ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸ್ತ್ರಿ ನಿಗೂಢ ಸಾವಿಗೆ ಮರುಜೀವ

Last Updated 13 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಎರಡನೇ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ನಿಗೂಢ ಸಾವಿನ ಬಗ್ಗೆ ರಾಜ್ ನಾರಾಯಣ್‌ ಸಮಿತಿ ನೀಡಿದ್ದ ತನಿಖಾ ವರದಿಯನ್ನು ಬಹಿರಂಗಗೊಳಿಸುವಂತೆ ಕೇಂದ್ರ ಮಾಹಿತಿ ಆಯೋಗವು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಭಾರತ ಮತ್ತು ಪಾಕಿಸ್ತಾನ ಯುದ್ಧದ ನಂತರ 1966ರಲ್ಲಿ ರಷ್ಯಾದ ತಾಷ್ಕೆಂಟ್‌ನಲ್ಲಿ ಪಾಕಿಸ್ತಾನದ ಅಧ್ಯಕ್ಷ ಮಹಮ್ಮದ್‌ ಅಯೂಬ್‌ ಖಾನ್‌ ಜತೆ ಒಪ್ಪಂದಕ್ಕೆ ಸಹಿ ಹಾಕಿದ ಕೆಲವೇ ಗಂಟೆಯಲ್ಲಿ ಶಾಸ್ತ್ರಿ ಮೃತಪಟ್ಟಿದ್ದರು. ಹೃದಯಾಘಾತದಿಂದ ಅವರ ಸಾವು ಸಂಭವಿಸಿದೆ ಎಂದು ವರದಿಯಾಗಿತ್ತು.

1977ರಲ್ಲಿ ಅಧಿಕಾರಕ್ಕೆ ಬಂದ ಜನತಾ ಪಕ್ಷದ ಸರ್ಕಾರವು ಶಾಸ್ತ್ರಿ ನಿಗೂಢ ಸಾವಿನ ರಹಸ್ಯ ಭೇದಿಸಲು ರಾಜ್ ನಾರಾಯಣ್‌ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿತ್ತು. ಸಮಿತಿಯು ಸರ್ಕಾರಕ್ಕೆ ಸಲ್ಲಿಸಿದ್ದ ಮಹತ್ವದ ದಾಖಲೆಗಳು ಕಣ್ಮರೆಯಾಗಿದ್ದವು.

ಶಾಸ್ತ್ರಿ ಅವರ ಸಾವಿಗೆ ಸಂಬಂಧಿಸಿದಂತೆ ಸರ್ಕಾರದ ಬಳಿ ಲಭ್ಯವಿರುವ ಎಲ್ಲ ಮಾಹಿತಿ ಮತ್ತು ದಾಖಲೆ ಬಹಿರಂಗಗೊಳಿಸುವಂತೆ ಕೇಂದ್ರ ಮಾಹಿತಿ ಆಯೋಗವು ಪ್ರಧಾನಿ ಕಚೇರಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ.

ಕಾಣೆಯಾದ 11 ಪುಟಗಳ ವರದಿ: ರಷ್ಯಾದಲ್ಲಿ ಕೊನೆಯುಸಿರೆಳೆದ ಶಾಸ್ತ್ರಿ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲಾಯಿತೇ ಅಥವಾ ಅಲ್ಲಿಯೇ ಅಂತ್ಯಸಂಸ್ಕಾರ ನಡೆಸಲಾಯಿತೇ ಎಂಬ ಮಾಹಿತಿ ನೀಡುವಂತೆ ಕೋರಿ ನವದೀಪ್‌ ಗುಪ್ತಾ ಎಂಬುವರು ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದರು. ಮರಣೋತ್ತರ ಪರೀಕ್ಷೆಯ ವರದಿ ನೀಡುವಂತೆಯೂ ಅವರು ಕೋರಿದ್ದರು.

ಆ ನಂತರ ಮಾಹಿತಿ ಆಯೋಗವು ಲಾಲ್‌ ಬಹದ್ದೂರ್‌ ಶಾಸ್ತ್ರಿ ಸಾವಿಗೆ ಸಂಬಂಧಿಸಿದ 11 ಪುಟಗಳ ತನಿಖಾ ವರದಿಯ ಬೆನ್ನು ಬಿದ್ದಿದೆ.

ದೇಶದ ಹಿತಾಸಕ್ತಿಯ ಕಾರಣ ನೀಡಿ ಮಾಹಿತಿ ಬಹಿರಂಗಪಡಿಸಲು ನಿರಾಕರಿಸಿದ್ದ ಕೇಂದ್ರ ಗೃಹ ಸಚಿವಾಲಯವು ಅರ್ಜಿಯನ್ನು ಸಾರ್ವಜನಿಕ ಪತ್ರಾಗಾರಕ್ಕೆ ಹಸ್ತಾಂತರಿಸಿತ್ತು.

ಈ ಸಂಬಂಧ 2011ರಲ್ಲಿ ಕೇಂದ್ರ ಮಾಹಿತಿ ಆಯೋಗಕ್ಕೆ ಮತ್ತೊಂದು ಪ್ರತ್ಯೇಕ ಅರ್ಜಿ ಸಲ್ಲಿಸಲಾಗಿತ್ತು. ಆಗ ಆಯೋಗವು 11 ಪುಟಗಳ ವರದಿ ಬಹಿರಂಗಗೊಳಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು.

ಈ ದಾಖಲೆಗಳು ಗೌಪ್ಯ ಎಂದಾದರೆ ಮುಚ್ಚಿದ ಲಕೋಟೆಯಲ್ಲಿ ತನಗೆ ಸಲ್ಲಿಸುವಂತೆ ಆಯೋಗವು ಪ್ರಧಾನಿ ಕಚೇರಿ, ಗೃಹ ಸಚಿವಾಲಯಕ್ಕೆ ತಿಳಿಸಿದೆ.

ಬೆನ್ನುಬಿದ್ದ ಮಾಹಿತಿ ಆಯೋಗ

ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಸುದ್ದಿಗಳನ್ನು ಬಿಟ್ಟರೆ  ಶಾಸ್ತ್ರಿ ಅವರ ಸಾವಿಗೆ ಸಂಬಂಧಿಸಿದ ಅಧಿಕೃತ ದಾಖಲೆಗಳಾಗಲಿ ಅಥವಾ ಮಾಹಿತಿಯಾಗಲಿ ತನ್ನ ಬಳಿ ಇಲ್ಲ ಎಂದು ಸಾರ್ವಜನಿಕ ಪತ್ರಾಗಾರವು ಕೇಂದ್ರ ಮಾಹಿತಿ ಆಯೋಗಕ್ಕೆ ಸ್ಪಷ್ಟಪಡಿಸಿತ್ತು.

ವಿದೇಶಾಂಗ ವ್ಯವಹಾರಗಳ ಸಚಿವಾಲಯ, ರಷ್ಯಾದಲ್ಲಿರುವ ಭಾರತದ ರಾಯಭಾರಿ ಕಚೇರಿ, ಕೇಂದ್ರ ಗೃಹ ಸಚಿವಾಲಯ ಅಥವಾ ಸಂಬಂಧಿಸಿದ ಇತರ ಕಚೇರಿಗಳಲ್ಲಿ ದೊರೆಯಬಹುದು ಎಂದು ಅದು ಸುಳಿವು ನೀಡಿತ್ತು.

ಪ್ರಕರಣದ ಬೆನ್ನುಬಿದ್ದ ಮಾಹಿತಿ ಆಯುಕ್ತ ಆಚಾರ್ಯಲು ಹಳೆಯ ಪತ್ರಿಕೆಗಳನ್ನು ತಿರುವಿ ಹಾಕಿದಾಗ ಅನೇಕ ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದವು.

ರಾಜ್‌ ನಾರಾಯಣ ಸಮಿತಿಯ ವರದಿಗೆ ಸಂಬಂಧಿಸಿದ ದಾಖಲೆ ಸಂಸತ್‌ ಗ್ರಂಥಾಲಯದಲ್ಲೂ ಲಭ್ಯವಿಲ್ಲ ಎಂಬ ವಿಷಯ ತಿಳಿಯಿತು.

ಪ್ರಮುಖ ಸಾಕ್ಷಿಗಳಾಗಿದ್ದ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ವೈದ್ಯ ಆರ್‌.ಎನ್‌. ಚೌಗ್‌ ಮತ್ತು ಮನೆಗೆಲಸದ ಸಹಾಯಕ ರಾಮನಾಥ್‌ ಅವರು ಸಮಿತಿ ಎದುರು ಹೇಳಿಕೆ ನೀಡಲು ಹೊರಟಿದ್ದ ವೇಳೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಂಗತಿ ಹಳೆಯ ಪತ್ರಿಕೆಗಳಲ್ಲಿ ವರದಿಯಾಗಿತ್ತು.

ತನಿಖಾ ಸಮಿತಿಯ ವರದಿ ಮತ್ತು ದಾಖಲೆಗಳನ್ನು ಹುಡುಕುವಂತೆ ಮಾಹಿತಿ ಆಯೋಗವು ಈ ನಡುವೆ ಸಂಸತ್‌ ಕಾರ್ಯದರ್ಶಿಗೂ ಪತ್ರ ಬರೆದಿತ್ತು.

**

ಶಾಸ್ತ್ರಿ ಅವರ ನಿಗೂಢ ಸಾವಿನ ಹಿಂದಿರುವ ರಹಸ್ಯ ತಿಳಿಯಲು ಬಯಸುವುದು ಜನರ ಸಹಜ ಗುಣ. ಅವರಿಗೆ ಸತ್ಯಾಂಶ ತಿಳಿಸುವುದು ಸರ್ಕಾರದ ಕರ್ತವ್ಯ
– ಶ್ರೀಧರ್‌ ಆಚಾರ್ಯಲು, ಮಾಹಿತಿ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT