ಶನಿವಾರ, ಫೆಬ್ರವರಿ 27, 2021
28 °C

ಇ-ವೇ ಬಿಲ್: ತೆರಿಗೆ ವಂಚನೆಗೆ ತಡೆ

ಹಜರತಅಲಿ ಇ ದೇಗಿನಾಳ Updated:

ಅಕ್ಷರ ಗಾತ್ರ : | |

ಇ-ವೇ ಬಿಲ್: ತೆರಿಗೆ ವಂಚನೆಗೆ ತಡೆ

ವ್ಯಾಪಾರದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸರಕುಗಳ ಸಾಗಣೆ ಒಂದು ಮುಖ್ಯವಾದ ಭಾಗವಾಗಿರುತ್ತದೆ. ಪರೋಕ್ಷ ತೆರಿಗೆ ಸಂಗ್ರಹ ವ್ಯವಸ್ಥೆಯ ಜೀವಾಳವಾಗಿರುವ ಇದನ್ನು ಶಿಸ್ತುಬದ್ಧಗೊಳಿಸದಿದ್ದರೆ ತೆರಿಗೆ ಸಂಗ್ರಹಣೆಯಲ್ಲಿ ವ್ಯತಿರಿಕ್ತ ಪರಿಣಾಮಗಳಾಗುವ ಸಂಭವ ಇರುತ್ತದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾಯ್ದೆ ಜಾರಿಯಾಗಿ ಒಂಬತ್ತು ತಿಂಗಳ ನಂತರ ಮತ್ತೊಂದು ಪ್ರಮುಖ ಹೆಜ್ಜೆಯಾಗಿ ಏಪ್ರಿಲ್‌ ತಿಂಗಳಿನಿಂದ ಇ-ವೇ ಬಿಲ್ ಜಾರಿಯಾಗಿದೆ.

ಅಂತರರಾಜ್ಯ ಸರಕು ಸಾಗಣೆಗೆ ದೇಶವ್ಯಾಪಿಯಾಗಿ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಏಕಕಾಲದಲ್ಲಿ  ಇದರ ಜಾರಿಗೆ ಕಡ್ಡಾಯ ಮಾಡಲಾಗಿದೆ. ಸೂಕ್ತ ತಂತ್ರಜ್ಞಾನ ಸೌಲಭ್ಯ ಮಾಡಿಕೊಳ್ಳುವ ಉದ್ದೇಶದಿಂದ ರಾಜ್ಯದೊಳಗಿನ ಸ್ಥಳೀಯ ಸರಕು ಸಾಗಣೆಗೆ ಇದನ್ನು ಕಡ್ಡಾಯ ಮಾಡಲು ಕೆಲವು ರಾಜ್ಯಗಳಿಗೆ ಸಮಯಾವಕಾಶ ನೀಡಲಾಗಿದೆ.

ಆಡಳಿತದಲ್ಲಿ ‘ಇ- ಸೌಲಭ್ಯ’ಗಳನ್ನು ಬಳಸಿಕೊಳ್ಳುವಲ್ಲಿ ಇಡೀ ದೇಶದಲ್ಲಿಯೇ ಮುಂದಿರುವ ಕರ್ನಾಟಕದಲ್ಲಿ   ಅಂತರರಾಜ್ಯ ಮತ್ತು ಸ್ಥಳೀಯ-ಎರಡೂ ರೀತಿಯ ಸರಕು ಸಾಗಣೆಗೆ ಇ-ವೇ ಬಿಲ್‌ ಕಡ್ಡಾಯ ಮಾಡಲಾಗಿದೆ. ಇನ್ನೂ ಕೆಲವು ರಾಜ್ಯಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರುವುದು ಇನ್ನೂ ಬಾಕಿ ಇದೆ. ಇಲ್ಲಿಯವರೆಗೆ ಸುಮಾರು 1.5 ಕೋಟಿಯಷ್ಟು ಬೃಹತ್ ಪ್ರಮಾಣದಲ್ಲಿ ವರ್ತಕರು ಇ-ವೇ ಬಿಲ್ ಜನರೇಟ್‌ ಮಾಡಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತರಾಗಿ ಇಲಾಖೆಗೆ ಕಾಯಕಲ್ಪ ಒದಗಿಸಿದ್ದ ಪ್ರದೀಪಸಿಂಗ್‌ ಖರೋಲಾ ಅವರು ಕರ್ನಾಟಕ ರಾಜ್ಯದೊಳಗಿನ ಸರಕು ಸಾಗಣೆಯನ್ನು ಗಣಕೀಕರಣಗೊಳಿಸುವ ದಿಸೆಯಲ್ಲಿ 2010 ರಲ್ಲಿಯೇ ‘ಇ-ಸುಗಮ’ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು. ಇದರಿಂದ ರಾಜ್ಯದ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಸಂಗ್ರಹದಲ್ಲಿ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಳ ದಾಖಲಾಗಿತ್ತು. ಕಳ್ಳ ಮಾರ್ಗದಲ್ಲಿ ಸರಕು ಸಾಗಿಸಿ ಲಾಭ ಮಾಡಿಕೊಳ್ಳುತ್ತಿದ್ದ ವ್ಯವಸ್ಥಿತ ಜಾಲಕ್ಕೆ ಒಂದು ಹಂತದವರೆಗೆ ‘ಇ-ಸುಗಮ’ದ ಕಾರಣಕ್ಕೆ ಕಡಿವಾಣ ಬಿದ್ದಿತ್ತು. ಇದನ್ನು ಗಮನಿಸಿದ ಕೇಂದ್ರ ಸರಕಾರ ‘ಇ-ಸುಗಮ’ದ ಇ-ಆಡಳಿತ ಉಪಕ್ರಮಕ್ಕೆ ರಾಷ್ಟ್ರಮಟ್ಟದ ಪ್ರಶಸ್ತಿ ನೀಡಿ ಗೌರವಿಸಿತ್ತು. ಈ ‘ಇ-ಸುಗಮ’ದ ಹೊಸರೂಪವೇ ಇ-ವೇ ಬಿಲ್ ಆಗಿದೆ.

ಏನಿದು ಇ-ವೇ ಬಿಲ್?

Electronic Way Bill- ವ್ಯವಸ್ಥೆಯು ಒಂದು ರೀತಿಯಲ್ಲಿ ದೇಶದಾದ್ಯಂತ ಸರಕು ಸಾಗಣೆಗೆ ಕಡ್ಡಾಯ ಮಾಡಲಾಗಿರುವ ವಿದ್ಯುನ್ಮಾನ ರಹದಾರಿ ಪತ್ರವಾಗಿದೆ. ಸರಕುಗಳ ಸಾಗಣೆ ವಿವರಗಳನ್ನು ಗಣಕೀಕರಣಗೊಳಿಸುವ ಮೂಲಕ ತೆರಿಗೆ ವಂಚನೆ ತಡೆಯುವ ಉದ್ದೇಶದಿಂದ ಇದನ್ನು ಜಾರಿಗೊಳಿಸಲಾಗಿದೆ.

₹ 50 ಸಾವಿರಕ್ಕಿಂತ ಹೆಚ್ಚಿನ ಸರಕುಗಳ ಸಾಗಣೆಯ ಸಮಯದಲ್ಲಿ ಜಿಎಸ್‌ಟಿ ಅಂತರ್ಜಾಲ ತಾಣದಲ್ಲಿ ವಿವರಗಳನ್ನು ವಿದ್ಯುನ್ಮಾನ ಕ್ರಮದಲ್ಲಿ ದಾಖಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸರಕು ಮತ್ತು ಸೇವಾ ತೆರಿಗೆ ನಿಯಮಗಳ ಅಧ್ಯಾಯ 16 ರ ನಿಯಮ 138 ಹಾಗೂ 138(ಎ,ಬಿ, ಸಿ, ಡಿ) ಇ-ವೇ ಬಿಲ್‌ ಕುರಿತು ಮಾಹಿತಿ ನೀಡಲಾಗಿದೆ. www.ewaybill.gst.gov.in ವಿಳಾಸದ ಜಾಲತಾಣದಲ್ಲಿ ಇದನ್ನು ಪಡೆಯಬಹುದು. ಮಾರ್ಗದರ್ಶನಕ್ಕಾಗಿ ಬಳಕೆದಾರರ ಕೈಪಿಡಿ ಇತ್ಯಾದಿ ಮಾಹಿತಿ ಇಲ್ಲಿ ಲಭ್ಯ ಇದೆ.

ಮೂರು ವಿಧದ ಸಾಗಾಣಿಕೆ

ಸರಕು ಸಾಗಣೆಯು ಈ ಕೆಳಗಿನಂತೆ ಮೂರು ವಿಧದಲ್ಲಿ ನಡೆಯುತ್ತಿದೆ.

1. ಪೂರೈಕೆಗೆ (ಖರೀದಿ ಅಥವಾ ಮಾರಾಟ) ಸಂಬಂಧಿಸಿದ ಸರಕು ಸಾಗಣೆ

2. ಪೂರೈಕೆಯಲ್ಲದ ಸಾಗಣೆ

3. ನೋಂದಾವಣೆಗೊಂಡಿಲ್ಲದ ವರ್ತಕರಿಂದ ಒಳಮುಖ ಪೂರೈಕೆ (ಖರೀದಿ) ಸಂದರ್ಭದಲ್ಲಿ ಸರಕು ಸಾಗಣೆ

ಈ ಮೇಲಿನ ಮೂರು ಸಂದರ್ಭಗಳಲ್ಲಿ ಸರಕುಗಳನ್ನು ದೇಶದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಬೇಕಾದಾಗ ಹಾಗೆ ರವಾನೆಯಾಗುವ ಸರಕುಗಳ ಮೌಲ್ಯ ₹ 50 ಸಾವಿರ ಮೀರಿದರೆ ಸರಕು ರವಾನೆ ಪೂರ್ವದಲ್ಲಿ ಇ-ವೇ ಬಿಲ್ ಪಡೆಯುವುದು ಕಡ್ಡಾಯ.

ಇ-ವೇ ಬಿಲ್ ನಮೂನೆ

ಅಂತರ್ಜಾಲ ತಾಣದಲ್ಲಿ ವಿದ್ಯುನ್ಮಾನ ರೂಪದಲ್ಲಿ ಲಭ್ಯವಿರುವ ಇ-ವೇ ಬಿಲ್‌ನ ನಮೂನೆ ಜಿಎಸ್‌ಟಿ ಇಡಬ್ಲುಬಿ-01 ರಲ್ಲಿ ಎ ಮತ್ತು ಬಿ ಎಂದು ಎರಡು ಭಾಗಗಳಿವೆ. ‘ಭಾಗ-ಎ’ದಲ್ಲಿ ಸಾಗಿಸಲಾಗುತ್ತಿರುವ ಸರಕುಗಳ ವಿವರ, ಪ್ರಮಾಣ, ಮೌಲ್ಯ, ಎಲ್ಲಿಂದ ಎಲ್ಲಿಗೆ ಹೊರಟಿವೆ-ಇತ್ಯಾದಿ ವಿವರಗಳಿದ್ದು ಇದನ್ನು ಅಂಗಡಿಯಿಂದ ಸರಕುಗಳ ಸಾಗಣೆ ಪ್ರಾರಂಭವಾಗುವ ಮೊದಲು ಭರ್ತಿ ಮಾಡಬೇಕು.

‘ಭಾಗ-ಬಿ’ಯಲ್ಲಿ ವಾಹನದ ಸಂಖ್ಯೆ ಇತ್ಯಾದಿ ಸಾಗಣೆ ವಾಹನಕ್ಕೆ ಸಂಬಂಧಿಸಿದ ವಿವರಗಳಿರುತ್ತವೆ. ಒಂದು ವೇಳೆ ಸರಕುಗಳನ್ನು ಸಾಗಿಸುವ ವಾಹನ ಪೂರ್ವ ನಿರ್ಧರಿತವಾಗಿದ್ದರೆ ‘ಭಾಗ-ಬಿ ಯನ್ನೂ ಭರ್ತಿ ಮಾಡಬೇಕು.   ಸಾಗಣೆದಾರನ (ಟ್ರಾನ್ಸಪೋರ್ಟ್‌ರ್‌) ಕಂಪನಿವರೆಗೆ ಸರಕುಗಳನ್ನು ಸಾಗಿಸಿ ಅಲ್ಲಿಂದ ಸಾಗಣೆದಾರ ವಾಹನವನ್ನು ನಿರ್ಧರಿಸುತ್ತಿದ್ದರೆ ಮಾತ್ರ ಹಾಗೆ ವಾಹನ ನಿರ್ಧರಿಸಿದ ನಂತರ ರವಾನೆಯಾಗುವ ಮೊದಲು ಇ-ವೇ ಬಿಲ್ಲಿನ ಭಾಗ-ಬಿ ಯನ್ನು ಭರ್ತಿ ಮಾಡಬೇಕು.

ಇ-ವೇ ಬಿಲ್ ಭರ್ತಿ ಮಾಡಿ ಸಲ್ಲಿಸಿದರೆ  EBN (ಇ-ವೇ ಬಿಲ್ ನಂಬರ್‌) ಜನರೇಟ್‌ ಆಗುತ್ತದೆ. ಬೇಕೆಂದರೆ ಇ-ವೇ ಬಿಲ್ ಮುದ್ರಿತ ಪ್ರತಿಯನ್ನೂ ಪಡೆಯಬಹುದು. ಇದು ಸರಕು ಸಾಗಣೆ ವಾಹನದ ಪ್ರಭಾರ ವ್ಯಕ್ತಿಯ ಬಳಿ ಇದ್ದು ಜಿಎಸ್‌ಟಿ ಅಧಿಕಾರಿಗಳು ವಾಹನ ತಡೆದು ಪರೀಶಿಲನೆಗಾಗಿ ಕೇಳಿದರೆ ಇದನ್ನು ತೋರಿಸಬೇಕಾಗುತ್ತದೆ. ಇಲ್ಲವಾದರೆ ನಿಗದಿಪಡಿಸಿದ ದಂಡಕ್ಕೆ ಗುರಿಯಾಗಬೇಕಾಗುತ್ತದೆ.

ಸಾಗಣೆದಾರನ ಜವಾಬ್ದಾರಿ

ಒಂದು ವೇಳೆ ಸರಕುಗಳ ಮಾರಾಟಗಾರ ಅಥವಾ ಖರೀದಾರರಿಬ್ಬರೂ ಇ-ವೇ ಬಿಲ್ ಜನರೇಟ್‌ ಮಾಡದೇ ಇದ್ದಾಗ ಸರಕುಗಳ ಮೌಲ್ಯ ₹ 50 ಸಾವಿರ ಮಿಕ್ಕಿದ್ದರೆ ಆ ಸಾಗಣೆ ಅಂತರರಾಜ್ಯ ಕ್ರಮದಲ್ಲಿದ್ದರೆ ಸಾಗಣೆದಾರನೆ ಇ-ವೇ ಬಿಲ್ ಅನ್ನು ಜನರೇಟ್‌ ಮಾಡಬೇಕಾಗುತ್ತದೆ. ಇದರ ಜೊತೆಗೆ ಈಗಾಗಲೇ ಇ-ವೇ ಬಿಲ್ ಜನರೇಟಾಗಿ ಬಂದ ಬೇರೆ ಬೇರೆ ಮಾಲೀಕರ ಸರಕುಗಳೆಲ್ಲವನ್ನು ಕೂಡಿಸಿ ಒಂದು ಕ್ರೊಡೀಕೃತ ಇ-ವೇ ಬಿಲ್ ಅನ್ನು ಸಾಗಣೆದಾರ ಜನರೇಟ್‌ ಮಾಡಬಹುದು. ಆದರೆ, ಇದು ಕಡ್ಡಾಯವಲ್ಲ.

ರೈಲು ಮೂಲಕ ಸರಕು ಸಾಗಣೆ

ರೈಲಿನ ಮೂಲಕ ಸರಕು ಸಾಗಿಸುವುದಾದರೆ ಸಾಗಣೆಗೆ ಮೊದಲು ಅಥವಾ ಸಾಗಣೆ ಪ್ರಾರಂಭವಾದ ನಂತರ ಇ-ವೇ ಬಿಲ್‌ನ ಭಾಗ-ಬಿ ಯನ್ನು ಭರ್ತಿ ಮಾಡಬೇಕು. (ವ್ಯಾಪಾರ ಸ್ಥಳದಿಂದ ಸರಕುಗಳು ಹೊರಡುವಾಗ ಈಗಾಗಲೇ ಇ-ವೇ ಬಿಲ್ಲಿನ ಭಾಗ-ಎ ಭರ್ತಿಯಾಗಿರುತ್ತದೆ) ಇಲ್ಲವಾದರೆ ರೈಲ್ವೆಯಿಂದ ಸರಕುಗಳನ್ನು  ಕೊಡುವಾಗ ರೈಲ್ವೆ ಆಡಳಿತವು ಸರಕುಗಳಿಗೆ ಸಂಬಂಧಿಸಿದ ಇ-ವೇ ಬಿಲ್ ಜನರೇಟ್‌ ಮಾಡಿದ ನಂತರವೇ ಕೊಡಬೇಕಾಗುತ್ತದೆ.

ಜಿಎಸ್‌ಟಿಆರ್-1 ಸಂಬಂಧ

ಇ-ವೇ ಬಿಲ್ ನಮೂನೆ ಜಿಎಸ್‌ಟಿ ಇಡಬ್ಲ್ಯುಬಿ-01 ರ ಭಾಗ-ಎ ದಲ್ಲಿ ದಾಖಲಿಸಿದ ಮಾಹಿತಿಯು ಅಂತರ್ಜಾಲ ತಾಣದಲ್ಲಿ ಲಭ್ಯವಿದ್ದು ಅದನ್ನು ನೋಂದಾಯಿತ ವ್ಯಕ್ತಿಯು ಜಿಎಸ್‌ಟಿಆರ್-1 ಸಲ್ಲಿಸುವಾಗ ಬಳಸಿಕೊಳ್ಳಬಹುದು. ಹೊಸದಾಗಿ ಮತ್ತೆ ಇ-ವೇ ಬಿಲ್‌ನಲ್ಲಿ ದಾಖಲಿಸಿದ ಹೊರಹೋಗುವ ಪೂರೈಕೆ ವಿವರಗಳನ್ನು ದಾಖಲಿಸುವ ಅವಶ್ಯಕತೆ ಇರುವುದಿಲ್ಲ.

ಇ-ವೇ ಬಿಲ್‌ನಲ್ಲಿ ನಮೂದಿಸಿದ ದೂರವನ್ನು ಸರಕು ಸಾಗಣೆ ವಾಹನವು ನಿಗದಿಪಡಿಸಿದ ಕಾಲಾವಧಿಯಲ್ಲಿ ಸೇರಬೇಕಾದ ಗಮ್ಯಸ್ಥಾನವನ್ನು ಸೇರಬೇಕು. ಇಲ್ಲವಾದರೆ ಆ ಇ-ವೇ ಬಿಲ್ ಅಸಿಂಧುಗೊಳ್ಳುತ್ತದೆ. ದಂಡಕ್ಕೂ ಕಾರಣ

ವಾಗುತ್ತದೆ. ನೈಸರ್ಗಿಕ ಕಾರಣವನ್ನೊಳಗೊಂಡು ಯಾವುದೇ ಅಡತಡೆಗಳಿಂದ ಸಿಂಧುವಾದ ಅವಧಿಯಲ್ಲಿ ಸರಕು ಸಾಗಣೆ ಮುಕ್ತಾಯವಾಗದಿದ್ದರೆ ಸಾಗಣೆದಾರನು ‘ಭಾಗ-ಬಿ’ಯಲ್ಲಿ ಈಗಾಗಲೇ ದಾಖಲಿಸಿದ ಮಾಹಿತಿಯನ್ನು ಪರಿಷ್ಕರಿಸುವ ಮೂಲಕ ಕಾಲಾವಧಿಯನ್ನು ವಿಸ್ತರಿಸಿಕೊಳ್ಳಬಹುದು. ಆಗ ಇ-ವೇ ಬಿಲ್ ಅಸಿಂಧುಗೊಳ್ಳುವ ಪ್ರಮೇಯ ಬರುವುದಿಲ್ಲ.

ಇ-ವೇ ಬಿಲ್‌ನ ಸ್ವೀಕಾರ / ತಿರಸ್ಕಾರ

ಜನರೇಟ್‌ ಮಾಡಲಾದ ಪ್ರತಿಯೊಂದು ಇ-ವೇ ಬಿಲ್ ನ ಮಾಹಿತಿಯು ಪೂರೈಕೆದಾರ (ಮಾರಾಟಗಾರ), ಸ್ವೀಕೃತಿದಾರ (ಖರೀದಿದಾರ) ಹಾಗೂ ಸಾಗಣೆದಾರನಿಗೆ ಅಂತರ್ಜಾಲ ತಾಣದಲ್ಲಿ ಲಭ್ಯ ಇರುತ್ತದೆ. ಇ-ವೇ ಬಿಲ್ ತಮ್ಮ ಸರಕು ರವಾನೆಗೆ ಸಂಬಂಧಿಸಿಲ್ಲದಿದ್ದರೆ ನಿಗದಿಪಡಿಸಿದ 72 ಗಂಟೆಗಳಲ್ಲಿ ಅಥವಾ ಸರಕುಗಳ ಡೆಲಿವರಿ ಇವುಗಳಲ್ಲಿ ಯಾವುದು ಮೊದಲೊ ಆ ಅವಧಿಯಲ್ಲಿ ಇ-ವೇ ಬಿಲ್ ತಿರಸ್ಕರಿಸಬೇಕು. ಇಲ್ಲವಾದರೆ ಇ-ವೇ ಬಿಲ್‌ಗೆ ಒಪ್ಪಿಗೆ ನೀಡಲಾಗಿದೆಯೆಂದು ಭಾವಿಸಲಾಗುತ್ತದೆ. ಒಬ್ಬರ ಹೆಸರಿನಿಂದ ಮತ್ತೊಬ್ಬರು ಮೋಸದಿಂದ ಇ-ವೇ ಬಿಲ್ ಜನರೇಟ್‌ ಮಾಡಿ ದುರುಪಯೋಗ ಮಾಡಿಕೊಳ್ಳುವುದನ್ನು ತಡೆಯಲು ಈ ವ್ಯವಸ್ಥೆ ಅಳವಡಿಸಲಾಗಿದೆ.

ಇ-ವೇ ಬಿಲ್ ರದ್ದತಿ

ಇ-ವೇ ಬಿಲ್ ಅನ್ನು ಒಮ್ಮೆ ಜನರೇಟ್‌ ಮಾಡಿದ ನಂತರ ಸರಕುಗಳು ರವಾನೆಯಾಗದಿದ್ದರೆ ಅಥವಾ  ಭರ್ತಿ ಮಾಡಿದ ವಿವರಗಳ ಅನುಸಾರ ಸರಕುಗಳು ರವಾನೆಯಾಗದಿದ್ದರೆ ಇ-ವೇ ಬಿಲ್ ಜನರೇಟ್‌ ಮಾಡಿದ 24 ಗಂಟೆಗಳಲ್ಲಿ ರದ್ದುಗೊಳಿಸಬಹುದು. ಒಂದು ವೇಳೆ ನಿಯಮ 138 (ಬಿ) ಪ್ರಕಾರ ಇ-ವೇ ಬಿಲ್ ಜಿಎಸ್‌ಟಿ ಅಧಿಕಾರಿಗಳ ಪರಿಶೀಲನೆಗೆ ಒಳಪಟ್ಟರೆ ಅದನ್ನು ರದ್ದುಗೊಳಿಸಲು ಸಾಧ್ಯವಿಲ್ಲ.

ಕಡ್ಡಾಯವಲ್ಲದ ಸಾಗಣೆಗಳು

ಈ ಕೆಳಗಿನ ಸರಕುಗಳ ಸಾಗಣೆ ಸಮಯದಲ್ಲಿ ಇ-ವೇ ಬಿಲ್ ಜನರೇಟ್‌ ಮಾಡುವ ಅವಶ್ಯಕತೆ ಇಲ್ಲ.

1. ಗ್ರಾಹಕರಿಗೆ ವಿತರಿಸಲು ಸಾಗಿಸಲಾಗುತ್ತಿರುವ ಅಡುಗೆ ಅನಿಲ, ಪಡಿತರದಲ್ಲಿ ವಿತರಿಸಲಾಗುವ ಚಿಮಣಿಎಣ್ಣೆ, ಅಂಚೆ ಇಲಾಖೆಯಿಂದ ಸಾಗಣೆಯಾಗುವ ಅಂಚೆ ಚೀಲಗಳು, ಮುತ್ತು ರತ್ನ, ಹವಳಗಳು, ಬೆಲೆಬಾಳುವ ಹರಳುಗಳು, ಬೆಳ್ಳಿ ಬಂಗಾರದ ಗಟ್ಟಿಗಳು ಮತ್ತು ಆಭರಣಗಳು, ಕರೆನ್ಸಿ, ಸ್ವಂತಕ್ಕೆ ಬಳಸಲಾಗುವ ಸರಕುಗಳ ಸಾಗಣೆ

2. ಯಾಂತ್ರಿಕವಲ್ಲದ ವಾಹನಗಳಲ್ಲಿ ಸರಕು ಸಾಗಣೆ

3. ಜಿಎಸ್‌ಟಿ ವ್ಯಾಪ್ತಿಯಲ್ಲಿ ಇಲ್ಲದ ಮದ್ಯ, ಪೆಟ್ರೋಲ್‌, ಡೀಸೆಲ್‌, ಕಚ್ಚಾತೈಲ, ನೈಸರ್ಗಿಕ ಅನಿಲ, ವೈಮಾನಿಕ ಇಂಧನದ ಸಾಗಣೆ

4. ರಕ್ಷಣಾ ಇಲಾಖೆ ಸಾಗಿಸುವ ರಕ್ಷಣಾ ಉಪಕರಣಗಳು5. ಬಂದರು, ವಿಮಾನ ನಿಲ್ದಾಣ, ಏರ್ ಕಾರ್ಗೊ ಕಾಂಪ್ಲೆಕ್ಷ ಇತ್ಯಾದಿಗಳಿಂದ ಸರಕುಗಳ ಸಾಗಣೆ.

ಈ ಬಗೆಯ ಸಾಗಣೆ ಹೊರತುಪಡಿಸಿ ಉಳಿದೆಲ್ಲ ರೀತಿಯ ಸರಕುಗಳ ಸಾಗಣೆಗೆ ಇ-ವೇ ಬಿಲ್ ಜನರೇಟ್‌ ಮಾಡುವುದು ಕಡ್ಡಾಯವಾಗಿದೆ.

**

ಕಾಲಾವಧಿ

ಇ-ವೇ ಬಿಲ್ ಅಥವಾ ಕ್ರೋಡೀಕೃತ ಇ-ವೇ ಬಿಲ್‌ನ ಸಿಂಧುವಾದ ಕಾಲಾವಧಿ

ಕ್ರ ಸಂ;    ದೂರ;     ಸಿಂಧುವಾದ ಅವಧಿ

1;    100 ಕಿ.ಮೀ;  – ಅತಿ ಭಾರವಾದ ಸರಕು ಸಾಗಣೆ ವಾಹನ ಹೊರತುಪಡಿಸಿ 1 ದಿನ

2;    ನಂತರದ ಪ್ರತಿ 100 ಕಿ.ಮೀ;  – ಅತಿ ಭಾರವಾದ ಸರಕು ಸಾಗಣೆ ವಾಹನ ಹೊರತುಪಡಿಸಿ 1 ಹೆಚ್ಚುವರಿ ದಿನ

3;   20 ಕಿಮೀ;   –  ಅತಿಭಾರವಾದ ಸರಕು ಸಾಗಣೆ ವಾಹನಕ್ಕೆ 1 ದಿನ

4;   ನಂತರದ ಪ್ರತಿ 20 ಕಿ ಮೀ; – ಅತಿಭಾರವಾದ ಸರಕು ಸಾಗಣೆ ವಾಹನಕ್ಕೆ 1 ಹೆಚ್ಚುವರಿ ದಿನ

(ಲೇಖಕ: ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.