ಮಂಗಳವಾರ, ಮಾರ್ಚ್ 9, 2021
31 °C

ಪತ್ರಕರ್ತೆ ಗೌರಿ ಹತ್ಯೆ: 651 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪತ್ರಕರ್ತೆ ಗೌರಿ ಹತ್ಯೆ: 651 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಬುಧವಾರ 651 ಪುಟಗಳ ದೋಷಾರೋಪಪಟ್ಟಿ ಸಲ್ಲಿಸಿರುವ ಎಸ್‌ಐಟಿ, ಯಾವುದೇ ಸಂಘಟನೆಯ ಪಾತ್ರದ ಬಗ್ಗೆ ಅದರಲ್ಲಿ ಉಲ್ಲೇಖಿಸಿಲ್ಲ.

ಗೌರಿ ಕುಟುಂಬ ಸದಸ್ಯರು, ಸ್ನೇಹಿತರು, ಅವರ ಕಚೇರಿ ಸಿಬ್ಬಂದಿ, ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ಎಫ್‌ಎಸ್ಎಲ್ ತಜ್ಞರು ಸೇರಿದಂತೆ 134 ಸಾಕ್ಷಿಗಳ ಹೇಳಿಕೆಗಳನ್ನು ಆರೋಪಪಟ್ಟಿಯಲ್ಲಿ ಸೇರಿಸಲಾಗಿದೆ.

‘ಹಿಂದೂ ಯುವ ಸೇನೆ ಮುಖಂಡ ಕೆ.ಟಿ.ನವೀನ್‌ಕುಮಾರ್ ಕೃತ್ಯದಲ್ಲಿ ನೇರವಾಗಿ ಭಾಗಿಯಾಗದಿದ್ದರೂ, ಹಂತಕರಿಗೆ ಆಶ್ರಯ ನೀಡಿದ್ದಾನೆ. ಗೌರಿ ಅವರ ಮನೆ ಹಾಗೂ ಕಚೇರಿಯನ್ನು ಅವರಿಗೆ ತೋರಿಸಿದ್ದಾನೆ. ಹಂತಕರ ಬಗ್ಗೆ ಪೂರ್ಣ ಮಾಹಿತಿ ಗೊತ್ತಿದ್ದರೂ, ವಿಚಾರಣೆಗೆ ಸಹಕರಿಸದೆ ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾನೆ. ಸತ್ಯ ಬಯಲಾಗುತ್ತದೆ ಎಂಬ ಕಾರಣಕ್ಕೆ ಮಂಪರು ಪರೀಕ್ಷೆಯನ್ನೂ ನಿರಾಕರಿಸಿದ್ದಾನೆ’ ಎಂದು ಅಧಿಕಾರಿಗಳು ಆರೋಪಪಟ್ಟಿಯಲ್ಲಿ ಹೇಳಿದ್ದಾರೆ.

ಸ್ನೇಹಿತರ ಬಳಿ ಹೇಳಿದ್ದ: 2017ರ ಸೆಪ್ಟಂಬರ್ ಮೊದಲ ವಾರದಲ್ಲಿ ತನ್ನೂರು ತೊರೆದಿದ್ದ ನವೀನ್, ಗೌರಿ ಹತ್ಯೆಯಾದ ನಂತರ ಊರಿಗೆ ಮರಳಿದ್ದ. ಇಷ್ಟು ದಿನ ಎಲ್ಲಿಗೆ ಹೋಗಿದ್ದೆ ಎಂದು ಸ್ನೇಹಿತರು ಕೇಳಿದಾಗ, ‘ಟಿ.ವಿ ನೋಡಲಿಲ್ವ. ಗೌರಿಯನ್ನು ಕೊಂದವರು ನಾವೇ’ ಎಂದು ಹೇಳಿಕೊಂಡಿದ್ದ. ಅಂತೆಯೇ ಕೆಲ ಆಪ್ತರಿಗೂ ಕರೆ ಮಾಡಿ, ‘ಹಿಂದೂ ದೇವತೆಗಳ ಬಗ್ಗೆ ಕೀಳಾಗಿ ಮಾತನಾಡುವ ಎಲ್ಲರನ್ನೂ ಹೊಡೆಯಬೇಕು’ ಎಂದು ಹೇಳಿದ್ದ ಎನ್ನಲಾಗಿದೆ.

‘ಭಗವಾನ್ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಬಂಧಿತನಾಗಿರುವ ಸುಜಿತ್ ಅಲಿಯಾಸ್ ಪ್ರವೀಣ್ ಬಳಿ ಡೈರಿಯೊಂದು ಸಿಕ್ಕಿದ್ದು, ಅದರಲ್ಲಿ ಗೌರಿ ಹತ್ಯೆಗೆ ಸಂಬಂಧಿಸಿದ ಕೆಲ ಮಾಹಿತಿಗಳಿವೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

‘ಗೌರಿ ಹತ್ಯೆ ಹೇಗೆ ನಡೆಯಬೇಕು? ಅವರನ್ನು ಎಲ್ಲಿಂದ ಹಿಂಬಾಲಿಸಬೇಕು? ಮನೆ ಹತ್ತಿರ ಯಾರು ಇರಬೇಕು? ಎಂಬ ವಿವರಗಳನ್ನು ಡೈರಿಯಲ್ಲಿ ಬರೆಯಲಾಗಿದೆ. ಅಲ್ಲದೆ, ಕೃತ್ಯದ ನಂತರ ಯಾವ ಮಾರ್ಗವಾಗಿ ನಗರ ತೊರೆಯಬೇಕು ಹಾಗೂ ಬೈಕ್‌ನ ನೋಂದಣಿ ಸಂಖ್ಯೆಯನ್ನು ಎಲ್ಲಿ ಬದಲಾಯಿಸಬೇಕು ಎಂಬ ಬಗ್ಗೆಯೂ ಡೈರಿಯಲ್ಲಿ ಬರೆಯಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.