ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ‘ಮಹಾಭಾರತ’ ನಾಟಕ

Last Updated 3 ಮೇ 2018, 19:30 IST
ಅಕ್ಷರ ಗಾತ್ರ

‘ಮನುಷ್ಯರು ಶಾಂತಿಗಾಗಿ ಬದುಕುತ್ತಾರೆ, ಶಾಂತಿಯಿಂದ ಬೆಳೆಯಲು ಬಯಸುತ್ತಾರೆ. ತಮ್ಮ ಮಕ್ಕಳನ್ನು ಶಾಂತಿಯ ಪರಿಸರದಲ್ಲಿ ಬೆಳೆಸಲು ಬಯಸುತ್ತಾರೆ. ಈ ಸುಂದರ ಬದುಕಿಗೆ ಶಾಂತಿಯಿಂದ ವಿದಾಯ ಹೇಳಲು ಬಯಸುತ್ತಾರೆ. ಹೀಗಿರುವಾಗ ಅದೇಕೆ ನಾವು ಸದಾಕಾಲವು ಯುದ್ಧಕ್ಕೆ ಸಿದ್ಧರಾಗುತ್ತಿರುತ್ತೇವೆ?’

ಇಡೀ ಮಹಾಭಾರತದ ಮುಖ್ಯ ತೊಳಲಾಟ ಇದರಲ್ಲೇ ಅಡಗಿದೆ ಎನಿಸುತ್ತದೆ. ಶಾಂತಿಯನ್ನು ಕಾಪಾಡಬೇಕು, ವಸ್ತುಸ್ಥಿತಿಯನ್ನು ಉಳಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದಲೇ ಮಹಾಭಾರತದ ಪ್ರತಿ ಪಾತ್ರವೂ ತನ್ನ ತನ್ನ ವೈಯಕ್ತಿಕ ಯುದ್ಧವನ್ನು ಪ್ರಾರಂಭಿಸುತ್ತದೆ. ಆದರೆ ಅದು ಹೆಜ್ಜೆ ಹೆಜ್ಜೆಗೂ ಹಿರಿದಾಗಿ ಪ್ರಳಯಕ್ಕೆ ನಾಂದಿಯಾಗುತ್ತದೆ.

‘ಮಹಾಭಾರತ’ ನಾಟಕವು ಮಹಾಭಾರತದ 15 ಪಾತ್ರಗಳ ಒಳತೋಟಿ ಮತ್ತು ಅವುಗಳ ಭೂತಕಾಲವನ್ನು ಪರಿಶೋಧಿಸುತ್ತದೆ. ಮಹಾಭಾರತದ ಪ್ರತಿಯೊಂದು ಪಾತ್ರವೂ ವಿಶಿಷ್ಟವಾದದ್ದು. ಅವುಗಳ ಏಕಮನಸ್ಕ ಮತ್ತು ಪ್ರಶ್ನಾತೀತವಾದ ನಂಬಿಕೆಗಳು ಕಡೆಗೆ ಅನಿವಾರ್ಯ ಸಂಘರ್ಷಕ್ಕೆ ದಾರಿ ಮಾಡುತ್ತವೆ. ಈ ಪಾತ್ರಗಳ ಬದುಕಿನಲ್ಲಿ ಯಾವುದಾದರೂ ಒಂದು ಕ್ಷಣದಲ್ಲಿ ಈ ಪಾತ್ರಗಳು ಒಂದು ಆಯ್ಕೆಯನ್ನು ಮಾಡುವುದರ ಮೂಲಕ, ಕ್ಷಮಿಸುವುದರ ಮೂಲಕ ಯುದ್ಧವನ್ನು ತಪ್ಪಿಸಬಹುದಿತ್ತೇ?

ನಾಟಕ ಈ ಪಾತ್ರಗಳ ಮೂಲಕ ಇಡೀ ಮಹಾಭಾರತದ ತಲ್ಲಣವನ್ನು ಕಟ್ಟಿಕೊಡುತ್ತದೆ. ಆ ಪಾತ್ರಗಳು, ಶಕುನಿ, ಯುಧಿಷ್ಟಿರ, ದ್ರೌಪದಿ, ಅಂಬೆ, ಅಭಿಮನ್ಯು, ಅರ್ಜುನ, ಜಯದ್ರಥ, ದ್ರೋಣ, ಕರ್ಣ, ದುಶ್ಯಾಸನ, ದುರ್ಯೋಧನ, ಅಶ್ವತ್ಥಾಮ, ಗಾಂಧಾರಿ, ಕೃಷ್ಣ, ಮತ್ತು ಬರ್ಬರೀಕ.

ನಿರ್ದೇಶಕಿಯ ಬಗ್ಗೆ: ಅನುರೂಪ ರಾಯ್ ಅವರು ಬೊಂಬೆಯಾಟ ಕಲಾವಿದೆ. ಅವರು ಕಠ್‍ಕಥಾ ಪಪೆಟ್ ಆರ್ಟ್ಸ್‌ ಟ್ರಸ್ಟ್‌ ತಂಡವನ್ನು 1998ರಲ್ಲಿ ಪ್ರಾರಂಭಿಸಿದರು. ರಾಮಾಯಣ, ಮಹಾಭಾರತ, ಶೇಕ್ಸ್‌ಪಿಯರ್‌ನ ಕಾಮಿಡಿಗಳಂತಹ ಹದಿನೈದಕ್ಕೂ ಹೆಚ್ಚಿನ ಪ್ರಯೋಗಗಳನ್ನು ನಿರ್ದೇಶಿಸಿದ್ದಾರೆ. ಪ್ರಪಂಚದಾದ್ಯಂತ ಪ್ರದರ್ಶನಗಳನ್ನು ನೀಡಿರುವ ಅನುರೂಪ ಹಲವು ವಿಶ್ವವಿದ್ಯಾನಿಲಯಗಳಲ್ಲಿ ಬೊಂಬೆಯಾಟದ ತರಬೇತಿ ನೀಡುತ್ತಿದ್ದಾರೆ. ಇವರಿಗೆ 2006ರಲ್ಲಿ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ದೊರೆತಿದೆ. ಕಠ್‌ಕಥಾ ‍ಪೊಪೆಟ್ ಆರ್ಟ್ಸ್‌ ಟ್ರಸ್ಟ್‌ನ ಕಲಾವಿದರು ‘ಮಹಾಭಾರತ’ವನ್ನು ಆಡಿತೋರಿಸಲಿದ್ದಾರೆ. 

‘ಕುರ್ಲಿ’ ಕಿರುಚಿತ್ರದ ಕುರಿತು
ಸಿದ್ಧಿ ಸುಬ್ಬ ತೋಟವೊಂದರಲ್ಲಿ ಬಾಳೆಗೊನೆ ಕದ್ದು ಬಚ್ಚಿಡುತ್ತಾನೆ. ಅದೇ ತೋಟಕ್ಕೆ ಅವನ ಮಕ್ಕಳು ಏಡಿ ಹಿಡಿಯಲು ಹೋಗುತ್ತಾರೆ. ತೋಟದ ಮಾಲೀಕರಿಗೆ ಕದ್ದ ಬಾಳೆಗೊನೆ ಸಿಗುತ್ತದೆ. ಕದ್ದ ಆರೋಪ ಸಿದ್ಧಿ ಸುಬ್ಬನ ಮಗನ ಮೇಲೆ ಬರುತ್ತದೆ. ಆದರೆ, ಮಗ ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಯಾಕೆಂದರೆ ಅವನಿಗೆ ಪರಿಸ್ಥಿತಿಯ ಅರಿವೇ ಇಲ್ಲ. ಇದು ನಿರ್ದೇಶಕ ನಟೇಶ್‌ ಹೆಗಡೆ ನಿರ್ದೇಶನದ ‘ಕುರ್ಲಿ’ ಕಿರುಚಿತ್ರದ ಕಥಾವಸ್ತು.

ಸಿಜಿಕೆ ರಾಷ್ಟ್ರೀಯ ರಂಗೋತ್ಸವದಲ್ಲಿ: ಸಂಜೆ 4.30ಕ್ಕೆ ‘ಚಿತ್ರಕೂಟ’ ಚಿಕ್ಕ ಸುರೇಶ ನೆನಪಿನ ಕಿರುಚಿತ್ರ ಪ್ರದರ್ಶನದಲ್ಲಿ ‘ಕುರ್ಲಿ’ ಕಿರುಚಿತ್ರ ಪ್ರದರ್ಶನ. ನಿರ್ದೇಶನ–ನಟೇಶ್‌ ಹೆಗಡೆ. ಸಂಜೆ 5.15ಕ್ಕೆ ‘ಕಥಾ ಪಡಸಾಲೆ’ಯಲ್ಲಿ ಕಥಾ ಕಾರ್ನರ್‌ನ ಸ್ನೇಹಾ ಕಪ್ಪಣ್ಣ ಅವರಿಂದ ಕಥನ ಕೌತುಕ ಮಾಲೆ. ಸಂಜೆ 6ಕ್ಕೆ ರಂಗ ವಸಂತ ಗೌರವ. ರಾತ್ರಿ 7ಕ್ಕೆ ‘ಮಹಾಭಾರತ’ ನಾಟಕ ಪ್ರದರ್ಶನ. ರಚನೆ, ನಿರ್ದೇಶನ–ಅನುರೂಪ ರಾಯ್, ತಂಡ– ಕಠ್‌ಕಥಾ ಪಪೆಟ್ ಆರ್ಟ್ಸ್‌ ಟ್ರಸ್ಟ್‌, ನವದೆಹಲಿ. ಆಯೋಜನೆ– ರಂಗನಿರಂತರ, ಸ್ಥಳ– ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಉಚಿತ ಪ್ರವೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT