ಬುಧವಾರ, ಏಪ್ರಿಲ್ 8, 2020
19 °C

ಯಡಿಯೂರಪ್ಪ ಎಂಬ ಶಾಪಗ್ರಸ್ತ ನಾಯಕ

ಟಿ.ಕೆ.ತ್ಯಾಗರಾಜ್ Updated:

ಅಕ್ಷರ ಗಾತ್ರ : | |

ಬಿರುಗಾಳಿಗೆ ಸಿಕ್ಕ ಹಡಗಿಗೆ ಯಾವ ಬಂದರಾದರೇನಂತೆ ಎಂದು ಕಾಂಗ್ರೆಸ್ ಪಕ್ಷ, ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡದ್ದೇ, ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಯಡಿಯೂರಪ್ಪ ಅವರ ಮಹದಾಸೆಗೆ ತಣ್ಣೀರೆರಚಿತು.

ಆಡಳಿತ ಪಕ್ಷದ ವಿರುದ್ಧ ಆಕ್ರೋಶದ ಮಾತುಗಳ ಸದೃಢ ಅಡಿಪಾಯ, ವರ್ಷಗಳ ಕಾಲ ನಡೆಸಿದ ಹೋರಾಟಗಳಿಂದ ರಾಜ್ಯ ರಾಜಕೀಯದ ಪ್ರಮುಖ ನಾಯಕರಾಗಿ ಹೊರಹೊಮ್ಮಿದ ಯಡಿಯೂರಪ್ಪ 2007ರಲ್ಲಿ ಕೇವಲ ಏಳು ದಿನ ಮುಖ್ಯಮಂತ್ರಿಯಾಗಿದ್ದವರು. ಕುಮಾರಸ್ವಾಮಿಯ ವಚನಭಂಗ ಮತ್ತು ಲಿಂಗಾಯತ ಸಮುದಾಯದ ಬೆಂಬಲ ಇವೇ ಮೊದಲಾದ ಕಾರಣಗಳಿಂದ 2008ರಲ್ಲಿ ಮತ್ತೆ ಮುಖ್ಯಮಂತ್ರಿಯಾದರೂ ಅಧಿಕಾರ ನಡೆಸಲು ಸಾಧ್ಯವಾಗಿದ್ದು ಮೂರು ವರ್ಷ ಮಾತ್ರ. ಈ ಸಲದ ಚುನಾವಣೆಯಲ್ಲಿ ಕೇವಲ ರಾಜ್ಯಪಾಲ ವಜುಭಾಯ್‌ ವಾಲಾ ಕೃಪೆಯಿಂದ ಪಡೆದ ಅಧಿ‘ಖಾರ’ ಮೂರೇ ದಿನಕ್ಕೆ ಮುಕ್ತಾಯಗೊಂಡಿತು.

ತಮ್ಮ ಬೆಂಕಿಯುಗುಳುವ ಮಾತುಗಳಿಂದಲೇ ಗಮನ ಸೆಳೆಯುತ್ತಿದ್ದ ಯಡಿಯೂರಪ್ಪ ಅವರ ನಾಲಗೆ ಅದೇಕೋ ಈ ಸಲದ ಚುನಾವಣಾ ಪ್ರಚಾರದ ವೇಳೆಯಲ್ಲೇ ಮೊಂಡಾಗಿತ್ತು. ಅವರಲ್ಲೇ ವಿಶ್ವಾಸ ಇದ್ದಂತಿರಲಿಲ್ಲ ಎನ್ನುವುದನ್ನು ಅವರ ಬಿಳುಚಿಕೊಂಡಿದ್ದ ಮುಖ, ತೀವ್ರತೆ ಕಳೆದುಕೊಂಡಿದ್ದ ಭಾಷಣಗಳೇ ಹೇಳುತ್ತಿದ್ದವು. ಈಗೀಗಂತೂ ಯಡಿಯೂರಪ್ಪ ಅವರ ಮಾತುಗಳ ಜತೆ ಅಳುವಿನ ಕ್ಷೀಣ ದನಿಯೂ ಕೇಳುತ್ತಿದೆ. ಗೊಂದಲದ ಗೋಜಲಿನಲ್ಲಿ

ಒದ್ದಾಡುತ್ತಿದ್ದಾರೇನೋ ಅನ್ನಿಸುವಂತಿತ್ತು ಅವರಮಾತುಗಳು. ಅವರೇ ಹೇಳಿದಂತೆ ಕಾಂಗ್ರೆಸ್ ಪಕ್ಷವನ್ನು ಇನ್ನು ಮುಂದೆ ಟೀಕಿಸುವುದಿಲ್ಲವಂತೆ, ಅವರದೇನಿದ್ದರೂ ಅಧಿಕಾರ ವ್ಯಾಮೋಹದ ಎಚ್.ಡಿ. ದೇವೇಗೌಡ ಮತ್ತು ಮಕ್ಕಳ ವಿರುದ್ಧದ ಹೋರಾಟವಂತೆ. ಒಮ್ಮಿಂದೊಮ್ಮೆಗೇ ಅವರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆಯೂ ಪ್ರೀತಿ ಉಕ್ಕತೊಡಗಿತು, ಕಾಂಗ್ರೆಸ್‌ಮುಕ್ತ ಭಾರತ ನಿರ್ಮಾಣದ ಪ್ರಧಾನಿ ನರೇಂದ್ರ ಮೋದಿ ಫರ್ಮಾನನ್ನೇ ಅವರು ಧಿಕ್ಕರಿಸಿದಂತೆ ಮಾತನಾಡತೊಡಗಿದರು. ಜೆಡಿಎಸ್ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ತಕ್ಷಣ ರೈತರ ಸಾಲ ಮನ್ನಾ ಮಾಡದಿದ್ದರೆ ರಾಜ್ಯದಾದ್ಯಂತ ಬಂದ್ ಆಚರಿಸುವುದಾಗಿ ಎಚ್ಚರಿಕೆ ನೀಡಿದ್ದ ಯಡಿಯೂರಪ್ಪ ಅವರ ಮಾತುಗಳಲ್ಲಿ ಸ್ಪಷ್ಟತೆ ಇಲ್ಲದೇ ಪಕ್ಷದೊಳಗೆ ಗೊಂದಲವನ್ನೇ ಸೃಷ್ಟಿಸಿತು. ಗಳಿಗೆ ಗಳಿಗೆಗೂ ಮಾತುಗಳಿಗೂ ಕ್ರಿಯೆಗೂ ಸಮನ್ವಯ ಸಾಧ್ಯವಾಗದಿರುವುದು ನಿಚ್ಚಳವಾಗಿ ಗೋಚರಿಸುತ್ತಿತ್ತು. ರಾಜ್ಯದಲ್ಲಿ ಬಿಜೆಪಿ ಹಿಂದೆಂದೂ ಕಂಡರಿಯದ ಸಂಘಟನಾ ಸಾಮರ್ಥ್ಯವನ್ನು ಪ್ರದರ್ಶಿಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಮುಖ್ಯ ಕಾರಣರಾಗಿ ದಕ್ಷಿಣ ಭಾರತದ ಮೊಟ್ಟಮೊದಲ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾದ ಯಡಿಯೂರಪ್ಪ ಅವರ ಸ್ಥಿತಿ ಯಾಕೆ ಹೀಗಾಯಿತು? ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೊರಟರೆ ಅವರ ಗೊಂದಲದ ಆಳದಲ್ಲಿ ದುಃಖದ ಕೊಳವಿರುವುದು ಗೊತ್ತಾಗುತ್ತದೆ. ಅವರ ಈಗಿನ ದುಃಖಕ್ಕೆ ‘ಸಂತೋಷ’ವೇ ಕಾರಣ ಎನ್ನುವ ಒಗಟಿನ ಉತ್ತರವೂ ಸಿಗುತ್ತದೆ!

