ಬುಧವಾರ, ಮಾರ್ಚ್ 3, 2021
19 °C
ಅಗತ್ಯ ಸಿದ್ಧತೆಗೆ ಸ್ವೀಪ್‌ ಸಮಿತಿ ಅಧ್ಯಕ್ಷ ಜಗದೀಶ್ ಸೂಚನೆ

8ರಂದು ಮತದಾರರ ಜಾಗೃತಿ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

8ರಂದು ಮತದಾರರ ಜಾಗೃತಿ ಕಾರ್ಯಕ್ರಮ

ಹಾಸನ: ನಗರದ ಜಿಲ್ಲಾ ಕ್ರಿಡಾಂಗಣದಲ್ಲಿ ಮೇ 8ರಂದು ಬೃಹತ್ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಎಲ್ಲ ಅಗತ್ಯ ತಯಾರಿ ನಡೆಸುವಂತೆ ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ.ಜಗದೀಶ್ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪದವಿಪೂರ್ವ ಕಾಲೇಜು ಉಪನಿರ್ದೇಶಕರು, ಪ್ರಾಂಶುಪಾಲರು ಹಾಗೂ ಇತರ ಅಧಿಕಾರಿಗಳ ಸಭೆ ನಡೆಸಿದ ಅವರು ಮತದಾರರ ಜಾಗೃತಿ ಚಟುವಟಿಕೆಗಳನ್ನು ಬಿರುಸುಗೊಳಿಸಲು ತಿಳಿಸಿದರು.

8ರಂದು ನಗರ ವ್ಯಾಪ್ತಿಯಲ್ಲಿ ಹಲವು ಬಗೆಯ ಮತದಾರರ ಜಾಗೃತಿ ಚಟುವಟಿಕೆಗಳು ನಡೆಯಬೇಕಾಗಿದ್ದು, ಜಿಲ್ಲಾ ಕ್ರೀಡಾಂಗಣದಲ್ಲಿ ಅವುಗಳ ಸಂಯೋಜನೆಗೊಳ್ಳುವಂತೆ ಸೂಕ್ತ ಯೋಜನೆ ರೂಪಿಸಿ ಎಂದು ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ 9 ಗಂಟೆಗೆ ಎಲ್ಲ ಸರ್ಕಾರಿ ಹಾಗೂ ಖಾಸಗಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು, ಪ್ರಾಂಶುಪಾಲರು, ಉಪನ್ಯಾಸಕರು, ಸರ್ಕಾರಿ, ಖಾಸಗಿ ಐ.ಟಿ.ಐ ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸಕರು ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಸೇರಿದಂತೆ ಸುಮಾರು 2,000–3,000 ಮಂದಿ ಸೇರಿ ವಿಶೇಷ ರೀತಿಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಬೇಕು. ಇದನ್ನು ಬೃಹತ್ ಮಟ್ಟದಲ್ಲಿ ಏರ್ಪಡಿಸುವ ನಿಟ್ಟಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಹೆಚ್ಚು ಜವಾಬ್ದಾರಿ ವಹಿಸಬೇಕು ಎಂದರು.

ಕಾರ್ಯಕ್ರಮದ ದಿನದಂದು ಕ್ರೀಡಾಂಗಣದವರೆಗೆ ಮತದಾರರ ಜಾಗೃತಿ ನಡಿಗೆ, 400–800 ಮೀಟರ್ ಓಡಿ, ಸಂದೇಶಗಳನ್ನು ರಚಿಸಿ, ಮತದಾನದ ಜಾಗೃತ ಘೋಷಣೆಗಳೊಂದಿಗೆ ಪ್ರದರ್ಶನ, ಚುನಾವಣಾ ಚಿಹ್ನೆ ಇರುವ ಕರ್ನಾಟಕ ಮ್ಯಾಪ್ ವಿದ್ಯಾರ್ಥಿಗಳು ಸುತ್ತುವರೆಯುವುದು, ಇ.ವಿ.ಎಂ, ವಿವಿ ಪ್ಯಾಟ್‌ ಯಂತ್ರಗಳ ಪ್ರಾತ್ಯಕ್ಷಿಕೆ ಏರ್ಪಡಿಸುವುದು, ನಗರಸಭೆಯ ಪ್ರಚಾರ ವಾಹನ, ವಾರ್ತಾ ಇಲಾಖೆಯ ಪ್ರಚಾರ ವಾಹನದ ಮೂಲಕ ಮತದಾನದ ಜಾಗೃತಿ ನಡೆಸುವುದು, ಕಾಲೇಜು ಮಕ್ಕಳಿಂದ ಮತದಾನ ಜಾಗೃತಿ ನಾಟಕ ಏರ್ಪಡಿಸುವುದು, ಚುನಾವಣಾ ಮಹತ್ವ ಸಾರುವ ಚಿತ್ರಗಳನ್ನು ವಿದ್ಯಾರ್ಥಿಗಳಿಂದ ಬಿಡಿಸಿ ಪ್ರದರ್ಶಿಸುವುದು ಇತ್ಯಾದಿ ಕಾರ್ಯಕ್ರಮಗಳನ್ನು ಯೋಜಿತವಾಗಿ ಕೈಗೊಂಡು ಬೃಹತ್ ಮತದಾನ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ಸಂಘಟಿಸಬೇಕು ಎಂದು ನಿರ್ದೇಶನ ನೀಡಿದರು.

ಈಗಾಗಲೇ ಸ್ವೀಪ್ ಸಮಿತಿ ವತಿಯಿಂದ ಸಾಕಷ್ಟು ಜಾಗೃತ ಕಾರ್ಯಕ್ರಮ ಕೈಗೊಂಡಿದ್ದು, ಕಳೆದ ಸಾಲಿಗಿಂತ ಹೆಚ್ಚು ಮತದಾನವಾಗುವಂತೆ ಹಾಗೂ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೇ ನೈತಿಕ ಮತದಾನ ಮಾಡಿ ಉತ್ತಮ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಪ್ರೇರೆಪಿಸುತ್ತಿದೆ. ಬೂತ್‌ ಮಟ್ಟದ ಅಧಿಕಾರಿಗಳ ತಂಡದಿಂದ ಮನೆ ಮನೆಗೆ ಭೇಟಿ ಮಾಡಿ ಜಾಗೃತಿ ಮೂಡಿಸಲಾಗಿದೆ. ತಾಲ್ಲೂಕು ಮಟ್ಟದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಮತದಾನ ಜಾಗೃತಿ ಜಾಥಾ ಮಾಡುವ ಮೂಲಕ ಅರಿವು ಮೂಡಿಸಲಾಗಿದೆ ಎಂದರು.

ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಕೈಗೊಳ್ಳುತ್ತಿರುವ ಬೃಹತ್ ಮತದಾನ ಜಾಗೃತ ಕಾರ್ಯಕ್ರಮ ಇದಾಗಿದ್ದು, ಯಾವುದೇ ನ್ಯೂನ್ಯತೆಗಳಾಗದಂತೆ ಸಾಕಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು, ಶಿಕ್ಷಕರು, ಸಾರ್ವಜನಿಕರು ಸೇರಿ ಮತದಾನದ ಜಾಗೃತಿ ಮೂಡಿಸಿ ಯಶಸ್ವಿಗೊಳಿಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಎಲ್ಲಾ ಪ್ರಾಂಶುಪಾಲರಿಗೆ ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಸಿದ್ದರಾಜು, ಸಮಿತಿಯ ಕಾರ್ಯದರ್ಶಿ ವಿನೋದ್‌ಚಂದ್ರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವಾಮರಾಜ್‌, ಹಾಸನ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ಎಲ್ಲಾ ಕಾಲೇಜಿನ ಪ್ರಾಂಶುಪಾಲರು ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸದಸ್ಯರು ಈ ಸಂದರ್ಭದಲ್ಲಿ ಇದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.