೋಬಲ’

ಸೋಮವಾರ, ಮಾರ್ಚ್ 25, 2019
28 °C

ಬಿಲ್ಲುಗಾರ್ತಿಯ ‘ಗುರಿ’ಗೆ ಕನ್ನಡತಿಯ ‘ಮನೋಬಲ’

Published:
Updated:
ಬಿಲ್ಲುಗಾರ್ತಿಯ ‘ಗುರಿ’ಗೆ ಕನ್ನಡತಿಯ ‘ಮನೋಬಲ’

ಕ್ರೀಡಾಪಟುಗಳು ಮಾನಸಿಕ ಸದೃಢತೆ ಗಳಿಸಲು ಹೇಗೆ ನೆರವಾಗುತ್ತೀರಿ?

ಪ್ರತಿಯೊಬ್ಬ ಕ್ರೀಡಾಪಟು ಕೂಡ ಭಿನ್ನ. ಅವರು ಉತ್ತಮ ಮಾನಸಿಕ ಆರೋಗ್ಯ ಹೊಂದಲು ಅಡ್ಡಗಾಲಾಗಿರುವ ಸಮಸ್ಯೆಗಳನ್ನು ಬಗೆಹರಿಸುವುದು ನನಗೆ ಸವಾಲು. ಮನೋವಿಜ್ಞಾನಿಯ ಅಗತ್ಯತೆ ಇದೆ ಎಂಬುದು ಅವರಿಗೆ ಅರ್ಥವಾಗುವ ಹಾಗೂ ನಂಬಿಕೆ ವೃದ್ಧಿಸುವ ಮಾರ್ಗದಲ್ಲಿ ನಾನು ಸಂವಹನ ನಡೆಸಬೇಕು. ಅವರು ನನ್ನಿಂದ ಏನು ನಿರೀಕ್ಷೆ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ನನಗೆ ಸ್ಪಷ್ಟತೆ ಇರಬೇಕು. ಆಟಗಾರನ ಸಾಂಸ್ಕೃತಿಕ ಹಿನ್ನೆಲೆ, ಕುಟುಂಬ, ಬೆಳವಣಿಗೆ, ಕ್ರೀಡೆಯಲ್ಲಿ ಕಳೆದ ವರ್ಷಗಳು, ಕೋಚ್‌ ಹಾಗೂ ತಂಡದ ಇನ್ನಿತರರೊಂದಿಗೆ ಅವರ ಸಂಬಂಧ...ಹೀಗೆ ಎಲ್ಲವನ್ನೂ ಅರ್ಥ ಮಾಡಿಕೊಳ್ಳಬೇಕು. ನಂತರ, ಮುಂದಿನ ಕೆಲಸ ಸುಲಭವಾಗುತ್ತದೆ.

ಈ ಕೆಲಸದಲ್ಲಿ ನೀವು ಎದುರಿಸುವ ದೊಡ್ಡ ಸವಾಲು ಯಾವುದು?

ಟಾಟಾ ಸ್ಪೋರ್ಟ್ಸ್‌ ಫೌಂಡೇಶನ್‌ನಲ್ಲಿ ಕೆಲಸ ಮಾಡುತ್ತಿರುವ ಏಕೈಕ ಕ್ರೀಡಾ ಮನೋವಿಜ್ಞಾನಿ ನಾನು. ಹಾಗಾಗಿ, ನನ್ನ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಇಲ್ಲಿ ತರಬೇತಿ ಪಡೆಯಲು ಗ್ರಾಮೀಣ ಭಾಗದ ಕ್ರೀಡಾಪಟುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಹಾಗಾಗಿ, ಅವರ ಮನಸ್ಥಿತಿ ಅರ್ಥ ಮಾಡಿಕೊಂಡು ಅವರ ಅಗತ್ಯತೆಗೆ ತಕ್ಕ ಹಾಗೆ ಕೆಲಸ ಮಾಡುವುದೇ ದೊಡ್ಡ ಸವಾಲು. ಎಂತಹ ಕ್ರೀಡಾಪಟುವೇ ಆಗಿರಲಿ, ತನ್ನ ಸಾಮರ್ಥ್ಯದ ಮೇಲೆ ನಂಬಿಕೆ ಕಳೆದುಕೊಳ್ಳದ ರೀತಿ ಮಾನಸಿಕವಾಗಿ ಗಟ್ಟಿಯಾಗಬೇಕು. ಎಲ್ಲಕ್ಕಿಂತ ಮುಖ್ಯ ಅದು. ನಿರೀಕ್ಷೆ ಹಾಗೂ ಗುರಿ ತಲುಪಬೇಕೆಂಬ ಮಾರ್ಗದಲ್ಲಿ ಇದ್ದಾಗ ಅವರಿಗೆ ಅನೇಕ ಸವಾಲುಗಳು ಎದುರಾಗುತ್ತವೆ. ಆಗ, ಅವರೆಲ್ಲ ಮಾನಸಿಕವಾಗಿ ಕುಗ್ಗುವುದು ಸಹಜ. ಆ ಸಮಯದಲ್ಲಿ ಅವರಿಗೆ ಧೈರ್ಯ ಮತ್ತು ವಿಶ್ವಾಸ ತುಂಬಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕೆಲಸ ಮಾಡುವಾಗಲೂ ಹಲವು ಸವಾಲುಗಳನ್ನು ಎದುರಿಸಿದ್ದೇನೆ.

ಭಾರತದ ಆರ್ಚರ್‌ ದೀಪಿಕಾ ಕುಮಾರಿ ಅವರಿಗೆ ಸಲಹೆಗಾರರಾಗಿ ಕೆಲಸ ಮಾಡುತ್ತಿರುವ ಬಗ್ಗೆ ವಿವರಿಸಿ?

 ದೀಪಿಕಾ ಅವರೊಂದಿಗೆ ಕೆಲಸ ಮಾಡುವ ಸಲುವಾಗಿಯೇ ಟಾಟಾ ಸಂಸ್ಥೆ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದೆ. ಆಕೆ ಭಾರತದ ಉತ್ತಮ ಬಿಲ್ಲುಗಾರ್ತಿ. ಹಲವು ಸಾಧನೆ ಮಾಡಿದ ಆಕೆಯೊಂದಿಗೆ ಕೆಲಸ ಮಾಡಲು ಹೆಮ್ಮೆಯೆನಿಸುತ್ತದೆ. ವೃತ್ತಿ ಸಂಬಂಧ ನಮ್ಮಿಬ್ಬರ ಮಧ್ಯೆ ಯಾವುದೇ ಸಂವಹನದ ಕೊರತೆಯಿಲ್ಲ. ದೀಪಿಕಾ ಅವರು ಪ್ರಾಮಾಣಿಕವಾಗಿ ತನ್ನ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ತನ್ನ ವೃತ್ತಿ ಬದುಕಿನಲ್ಲಿ ವೈಫಲ್ಯ ಎದುರಿಸಿದಾಗ, ಆಕೆಗೆ ಧೈರ್ಯ ತುಂಬಿದ್ದೆ. ಎಲ್ಲ ಚಾಂಪಿಯನ್‌ ಆಟಗಾರರು ತಮ್ಮ ವೃತ್ತಿ ಜೀವನದಲ್ಲಿ ಈ ಘಟ್ಟ ತಲುಪುತ್ತಾರೆ. ಆದರೆ, ಅದರಿಂದ ಹೊರಗೆ ಬರುವುದು ಅನಿವಾರ್ಯ. ಆತ್ಮವಿಶ್ವಾಸ ಹಾಗೂ ಅದಮ್ಯ ಛಲ ಬೆಳೆಸಿಕೊಳ್ಳುವುದೇ ಇದಕ್ಕೆ ಪರಿಹಾರ ಎಂದು ಹೇಳಿದ್ದೆ. ಆಕೆ ಕೂಡ ಈ ನಿಟ್ಟಿನಲ್ಲಿ ಮತ್ತೆ ಅಭ್ಯಾಸ ನಡೆಸುತ್ತಿದ್ದಾರೆ.

ಕಾಮನ್‌ವೆಲ್ತ್‌ ಗೇಮ್ಸ್‌ ಹಾಗೂ ಇನ್ನಿತರ ಜಾಗತಿಕ ಮಟ್ಟದ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸುವವರು ಮಾನಸಿಕವಾಗಿ ಹೇಗೆ ಸಿದ್ಧರಾಗಬೇಕು?

ನಾವು ಹೊಂದಿರುವ ಮನಸ್ಥಿತಿಯು ನಮ್ಮ ಬೆಳವಣಿಗೆ ಹಾಗೂ ವೈಫಲ್ಯಕ್ಕೆ ಕಾರಣವಾಗುತ್ತದೆ. ಒಮ್ಮೆ ಸ್ಪರ್ಧೆಗೆ ಇಳಿದ ಮೇಲೆ ಏನು ಮಾಡಬೇಕು ಎಂಬುದಷ್ಟೇ ಕ್ರೀಡಾಪಟುಗಳ ಗುರಿಯಾಗಿರಬೇಕು. ಆತ್ಮವಿಶ್ವಾಸದ ಕೊರತೆ ಒಂದು ದೊಡ್ಡ ತಡೆಯಾಗಬಾರದು. ಆ ನಿಟ್ಟಿನಲ್ಲಿ ಹೆಚ್ಚು ಸಿದ್ಧತೆ ಮಾಡಿಕೊಳ್ಳಬೇಕು. ನಂತರ, ವಾಸ್ತವದ ನೆಲೆಯಲ್ಲಿ ಗುರಿ ನಿಗದಿಪಡಿಸಿಕೊಳ್ಳುವುದು ಸೂಕ್ತ. ಮೊದಲ ಮೂರು ಸ್ಥಾನ ಪಡೆಯದಿದ್ದಾಗ, ಎಂತಹ ಆಟಗಾರನಾದರೂ ಮಾನಸಿಕವಾಗಿ ಕುಸಿಯುತ್ತಾನೆ. ಆಗಲೇ, ತಮ್ಮ ಇಷ್ಟದ ಕ್ರೀಡೆ ಅವರಿಗೆಲ್ಲ ದೊಡ್ಡ ಶಿಕ್ಷೆ ಎಂದೆನಿಸಬಹುದು. ಆದರೆ, ಇದರಿಂದ ತಪ್ಪಿಸಿಕೊಂಡು ಪ್ರತಿ ವೈಫಲ್ಯವನ್ನು ಸವಾಲಾಗಿ ಸ್ವೀಕರಿಸಬೇಕು. ನಮ್ಮ ಎದುರಾಳಿಯ ಯೋಚನೆ ಹಾಗೂ ಮನಸ್ಥಿತಿಯನ್ನು ನಿಯಂತ್ರಿಸುವ ಶಕ್ತಿ ನಮಗಿರುವುದಿಲ್ಲ. ಆದ್ದರಿಂದ, ನಮ್ಮ ಬಗ್ಗೆ ಮಾತ್ರ ಯೋಚಿಸಿ, ಯೋಜನೆ ಸಿದ್ಧಪಡಿಸಿಕೊಳ್ಳಬೇಕು. ನಾವು ಉತ್ತಮ ಎಂಬ ಕಲ್ಪನೆ ಮಾತ್ರ ಗುರಿಯೆಡೆಗೆ ನಮ್ಮನ್ನು ಕರೆದೊಯ್ಯಬೇಕು. ಅದು ರೂಢಿಯಾಗಿ ಪರಿವರ್ತಿತವಾಗಬೇಕು. ಇಂತಹ ಮನಸ್ಥಿತಿ ಬೆಳೆಸಿಕೊಂಡರೆ ಎಷ್ಟೇ ದೊಡ್ಡ ಮಟ್ಟದ ಕ್ರೀಡಾಕೂಟದಲ್ಲಿ ಸ್ಪರ್ಧಿಸುವುದು ಕಷ್ಟವಾಗಲಾರದು.

****

ದೇಚಮ್ಮಾ ಪರಿಚಯ...

ದೇಚಮ್ಮಾ ಅವರು ಕೊಡಗಿನವರು. ಅವರ ತಾಯಿ ಹಾಗೂ ತಂದೆ ಇಬ್ಬರೂ ಒಳ್ಳೆಯ ಕ್ರೀಡಾಪಟುಗಳಾಗಿದ್ದರು. ಶಾಲೆಯಲ್ಲಿದ್ದಾಗಲೇ ದೇಚಮ್ಮಾ ಅವರು ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಿದ್ದರು. ರಾಷ್ಟ್ರಮಟ್ಟದ ಬೇಸ್‌ಬಾಲ್‌ ಕ್ರೀಡೆಯಲ್ಲಿ 2016ರವರೆಗೆ ಆಡಿಧ್ದರು. ನಂತರ, ಕ್ರೀಡಾಪಟುವಾಗಿ ಮುಂದುವರಿಯಲಿಲ್ಲವಾದರೂ, ಈ ಕ್ಷೇತ್ರದಲ್ಲಿಯೇ ವೃತ್ತಿಪರರಾಗುವ ನಿರ್ಧಾರ ಮಾಡಿದರು.

ದೇಚಮ್ಮಾ ಅವರು ಕ್ರೀಡಾ ಮನೋವಿಜ್ಞಾನ ಕ್ಷೇತ್ರದಲ್ಲಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. 2016ರ ಒಲಿಂಪಿಕ್ಸ್‌ನಲ್ಲಿ ಪುರುಷರ ಹಾಕಿ ತಂಡ ಹಾಗೂ ಅದೇ ವರ್ಷ ನಡೆದ ಜೂನಿಯರ್‌ ವಿಭಾಗದ ವಿಶ್ವಕಪ್‌ನಲ್ಲಿ ಆಡಿದ ತಂಡದೊಂದಿಗೆ ಅವರು ಕೆಲಸ ಮಾಡಿ

ದ್ದಾರೆ. ಸದ್ಯ ಜೆಮ್‌ಶೇಡಪುರದ ಟಾಟಾ ಸ್ಪೋರ್ಟ್ಸ್ ಫೌಂಡೇಶನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

***

ಅರಿವು ಮೂಡಬೇಕು

‘ಕ್ರೀಡಾಪಟುಗಳಲ್ಲಿ ಮಾನಸಿಕ ಸದೃಢತೆಯ ಅವಶ್ಯಕತೆಯ ಬಗ್ಗೆ ನಮ್ಮ ದೇಶದಲ್ಲಿ ಅಂತಹ ಪ್ರಾಮುಖ್ಯತೆ ಇಲ್ಲ. ಕ್ರೀಡಾಪಟುಗಳೂ, ಮನೋವಿಜ್ಞಾನಿಗಳ ನೆರವು ಪಡೆಯಲು ಹಿಂಜರಿಯುತ್ತಾರೆ. ಈ ವಿಷಯದ ಬಗ್ಗೆ ಅನೇಕರಿಗೆ ಅರಿವಿನ ಕೊರತೆ ಇದೆ. ನಾನು, ಬೆಂಗಳೂರು ವಿಶ್ವವಿದ್ಯಾಲಯದಿಂದ ಮನೋವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಆಗಲೇ, ಕ್ರೀಡಾ ಮನೋವಿಜ್ಞಾನದಲ್ಲಿ ಹೆಚ್ಚಿನ ಅಧ್ಯಯನ ಮಾಡಬೇಕೆನ್ನುವ ಆಸಕ್ತಿ ಬೆಳೆಯಿತು’ ಎಂದು ದೇಚಮ್ಮಾ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry