ಶುಕ್ರವಾರ, ಆಗಸ್ಟ್ 14, 2020
21 °C

ರಾಮನವಮಿ ಸಂಗೀತೋತ್ಸವಕ್ಕೆ ವರ್ಷದ ಸಿದ್ಧತೆ

ಎಸ್‌. ಸಂಪತ್‌ Updated:

ಅಕ್ಷರ ಗಾತ್ರ : | |

ರಾಮನವಮಿ ಸಂಗೀತೋತ್ಸವಕ್ಕೆ ವರ್ಷದ ಸಿದ್ಧತೆ

ಬರೋಬ್ಬರಿ 31 ದಿನ ಸಂಗೀತ ಕಲಾರಸಿಕರಿಗೆ ರಸದೌತಣ ನೀಡುವ ಚಾಮರಾಜಪೇಟೆಯ ಶ್ರೀರಾಮಸೇವಾ ಮಂಡಳಿಯ 80ನೇ ವರ್ಷದ ರಾಮನವಮಿ ಸಂಗೀತೋತ್ಸವ ಈಗಾಗಲೇ 26 ದಿನ ಪೂರೈಸಿದೆ. ಏ.8ರಂದು ಪ್ರಸಿದ್ಧ ಗಾಯಕ ಡಾ. ಕೆ.ಜಿ. ಯೇಸುದಾಸ್‌ ಅವರ ಸಂಗೀತ ಕಚೇರಿಗೆ 15 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಜಮಾಯಿಸಿದ್ದರು. ನಿತ್ಯ (ಬೆಳಿಗ್ಗೆ ಮತ್ತು ಸಂಜೆ) ಸರಾಸರಿ 10 ಸಾವಿರಕ್ಕೂ ಹೆಚ್ಚು ಕಲಾರಸಿಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದು 31 ದಿನ ಪೂರೈಸುವುದರೊಳಗೆ ಅಂದಾಜು 5 ಲಕ್ಷ ಜನರು ಸಂಗೀತವನ್ನು ಆಸ್ವಾದಿಸುತ್ತಾರೆ ಎಂಬ ಅಂದಾಜಿದೆ. ತಿಂಗಳಿಡಿ ಸಂಗೀತೋತ್ಸವ ಆಚರಿಸುವ ರಾಮಸೇವಾ ಮಂಡಳಿ ಈ ಉತ್ಸವ ಆಯೋಜಿಸಲು ಮಾಡಿಕೊಳ್ಳುವ ಪೂರ್ವ ಸಿದ್ಧತೆ ಸೇರಿದಂತೆ ಹಲವು ವಿಷಯಗಳನ್ನು ಮಂಡಳಿಯ ಪ್ರಧಾನ ಕಾರ್ಯದರ್ಶಿ ಎಸ್‌.ಎನ್‌.ವರದರಾಜ್‌ ಮತ್ತು ಕಾರ್ಯಕಾರಿ ಅಧಿಕಾರಿ ಅಭಿಜಿತ್‌ ವರದರಾಜ್‌ ಹಂಚಿಕೊಂಡಿದ್ದಾರೆ.

ಇಷ್ಟು ದೊಡ್ಡ ಕಾರ್ಯಕ್ರಮದ ಆಯೋಜನೆ ಹೇಗೆ?

ಒಂದು ತಿಂಗಳು ನಡೆಯುವ ಸಂಗೀತೋತ್ಸವಕ್ಕೆ ವರ್ಷಪೂರ್ತಿ ಸಿದ್ಧತೆ ನಡೆಸುತ್ತೇವೆ. ಇದು ನಿರಂತರ ಪ್ರಕ್ರಿಯೆ. ಸೆಪ್ಟೆಂಬರ್‌ನಲ್ಲಿ ಗಣೇಶ ಚತುರ್ಥಿ ಸಂದರ್ಭದಲ್ಲಿ ರಾಮನವಮಿ ಸಂಗೀತೋತ್ಸವ ಕೆಲಸ ಕಾರ್ಯಗಳಿಗೆ ಚಾಲನೆ ನೀಡಲಾಗುತ್ತದೆ. ಈ ವೇಳೆ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರ ಆರಂಭವಾಗುತ್ತದೆ. ಆಯೋಜಕರು, ದಾನಿಗಳನ್ನು ಸಂಪರ್ಕಿಸುತ್ತೇವೆ.

ನವೆಂಬರ್‌ನಲ್ಲಿ ದೇಶದಲ್ಲಿರುವ ಪ್ರಸಿದ್ಧ ಗಾಯಕರು, ಸಂಗೀತ ವಿದ್ವಾಂಸರನ್ನು ಸಂಪರ್ಕಿಸಿ ಸಂಗೀತೋತ್ಸವದಲ್ಲಿ ಕಛೇರಿ ನೀಡಲು ಆಹ್ವಾನಿಸುತ್ತೇವೆ. ಡಿಸೆಂಬರ್‌ ಅಂತ್ಯದೊಳಗೆ ಸಂಗೀತ ಕಛೇರಿ ನೀಡುವ ಕಲಾವಿದರ ಆಯ್ಕೆ ಬಹುತೇಕ ಮುಕ್ತಾಯವಾಗಿರುತ್ತದೆ. ಡಿ.31ರ ಮಧ್ಯರಾತ್ರಿ 12 ಗಂಟೆಗೆ ಸಂಗೀತೋತ್ಸವದ 31 ದಿನಗಳ ವೇಳಾಪಟ್ಟಿಯನ್ನು ವೆಬ್‌ಸೈಟ್‌, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಕಟಿಸುತ್ತೇವೆ. ಇದಕ್ಕೂ ಮುನ್ನ ಅಂದರೆ ಅಕ್ಟೋಬರ್‌ನಲ್ಲಿಯೇ ಉತ್ಸವದ ‘ಸೀಸನಲ್‌ ಟಿಕೆಟ್‌’ಗಳ ಮಾರಾಟಕ್ಕೆ ಚಾಲನೆ ನೀಡಿರುತ್ತೇವೆ. ಇದಕ್ಕಾಗಿಯೇ ಪೋರ್ಟಲ್‌ (www.ramanavamitickets.com) ರೂಪಿಸಿದ್ದು, ಮುಂಗಡ ಟಿಕೆಟ್‌ ಕಾಯ್ದಿರಿಸಲು ಅವಕಾಶ ಒದಗಿಸಲಾಗುತ್ತದೆ.

ಡಿಸೆಂಬರ್‌ನಲ್ಲಿ ಚಪ್ಪರ, ಸಭಾಂಗಣ ನಿರ್ಮಾಣ ಕಾರ್ಯಕ್ಕೆ ಟೆಂಡರ್‌ ಕರೆದು, ಅದನ್ನು ಅಂತಿಮಗೊಳಿಸುತ್ತೇವೆ. ಐದು ವರ್ಷದಿಂದ ಅತ್ಯಂತ ಸುಸಜ್ಜಿತವಾಗಿ ಸಭಾಂಗಣ ನಿರ್ಮಿಸಲಾಗುತ್ತಿದೆ. ಕನಿಷ್ಠ 3 ತಿಂಗಳು ಬಾಳುವಂತೆ ಸಭಾಂಗಣ ನಿರ್ಮಿಸಲಾಗಿರುತ್ತದೆ. ಮಳೆ, ಗಾಳಿಗೆ ಜಗ್ಗದಂತೆ, ಮಳೆಯ ಒಂದು ಹನಿ ನೀರು ಕೂಡ ಒಳ ಪ್ರವೇಶಿಸದಂತೆ ಸಭಾಂಗಣ ಸಜ್ಜುಗೊಳಿಸಲಾಗುತ್ತದೆ. ಸಭಾಂಗಣದಲ್ಲಿ ಕ್ಯಾಂಟಿನ್‌, ಮೊಬೈಲ್‌ ಶೌಚಾಲಯ, ಕುಡಿಯುವ ನೀರು, ಕಲಾವಿದರು ಮತ್ತು ಸ್ವಯಂ ಸೇವಕರಿಗೆ ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.

ಆಯೋಜನೆಯ ಸಂದರ್ಭದಲ್ಲಿ ಎದುರಾಗುವ ಸವಾಲುಗಳಾವುವು?

ಸಂಪನ್ಮೂಲ ಕ್ರೋಡೀಕರಣ ದೊಡ್ಡ ಸವಾಲು. ದೇಣಿಗೆ, ದಾನ, ಟಿಕೆಟ್‌ ಮೂಲಕ ಸಂಪನ್ಮೂಲ ಸಂಗ್ರಹಿಸಲಾಗುತ್ತಿದೆ. ಅದರ ಜತೆಗೆ ಕಲಾವಿದರು ಮತ್ತು ಕಲಾರಸಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಅಚ್ಚುಕಟ್ಟಾಗಿ ಉತ್ಸವ ನಡೆಸುವುದು ದೊಡ್ಡ ಸವಾಲು. ಈ ಬಾರಿ ಜಾಗತಿಕ ಮಟ್ಟದಲ್ಲಿ ವೆಬ್‌ಸೈಟ್‌ ಮೂಲಕ ಪ್ರಸಾರ ಆರಂಭಿಸಲಾಗಿದೆ. ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆದ ಮೂರು ದಿನದ ನಂತರ ಅದನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತಿದೆ.

ಕಲಾವಿದರ ಆಯ್ಕೆ ಹೇಗೆ ಮಾಡುತ್ತೀರಾ?

ರಾಮನವಮಿ ಸಂಗೀತೋತ್ಸವಕ್ಕೆ ಬರುವ ಕಲಾ ರಸಿಕರು ತಲಾ ₹ 300 ಕೊಟ್ಟು ಟಿಕೆಟ್‌ ಖರೀದಿಸುತ್ತಾರೆ. ಹಾಗಾಗಿಯೇ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಗಾಯಕರು, ಕಲಾವಿದರನ್ನು ಆಯ್ಕೆ ಮಾಡಲಾಗುತ್ತದೆ. ದೇಶದ ಪ್ರತಿಷ್ಠಿತ ಶಾಸ್ತ್ರೀಯ ಸಂಗೀತ ಉತ್ಸವ ಇದಾಗಿರುವುದರಿಂದ, ನಾವು ಸಂಪರ್ಕಿಸುವ ಕಲಾವಿದರು ಆಹ್ವಾನವನ್ನು ತಿರಸ್ಕರಿಸುವುದು ಕಡಿಮೆ. ಅಲ್ಲದೆ ಪ್ರತೀ ಸಂಗೀತ ಕಲಾವಿದರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಚಾಮರಾಜಪೇಟೆಯ ರಾಮಸೇವಾ ಮಂಡಳಿಯ ರಾಮನವಮಿ ಸಂಗೀತೋತ್ಸವದಲ್ಲಿ ಕಛೇರಿ ನೀಡಬೇಕು ಎಂಬ ಬಯಕೆ ಹೊಂದಿರುತ್ತಾರೆ. ಹಾಗಾಗಿ ಅವರನ್ನು ಆಹ್ವಾನಿಸುವುದು ಅಷ್ಟು ಕಷ್ಟವಾಗದು. ಈ ವರ್ಷದ ಉತ್ಸವಕ್ಕೆ ಆಹ್ವಾನಿಸಿರುವ ಕಲಾವಿದರ ಸಂಖ್ಯೆ ಸುಮಾರು 300. ಇದರಲ್ಲಿ 100 ಮಂದಿ ಕನ್ನಡಿಗರು. ಉಳಿದವರು ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರ ಮೂಲದವರು.

ಅಭಿಜಿತ್‌ ವರದರಾಜ್‌

ಯುವ ಸಮುದಾಯದವರನ್ನು ಸಂಗೀತದತ್ತ ಸೆಳೆಯಲು ಪ್ರತಿಭಾಕಾಂಕ್ಷಿ ಸಂಗೀತೋತ್ಸವ ನಡೆಸಲಾಗುತ್ತಿದೆ. ಪ್ರತಿವರ್ಷ ಸುಮಾರು 2000 ಅರ್ಜಿಗಳು ಬರುತ್ತಿವೆ. ತೀರ್ಪುಗಾರರ ಸಮಿತಿಯು 18 ಪ್ರತಿಭಾವಂತರನ್ನು ಅಂತಿಮಗೊಳಿಸುತ್ತದೆ. ಇವರಲ್ಲಿ ಅತ್ಯುತ್ತಮ ಎನಿಸಿದ ಮೂವರಿಗೆ ಬಹುಮಾನ ನೀಡಲಾಗುತ್ತದೆ. ಅದರ ಜತೆಗೆ ಮೂರು ವರ್ಷದಿಂದ, ಮಂಡಳಿಯ ಸಂಸ್ಥಾಪಕರಾದ ಎಸ್‌.ವಿ.ನಾರಾಯಣಸ್ವಾಮಿ ರಾವ್‌ ಹೆಸರಿನಲ್ಲಿ ರಾಷ್ಟ್ರೀಯ ಸಂಗೀತೋತ್ಸವ ಹಮ್ಮಿಕೊಳ್ಳಲಾಗುತ್ತಿದ್ದು, ಇಲ್ಲಿ ಎಸ್‌ವಿಎನ್‌ ಪ್ರಶಸ್ತಿ ವಿತರಿಸಲಾಗುತ್ತಿದೆ.

ಕಛೇರಿ ನೀಡಲು ಬರುವ ಕಲಾವಿದರ ವಸತಿ, ಊಟದ ವ್ಯವಸ್ಥೆ? ಸಂಭಾವನೆ?

ಉತ್ಸವಕ್ಕೆ ಬರುವ ಕಲಾವಿದರಿಗೆ ಲಾಡ್ಜ್‌ಗಳಲ್ಲಿ ವಸತಿ, ಊಟದ ವ್ಯವಸ್ಥೆ ಮಾಡಲಾಗಿರುತ್ತದೆ. ಕಲಾವಿದರನ್ನು ವಿಮಾನ ನಿಲ್ದಾಣದಿಂದ ಕರೆತರುವ ಮತ್ತು ಅವರನ್ನು ಬೀಳ್ಕೊಡುವ ಕಾರ್ಯಕ್ಕೆ ಸಂಯೋಜಕರನ್ನು ನಿಯೋಜಿಸಲಾಗಿರುತ್ತದೆ. ಇತ್ತೀಚೆಗೆ ಒಲಾ ಮತ್ತು ಉಬರ್‌ ಆ್ಯಪ್‌ಗಳು ಇರುವುದರಿಂದ ಸ್ವಲ್ಪ ಅನುಕೂಲವಾಗಿದೆ.

ಇಲ್ಲಿ ಕಛೇರಿ ನೀಡುವುದು ಕಲಾವಿದರ ಪಾಲಿಗೆ ಪ್ರತಿಷ್ಠೆಯ ವಿಷಯ. ಶಾಸ್ತ್ರೀಯ ಸಂಗೀತಕ್ಕೆ ಇಲ್ಲಿ ಸೇರುವಷ್ಟು ಕಲಾ ರಸಿಕರು ದೇಶದಲ್ಲಿ ಇನ್ನೆಲ್ಲೂ ಸೇರಿವುದಿಲ್ಲ. ಹಾಗಾಗಿ ಕಲಾವಿದರು ಹೆಚ್ಚಿನ ಸಂಭಾವನೆ ಪಡೆಯುವುದಿಲ್ಲ. ಹಿರಿಯರು ಮತ್ತು ಹಳೆಯ ಕಲಾವಿದರು ತುಂಬಾ ಕಡಿಮೆ ಸಂಭಾವನೆ ಪಡೆಯುತ್ತಾರೆ. ಆದರೆ ಇತ್ತೀಚೆಗೆ ಹಲವು ಕಲಾವಿದರು ಕಮರ್ಷಿಯಲ್‌ ಆಗಿದ್ದಾರೆ. ಆದರೂ ರಾಮಸೇವಾ ಮಂಡಳಿ ಸಂಗೀತೋತ್ಸಕ್ಕೆ ಅವರು ರಿಯಾಯಿತಿ ನೀಡುತ್ತಾರೆ.

ಸಂಗೀತೋತ್ಸವಕ್ಕೆ ಎಷ್ಟು ಖರ್ಚಾಗುತ್ತದೆ? ಹಣವನ್ನು ಹೇಗೆ ಸಂಗ್ರಹಿಸುತ್ತೀರಿ?

31 ದಿನಗಳ ಸಂಗೀತೋತ್ಸವಕ್ಕೆ ₹1 ಕೋಟಿಗೂ ಹೆಚ್ಚಿಗೆ ಖರ್ಚಾಗುತ್ತದೆ. ದಾನಿಗಳು ನೀಡುವ ದೇಣಿಗೆ ಹಾಗೂ ಕಳೆದ ವರ್ಷದ ಬಜೆಟ್‌ನಲ್ಲಿ ಉಳಿದ ಮೊತ್ತವನ್ನು ಬಳಸಿಕೊಳ್ಳಲಾಗುತ್ತದೆ. ಉಳಿದಂತೆ ಟಿಕೆಟ್‌ ದರದಿಂದ ಸ್ವಲ್ಪ ಆದಾಯ ಬರುತ್ತದೆ.

ಕಾರ್ಯಕ್ರಮಕ್ಕೆ ಸ್ವಯಂಸೇವಕರು ಸಿಗುತ್ತಾರಾ?

ರಾಮಸೇವಾ ಮಂಡಳಿಯಲ್ಲಿಯೇ 150 ಸ್ವಯಂ ಸೇವಕರು ಇದ್ದಾರೆ. ಇವರೇ ಎಲ್ಲ ಕಾರ್ಯವನ್ನೂ ನಿಭಾಯಿಸುತ್ತಾರೆ, ಹಾಗಾಗಿ ಸಮಸ್ಯೆಯೇನೂ ಇಲ್ಲ.

**

ಗಣ್ಯ ಕಲಾವಿದರಿಂದ ನಡೆದ ಕಚೇರಿಗಳು

ರಾಮನವಮಿ ಸಂಗೀತೋತ್ಸವದಲ್ಲಿ ಎಂ.ಎಸ್‌. ಸುಬ್ಬುಲಕ್ಷ್ಮಿ ಅವರು 36 ಬಾರಿ ಹಾಡಿದ್ದಾರೆ, ಡಾ. ಕೆ.ಜಿ. ಯೇಸುದಾಸ್‌ ಅವರು 40 ವರ್ಷದಿಂದ ತಪ್ಪದೆ ಭಾಗವಹಿಸುತ್ತಿದ್ದಾರೆ. ಸಾಕಷ್ಟು ಕಲಾವಿದರನ್ನು ಬೆಳೆಸಿದ ಎಸ್‌.ವಿ.ನಾರಾಯಣಸ್ವಾಮಿರಾವ್‌ ಅವರ ಮೇಲಿನ ವಿಶೇಷ ಅಭಿಮಾನವನ್ನು ಯೇಸುದಾಸ್‌ ಹೊಂದಿದ್ದಾರೆ. ಇವರೇ ಅಲ್ಲದೆ ಬಿಸ್ಮಿಲ್ಲಾ ಖಾನ್, ಭೀಮಸೇನ ಜೋಷಿ, ಬಾಲಮುರಳೀ ಕೃಷ್ಣ,  ಎಂ. ಎಲ್‌. ವಸಂತಕುಮಾರಿ ಅವರ ಸಂಗೀತ ಕಛೇರಿಗಳು ನಡೆದಿವೆ.

ಟಿ. ಚೌಡಯ್ಯ, ಟಿ.ಆರ್‌. ಮಹಾಲಿಂಗಂ, ಪಳನಿ ಸುಬ್ರಹ್ಮಣ್ಯ ಪಿಳ್ಳೈ, ಬಾಂಬೆ ಜಯಶ್ರೀ, ವೀಣೆ ದೊರೆಸ್ವಾಮಿ ಅಯ್ಯಂಗಾರ್‌, ಹೊನ್ನಪ್ಪ ಭಾಗವತರ್‌, ಸಲೀಂ ದೇಸಿಖಾನ್‌, ಅಯ್ಯಮಣಿ ಅಯ್ಯರ್‌, ಜಿ.ಎನ್‌. ಬಾಲಸುಬ್ರಹ್ಮಣ್ಯ, ಎಂ.ಎ. ನರಸಿಂಹಾಚಾರ್‌, ಲಾಲ್‌ಗುಡಿ ಜಿ. ಜಯರಾಮನ್‌, ಟಿ.ಎಂ. ಕೃಷ್ಣ ಮೊದಲಾದವರು ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟಿದ್ದಾರೆ.

**

ಟೆಂಪಲ್‌ ಆಫ್‌ ಮ್ಯೂಸಿಕ್‌

ಸಿ. ರಾಜಗೋಪಾಲಾಚಾರಿ ಅವರು ಇಲ್ಲಿನ ಸಂಗೀತೋತ್ಸವವನ್ನು ‘ಟೆಂಪಲ್‌ ಆಫ್‌ ಮ್ಯೂಸಿಕ್‌’ ಎಂದು ಕರೆದಿದ್ದು, ಈ ಕಾರ್ಯಕ್ರಮ ಪ್ರತಿ ವರ್ಷ ಚಪ್ಪರದಲ್ಲಿಯೇ ನಡೆಯುವಂತಾಗಲಿ ಎಂದು ಆಶಿಸಿದ್ದರು.

ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್‌ ಅವರು, ಇದನ್ನು ಜ್ಞಾನ ಗಾನ ಸಭಾ ಎಂದು ಕರೆದಿದ್ದರು. 31 ದಿನವೂ ಸಂಜೆ ಗಾಯಕ ಕಾರ್ಯಕ್ರಮ ನಡೆದರೆ, ಬೆಳಿಗ್ಗೆ ಜ್ಞಾನಾರ್ಜನೆ ನಡೆಯುತ್ತದೆ ಎಂದು ಅವರು ಹೇಳಿದ್ದರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.