ಗುರುವಾರ , ಏಪ್ರಿಲ್ 9, 2020
19 °C

ಹಸಿದರೂ, ಕಷ್ಟವಾದರೂ ಕೂರಬೇಕು!

ಎಂ.ಎನ್.ಯೋಗೇಶ್‌ Updated:

ಅಕ್ಷರ ಗಾತ್ರ : | |

ಮಂಡ್ಯ: ನಾಗಮಂಗಲದಲ್ಲಿ ಈಚೆಗೆ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಜನರು ಹೊಟ್ಟೆ ಹಸಿವಿನಿಂದ ಪರದಾಡಿದರು.

ಮಧ್ಯಾಹ್ನ 12ಕ್ಕೆ ಮುಖ್ಯಮಂತ್ರಿ ಬರಬೇಕಾಗಿತ್ತು. ಆದರೆ 2 ಗಂಟೆಯಾದರೂ ಬಂದಿರಲಿಲ್ಲ. ನೀತಿ ಸಂಹಿತೆ ಜಾರಿಯಿದ್ದ ಕಾರಣ ಜನರಿಗೆ ಊಟ ಹಾಕಿಸುವಂತೆಯೂ ಇರಲಿಲ್ಲ. ಹೊಟ್ಟೆ ತಾಳ ಹಾಕುತ್ತಿದ್ದಂತೆ ಜನರು ಒಬ್ಬೊಬ್ಬರಾಗಿ ಎದ್ದು ಹೋಗುತ್ತಿದ್ದರು. ಇದನ್ನು ಗಮನಿಸಿದ ಕಾಂಗ್ರೆಸ್‌ ಅಭ್ಯರ್ಥಿ ಎನ್‌. ಚಲುವರಾಯಸ್ವಾಮಿ, ‘ದಯವಿಟ್ಟು ಕುಳಿತುಕೊಳ್ಳಿ’ ಎಂದು ಜನರನ್ನು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದರು.

‘ಈಗ ಮುಖ್ಯಮಂತ್ರಿಗಳು ಪಾಂಡವಪುರಕ್ಕೆ ಬಂದಿದ್ದಾರೆ, ಇನ್ನೇನು ಜಕ್ಕನಹಳ್ಳಿಗೆ ಬರುತ್ತಾರೆ. ಅಲ್ಲಿಂದ ನಾಗಮಂಗಲಕ್ಕೆ ಬರಲು 15 ನಿಮಿಷ’ ಎಂದು ಚಲುವರಾಯಸ್ವಾಮಿ ಹೇಳಿಯೇ 45 ನಿಮಿಷ ಕಳೆದಿತ್ತು. ‘ನನ್ನ ಮೇಲೆ ಪ್ರೀತಿ ಇದ್ದರೆ ಹೊಟ್ಟೆ ಹಸಿದರೂ, ಕಷ್ಟವಾದರೂ ಕೂರಬೇಕು. ನಿಮ್ಮ ಕೈಮುಗಿಯುತ್ತೇನೆ. ಇನ್ನು 10 ನಿಮಿಷ ಕಾಯಿರಿ. ನಿಮ್ಮ ಜೊತೆ ನಾನೂ ಹಸಿದಿದ್ದೇನೆ’ ಎಂದಾಗ ಜನರು ತಮ್ಮ ಹೊಟ್ಟೆ ಹಸಿವು ಮರೆತು, ‘ಅಯ್ಯೋ ಪಾಪ’ ಎಂದರು.

ಚಲುವರಾಯಸ್ವಾಮಿ ಮೊಬೈಲ್‌ ಫೋನ್‌ ಹಿಡಿದು ವೇದಿಕೆಯ ಹಿಂದಕ್ಕೆ ಹೋದರು. ಅವರು ವೇದಿಕೆಗೆ ಬರುವಷ್ಟರಲ್ಲಿ ಹಲವರು ಕಣ್ಣು ತಪ್ಪಿಸಿ ಓಡಿ ಹೋಗಿದ್ದರು. ಮುಖ್ಯಮಂತ್ರಿ ಬಂದಾಗ ಸಂಜೆ 4.30 ಆಗಿತ್ತು. ಹೊಟ್ಟೆ ಹಸಿವಿನ ನಡುವೆಯೂ ಸಾವಿರಕ್ಕೂ ಹೆಚ್ಚು ಜನರನ್ನು ಉಳಿಸಿಕೊಳ್ಳಲು ಚಲುವರಾಯಸ್ವಾಮಿ ಯಶಸ್ವಿಯಾಗಿದ್ದರು. ಕಡಲೆ ಕಾಯಿ, ಐಸ್‌ ಕ್ರೀಂ, ಸೌತೆ ಕಾಯಿ, ಮಜ್ಜಿಗೆ ಪ್ಯಾಕೆಟ್‌ ಮಾರುವವರು ಭರ್ಜರಿ ವ್ಯಾಪಾರ ಮಾಡಿಕೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)