ರಾಜ್ಯ ಬಿಜೆಪಿ ನಾಯಕರನ್ನೇ ನೋಡಿ. ಅನಂತಕುಮಾರ್, ಡಿ.ವಿ.ಸದಾನಂದಗೌಡ, ಜಗದೀಶ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಆರ್. ಅಶೋಕ ಯಾರಲ್ಲೇ ಆದರೂ ತಮ್ಮ ಪಕ್ಷವನ್ನು ಏಕಾಂಗಿಯಾಗಿ ಅಧಿಕಾರಕ್ಕೆ ತಂದುಕೊಡುವ ಸಮೂಹ ನಾಯಕನ ಲಕ್ಷಣ ಇದೆಯೇ? ಎಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಯಡಿಯೂರಪ್ಪ ಶ್ರಮದ ಫಲದಿಂದ ಅಧಿಕಾರ ಅನುಭವಿಸಿದವರೇ. ಅದರಲ್ಲೂ ಸದಾನಂದಗೌಡ, ಶೆಟ್ಟರ್, ಈಶ್ವರಪ್ಪ ಅವರಂತೂ ಯಡಿಯೂರಪ್ಪ ಯಾವುದೇ ಅಧಿಕಾರ ಬಿಟ್ಟುಕೊಡಬೇಕಾದಾಗ (ಬಿ.ಬಿ. ಶಿವಪ್ಪ ಅವರನ್ನು ಬದಿಗೆ ಸರಿಸುವ ಸಂದರ್ಭವೂ ಸೇರಿದಂತೆ) ನಂಬಿಕಸ್ತರೆಂದು ಭಾವಿಸಿದ್ದರಿಂದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ, ವಿಪಕ್ಷ ನಾಯಕನ ಜವಾಬ್ದಾರಿ, ಮುಖ್ಯಮಂತ್ರಿ ಸ್ಥಾನ ಪಡೆಯುವುದು ಸಾಧ್ಯವಾಗಿತ್ತೇ ಹೊರತು ಅವರ ಸ್ವಂತ ಸಾಮರ್ಥ್ಯ

ವೇನೂ ಹೇಳಿಕೊಳ್ಳುವಂತಿರಲಿಲ್ಲ. ಲಿಂಗಾಯತ ಸಮುದಾಯ ಯಡಿಯೂರಪ್ಪ ಅವರ ಹಿಂದೆ ಇತ್ತೆಂಬ ಕಾರಣದಿಂದ ಅವರು ನಾಯಕರಾಗಿ ರೂಪುಗೊಂಡರೆಂದು ಹೇಳಲಾಗುವುದಿಲ್ಲ. ಅವರಲ್ಲಿ ನಾಯಕತ್ವದ ಲಕ್ಷಣಗಳಿದ್ದ ಕಾರಣದಿಂದಲೇ ಮುಂದೊಮ್ಮೆ ಮುಖ್ಯಮಂತ್ರಿಯಾಗಬಹುದೆಂಬ ಕಾರಣದಿಂದ ಈ ಸಮುದಾಯ 2013ರ ಚುನಾವಣೆವರೆಗೂ ಸಂಪೂರ್ಣವಾಗಿ ಅವರ ಬೆನ್ನ ಹಿಂದೆಯೇ ಇತ್ತು (ಈ ಚುನಾವಣೆಯಲ್ಲಿ ಲಿಂಗಾಯತ ಮತಗಳು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಬಹುತೇಕ ಸರಿಸಮನಾಗಿ ಹಂಚಿಕೆಯಾಗಿರುವ ಸಾಧ್ಯತೆ ಇದೆ). ಯಡಿಯೂರಪ್ಪ ಇಲ್ಲದ ಬಿಜೆಪಿ ಹೇಗಿರುತ್ತದೆ ಎನ್ನುವುದನ್ನು 2013ರ ವಿಧಾನಸಭಾ ಚುನಾವಣಾ ಫಲಿತಾಂಶವೇ ತೋರಿಸಿಕೊಟ್ಟಿದೆ.

ಆ ಹೊತ್ತಿಗೆ ಯಡಿಯೂರಪ್ಪ ಬಿಜೆಪಿಗೆ ಕೊನೇ ನಮಸ್ಕಾರ ಹಾಕಿ ಕೆಜೆಪಿ ಸ್ಥಾಪಿಸಿ ಬಿಜೆಪಿಗೆ ಬಲವಾದ ಪೆಟ್ಟನ್ನಷ್ಟೇ ಕೊಟ್ಟಿರಲಿಲ್ಲ, ತಮ್ಮ ಅನಿವಾರ್ಯ ಎಷ್ಟೆಂಬುದನ್ನು ಉಳಿದ ನಾಯಕರ ಮುಖಕ್ಕೆ ಮಂಗಳಾರತಿ ಮಾಡುವ ರೀತಿಯಲ್ಲಿ ಪ್ರದರ್ಶಿಸಿದ್ದರು. ಆದರೆ ರಾಜ್ಯ ಬಿಜೆಪಿ ನಾಯಕರ ಮನಃಸ್ಥಿತಿ ಹೇಗಿತ್ತೆಂದರೆ ತಮ್ಮ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಯಡಿಯೂರಪ್ಪ ಬೇಕು, ಆದರೆ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಇರಕೂಡದು. ಹಾಗೆಂದ ಮಾತ್ರಕ್ಕೆ ಯಡಿಯೂರಪ್ಪ ತಪ್ಪೇ ಮಾಡದಂಥ ಪರಮ ಪ್ರಾಮಾಣಿಕ ನಾಯಕರೇನಲ್ಲ. 2008ರಲ್ಲಿ ಅಧಿಕಾರಕ್ಕೆ ಬಂದಾಗ ಅವರ ಮೇಲೂ ಆರೋಪಗಳಿದ್ದವು. ಆಪರೇಷನ್ ಕಮಲದ ಕಾರಣದಿಂದ ಗಣಿ ದೂಳು ಯಡಿಯೂರಪ್ಪ ಅವರ ರಾಜಕೀಯ ಭವಿಷ್ಯವನ್ನೇ ಹೂತು ಹಾಕುವಷ್ಟು ಬೆಟ್ಟದಂತೆ ಬೆಳೆದಿತ್ತು. ಅಧಿಕಾರದ ಲಾಭಕ್ಕೆ ಯಾರಿಂದ ನೆರವು ಪಡೆದರೋ ಅವರೇ ಅಧಿಕಾರದ ದಾರಿಯುದ್ದಕ್ಕೂ ಯಡಿಯೂರಪ್ಪನವರಿಗೆ ಮಗ್ಗುಲ ಮುಳ್ಳಾದರು. ಇತ್ತೀಚಿನ ವರ್ಷಗಳಲ್ಲಿ ಬಹುತೇಕ ರಾಜಕಾರಣಿಗಳ ಬಹುತೇಕ ದೋಷಗಳು ಯಡಿಯೂರಪ್ಪನವರಲ್ಲೂ ಇದ್ದವು. ಅವರ ವಿರುದ್ಧ ಇದ್ದ ಎಷ್ಟೋ ಮೊಕದ್ದಮೆಗಳಲ್ಲಿ ಒಂದೊಂದಾಗಿ ಆರೋಪ ಮುಕ್ತರಾಗತೊಡಗಿದರು. ಹಾಗೆಂದ ಮಾತ್ರಕ್ಕೆ ಅವರು ಸಂಪೂರ್ಣ ಕ್ಷಮಾರ್ಹರೇನೂ ಅಲ್ಲ. ವಿಚಿತ್ರ ಎಂದರೆ ಬಿಜೆಪಿ

ಯಂಥ ಕೋಮುವಾದಿ ಪಕ್ಷದಲ್ಲಿದ್ದರೂ ಅವರೆಂದೂ ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ಅಮಾನವೀಯವಾಗಿ, ಕೊಳಕಾಗಿ ಮಾತನಾಡಿದ ಉದಾಹರಣೆಗಳಿಲ್ಲ. ಹೆಚ್ಚೆಂದರೆ ಅವರ ಭಾಷಣಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಅಲ್ಪಸಂಖ್ಯಾತರ ತುಷ್ಟೀಕರಣ ಎಂಬ ಪದಗಳಷ್ಟೇ ಕೇಳುತ್ತಿದ್ದವು. ಕೆಜೆಪಿ ಸ್ಥಾಪನೆ ನಂತರ ನಡೆದ ಟಿಪ್ಪು ಸುಲ್ತಾನ್ ಜಯಂತಿಯಲ್ಲೂ ಭಾಗವಹಿಸಿ ಅವರ ಆಳದಲ್ಲಿದ್ದ ಸಾಮರಸ್ಯ ಭಾವವನ್ನು ಪ್ರಕಟಿಸಿದ್ದರು. ಅವರು ಕೆಜೆಪಿಯನ್ನೇ ಪ್ರಜಾಸತ್ತಾತ್ಮಕ ನೆಲೆಗಟ್ಟಿನಲ್ಲಿ ಕಟ್ಟುವುದು ಸಾಧ್ಯವಿತ್ತು. ಈ ನಂಬಿಕೆಯಿಂದಲೇ ಕೆಲವು ಚಿಂತಕರೂ ಕೆಜೆಪಿಯೊಂದಿಗೆ ಗುರುತಿಸಿಕೊಳ್ಳುವಂತೆ ಮಾಡಿತ್ತು. ಆದರೆ ಬಿಜೆಪಿಗೆ ವಾಪಸಾಗುವ ಮೂಲಕ ಹೊಸತೊಂದು ಸಮರ್ಥ ಪ್ರಾದೇಶಿಕ ಪಕ್ಷದ ಕಲ್ಪನೆಯನ್ನು ಹಾಳುಗೆಡವುವ ತಪ್ಪು ಮಾಡಿದರು.

ಯಡಿಯೂರಪ್ಪ ಅವರಂತೆ ಬಿಜೆಪಿಯಲ್ಲಿ ಕಾರ್ಯಕರ್ತೆಯ ಮಟ್ಟದಿಂದ ಬೆಳೆದು ಬಂದವರು ಶೋಭಾ ಕರಂದ್ಲಾಜೆ. ಭಾಷಣ ಸಾಮರ್ಥ್ಯ, ದಿಟ್ಟತನ, ಪುರುಷರ ಸಮಬಲವಾಗಿ ರಾಜಕಾರಣ ಮಾಡುವ ಶಕ್ತಿ, ತಾವು ನಂಬಿರುವ ನಾಯಕನಲ್ಲಿ ಇರಿಸಿರುವ ಧೀರ ನಿಷ್ಠೆಯಿಂದಾಗಿ ಗಮನ ಸೆಳೆದವರು. ಯಡಿಯೂರಪ್ಪ ಅವರು ಮೊದಲ ಬಾರಿ ಅಧಿಕಾರಕ್ಕೆ ಬಂದಾಗಲೇ ಅವರನ್ನು ದುರ್ಬಲಗೊಳಿಸುವ ಪ್ರಯತ್ನವಾಗಿ ಪಕ್ಷದ ಇತರ ನಾಯಕರು ಬಳಸಿ

ಕೊಂಡಿದ್ದು ಶೋಭಾ ಕರಂದ್ಲಾಜೆ ಹೆಸರನ್ನು. ಸ್ವಂತ ಸಾಮರ್ಥ್ಯದಿಂದಲೇ ಬೆಳೆದು ನಾಯಕಿಯಾಗಿರುವ ಶೋಭಾ ಮತ್ತು ಯಡಿಯೂರಪ್ಪ ಅವರ ನಡುವೆ ಸಲ್ಲದ ಸಂಬಂಧ ಕಲ್ಪಿಸಿ ಯಡಿಯೂರಪ್ಪ ಅವರ ಮುನ್ನಡೆಗೆ ಅಡ್ಡಿಪಡಿಸಿದ್ದು ಪುರುಷ ಪ್ರಧಾನ ಸಮಾಜದ ಅಹಂಕಾರ ಮತ್ತು ಅಸೂಯೆಯನ್ನಷ್ಟೇ ಪ್ರದರ್ಶಿಸುತ್ತದೆ. ಯಡಿಯೂರಪ್ಪ ಮತ್ತು ಶೋಭಾ ನಡುವೆ ಅಪ್ಪ ಮತ್ತು ಮಗಳ ಸಂಬಂಧವೇ ಇರಬಹುದು, ಗುರು, ಶಿಷ್ಯೆಯ ಸಂಬಂಧವೇ ಇರಬಹುದು, ಅದು ಯಾವುದೇ ರೀತಿಯ ಸಂಬಂಧವೇ ಆಗಿರಬಹುದು. ಅದು ಅವರಿಬ್ಬರ ಖಾಸಗಿ ನಂಬಿಕೆ ಮತ್ತು ನಿರ್ಧಾರಗಳನ್ನಷ್ಟೇ ಅವಲಂಬಿಸಿರುತ್ತದೆಯೇ ಹೊರತು ಇತರರ ಅನುಮತಿಯನ್ನಲ್ಲ. ಅವರಿಬ್ಬರ ಸಂಬಂಧ ಸಾರ್ವಜನಿಕ ಬದುಕಿಗೆ ಹಾನಿ ಉಂಟುಮಾಡುತ್ತಿದೆ ಎಂದಾಗ ಮಾತ್ರ ಪ್ರಶ್ನಾರ್ಹವಾಗುತ್ತದೆ. ಆದರೆ ಯಡಿಯೂರಪ್ಪ ಅವರನ್ನು ದುರ್ಬಲಗೊಳಿಸುವ ಸಲುವಾಗಿ ಮಾತ್ರ ಶೋಭಾ ಅನಗತ್ಯ ಅವಮಾನ ಅನುಭವಿಸುವಂತೆ ಮಾಡಿದ್ದು ಅಕ್ಷಮ್ಯ ಅಪರಾಧವೇ ಆಗಿತ್ತು. ಈ ಹಿನ್ನೆಲೆಯಲ್ಲೇ ಹಿಂದೆ ಸಚಿವೆಯಾಗಿದ್ದ ಶೋಭಾರನ್ನು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಿಸುವಂತೆ ಮಾಡಿ ಯಡಿಯೂರಪ್ಪ ಕಣ್ಣೀರಿಡುವಂತೆ ಮಾಡಿದ್ದು ಇದೇ ಶಕ್ತಿಗಳೇ. ಸಾಮರ್ಥ್ಯ, ದಿಟ್ಟತನದ ವಿಚಾರದಲ್ಲಿ ರಾಜ್ಯದ ಉಳಿದೆಲ್ಲ ಬಿಜೆಪಿ ನಾಯಕರಿಗೆ ಹೋಲಿಸಿದರೆ ಶೋಭಾ ಎಲ್ಲ ರೀತಿಯಲ್ಲೂ ಒಂದು ಹೆಜ್ಜೆ ಮುಂದೆಯೇ ಇದ್ದುದರಿಂದ ಯಡಿಯೂರಪ್ಪ ಅವರ ಉತ್ತರಾಧಿಕಾರಿಯಂತೆ ಬಿಂಬಿತಗೊಳ್ಳುತ್ತಾರೋ ಎನ್ನುವ ಆತಂಕ ಈ ಎಲ್ಲ ಬೆಳವಣಿಗೆಗಳ ಹಿಂದಿತ್ತು.

ವಿವಿಧ ಆರೋಪಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಯಡಿಯೂರಪ್ಪ ಮತ್ತೆ ತಮ್ಮನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಲಿಲ್ಲ ಎಂಬ ತಕ್ಷಣದ ಕಾರಣದಿಂದ ಪಕ್ಷ ತೊರೆದಂತೆ ಕಾಣುತ್ತಿದ್ದರೂ ಅಲ್ಲಿಯವರೆಗೆ ಪಕ್ಷದ ಒಳಗೇ ನಡೆದ ಅವರ ವಿರುದ್ಧದ ಚಟುವಟಿಕೆಗಳು ಕೆಜೆಪಿ ಸ್ಥಾಪನೆಗೆ ಮುನ್ನುಡಿ ಬರೆದಿದ್ದವು. ಯಡಿಯೂರಪ್ಪ ಹೊರಬಂದ ನಂತರ ಪಕ್ಷದ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ರಾಜ್ಯ ಘಟಕವನ್ನು ತೆರೆಯಮರೆಯಲ್ಲಿ ನಿಯಂತ್ರಿಸತೊಡಗಿದರು. 2013ರಲ್ಲಿ ಬಿಜೆಪಿ ಅನುಭವಿಸಿದ ಹೀನಾಯ ಸೋಲು ಮತ್ತು 2014ರ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಿ ಪ್ರಧಾನಮಂತ್ರಿಯಾಗುವ ಕನಸು ಕಾಣುತ್ತಿದ್ದ ನರೇಂದ್ರ ಮೋದಿ ಸಹಜವಾಗಿಯೇ ಯಡಿಯೂರಪ್ಪ ಅವರನ್ನು ಮತ್ತೆ ಬಿಜೆಪಿಗೆ ಕರೆತಂದರು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಿದ್ದಲ್ಲದೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿದರು. (2004ರಲ್ಲೇ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವ ಸಲುವಾಗಿ ಬೆಂಗಳೂರಿಗೆ ಬಂದಿದ್ದ ವರಿಷ್ಠರೊಬ್ಬರನ್ನು ಹಾದಿ ತಪ್ಪಿಸಿ ಆ ರೀತಿ ಪ್ರಕಟಿಸದಂತೆ ಮಾಡುವಲ್ಲಿ ಯಡಿಯೂರಪ್ಪ ವಿರೋಧಿ ಶಕ್ತಿಗಳು ಯಶಸ್ವಿಯಾಗಿದ್ದವು). ಯಡಿಯೂರಪ್ಪ ಶಕ್ತಿ ಮತ್ತು ಸ್ವತಂತ್ರ ನಿರ್ಧಾರದ ವ್ಯಕ್ತಿತ್ವ ಅರಿತಿದ್ದ ಪಂಚಪ್ರಮುಖರು ಅವರ ಕೈ ಬಲಪಡಿಸುವ ಬದಲು ರಾಜ್ಯ ಘಟಕದಲ್ಲಿ ಗೊಂದಲ ಸೃಷ್ಟಿಸುವ ಮೂಲಕ ಬಹು ಅಧಿಕಾರ ಕೇಂದ್ರಗಳ ಸ್ಥಾಪನೆಗೆ ಕಾರಣರಾದರು. ಕೆಜೆಪಿಯಿಂದ ಬಂದವರೇ ಎಲ್ಲ ಅಧಿಕಾರ ಪಡೆಯುತ್ತಿದ್ದಾರೆ ಎಂದು ಆರೋಪಿಸತೊಡಗಿದರು. ಈಶ್ವರಪ್ಪ ಮೂಲಕ ರಾಯಣ್ಣ ಬ್ರಿಗೇಡ್ ಸ್ಥಾಪಿಸಿ ಪಕ್ಷದಲ್ಲಿ ಪರ್ಯಾಯ ಶಕ್ತಿ ಎಂಬಂತೆ ಬಿಂಬಿಸತೊಡಗಿದರು. ಯಡಿಯೂರಪ್ಪ ಬಿಡುಗಡೆ ಮಾಡಿದ್ದ ಪಕ್ಷದ ಪದಾಧಿಕಾರಿಗಳ ಪಟ್ಟಿಗೂ ಆಕ್ಷೇಪ ವ್ಯಕ್ತಪಡಿಸಿದರು. ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಯಡಿಯೂರಪ್ಪ ಸರ್ವಶಕ್ತ ನಾಯಕರಾಗಿಬಿಡುತ್ತಾರೆಂಬ ಒಂದೇ ಒಂದು ಭಯ ಅವರ ವಿರುದ್ಧ ತೆರೆಮರೆಯ ನಿಯಂತ್ರಣ ಶಕ್ತಿಗಳು ನಿರಂತರ ಸಂಚು ರೂಪಿಸುವುದಕ್ಕೆ ಕಾರಣವಾದವು. ಪಕ್ಷದ ಟಿಕೆಟ್ ನೀಡುವಲ್ಲಿಯೂ ಯಡಿಯೂರಪ್ಪ ಅವರಿಂದ ಸಂಪೂರ್ಣ ಸ್ವಾತಂತ್ರ್ಯ ಕಸಿದುಕೊಳ್ಳಲಾಯಿತು. ಯಡಿಯೂರಪ್ಪ ವಿರುದ್ಧ ಸಕ್ರಿಯವಾಗಿದ್ದ ಶಕ್ತಿಗಳ ವಿರುದ್ಧ ಪಕ್ಷದ ವರಿಷ್ಠರೂ ಕ್ರಮ ಕೈಗೊಳ್ಳಲಿಲ್ಲ.

ಈ ಎಲ್ಲ ಕಾರಣಗಳಿಂದ ಮತ್ತೆ ಬಹುಮತ ಪಡೆಯುವಲ್ಲಿ ವಿಫಲವಾದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಕೇವಲ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಯಡಿಯೂರಪ್ಪ ಅವರ ಪ್ರಬಲ ಬೆಂಬಲಿಗರೆನ್ನಿಸಿ ಕೊಂಡಸುಮಾರು ಹದಿನೈದು ಮಂದಿ ಚುನಾವಣೆಯಲ್ಲಿ ಸೋಲುವುದಕ್ಕೆ ಈ ಶಕ್ತಿಗಳ ಚಿತಾವಣೆಯಿಂದಲೇ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿಗಳೇ ಕಾರಣ ಎಂದು ಪಕ್ಷದೊಳಗಿನ ಮಂದಿಪಿಸುಗುಟ್ಟುತ್ತಿದ್ದಾರೆ. ಬಹುಮತವಿಲ್ಲದಿದ್ದರೂ ಮತ್ತೆ ಮುಖ್ಯಮಂತ್ರಿಯಾಗಿ ಬಹುಮತ ಸಾಬೀತುಪಡಿಸದೇ ರಾಜೀನಾಮೆ ನೀಡಿದ್ದಲ್ಲದೇ ಕುದುರೆ ವ್ಯಾಪಾರ ಪ್ರಯತ್ನದ ಕಳಂಕವನ್ನೂ ಹೊತ್ತು ಅವಮಾನಕ್ಕೆ ಒಳಗಾದರು. ಒಮ್ಮೆಯೂ ಅಧಿಕಾರಾವಧಿಯನ್ನು ಸಂಪೂರ್ಣ ಅನುಭವಿಸಲು ವಿಫಲರಾದ ಯಡಿಯೂರಪ್ಪ ಒಂದರ್ಥದಲ್ಲಿ ಶಾಪಗ್ರಸ್ತ ನಾಯಕರಾಗಿ ದಾಖಲಾದರು. ಮಾತನಾಡಲೇಬೇಕಿದ್ದ ಸಂದರ್ಭದಲ್ಲಿ ಮೌನಕ್ಕೆ ಶರಣಾಗುತ್ತಿದ್ದ, ಮೌನವೇ ಬೇಕಿದ್ದಾಗ ಗುಟುರು ಹಾಕುತ್ತಿದ್ದ ಯಡಿಯೂರಪ್ಪ ತಮ್ಮ ವಿರುದ್ಧ ಖೆಡ್ಡಾ ತೋಡುವ ಕಾರ್ಯದಲ್ಲಿ ನಿರತರಾಗಿದ್ದವರಿಗೆ ತಮಗರಿವಿಲ್ಲದಂತೆ ನೆರವಾದರು. ಹಗ್ಗದ ಮೇಲಿನ ನಡಿಗೆಯಲ್ಲಿ ಅವರು ಕತ್ತಿ ಬೀಸುತ್ತಾ ಸಾಗಿದರೇ ಹೊರತು ಕೆಳಗೊಂದು ಬಲೆ ಕಟ್ಟಿಕೊಳ್ಳುವ ಕಾರ್ಯತಂತ್ರ ರೂಪಿಸುವಲ್ಲಿ ವಿಫಲರಾಗಿ ಇತರರ ಕನಿಕರಕ್ಕೆ ಪಾತ್ರರಾಗುವ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಇತಿಹಾಸ ಬರೆದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)