ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೇರ್ಗಡೆಗೆ ಪೂರಕ ಪರೀಕ್ಷೆ ಇದೆ’

Last Updated 3 ಮೇ 2018, 19:30 IST
ಅಕ್ಷರ ಗಾತ್ರ

ಫೇಲಾಗಿರುವ ವಿದ್ಯಾರ್ಥಿಗಳ ಮುಂದಿರುವ ಆಯ್ಕೆಗಳೇನು?
ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಇದ್ದರೆ ಮರು ಎಣಿಕೆ, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿ, ಶುಲ್ಕ ಭರಿಸಬಹುದು. ಅದರ ಜತೆಗೆ ಪೂರಕ ಪರೀಕ್ಷೆಗೂ ಸಿದ್ಧರಾಗುವುದು ಒಳ್ಳೆಯದು. ಪೂರಕ ಪರೀಕ್ಷೆಗೂ ಮುನ್ನವೇ ಮರು ಮೌಲ್ಯಮಾಪನದ ಫಲಿತಾಂಶವನ್ನು ಇಲಾಖೆ ಪ್ರಕಟಿಸುತ್ತದೆ. ಹೆಚ್ಚು ಅಂಕ ಬಂದಿದ್ದರೆ ಪೂರಕ ಪರೀಕ್ಷೆ ಬರೆಯುವ ಅಗತ್ಯವಿಲ್ಲ. ಅಂಕಗಳಲ್ಲಿ ವ್ಯತ್ಯಾಸ ಆಗದಿದ್ದರೆ ಅಥವಾ ಅಂಕ ಇಳಿಕೆಯಾದರೆ ಪೂರಕ ಪರೀಕ್ಷೆ ಬರೆಯಬೇಕಾಗುತ್ತದೆ.‌

ಅನುತ್ತೀರ್ಣರಾದವರಲ್ಲಿ ಆತ್ಮವಿಶ್ವಾಸ ತುಂಬಲು ಇಲಾಖೆ ಏನು ಮಾಡುತ್ತಿದೆ?
ಇಲಾಖೆ ಈಗಾಗಲೇ ಸಹಾಯವಾಣಿ (080– 23083900) ತೆರೆದಿದೆ. ಅಲ್ಲಿಗೆ ಕರೆಗಳೂ ಬರುತ್ತಿವೆ. ಅಲ್ಲಿ ಅಪ್ತ ಸಮಾಲೋಚಕರೂ ಇರುತ್ತಾರೆ. ಅವರು ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ ಧೈರ್ಯ ತುಂಬಿ, ಆತ್ಮವಿಶ್ವಾಸ ಹೆಚ್ಚಿಸುವ ಕೆಲಸಗಳನ್ನು ಮಾಡಲಾಗುತ್ತಿದೆ. ಅಲ್ಲದೆ ಮರು ಎಣಿಕೆ, ಮರು ಮೌಲ್ಯಮಾಪನ, ಉತ್ತರ ಪತ್ರಿಕೆಯ ನಕಲು ಪ್ರತಿ ಪಡೆಯುವುದೂ ಸೇರಿದಂತೆ ಪೂರಕ ಮಾಹಿತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳು, ಪೋಷಕರಲ್ಲಿನ ಗೊಂದಲಗಳನ್ನು ಪರಿಹರಿಸಲಾಗುತ್ತಿದೆ.

ಪೂರಕ ಪರೀಕ್ಷೆ ತೆಗೆದುಕೊಳ್ಳುತ್ತಿರುವವರಿಗೆ ಇಲಾಖೆ ವಿಶೇಷ ತರಗತಿಗಳನ್ನು ಹಮ್ಮಿಕೊಂಡಿದೆಯಾ?
ಹಿಂದಿನಿಂದಲೂ ಜಿಲ್ಲಾ ಹಂತದಲ್ಲಿ ಕೆಲವೆಡೆ ಇಂಥ ವಿಶೇಷ ತರಗತಿಗಳನ್ನು ಡಿಡಿಪಿಯುಗಳ ಮೇಲ್ವಿಚಾರಣೆಯಲ್ಲಿ ಮತ್ತು ಸ್ಥಳೀಯ ಉಪನ್ಯಾಸಕರ ಸಂಘಗಳ ನೆರವಿನಿಂದ ನಡೆಯುತ್ತಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು.

ತೇರ್ಗಡೆಯಾಗದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ನಿಮ್ಮ ಕಿವಿಮಾತೇನು?
ದ್ವಿತೀಯ ಪಿಯು ಎಂಬುದು ಒಂದು ಪರೀಕ್ಷೆಯಷ್ಟೆ. ಇದೇ ಅಂತಿಮವಲ್ಲ. ಮುಖ್ಯ ಪರೀಕ್ಷೆಯಲ್ಲಿ ಪಾಸಾಗದಿದ್ದರೆ ಜೂನ್‌ 8ರಿಂದ ಆರಂಭವಾಗುವ ಪೂರಕ ಪರೀಕ್ಷೆ ಇದ್ದೇ ಇದೆ. ಈಗಾಗಲೇ ವೇಳಾಪಟ್ಟಿಯನ್ನೂ ಪ್ರಕಟಿಸಲಾಗಿದೆ. ಫೇಲಾಗಿರುವ ಕೆಲವೇ ವಿಷಯಗಳ ಸಿದ್ಧತೆಗೆ ಇನ್ನೂ ಒಂದು ತಿಂಗಳು ಸಮಯ ಸಿಕ್ಕಂತಾಗಿದೆ. ಈ ಅವಧಿಯನ್ನು ಸರಿಯಾಗಿ ಉಪಯೋಗಿಸಿಕೊಂಡು ಸಿದ್ಧತೆ ನಡೆಸಿದರೆ ಸುಲಭವಾಗಿ ಪಾಸಾಗಬಹುದು. ಅಲ್ಲದೆ ಹೆಚ್ಚು ಅಂಕಗಳನ್ನೂ ಪಡೆಯಬಹುದು. ಜತೆಗೆ ಉನ್ನತ ಶಿಕ್ಷಣಕ್ಕೂ ಪ್ರವೇಶಿಸಬಹುದು. ಇನ್ನು ಪೋಷಕರು ಮಕ್ಕಳ ಮೇಲೆ ಹೆಚ್ಚು ಒತ್ತಡ ಹೇರುವುದನ್ನು ನಿಲ್ಲಿಸಿ, ಅವರಿಗೆ ಬೆನ್ನೆಲುಬಾಗಿ ನಿಲ್ಲಬೇಕು.

‘ಪ್ರತಿಯೊಬ್ಬರೂ ಸಮರ್ಥರು’
‘ಯಾರೊಬ್ಬರಲ್ಲೂ ಶೂನ್ಯ ಬುದ್ಧಿ ಸಾಮರ್ಥ್ಯ ಮತ್ತು ವ್ಯಕ್ತಿತ್ವ ಇರುವುದಿಲ್ಲ. ಆದರೆ ವಿಷಯವಾರು ಕಲಿಕೆ ಮತ್ತು ನೆನಪಿನಲ್ಲಿಟ್ಟುಕೊಳ್ಳುವ ವಿಧಾನದಲ್ಲಿ ಸುಧಾರಣೆಯಾದರೆ ಎಲ್ಲರೂ ಪಾಸಾಗುತ್ತಾರೆ ಎನ್ನುತ್ತಾರೆ ತಜ್ಞ ಮನೋವೈದ್ಯ ಡಾ. ಎ. ಶ್ರೀಧರ್‌.ಸ್ವ ಕಲಿಕೆ, ವಿಮರ್ಶೆ ಮತ್ತು ಆತ್ಮಾವಲೋಕನದ ಮೂಲಕ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ಸಿದ್ಧತೆ ನಡೆಸಬೇಕು. ತಾವು ಎಲ್ಲಿ ಲೋಪ ಮಾಡಿದ್ದೇವೆ ಎಂಬುದು ಬಹುತೇಕ ವಿದ್ಯಾರ್ಥಿಗಳಿಗೆ ಗೊತ್ತಿರುತ್ತದೆ. ಅಂಥವರು ಅದನ್ನು ಸರಿಪಡಿಸಿಕೊಳ್ಳಬೇಕು. ಇನ್ನೂ ಕೆಲವರು ವಿಷಯ ತಜ್ಞರಿಂದ ಸರಿಯಾದ ಮತ್ತು ಸರಳವಾದ ಕಲಿಕಾ ವಿಧಾನ ತಿಳಿದು, ಅವರ ಮಾರ್ಗದರ್ಶನದಂತೆ ನಡೆಯಬೇಕು ಎಂದು ಅವರು ಸಲಹೆ ನೀಡುತ್ತಾರೆ. ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಮನೆ, ಕುಟುಂಬ, ಸಮಾಜ ಮತ್ತು ಶೈಕ್ಷಣಿಕ ವಾತಾವರಣ ಬದಲಾದರೆ ಮಕ್ಕಳ ಆತ್ಮಸ್ಥೈರ್ಯ, ಮನೋಬಲ ಹೆಚ್ಚಿರುತ್ತದೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT