ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಳ್ಳಾರಿ ರಿಪಬ್ಲಿಕ್‌’ ಉದಯದ ನಿರೀಕ್ಷೆಯಲ್ಲಿ...

Last Updated 12 ಮೇ 2018, 19:30 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ಎರಡು ಸಾವಿರ ಕಿ.ಮೀ.ಗೂ ಹೆಚ್ಚು ದೂರ ಕ್ರಮಿಸಿದರೂ ಚುನಾವಣೆಗೆ ಸಂಬಂಧಿಸಿದಂತೆ ‘ಗೋಡೆ ಮೇಲಿನ ಬರಹ’ ಎಲ್ಲಿಯೂ ಸ್ಪಷ್ಟವಾಗಿ ನನ್ನ ಕಣ್ಣಿಗೆ ಬೀಳಲಿಲ್ಲ. ನಾನು ಸಾಕಷ್ಟು ಚುನಾವಣೆಗಳನ್ನು ಕಂಡಿದ್ದೇನೆ. ಆದರೆ, ಈ ಬಾರಿ ಕರ್ನಾಟಕದಲ್ಲಿ ನಡೆಯುತ್ತಿರುವ ಚುನಾವಣೆ ಸಂದರ್ಭದಲ್ಲಿ ಭಿತ್ತಿಪತ್ರಗಳು, ಬ್ಯಾನರ್‌ಗಳು, ಪಕ್ಷಗಳ ಬಾವುಟ, ಪಕ್ಷದ ಮುಖಂಡರು ಅಥವಾ ಅಭ್ಯರ್ಥಿಗಳ ಕಟೌಟ್‌ಗಳು ಹೆಚ್ಚಾಗಿ ಕಂಡು ಬರಲಿಲ್ಲ. ನಾವು ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಬಳ್ಳಾರಿ ಜಿಲ್ಲೆಗೆ ಕಾಲಿಡುತ್ತಿದ್ದಂತೆ ಕಟೌಟ್‌ಗಳು, ಭಿತ್ತಿಪತ್ರಗಳು ಮತ್ತೆ ಕಣ್ಣಿಗೆ ರಾಚತೊಡಗಿದವು.

ಮೊಳಕಾಲ್ಮುರು ಪಟ್ಟಣಕ್ಕೆ ಸಾಗುವ ಮಾರ್ಗದಲ್ಲಿದ್ದ ಪೊಲೀಸ್‌ ಚೆಕ್‌ಪೋಸ್ಟ್‌ನಲ್ಲಿದ್ದ ಕೇಂದ್ರೀಯ ಅರೆಸೇನಾಪಡೆ ಸಿಬ್ಬಂದಿ ವಾಹನಗಳ ತಪಾಸಣೆಯಲ್ಲಿ ನಿರತರಾಗಿದ್ದರು. ಅಲ್ಲಿಂದ ನೂರು ಮೀಟರ್‌ ದೂರದಲ್ಲಿ ರಸ್ತೆಯ ಬಲಭಾಗದ ದೃಶ್ಯವು ಗಮನ ಸೆಳೆಯುತ್ತಿತ್ತು. ನಮ್ಮ ಕಣ್ಣಿಗೆ ಅದುವರೆಗೂ ಕಾಣಿಸದಿದ್ದ ಭಿತ್ತಿಪತ್ರಗಳು ಮತ್ತು ಕಟೌಟ್‌ಗಳು ಅಲ್ಲಿದ್ದವು. ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಬಿ.ಎಸ್‌. ಯಡಿಯೂರಪ್ಪ ಅವರ ಕಟೌಟ್‌ ಸಹ ಅಲ್ಲಿತ್ತು.

ಅಲ್ಲಿದ್ದ ತೋಟದ ಮನೆಯಲ್ಲಿ ತಾತ್ಕಾಲಿಕವಾಗಿ ನೆಲೆಸಿರುವ ಜನಾರ್ದನ ರೆಡ್ಡಿಗೂ ತಮ್ಮ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿಕೊಂಡಿದ್ದರೂ ಅದು ಅಲ್ಲಿ ಲೆಕ್ಕಕ್ಕೇ ಇದ್ದಿರಲಿಲ್ಲ, ಬಾದಾಮಿಯಲ್ಲಿ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುತ್ತಿರುವ ಬಿಜೆಪಿಯ ಅಭ್ಯರ್ಥಿ ಶ್ರೀರಾಮುಲು ಅವರ ಕಟೌಟ್‌ ಕೂಡ ಅಲ್ಲಿತ್ತು. ಗಾಲಿ ಜನಾರ್ದನ ರೆಡ್ಡಿ ಅವರ ಇಬ್ಬರು ಸೋದರರೂ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಬೇರೆ, ಬೇರೆ ಮತಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಶ್ರೀರಾಮುಲು ಅವರು ಜನಾರ್ದನ ರೆಡ್ಡಿ ಅವರ ಆತ್ಮೀಯ ಸ್ನೇಹಿತರಾಗಿದ್ದಾರೆ.

ಬಳ್ಳಾರಿಯ ಸಾಮ್ರಾಟ ಮತ್ತು ಕಿಂಗ್‌ ಮೇಕರ್‌ ಖ್ಯಾತಿಯ ಜನಾರ್ದನ ರೆಡ್ಡಿ ಅವರು ಈ ಬಾರಿಯ ಚುನಾವಣೆಯಲ್ಲಿ ಅನೇಕರ ಹಣೆಬರಹ ನಿರ್ಧರಿಸಲಿದ್ದಾರೆ. ರೆಡ್ಡಿ ಅವರ ಮೇಲೆ ಹಲವಾರು ಗಂಭೀರ ಸ್ವರೂಪದ ಆರೋಪಗಳಿವೆ. ಆದರೆ, ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ಹೇಳಿರುವ ಸಿಬಿಐ, ಅವರ ವಿರುದ್ಧ ತಾನೇ ದಾಖಲಿಸಿಕೊಂಡಿದ್ದ ಪ್ರಕರಣಗಳನ್ನು ಕೈಬಿಟ್ಟಿದೆ. ರೆಡ್ಡಿ ಜತೆಗಿನ ರಾಜಕೀಯ ಒಪ್ಪಂದದ ಫಲವಾಗಿ ಪ್ರಕರಣಗಳನ್ನು ಕೈಬಿಡಲಾಗಿದೆ ಎಂದೂ ಹೇಳಲಾಗುತ್ತಿದೆ. ಜನಾರ್ದನ ರೆಡ್ಡಿ ಅವರು ಬಳ್ಳಾರಿ ಸುತ್ತಮುತ್ತಲಿನ 23 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿದ್ದಾರೆ.

ವಿಧಾನಸಭೆಯ ಒಟ್ಟು ಸ್ಥಾನಗಳಲ್ಲಿನ ಶೇ 10ರಷ್ಟಿರುವ ಈ ಕ್ಷೇತ್ರಗಳಲ್ಲಿ ರೆಡ್ಡಿ ತಮ್ಮ ಕೈಚಳಕ ತೋರಿಸಲಿದ್ದಾರೆ ಎಂದು ಬಿಜೆಪಿ ಲೆಕ್ಕ ಹಾಕಿದೆ.

‘ಪ್ರೀತಿ ಮತ್ತು ಯುದ್ಧದಲ್ಲಿ ಏನು ಮಾಡಿದರೂ ಸರಿ’ ಎನ್ನುವ ಧೋರಣೆಯನ್ನು ರೆಡ್ಡಿಗಳ ವಿಷಯದಲ್ಲಿ ರಾಜಕೀಯಕ್ಕೂ ಅನ್ವಯಿಸಬಹುದು. ‘ಪಕ್ಷಕ್ಕೆ ವೋಟುಗಳನ್ನು ತರುವ ಯಾರ ಜತೆಗಾದರೂ ರಾಜಿ ಮಾಡಿಕೊಳ್ಳಬಹುದು’ ಎನ್ನುವುದು ಬಿಜೆಪಿಯ ನಿಲುವಾಗಿದೆ. ಮೂವರು ರೆಡ್ಡಿ ಸೋದರರ ಪೈಕಿ ಜನಾರ್ದನ ಕಿರಿಯವರು. ಕರುಣಾಕರ ಮತ್ತು ಸೋಮಶೇಖರ ಉಳಿದ ಇಬ್ಬರು ಸೋದರರಾಗಿದ್ದಾರೆ.

ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಮತ್ತು ಶ್ರೀರಾಮುಲು ಸಚಿವರಾಗಿದ್ದರು. ಪ್ರಮುಖ ಖಾತೆಗಳಾದ ಮೂಲಸೌಕರ್ಯ, ಪ್ರವಾಸೋದ್ಯಮ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಕಂದಾಯ ಖಾತೆಗಳನ್ನು ಈ ತ್ರಿಮೂರ್ತಿಗಳು ಹಂಚಿಕೊಂಡಿದ್ದರು. ಈ ಬಣ ಇಡೀ ಬಳ್ಳಾರಿ ಜಿಲ್ಲೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದರಿಂದ ‘ಬಳ್ಳಾರಿ ರಿಪಬ್ಲಿಕ್‌’ ಎನ್ನುವ ಕುಖ್ಯಾತಿಯೂ ಅದಕ್ಕೆ ಅಂಟಿಕೊಂಡಿತ್ತು. ಸೋಮಶೇಖರ್‌ ಅವರನ್ನು ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್‌) ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ನನ್ನ ಸಹೋದ್ಯೋಗಿ ರೋಹಿಣಿ ಸ್ವಾಮಿ ಅವರು, ಕೆಎಂಎಫ್‌ ಅನ್ನು ‘ಸಂಪದ್ಭರಿತ ಹಸು’ ಎಂದೇ ಬಣ್ಣಿಸುತ್ತಾರೆ.

ಗಣಿ ಹಗರಣ ಸಂಬಂಧ ಜೈಲಿನಲ್ಲಿದ್ದ ಜನಾರ್ದನ ರೆಡ್ಡಿ ಅವರಿಗೆ ಕೋರ್ಟ್‌ ಈಗ ಜಾಮೀನು ಮಂಜೂರು ಮಾಡಿದೆ. ಅವರು ಬಳ್ಳಾರಿ ಜಿಲ್ಲೆ ಪ್ರವೇಶಿಸುವಂತಿಲ್ಲ ಎನ್ನುವ ನಿಬಂಧನೆಯನ್ನೂ ವಿಧಿಸಿದೆ. ಈ ಕಾರಣಕ್ಕೆ ಅವರು ಮೊಳಕಾಲ್ಮುರು ಬಳಿಯ ತೋಟದ ಮನೆಯಲ್ಲಿ ತಾತ್ಕಾಲಿಕವಾಗಿ ನೆಲೆಸಿದ್ದಾರೆ.

ಬಳ್ಳಾರಿಯಲ್ಲಿನ ಇಂದಿನ ಪರಿಸ್ಥಿತಿಗೆ ಶೋಲೆ ಚಿತ್ರದಲ್ಲಿನ ಜನಪ್ರಿಯ ಸಂಭಾಷಣೆಯೊಂದು ತಾಳೆಯಾಗುತ್ತದೆ. ಜೇಲರ್ ಪಾತ್ರ ನಿರ್ವಹಿಸಿರುವ ಅಸ್ರಾಣಿ ಅವರು, ‘ಹಮಾರೆ ಆದ್ಮಿ ಚಾರೋ ತರಫ್‌ ಫೈಲೆ ಹುಯೆ ಹೈ’ (ನನ್ನ ಜನರು ನಾಲ್ಕೂ ಕಡೆಯಿಂದ ಸುತ್ತುವರೆದಿದ್ದಾರೆ) ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುತ್ತಾರೆ. ಜನಾರ್ದನ ರೆಡ್ಡಿ ಅವರು ಬಳ್ಳಾರಿಗೆ ಹೋಗದಿದ್ದರೆ ಏನಂತೆ, ಅವರ ಬಂಟರು ಬಳ್ಳಾರಿ ಸಾಮ್ರಾಜ್ಯದ ಉದ್ದಕ್ಕೂ ಹರಡಿಕೊಂಡಿದ್ದಾರೆ. ಸೋದರರಾದ ಕರುಣಾಕರ ಮತ್ತು ಸೋಮಶೇಖರ್ ಅವರು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿದ್ದಾರೆ. ಬಳ್ಳಾರಿಯ ಬಡಾವಣೆಯೊಂದರಲ್ಲಿ ಸೋಮಶೇಖರ್ ಅವರು ಮನೆ, ಮನೆ ಪ್ರಚಾರ ನಡೆಸುತ್ತಿದ್ದಾಗ ನಮಗೆ ಎದುರಾಗಿದ್ದರು.

ವೈವಿಧ್ಯಮಯ ಸಂಸ್ಕೃತಿಯ ಕರ್ನಾಟಕ ರಾಜ್ಯವು ಇಂತಹ ಇನ್ನೂ ಅನೇಕ ಆಸಕ್ತಿದಾಯಕ ಸಂಗತಿಗಳನ್ನೂ ತನ್ನ ಒಡಲಲ್ಲಿ ಇರಿಸಿಕೊಂಡಿದೆ. ಕಡಿಮೆ ಜನಸಂಖ್ಯೆ ಹೊಂದಿರುವ ಜಂಗಮರು ತಮಗೆ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡಬೇಕು ಎನ್ನುವ ಬೇಡಿಕೆ ಮುಂದಿಟ್ಟಿದ್ದಾರೆ. ಅವರ ಹಕ್ಕೊತ್ತಾಯಕ್ಕೆ ಜನಾರ್ದನ ರೆಡ್ಡಿ ಬೆಂಬಲ ಸೂಚಿಸಿದ್ದಾರೆ. ಹಾಗಿದ್ದರೆ ಯಾರು ಈ ಜಂಗಮರು. ಅವರೆಲ್ಲ ಲಿಂಗಾಯತರು. ಲಿಂಗಾಯತರಲ್ಲಿನ ಪೂಜಾರಿಗಳು. ಅವರನ್ನು ‘ಗುರು’ಗಳು ಎಂದೂ ಕರೆಯಲಾಗುತ್ತದೆ. ಧರ್ಮ ಪ್ರಚಾರವೇ ಅವರ ಮುಖ್ಯ ಕೆಲಸ.

