ಭಾನುವಾರ, ಮಾರ್ಚ್ 7, 2021
29 °C

‘ರಾಜಕಾರಣಿ’ ಪಾತ್ರ ಮಾಡುವುದೆಂದರೆ...

ಮಂಜುಶ್ರೀ ಎಂ. ಕಡಕೋಳ Updated:

ಅಕ್ಷರ ಗಾತ್ರ : | |

‘ರಾಜಕಾರಣಿ’ ಪಾತ್ರ ಮಾಡುವುದೆಂದರೆ...

‘ಮುಖ್ಯಮಂತ್ರಿ’ ಪಾತ್ರ ನನಗೆ ಆಕಸ್ಮಿಕವಾಗಿ ಬಂದ ಭಾಗ್ಯ. ಟಿ.ಎಸ್. ಲೋಹಿತಾಶ್ವ ಅವರು ಆ ಪಾತ್ರ ಮಾಡಬೇಕಿತ್ತು. ಅವರು ಅದನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ತಂದವರು. ಆಗಿನ್ನೂ ನಾನು 30ರ ಹುಡುಗ. ಆ ನಾಟಕದ ಭಾಷೆಯೇ ಅರ್ಥವಾಗುತ್ತಿರಲಿಲ್ಲ. ಇನ್ನೇನು ಷೋ ಮಾಡಲು ಇನ್ನೂ ಮೂರು ದಿನವಿದೆ ಎಂದಾಗ ಈ  ಪಾತ್ರ ನನ್ನ ಪಾಲಿಗೆ ಬಂತು. ಲೋಹಿತಾಶ್ವಗೆ ಟೈಫಾಯ್ಡ್ ಬಂತು. ಆಗ ಆ ನಾಟಕವನ್ನು ನಾನು ತೂಗಿಸಿಕೊಂಡು ಹೋಗ್ತೀನಿ ಅಂತ ‘ಮುಖ್ಯಮಂತ್ರಿ’ ಪಾತ್ರಕ್ಕೆ ಒಪ್ಪಿದೆ. ಆ ನಾಟಕ ಮಾಡಿ ಎರಡು ವರ್ಷಕ್ಕೇ ಶಾಸಕನಾದೆ. ಎಲ್ಲೋ ಹುಟ್ಟಿ ಬೆಳೆದ ನನಗೆ ಗೌರಿಬಿದನೂರು ಕ್ಷೇತ್ರಕ್ಕೆ ಟಿಕೆಟ್ ಕೊಟ್ಟರು. ‘ಮುಖ್ಯಮಂತ್ರಿ’ ಪಾತ್ರ ಮಾಡಿ ಎರಡೇ ವರ್ಷಕ್ಕೇ ಶಾಸಕನಾದೆ. ಆಗಿನ್ನೂ ನನಗೆ ಚಿಕ್ಕ ವಯಸ್ಸು. ಸಿನಿಮಾರಂಗದಿಂದ ಚುನಾವಣೆಗೆ ನಿಂತು ಗೆದ್ದ ಮೊದಲನೆಯವನು ನಾನು.

ಮುಂದೆ 30ರಿಂದ 45 ಸಿನಿಮಾಗಳಲ್ಲಿ ರಾಜಕಾರಣಿ ಪಾತ್ರವೇ ಸಿಕ್ಕಿತು. ಚಿಕ್ಕ ವಯಸ್ಸಿಗೇ ಶಾಸಕನಾಗಿದ್ದರಿಂದ ರಾಜಕಾರಣಿಗಳನ್ನು ತುಂಬಾ ಹತ್ತಿರದಿಂದ ನೋಡುವ ಅವಕಾಶವೂ ಸಿಕ್ಕಿತು. ಇದುವರೆಗೆ ನನ್ನ ವೃತ್ತಿ ಮತ್ತು ರಾಜಕೀಯ ಜೀವನದಲ್ಲಿ ಒಟ್ಟಾರೆ  14 ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ಈಗಂತೂ ‘ಮುಖ್ಯಮಂತ್ರಿ’ ಪಾತ್ರವನ್ನು ಅರೆದು ಕುಡಿದಂತೆ ಮಾಡ್ತೀನಿ. ಆ ಪಾತ್ರಕ್ಕೆ ದೇವರಾಜ ಅರಸು‌ ಸ್ಫೂರ್ತಿ. ಅವರನ್ನು ನೋಡಿದಾಗ ತುಂಬಾ ಖುಷಿಯಾಗುತ್ತಿತ್ತು. ಉದ್ದನೆಯ ಜುಬ್ಬಾ, ಅಜಾನುಬಾಹು ನೋಡಿದರೆ ಮಹಾರಾಜನಂತೆ ಕಾಣಿಸುತ್ತಿದ್ದರು. ಮುತ್ಸದ್ಧಿತನ, ಸಂಸ್ಕೃತಿ, ಜ್ಞಾನ ಹೀಗೆ ಎಲ್ಲವೂ ಇದ್ದಂತಹ ಅಪರೂಪದ ರಾಜಕಾರಣಿ ಅವರು.

ಮುಂದೆ ‘ಮುಖ್ಯಮಂತ್ರಿ’ ನಾಟಕ ಮಾಡುವಾಗ ಅನೇಕ ಅಂಶಗಳನ್ನು ಅದರಲ್ಲಿ ಅಳವಡಿಸಿಕೊಂಡೆ. ಬೇರೆ ಬೇರೆ ಪಕ್ಷಗಳ ಅನುಭವವೂ ನನ್ನ ಪಾತ್ರಕ್ಕೆ ಜೀವತುಂಬುವಲ್ಲಿ ಸಹಾಯವಾಯಿತು. ಈ ನಾಟಕ 700ಕ್ಕೂ ಹೆಚ್ಚು ಪ್ರಯೋಗವಾಗಿದ್ದು ದಾಖಲೆ. ಈ ನಾಟಕವನ್ನು ಬಹುತೇಕ ಎಲ್ಲಾ ಮುಖ್ಯಮಂತ್ರಿಗಳೂ ನೋಡಿದ್ದಾರೆ. ‘ಮುಖ್ಯಮಂತ್ರಿ’ ಪಾತ್ರ ಬಿಟ್ಟು ಬೇರೆಲ್ಲಾ ಪಾತ್ರಗಳು ಬದಲಾಗಿವೆ. ಆದರೆ, ನಾನು ಮಾತ್ರ ಕಾಯಂ ‘ಮುಖ್ಯಮಂತ್ರಿ’.

–‘ಮುಖ್ಯಮಂತ್ರಿ’ ಚಂದ್ರು, ನಟ ಮತ್ತು ರಾಜಕಾರಣಿ

**

ಎಲ್ಲರ ಸಮ್ಮಿಶ್ರಣ

‘ಭಾರತದಲ್ಲಿ ಕಾಣುವ ಪ್ರಸ್ತಕ ರಾಜಕಾರಣವನ್ನೇ ಗಮನ ದಲ್ಲಿಟ್ಟು ಕೊಂಡು ‘ಹಂಬಲ್ ಪೊಲಿಟಿಷಯನ್ ನೊಗರಾಜ್’ ಸಿನಿಮಾ ಮಾಡಿದ್ದೆ. ನಗರದ ಮಹಾನಗರ ಪಾಲಿಕೆ ಸದಸ್ಯನ ರಾಜಕೀಯ ಚಿತ್ರಣ ಈ ಚಿತ್ರದಲ್ಲಿದೆ. ಹಾಗಾಗಿ, ಬೆಂಗಳೂರಿನಲ್ಲೇ ಚಿತ್ರೀಕರಣ ಮಾಡಿದೆವು. ನೊಗರಾಜ್ ಪಾತ್ರವನ್ನು ಸಿನಿಮಾ ಮಾಡುವುದಕ್ಕೆ ಮುನ್ನವೇ ಫೇಸ್‌ಬುಕ್‌ನಲ್ಲಿ ಪರಿಚಯಿಸಿದ್ದೆ.

ನಿಜ ಜೀವನದಲ್ಲಿ ರಾಜಕಾರಣಿಗಳನ್ನು ಗ್ರಹಿಸಿದ್ದೆ. ಅವನ್ನು ನೊಗರಾಜ್ ಪಾತ್ರದ ಮೂಲಕ ಸೂಕ್ಷ್ಮವಾಗಿ ಹೇಳಲು ಪ್ರಯತ್ನಿಸಿದ್ದೆ. ಬರೀ ಕರ್ನಾಟಕ ರಾಜಕಾರಣವನ್ನಷ್ಟೇ ಅಲ್ಲ, ದೇಶದ ರಾಜಕಾರಣವನ್ನು ಗಮನದಲ್ಲಿಟ್ಟುಕೊಂಡಿದ್ದೆ. ಉದಾಹರಣೆಗೆ ಈ ಸಿನಿಮಾದಲ್ಲಿ ‘ನೋ ಪಾರ್ಕಿಂಗ್’ ಅನ್ನುವ ವಿಷಯ ಮಹಾರಾಷ್ಟ್ರದ್ದು. ಹೀಗೆ ಒಟ್ಟಾರೆ ಪ್ರಸಕ್ತ ವಿದ್ಯಮಾನ ಆಧರಿಸಿಯೇ ರಾಜಕಾರಣಿ ಪಾತ್ರ ತಯಾರಿ ನಡೆಸಿದ್ದೆ.

–ದಾನಿಷ್ ಶೇಟ್, ಚಿತ್ರ ನಿರ್ದೇಶಕ, ನಟ

**

ಉಮಾಶ್ರೀ, ರೇಣುಕಾ ಮಾದರಿ

‘ಕಾನೂರಾಯಣ’ದಲ್ಲಿ ಪಂಚಾಯ್ತಿ ಸದಸ್ಯೆ ಆಗಿದ್ದೆ. ಆ ಪಾತ್ರಕ್ಕೆ ತಯಾರಾಗುವ ಸ್ಕ್ರಿಪ್ಟ್  ಓದಿಕೊಂಡೇ ತಯಾರಿ ನಡೆಸಿದ್ದೆ. ‘ಗೌರಿ’ ಪಾತ್ರ ತಪ್ಪು ಮಾಡಿದ್ದರೂ ಅದನ್ನು ಸಾರ್ವಜನಿಕರ ಎದುರು ತೋರಲಾಗದು ಅಂಥ ಪಾತ್ರವದು. ಅದನ್ನು ರಾಜಕಾರಣಿಗಳು ಹೇಗೆ ನಿಭಾಯಿಸುತ್ತಾರೆ ಎಂಬುದು ಈ ಪಾತ್ರದಿಂದ ತಿಳಿಯಿತು.

ಇಡೀ ರಾಜ್ಯವನ್ನು ಆಳವುದು ನಾವು ಅಂದುಕೊಂಡಷ್ಟು ಸುಲಭವಲ್ಲ. ರಾಜಕಾರಣಿಗಳಿಗೆ ತಮ್ಮದೇ ಆದ ಒತ್ತಡದ ಜೀವನವಿರುತ್ತದೆ. ಎಲ್ಲವನ್ನೂ ಸಂಭಾಳಿಸಿಕೊಂಡು ಹೋಗಬೇಕಾಗುತ್ತದೆ. ಅದಕ್ಕಾಗಿ ಅಪಾರ ಸಾಮರ್ಥ್ಯ ಬೇಕಾಗುತ್ತದೆ. ನಾನು ಪಂಚಾಯ್ತಿ ಸದಸ್ಯೆ ಪಾತ್ರ ಮಾಡುವಾಗ ಇದೆಲ್ಲಾ ನೆನಪಿಗೆ ಬಂತು. ಮಾದರಿ ಅಂತ ಹೇಳುವುದಾದರೆ ನಟಿ ಉಮಾಶ್ರೀ ಮತ್ತು ರಾಜಕಾರಣಿ ರೇಣುಕಾ ಚೌಧರಿ ನನಗೆ ಇಷ್ಟವಾಗುತ್ತಾರೆ. ಸಮಸ್ಯೆಯೊಂದನ್ನು ಗಂಭೀರವಾಗಿ ಹೇಗೆ ಎದುರಿಸುವುದು ಎಂಬುದನ್ನು ಅವರನ್ನು ನೋಡಿ ತಿಳಿಯಬಹುದು.

–ಸೋನು ಗೌಡ, ನಟಿ

**

ಈ ಪಾತ್ರಕ್ಕೆ ಸಿದ್ಧತೆ ಬೇಕಿಲ್ಲ!

‘ನನ್ನ ಪ್ರಕಾರ, ರಾಜಕಾರಣಿ ಪಾತ್ರ ಮಾಡಲು ಸಿದ್ಧತೆ ಬೇಕಿಲ್ಲ. ಅವನು ಒಳ್ಳೆಯ ರಾಜಕಾರಣಿಯೋ ಅಥವಾ ಕೆಟ್ಟ ರಾಜಕಾರಣಿಯೋ ಅಂತ ಗೊತ್ತಿರಬೇಕಷ್ಟೆ. ಸಾಮಾನ್ಯವಾಗಿ ಕೆಟ್ಟ ರಾಜಕಾರಣಿಯೇ ಆಗಿರುತ್ತಾನೆ. ಒಳ್ಳೆಯ ರಾಜಕಾರಣಿಯ ಪಾತ್ರ ಕೆಲವೇ ಕೆಲವು. ಉದಾರಹಣೆಗೆ ‘ಕರ್ಫ್ಯೂ’ ಸಿನಿಮಾದಲ್ಲಿ ನಾನು ಒಳ್ಳೆಯ ರಾಜಕಾರಣಿ ಪಾತ್ರ ಮಾಡಿದ್ದೀನಿ. ಉಳಿದಂತೆ ಕೆಟ್ಟ ರಾಜಕಾರಣಿಯ ಪಾತ್ರವೇ ಹೆಚ್ಚು ಮಾಡಿದ್ದೇನೆ. ಒಳ್ಳೆಯ ಮತ್ತು ಕೆಟ್ಟ ರಾಜಕಾರಣಿಯ ನಡುವಿನ ವ್ಯತ್ಯಾಸ ಗೊತ್ತಾದರೆ ಸಾಕು. ನಮ್ಮ ಮನೆಪಕ್ಕದಿಂದ ಹಿಡಿದು ದೆಹಲಿ ತನಕ ರಾಜಕಾರಣಿಗಳನ್ನು ನೋಡಿರುತ್ತೇವಲ್ಲ. ಆಯಾ ಲೆವೆಲ್‌ಗೆ ಸರಿಯಾಗಿ ಫಿಕ್ಸ್ ಮಾಡಿಕೊಂಡು ಅಭಿಯಿಸುತ್ತೇನೆ ಅಷ್ಟೇ.

ನಮ್ಮ ಸಂಭಾಷಣೆ ಆಧಾರದಲ್ಲಿ ಆಯಾ ರಾಜಕಾರಣಿಯ ಕಲ್ಪನೆ ಕಣ್ಣೆದುರಿಗೇ ಬಂದಿರುತ್ತದೆ. ಕೆಲವೊಮ್ಮೆ ಪಾತ್ರಕ್ಕಾಗಿ ಎರಡು ಮೂರು ರಾಜಕಾರಣಿಗಳನ್ನು ಅನುಕರಿಸಿರುತ್ತೇನೆ. ಹೆಚ್ಚಿನ ಪ್ರಯತ್ನ ಮಾಡಬೇಕಿಲ್ಲ.

ಒಳ್ಳೆಯ ರಾಜಕಾರಣಿಗಳ ವಿಷಯ ಬಂದಾಗ ನಿಜಲಿಂಗಪ್ಪ, ಜೆ.ಎಚ್. ಪಟೇಲ್ ನೆನಪಾಗುತ್ತಾರೆ. ಪಟೇಲ್ ರಸಿಕ ರಾಜಕಾರಣಿ. ಯಾವುದೋ ಗಂಭೀರ ವಿಷಯ ಎದುರಾದಾಗಲೂ ಅದನ್ನು ಹಾಸ್ಯ ಚಟಾಕಿಯಿಂದಲೇ ತಿಳಿಗೊಳಿಸುತ್ತಿದ್ದರು. ನಟನೆಗೆ ಬೇಕಾಗಿರೋದು ಗ್ರಹಿಕೆ. ಗ್ರಹಿಕೆ ಇದ್ದಾಗ ಆ ನಟ ತನ್ನ ಪಾತ್ರವನ್ನು ಅಭಿನಯಿಸಲು ಕಷ್ಟಪಡಬೇಕಿಲ್ಲ. ಆ ಪಾತ್ರವೇ ನಾವಾಗಬಹುದು. ಯಾವುದೇ ನಿರ್ದಿಷ್ಟ ರಾಜಕಾರಣಿಯನ್ನು ಅನುಕರಿಸಲಾಗದು.

–ದತ್ತಣ್ಣ, ಹಿರಿಯ ನಟ

**

ಜನಪ್ರಿಯರ ಪ್ರಭಾವ

ಜನಪ್ರಿಯವಾಗಿರುವ ರಾಜಕಾರಣಿ ಪ್ರಭಾವ ಬೀರುತ್ತಾನೆ. ರಾಜಕಾರಣಿ ಪಾತ್ರ ಮಾಡುವಾಗ ಅವರ ಕ್ಯಾರಿಕೇಚರ್ ಅನ್ನು ಮನದಲ್ಲಿ ರೂಪಿಸಿಕೊಳ್ಳುತ್ತೇವೆ. ಒಳ್ಳೆಯ ರಾಜಕಾರಣಿಯನ್ನು ಸಿನಿಮಾದಲ್ಲಿ ತೋರಿಸುವುದು ನಿಜಕ್ಕೂ ಕಷ್ಟ. ರಾಜಕಾರಣದಲ್ಲಿ ನನಗೆ ತುಂಬಾ ವಿಶೇಷ ಅನಿಸಿದ್ದು ರಾಮಕೃಷ್ಣ ಹೆಗಡೆ, ದೇವೇಗೌಡ ಮತ್ತು ಜೆ.ಎಚ್. ಪಟೇಲ್.

ನನಗೆ ರಾಜಕಾರಣಿ ಪಾತ್ರದಲ್ಲಿ ತುಂಬಾ ಹೆಸರು ತಂದುಕೊಟ್ಟಿದ್ದು ‘ಪ್ರಜೆಗಳು ಪ್ರಭುಗಳು’ಸಿನಿಮಾ. ಇದರಲ್ಲಿ ನನ್ನದು ಕೆಟ್ಟ ರಾಜಕಾರಣಿಯ ಪಾತ್ರ. ಪುಢಾರಿಯೊಬ್ಬ ಮಂತ್ರಿ, ಮುಖ್ಯಮಂತ್ರಿಯಾಗುವ ಪಾತ್ರವದು. ಬೆಣ್ಣೆ ಹಚ್ಚುತ್ತಲೇ ಅವನು ಉನ್ನತ ಹುದ್ದೆಗೇರುವ ದೃಶ್ಯಗಳು ಅಲ್ಲಿವೆ. ಆತ ಸಜ್ಜನನಾಗಿದ್ದರೆ ಅವನು ಮುಖ್ಯಮಂತ್ರಿಯ ಸ್ಥಾನಕ್ಕೆ ಏರಲಾಗುತ್ತಿರಲಿಲ್ಲ. ಹಣ ಬಲ, ಜಾತಿ ಬಲದಿಂದ ಹೇಗೆ ವ್ಯಕ್ತಿಯೊಬ್ಬ ರಾಜಕಾರಣದಲ್ಲಿ ಮೇಲೇರುತ್ತಾನೆ ಎಂಬುದನ್ನು ಈ ಸಿನಿಮಾ ಸೊಗಸಾಗಿ ತೋರುತ್ತದೆ. ಈ ಚಿತ್ರಕ್ಕೆ ರಾಜ್ಯಪ್ರಶಸ್ತಿಯೂ ಬಂತು.

–ಸುಂದರರಾಜ್, ನಟ

**

ಪ್ರತಿ ಪಾತ್ರವೂ ಬೇರೆ

ಒಬ್ಬರೇ ರೋಲ್ ಮಾಡೆಲ್ ಆಗಲು ಸಾಧ್ಯವಿಲ್ಲ. ಆಯಾ ಪಾತ್ರಕ್ಕೆ ಹೊಂದಾಣಿಕೆಯಾಗುವಂಥವರು ಇದ್ದರೆ ಅವರನ್ನೇ ಮನದಲ್ಲಿಟ್ಟುಕೊಂಡು ರಾಜಕಾರಣಿ ಪಾತ್ರ ಮಾಡ್ತೀವಿ. ದಿನನಿತ್ಯವೂ ಪತ್ರಿಕೆಗಳು, ಟಿ.ವಿ.ಗಳಲ್ಲಿ ರಾಜಕಾರಣಿಗಳನ್ನು ನೋಡುತ್ತಲೇ ಇರ್ತೀವಿ. ಕೆಟ್ಟ ರಾಜಕಾರಣಿಗಳಿಂತ ಒಳ್ಳೆಯ ಮೌಲ್ಯಗಳನ್ನು ಇಟ್ಟುಕೊಂಡವರು ಸದಾ ನೆನಪಿನಲ್ಲಿ ಉಳಿಯುತ್ತಾರೆ. ವೃತ್ತಿ ಜೀವನದಲ್ಲಿ ಅಭಿನಯಕ್ಕಾಗಿ ನನ್ನ ಮನದ ಮೇಲೆ ಪ್ರಭಾವ ಬೀರಿದ ರಾಜಕಾರಣಿಗಳೇ ಬೇರೆ. ಒಳ್ಳೆಯ ಮೌಲ್ಯಕ್ಕಾಗಿ ಮನದಲ್ಲಿ ನೆಲೆ ನಿಂತ ರಾಜಕಾರಣಿಗಳೇ ಬೇರೆ.

‘ಭರತ್ ಆನೇ ನೇನು’ ಸಿನಿಮಾಕ್ಕಾಗಿ ನಾನು ಅಂದಿನ ಆಂಧ್ರದಲ್ಲಿನ ನಾಯಕರನ್ನು ಗಮನದಲ್ಲಿಟ್ಟುಕೊಂಡು ಅಭಿನಯಿಸಿದ್ದೇನೆ. ಆಗ ಅಲ್ಲಿ ಒಬ್ಬ ಯುವ ಮುಖ್ಯಮಂತ್ರಿ ಇದ್ದರು. ಆಗ ವಿರೋಧಪಕ್ಷದ ನಾಯಕರಾಗಿದ್ದವರನ್ನೇ ಗಮನದಲ್ಲಿಟ್ಟುಕೊಂಡು ನಾನು ಆ ಪಾತ್ರ ಮಾಡಿದ್ದೇನೆ. ಅದಕ್ಕಾಗಿ ಯೂಟ್ಯೂಬ್ ನಲ್ಲಿ ಕ್ಲಿಪ್‌ಗಳನ್ನು ನೋಡಿದ್ದೇನೆ. ಭಾಷಣಗಳನ್ನು ಕೇಳಿದ್ದೇನೆ. ಸಿನಿಮಾದಲ್ಲಿ ಕೆಟ್ಟ ರಾಜಕಾರಣಿ ಪಾತ್ರ ಸಿಕ್ಕಾಗ ಅದನ್ನು ನಟನಾಗಿ ಮಾತ್ರವೇ ನೋಡುತ್ತೇನೆ. ವೈಯಕ್ತಿಕವಾಗಿ ಅಲ್ಲ.

–ದೇವರಾಜ್, ನಟ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.