ಭಕ್ತರು ನೀಡುವ ದಾನವನ್ನೇ ಅವರು ತಮ್ಮ ಜೀವನೋಪಾಯಕ್ಕೆ ನೆಚ್ಚಿಕೊಂಡಿರುತ್ತಾರೆ. ಶ್ರೇಣೀಕೃತಸಮಾಜದಲ್ಲಿ ಉನ್ನತ ವರ್ಗಕ್ಕೆ ಸೇರಿದವರಾಗಿದ್ದರೂತಮ್ಮ ಜೀವನಾಧಾರಕ್ಕೆ ಭಿಕ್ಷೆಯನ್ನೇ ಅವಲಂಬಿಸಿದ್ದಾರೆ. ಇನ್ನೊಂದೆಡೆ ಸಿದ್ದರಾಮಯ್ಯ ಸರ್ಕಾರವು ಲಿಂಗಾಯತರಿಗೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡಲು ಮುಂದಾಗಿದೆ. ಕರ್ನಾಟಕದಲ್ಲಿನ ಜಾತಿ ರಾಜಕಾರಣದ ಬೀಜಗಣಿತಕ್ಕೆ ಹೋಲಿಸಿದರೆ, ಉತ್ತರಪ್ರದೇಶ ಮತ್ತು ಬಿಹಾರದಲ್ಲಿನ ಜಾತಿ ರಾಜಕಾರಣವು ಸರಳ ಗಣಿತವಷ್ಟೆ.

ಸೋಮಶೇಖರ್‌ ಅವರ ಜತೆಗಿನ ನಮ್ಮ ಭೇಟಿ ವಿಷಯಕ್ಕೆ ಬರೋಣ. ರೆಡ್ಡಿ ಸೋದರರ ವಿರುದ್ಧ ಅಕ್ರಮ ಗಣಿಗಾರಿಕೆ ಪ್ರಕರಣಗಳು ದಾಖಲಾಗಿರುವುದರ ಬಗ್ಗೆ ನಾವು ಅವರನ್ನು ಪ್ರಶ್ನಿಸಿದೆವು. ಅವರು ಸಹಜವಾಗಿಯೇ ತಾವು ಯಾವುದೇ ತಪ್ಪು ಎಸಗಿಲ್ಲ, ಪ್ರತಿಸ್ಪರ್ಧಿಗಳು ಮತ್ತು ಕಾಂಗ್ರೆಸ್‌ ಪಕ್ಷವು ತಮ್ಮನ್ನು ಬಲಿಪಶು ಮಾಡಿವೆ ಎಂದರು.

‘ಗಣಿಗಾರಿಕೆ ಸ್ಥಗಿತಗೊಳಿಸಿದ ಸುಪ್ರೀಂಕೋರ್ಟ್‌ ಆದೇಶದಿಂದಾಗಿ 10 ಲಕ್ಷ ಜನರು ನಿರುದ್ಯೋಗಿಗಳಾಗಿದ್ದಾರೆ’ ಎಂದು ಅವರು ಹೇಳುತ್ತಾರೆ. ತಮ್ಮ ವಿರುದ್ಧ ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿರುವುದರ ಬಗ್ಗೆ ಕೇಳಿದ ಪ್ರಶ್ನೆಗೆ, ಆ ಬಗ್ಗೆ ಕೋರ್ಟ್‌ ತೀರ್ಮಾನಿಸಲಿದೆ ಎನ್ನುವ ಸಿದ್ಧ ಉತ್ತರ ನೀಡಿ ಜಾರಿಕೊಂಡರು. ಬಳ್ಳಾರಿಯಲ್ಲಿ ಅತಿಯಾದ ಗಣಿಗಾರಿಕೆ ನಡೆದಿದೆಯೇ ಹೊರತು ಅಕ್ರಮ ಗಣಿಗಾರಿಕೆಯಲ್ಲ ಎಂದು ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.

ಗಣಿಗಾರಿಕೆಯ ಆರ್ಥಿಕತೆ ಮತ್ತು ಅಕ್ರಮ ಗಣಿಗಾರಿಕೆ ಸಂಬಂಧ ಏನೆಲ್ಲಾ ಬೆಳವಣಿಗೆಗಳು ನಡೆದಿದ್ದವು ಎನ್ನುವುದನ್ನು ತಿಳಿದುಕೊಳ್ಳಲು ನಾವು ಅಲ್ಲಿನ ಜೆಡಿಎಸ್‌ ಅಭ್ಯರ್ಥಿ ಮೊಹಮ್ಮದ್‌ ಇಕ್ಬಾಲ್‌ ಅವರ ಜತೆ ಮಾತುಕತೆ ನಡೆಸಿದೆವು. ಅವರ ಒಡೆತನದಲ್ಲಿ ಮೂರು ಗಣಿಗಳಿವೆ.

ಅವರ ಪ್ರಕಾರ, ‘2000ನೇ ಇಸ್ವಿವರೆಗೆ ಗಣಿಗಾರಿಕೆ ನಡೆಸುತ್ತಿದ್ದವರೆಲ್ಲ ಶ್ರೀಮಂತರಾಗಿರಲಿಲ್ಲ. ಒಂದು ಟನ್‌ ಕಬ್ಬಿಣದ ಅದಿರನ್ನು ಹೊರ ತೆಗೆಯಲು ₹150 ಖರ್ಚಾಗುತ್ತಿತ್ತು. ಅದನ್ನು ₹ 250ಕ್ಕೆ ಮಾರಾಟ ಮಾಡಲಾಗುತ್ತಿತ್ತು. ₹ 16.50ನ್ನು ಸರ್ಕಾರಕ್ಕೆ ರಾಜಧನವಾಗಿ ಪಾವತಿಸಲಾಗುತ್ತಿತ್ತು. ಹೀಗಾಗಿ ಅದೊಂದು ಸಾಧಾರಣ ವಹಿವಾಟು ಆಗಿತ್ತು.

ಬಳ್ಳಾರಿಯ ಕಬ್ಬಿಣದ ಅದಿರು ಕಡಿಮೆ ದರ್ಜೆಯದಾಗಿದೆ. ಹೀಗಾಗಿ ಅದನ್ನು ಮಾರಾಟ ಮಾಡುವುದೂ ಅಷ್ಟು ಸುಲಭವಾಗಿರಲಿಲ್ಲ. ಅದೇ ಸಮಯದಲ್ಲಿ ಚೀನಾದಿಂದ ಕಬ್ಬಿಣದ ಅದಿರಿಗೆ ಭಾರಿ ಬೇಡಿಕೆ ಕಂಡು ಬಂದಿತು. ಪ್ರತಿ ಟನ್‌ ಬೆಲೆ ₹ 600, ಆನಂತರ ₹ 1,000 ಆ ಮೇಲೆ ₹ 6,000ಕ್ಕೆ ಜಿಗಿಯಿತು. ಅದರಿಂದ ಗಣಿಗಾರಿಕೆಯಲ್ಲಿ ತೊಡಗಿದವರ ಸಂಪತ್ತು ಏಕಾಏಕಿ ಏರಿಕೆ ಕಂಡಿತು’ ಎಂದು ಅವರು ವಿವರಿಸಿದ್ದರು. ಈ ವಹಿವಾಟಿನಲ್ಲಿ ಬಹುಶಃ ಕಪ್ಪು ಹಣದ ಹಾವಳಿ ಮತ್ತು ಅಕ್ರಮ ಗಣಿಗಾರಿಕೆಯೂ ಸೇರಿಕೊಂಡಿತ್ತು. ಆದರೆ ಅದನ್ನು ಇಕ್ಬಾಲ್‌ ಅವರು ಬಾಯಿಬಿಟ್ಟು ಹೇಳಿರಲಿಲ್ಲ.

ಅಗಣಿತ ಪ್ರಮಾಣದಲ್ಲಿ ಸಂಪತ್ತು ಸಂಗ್ರಹಗೊಳ್ಳುತ್ತಿದ್ದಂತೆ ಗಣಿಗಾರಿಕೆಯಲ್ಲಿ ತೊಡಗಿದವರ ಜೀವನಶೈಲಿಯಲ್ಲಿ ಬದಲಾವಣೆ ಕಂಡು ಬಂತು. ಮಾಫಿಯಾದ ಹಾವಳಿಯೂ ಹೆಚ್ಚಿತು. ಇದು ಅತಿಯಾದಾಗ, ಗಣಿಗಾರಿಕೆ ಮೇಲೆ ಸಂಪೂರ್ಣ ನಿಷೇಧ ವಿಧಿಸಲಾಯಿತು. ಹೊಸದಾಗಿ ಹರಾಜು ನಡೆಸಲಾಯಿತು. ಇವೆರಡೂ ಅವಿವೇಕತನದ ನಿರ್ಧಾರಗಳಾಗಿದ್ದವು ಎಂದು ಇಕ್ಬಾಲ್‌ ಹೇಳಿದರು.

‘ಬಳ್ಳಾರಿ ರಿಪಬ್ಲಿಕ್‌’ನ ಗೋಡೆಗಳು ಎಂದರೆ, ವಿಶಾಲವಾದ ಕಬ್ಬಿಣದ ಅದಿರಿನ ದಿಬ್ಬಗಳೆಂದೇ ನಾವಿಲ್ಲಿ ಪರಿಗಣಿಸಬೇಕು. ಬಳ್ಳಾರಿಯ ಈ ಸಂಪತ್ತು ಶಾಪವಾಗಿಯೂ ಪರಿಣಮಿಸಿತ್ತು. ನಿಷೇಧ ಜಾರಿಗೆ ಬರುವವರೆಗೆ ಗಣಿಗಾರಿಕೆ ಮೇಲೆ ನಿರ್ಬಂಧವೇ ಇದ್ದಿರಲಿಲ್ಲ. ಹಳೆಯ ಪರ್ಮಿಟ್‌ಗಳನ್ನು ಬಳಸಿಕೊಂಡು ಯಾರಾದರೂ ಗಣಿಗಾರಿಕೆ ನಡೆಸಬಹುದಾಗಿತ್ತು. ಗಣಿ ಮಾಲಿಕರ ತೋಳ್ಬಲ ಆಧರಿಸಿ ಅಕ್ಕಪಕ್ಕದವರ ಗಣಿಗಳನ್ನೂ ಅಕ್ರಮವಾಗಿ ಆಕ್ರಮಿಸಿಕೊಳ್ಳಬಹುದಾಗಿತ್ತು. ಕರ್ನಾಟಕ ಮತ್ತು ಆಂಧ್ರಪ್ರದೇಶದ ಈ ಗಡಿ ಜಿಲ್ಲೆಯಲ್ಲಿ ರೆಡ್ಡಿ ಸೋದರರ ಅದರಲ್ಲೂ ವಿಶೇಷವಾಗಿ ಜನಾರ್ದನ ಅವರ ಮಾತೇ ನಡೆಯುತ್ತಿತ್ತು.

ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರು, ಅಕ್ರಮ ಗಣಿಗಾರಿಕೆ ಸಂಬಂಧ ವಿಸ್ತೃತ ವರದಿ ಸಿದ್ಧಪಡಿಸಿದ್ದರು. ರೆಡ್ಡಿ ಒಡೆತನದ ಓಬಳಾಪುರಂ ಗಣಿಯು ಆಂಧ್ರಪ್ರದೇಶದ ಗಡಿಯಲ್ಲಿತ್ತು. ಅದರಿಂದ ಅಲ್ಪ ಪ್ರಮಾಣದಲ್ಲಿ ಕಬ್ಬಿಣದ ಅದಿರನ್ನು ಹೊರ ತೆಗೆಯಲಾಗುತ್ತಿತ್ತು. ಗಣಿಗಾರಿಕೆಯಲ್ಲಿ ತೊಡಗಿದ್ದವರಿಂದ ಇವರು ಪಾಲು ಅಥವಾ ಹಫ್ತಾ ಕೇಳುತ್ತಿದ್ದರು. ರಕ್ಷಣೆ ಒದಗಿಸಿರುವುದರ ನೆ‍ಪದಲ್ಲಿ ಹಣ ವಸೂಲಿ ಮಾಡುತ್ತಿದ್ದರು. ಗಣಿಗಾರಿಕೆಯ ಆ ಸುವರ್ಣ ದಿನಗಳಲ್ಲಿ ಈ ವಿಧಾನದಲ್ಲಿಯೇ ದಿನವೊಂದಕ್ಕೆ ₹ 100 ಕೋಟಿ ಸಂಗ್ರಹವಾಗುತ್ತಿತ್ತು ಎಂದು ಸ್ಥಳೀಯರು ಅಂದಾಜಿಸುತ್ತಾರೆ.

ತಮ್ಮ ಗಣಿಗೆ ಹೊಂದಿಕೊಂಡಂತೆ ಇದ್ದ ರಾಜ್ಯದ ಗಡಿಯನ್ನು ರೆಡ್ಡಿಗಳು 5 ಕಿ.ಮೀ.ಗಳಷ್ಟು ಅಕ್ರಮವಾಗಿ ವಿಸ್ತರಿಸಿದ್ದರು. ಹೆಚ್ಚಿನ ವಿವರಗಳಿಗಾಗಿ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರು ಸಿದ್ಧಪಡಿಸಿರುವ 466 ಪುಟಗಳ ವರದಿಯನ್ನು ಓದಬೇಕು. ಹೆಗ್ಡೆ ಅವರ ಅಂದಾಜಿನ ಪ್ರಕಾರ, 2006 ರಿಂದ 2010ರವರೆಗಿನ ಅವಧಿಯಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಕಬ್ಬಿಣ ಅದಿರಿನ ಅಕ್ರಮ ರಫ್ತಿನ ಒಟ್ಟಾರೆ ವಹಿವಾಟಿನ ಮೊತ್ತ ₹ 1.22 ಲಕ್ಷ ಕೋಟಿ.

ರೆಡ್ಡಿ ಸೋದರರು ಆಂಧ್ರಪ್ರದೇಶದಲ್ಲಿ ಮಾತ್ರ ಸ್ವಂತ ಗಣಿ ಹೊಂದಿದ್ದರು. ಆದರೆ, ಅವರು ರಫ್ತು ಮಾಡಿದ ಕಬ್ಬಿಣದ ಅದಿರೆಲ್ಲ ಕರ್ನಾಟಕಕ್ಕೆ ಸೇರಿದ್ದು. ಅವರಿಗೆ ರಾಜ್ಯದಲ್ಲಿ ಗಣಿಗಾರಿಕೆ ಗುತ್ತಿಗೆಯೂ ಇದ್ದಿರಲಿಲ್ಲ.

‘ಈ ಗಣಿಗಾರಿಕೆ ಮಾಫಿಯಾವನ್ನು ಜಾರ್ಖಂಡ್‌ನಲ್ಲಿನ ಧನಬಾದ್‌ ಮಾಫಿಯಾಗೆ ಹೋಲಿಸಬಹುದೇ?’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರನ್ನು ನಾನು ಪ್ರಶ್ನಿಸಿದ್ದೆ. ‘ಹೌದು. ಆದರೆ, ಒಂದು ಪ್ರಮುಖ ವ್ಯತ್ಯಾಸ ಇದೆ. ಇಲ್ಲಿ ಯಾರೊಬ್ಬರ ಕೊಲೆ ನಡೆದಿಲ್ಲ’ ಎಂದು ಅವರು ಉತ್ತರಿಸಿದ್ದರು. ಕೆಲವರ ಮೇಲೆ ಹಲ್ಲೆ ನಡೆದಿತ್ತು. ಸ್ಥಳೀಯ ಆಡಳಿತ ಮತ್ತು ಪೊಲೀಸರ ಮಧ್ಯೆ ಒಪ್ಪಂದ ಆಗಿದ್ದರಿಂದ ಇಂತಹ ಘಟನೆಗಳು ನಡೆದಿದ್ದವು.

ಗಣಿಗಾರಿಕೆ ನಡೆಸುವವರು ತಮ್ಮ ಪಾಲಿನ ಕಪ್ಪಕಾಣಿಕೆ ಸಲ್ಲಿಸದಿದ್ದರೆ ಅಧಿಕಾರಿಗಳು ಗಣಿಗಾರಿಕೆ ನಿಲ್ಲಿಸುತ್ತಿದ್ದರು. ಅದಕ್ಕೂ ಆತ ಮಣಿಯದಿದ್ದರೆ ಗಂಭೀರ ಸ್ವರೂಪದ ಪ್ರಕರಣ ದಾಖಲಿಸಿ ಲಾಕಪ್‌ಗೆ ತಳ್ಳುತ್ತಿದ್ದರು. ಇದು ಇತರರಿಗೂ ಪಾಠವಾಗುತ್ತಿತ್ತು. ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದವರ ಜತೆ ರಾಜಿಯಾಗಿದ್ದ 650 ಅಧಿಕಾರಿಗಳನ್ನು ಲೋಕಾಯುಕ್ತರು ಗುರುತಿಸಿದ್ದರು. ಅವರಲ್ಲಿ 53 ಪ್ರಮುಖ ಅಧಿಕಾರಿಗಳನ್ನು ಜಿಲ್ಲೆಯಿಂದ ವರ್ಗಾಯಿಸಲಾಗಿತ್ತು.

ಆನಂತರ ನಡೆದ ಬೆಳವಣಿಗೆಗಳು ರಾಜಕೀಯವಾಗಿ ಅಲ್ಲೋಲ ಕಲ್ಲೋಲ ಉಂಟು ಮಾಡಿದ್ದವು. ಜನಾರ್ದನ ರೆಡ್ಡಿ, ಯಡಿಯೂರಪ್ಪ ವಿರುದ್ಧ ಬಂಡಾಯ ಎದ್ದಿದ್ದರು. ತಮಗೆ ನಿಷ್ಠರಾದ ಶಾಸಕರನ್ನು ರೆಸಾರ್ಟ್‌ಗೆ ಕರೆದುಕೊಂಡು ಹೋಗಿ ತಮ್ಮ ಬಲ ಪ್ರದರ್ಶಿಸಿದ್ದರು. ತಮಗೆ ಇರುವ ಶಾಸಕರ ಬೆಂಬಲವನ್ನು ಬಿಜೆಪಿಯ ವರಿಷ್ಠ ಮಂಡಳಿಯ ಗಮನಕ್ಕೂ ತಂದಿದ್ದರು. ಪಕ್ಷವು ರಾಜಿಗೆ ಮುಂದಾಗಿತ್ತು. ಜಿಲ್ಲೆಯಿಂದ ಹೊರಹೋಗಿದ್ದ ಅಧಿಕಾರಿಗಳು ಮರಳಿ ಬಳ್ಳಾರಿಗೆ ವರ್ಗವಾದರು. ಮುಖ್ಯಮಂತ್ರಿಗೆ ಆಪ್ತರಾಗಿದ್ದ ಶೋಭಾ ಕರಂದ್ಲಾಜೆ ರಾಜೀನಾಮೆ ಸಲ್ಲಿಸಿದರು.

ಅತಿಯಾದ ಹಣವು ಅಕ್ರಮ ಚಟುವಟಿಕೆಗಳಿಗೆ, ಜೀವನಶೈಲಿ ಬದಲಾವಣೆಗೆ ಕಾರಣವಾಗಿತ್ತು. ಬಳ್ಳಾರಿಗೆ ಐಷಾರಾಮಿ ಕಾರುಗಳು, ಖಾಸಗಿ ವಿಮಾನಗಳು, ಹೆಲಿಕಾಪ್ಟರ್‌ಗಳು ಕಾಲಿಟ್ಟವು. ಗಣಿ ಧಣಿಗಳ ಅಟಾಟೋಪಕ್ಕೆ ಎಣೆಯೇ ಇಲ್ಲದಂತಾಗಿತ್ತು. ಕಾಂಗ್ರೆಸ್‌ ಅಭ್ಯರ್ಥಿ ಅನಿಲ್‌ ಲಾಡ್‌ ತಮ್ಮ ಬಳಿ ಇದ್ದ ಎರಡು ಹೆಲಿಕಾಪ್ಟರ್‌ಗಳನ್ನು ಈಗ ಮಾರಾಟ ಮಾಡಿದ್ದಾರೆ. ‘ಹೆಲಿಕಾಪ್ಟರ್‌ಗಳ ಬಳಕೆ ಐಷಾರಾಮಿ ಆಗಿರಲಿಲ್ಲ. ಅನುಕೂಲ ಉದ್ದೇಶಕ್ಕೆ ಅವುಗಳನ್ನು ಖರೀದಿಸಲಾಗಿತ್ತು. 20 ಟನ್‌ ಭಾರದ ಟ್ರಕ್‌ಗಳು 50 ಟನ್‌ಗಳಷ್ಟು ಅದಿರು ಸಾಗಿಸುತ್ತಿದ್ದರಿಂದ ಹೆದ್ದಾರಿಗಳ ತುಂಬ ಗುಂಡಿಗಳೇ ತುಂಬಿದ್ದವು. ಹೀಗಾಗಿ ಅಂತಹ ರಸ್ತೆಗಳಲ್ಲಿ ಪ್ರಯಾಣಿಸುವುದೇ ಕಠಿಣವಾಗಿತ್ತು’ ಎಂದು ಅವರು ಕಾರಣ ನೀಡಿದ್ದರು. ಜನಾರ್ದನ ರೆಡ್ಡಿ ಬಳಿ ಈಗಲೂ ಎರಡು ಹೆಲಿಕಾಪ್ಟರ್‌ಗಳಿವೆ.

ಕರ್ನಾಟಕದ ಗೋಡೆಗಳ (ಕಬ್ಬಿಣ ಅದಿರಿನ ದಿಬ್ಬ) ಮೇಲಿನ ಬರಹವನ್ನು ಕೊನೆಯಲ್ಲಿ ಸಂಕ್ಷಿಪ್ತವಾಗಿ ವಿವರಿಸಲು ಇಷ್ಟಪಡುವೆ. ಬಳ್ಳಾರಿಯಲ್ಲಿ ಸ್ಪರ್ಧಿಸಿರುವ ಮೂವರೂ ಅಭ್ಯರ್ಥಿಗಳು ಮಾಜಿ ಗಣಿಧಣಿಗಳು. ಜೆಡಿಎಸ್‌ ಅಭ್ಯರ್ಥಿಯು ತಮ್ಮ ಮೂರು ಗಣಿಗಳ ಪೈಕಿ ಎರಡನ್ನು ಕಳೆದುಕೊಂಡಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ತಮ್ಮ ಎಲ್ಲ ಗಣಿಗಳನ್ನು ಕಳೆದುಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಯಾವುದೇ ಗಣಿಗಳನ್ನು ಕಳೆದುಕೊಂಡಿಲ್ಲ. ಏಕೆಂದರೆ ಅವರ ಒಡೆತನದಲ್ಲಿ ಗಣಿಗಳೇ ಇದ್ದಿರಲಿಲ್ಲ. ತಮ್ಮ ಗಣಿಗಾರಿಕೆಯಿಂದ ಗಳಿಸಿದ ಸಂಪತ್ತಿನಲ್ಲಿನ ಕೆಲ ಭಾಗವನ್ನು ಬಿಜೆಪಿ ಅಭ್ಯರ್ಥಿಗೆ ಕಪ್ಪ ಕಾಣಿಕೆ ರೂಪದಲ್ಲಿ ಸಲ್ಲಿಸುತ್ತಿದ್ದವರು ಈಗ ತಮ್ಮೆಲ್ಲ ಗಣಿಗಳಿಗೆ ಎರವಾಗಿದ್ದಾರೆ. ಈ ಚುನಾವಣೆಯು ತಮ್ಮ ಹಿಂದಿನ ಸುವರ್ಣ ಯುಗವನ್ನು ಮರಳಿ ತರಲಿದೆ ಎಂದೇ ಅವರೆಲ್ಲ ನಿರೀಕ್ಷಿಸಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಉಕ್ಕಿನ ಬೆಲೆ ಮತ್ತೆ ಏರುಗತಿಯಲ್ಲಿ ಇದೆ.

ಲೇಖಕ: ‘ದಿ ಪ್ರಿಂಟ್‌’ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT