ಸೋಮವಾರ, ಜೂನ್ 21, 2021
24 °C

‘ಗುಣಮಟ್ಟ ಸುಧಾರಣೆಗೆ ಹೊಸ ವಿಧಾನ’

ಎಸ್‌. ಸಂಪತ್‌ Updated:

ಅಕ್ಷರ ಗಾತ್ರ : | |

‘ಗುಣಮಟ್ಟ ಸುಧಾರಣೆಗೆ ಹೊಸ ವಿಧಾನ’

ಸಂದರ್ಶನ: ಡಾ.ಎಸ್‌.ಸಿ. ಶರ್ಮ

ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಅಳೆದು, ತೂಗಿ ‘ಗ್ರೇಡಿಂಗ್‌’ ನೀಡುವ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್‌ನ (ನ್ಯಾಕ್‌) ನೂತನ ನಿರ್ದೇಶಕರಾಗಿ ಕನ್ನಡಿಗರಾಗಿರುವ ಡಾ. ಎಸ್‌.ಸಿ. ಶರ್ಮ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ್ದಾರೆ.

ಆರ್‌.ವಿ. ಎಂಜಿನಿಯರಿಂಗ್‌ ಕಾಲೇಜಿನ ಪ್ರಾಂಶುಪಾಲರಾಗಿ, ತುಮಕೂರು ವಿಶ್ವವಿದ್ಯಾಲಯ ಮತ್ತು ಛತ್ತೀಸಗಡದ ಭಿಲಾಯ್‌ನಲ್ಲಿರುವ ಸ್ವಾಮಿ ವಿವೇಕಾನಂದ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಯಾಗಿ, ರಾಜ್ಯ ಉನ್ನತ ಶಿಕ್ಷಣ ಕೌನ್ಸಿಲ್‌ನ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅನುಭವವಿರುವ ಅವರು, ನ್ಯಾಕ್‌ನ ನಿರ್ದೇಶಕರಾಗಿ ಆಯ್ಕೆಯಾಗಿರುವ ಎರಡನೇ ಕನ್ನಡಿಗರು. ಇವರಿಗೂ ಮೊದಲು ಈ ಸ್ಥಾನದಲ್ಲಿ ಕೆಲಸ ಮಾಡಿದ ಕನ್ನಡಿಗರೆಂದರೆ ಎಚ್‌.ಎ. ರಂಗನಾಥ್‌ (2008 ರಿಂದ 2013).

‘ದೇಶದ ಕುಗ್ರಾಮಗಳಲ್ಲಿನ ಉನ್ನತ ಶಿಕ್ಷಣ ಸಂಸ್ಥೆಯಲ್ಲಿಯೂ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಬೇಕು’ ಎಂಬ ಧ್ಯೇಯ ಹೊಂದಿರುವ ಅವರು ತಮ್ಮ ಜವಾಬ್ದಾರಿ, ಗುರಿ ಮತ್ತು ಯೋಜನೆಗಳ ಕುರಿತು ಇಲ್ಲಿ ಮಾತನಾಡಿದ್ದಾರೆ.

* ದೇಶದಲ್ಲಿ ಉನ್ನತ ಶಿಕ್ಷಣ ಗುಣಮಟ್ಟದಿಂದ ಕೂಡಿದೆಯಾ?

‘ಗುಣಮಟ್ಟ’ ಎಂಬುದಕ್ಕೆ ಕೊನೆಯಿಲ್ಲ. ಪ್ರತಿ ಹಂತದಲ್ಲೂ ಸುಧಾರಣೆ ಆಗುತ್ತಲೇ ಇರಬೇಕು. ಈ ನಿಟ್ಟಿನಲ್ಲಿ ನೋಡಿದರೆ ದೇಶದ ಉನ್ನತ ಶಿಕ್ಷಣದ ಗುಣಮಟ್ಟ ದಿನೇ ದಿನೇ ಹೆಚ್ಚುತ್ತಿದೆ. ಆದರೆ ಇನ್ನಷ್ಟು ಸುಧಾರಣೆಯಾಗಬೇಕು. ಈ ವಿಷಯದಲ್ಲಿ ನ್ಯಾಕ್‌ನ ಜವಾಬ್ದಾರಿಯೂ ಹೆಚ್ಚಿದೆ.

* ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ‘ನ್ಯಾಕ್‌’ ಏನು ಮಾಡುತ್ತಿದೆ?

1994ರಲ್ಲಿ ನ್ಯಾಕ್‌ ಕಾರ್ಯಾರಂಭಿಸಿತು. ಅಲ್ಲಿಂದ ಇಲ್ಲಿಯವರೆಗೂ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟದ ಸುಧಾರಣೆಗೇ ಒತ್ತು ನೀಡಿದೆ. ವಿಶ್ವವಿದ್ಯಾಲಯಗಳ, ಪದವಿ ಕಾಲೇಜುಗಳ ಮೌಲ್ಯಾಂಕನ ಮಾಡಿ ಅವುಗಳಿಗೆ ಗುಣಮಟ್ಟದ ಆಧಾರದ ಮೇಲೆ ಗ್ರೇಡ್‌ಗಳನ್ನು ನೀಡಿದೆ. ಇದನ್ನು ಆಧರಿಸಿ ವಿಶೇಷ ಅನುದಾನಗಳು ಈ ಸಂಸ್ಥೆಗಳಿಗೆ ದೊರೆತಿವೆ. ಸಂಶೋಧನಾ ಚಟುವಟಿಕೆಗಳು ನಡೆದಿವೆ ಮತ್ತು ನಡೆಯುತ್ತಿವೆ. ಸ್ವಾಯತ್ತ ಸಂಸ್ಥೆಗಳು, ಡೀಮ್ಡ್‌ ವಿಶ್ವವಿದ್ಯಾಲಯಗಳು ಮತ್ತು ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಯಲ್ಲಿ ನ್ಯಾಕ್‌ ತನ್ನದೇ ಆದ ಪಾತ್ರ ನಿರ್ವಹಿಸಿದೆ.

* ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡುವ ನ್ಯಾಕ್‌ನ ‘ಪೀರ್‌’ ಸಮಿತಿ ಸದಸ್ಯರಿಗೆ ‘ವಿಶೇಷ ಆತಿಥ್ಯ’, ಉಡುಗೊರೆಗಳನ್ನು ನೀಡುವ ಮೂಲಕ ಈ ಸಂಸ್ಥೆಗಳು ತಮಗೆ ಬೇಕಾದ ಗ್ರೇಡ್‌ಗಳನ್ನು ಸುಲಭವಾಗಿ ಪಡೆಯಬಹುದು ಎಂಬ ಆರೋಪವಿದೆಯಲ್ಲಾ?

ಈ ರೀತಿಯ ಆರೋಪಗಳು ಮೊದಲಿತ್ತಂತೆ, ಆದರೆ ಈಗಿಲ್ಲ. ಗ್ರೇಡಿಂಗ್‌ ನೀಡಲು ಮೂರು ನಾಲ್ಕು ತಿಂಗಳಿಂದ ‘ಡಿಜಿಟಲ್‌ ವೆರಿಫಿಕೇಷನ್‌’ ವಿಧಾನ ಜಾರಿಗೆ ಬಂದಿದೆ. ಇದು ಹೆಚ್ಚು ಪಾರದರ್ಶಕ ಪ್ರಕ್ರಿಯೆ. ಹಾಗಾಗಿ ಇಲ್ಲಿ ‘ವಿಶೇಷ ಆತಿಥ್ಯ’, ಆಮಿಷಗಳಿಗೆ ಅವಕಾಶವೇ ಇಲ್ಲ.

* ಹೊಸ ವಿಧಾನದ ಕುರಿತು ಮಾಹಿತಿ ನೀಡಬಹುದೇ?

ಮೊದಲು ಗ್ರೇಡಿಂಗ್‌ ನೀಡಲು ನ್ಯಾಕ್‌ ತಜ್ಞರ ಸಮಿತಿಯನ್ನು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಕಳುಹಿಸಲಾಗುತ್ತಿತ್ತು. ಅವರು ಸಂಸ್ಥೆಗಳಲ್ಲಿನ ಮೂಲ ಸೌಕರ್ಯ, ಪಠ್ಯಕ್ರಮ, ಬೋಧಕರ ಶೈಕ್ಷಣಿಕ ಸಾಧನೆ, ಸಂಶೋಧನಾ ಚಟುವಟಿಕೆ, ವಿದ್ಯಾರ್ಥಿಗಳ ಫಲಿತಾಂಶ ಸೇರಿದಂತೆ ನಾನಾ ವಿಷಯಗಳನ್ನು ಪರಿಶೀಲಿಸಿ ಅಂಕಗಳನ್ನು ನೀಡುತ್ತಿದ್ದರು. ಇದನ್ನು ಆಧರಿಸಿಯೇ ‘ಎ’, ‘ಬಿ’, ‘ಸಿ’ ಸೇರಿದಂತೆ ವಿವಿಧ ಗ್ರೇಡ್‌ಗಳು ದೊರೆಯುತ್ತಿದ್ದವು. ಈ ವ್ಯವಸ್ಥೆಯಲ್ಲಿ ಕೆಲ ಲೋಪಗಳು ಇದ್ದಿದ್ದರಿಂದ ಹೊಸ ಪರಿಷ್ಕೃತ ವಿಧಾನ ಜಾರಿಗೊಳಿಸಲಾಗಿದೆ.

ಹೊಸ ವಿಧಾನದಲ್ಲಿ ನ್ಯಾಕ್‌, ತಜ್ಞರ ಸಮಿತಿಯ ಪರಿಶೀಲನೆಯ ಜತೆಗೆ ‘ಡಿಜಿಟಲ್‌ ಪರಿಶೀಲನೆ’ಯನ್ನು‌ ಸಹ ನಡೆಸಲಿದೆ. ತಜ್ಞರ ಸಮಿತಿಗೆ ಶೇ 30ರಷ್ಟು ಅಂಕ ನೀಡಲು ಮಾತ್ರ ಅವಕಾಶ ಇದೆ. ಉಳಿದ 70ರಷ್ಟು ಅಂಕಗಳಿಗೆ ಡಿಜಿಟಲ್‌ ಅಥವಾ ಆನ್‌ಲೈನ್‌ ಪರಿಶೀಲನೆ ನಡೆಯುತ್ತದೆ. ವೇಗವಾಗಿ ಮೌಲ್ಯಾಂಕನ ಮಾಡಲು ಸಾಧ್ಯವಾಗುತ್ತದೆ. ಅಲ್ಲದೆ ಇದರ ಭಾಗವಾಗಿ ಕಾಲೇಜು ಅಥವಾ ವಿಶ್ವವಿದ್ಯಾಲಯದ ಇಡೀ ವಾತಾವರಣದ ಕುರಿತು ವಿದ್ಯಾರ್ಥಿಗಳಿಂದ ಆನ್‌ಲೈನ್‌ ಮೂಲಕ ‘ಫೀಡ್‌ಬ್ಯಾಕ್‌’ ಪಡೆದುಕೊಳ್ಳಲಾಗುತ್ತದೆ.

* ನ್ಯಾಕ್‌ ಇಷ್ಟೆಲ್ಲಾ ಮಾಡುತ್ತಿದ್ದರೂ, ಅಂತರರಾಷ್ಟ್ರೀಯ ಮಟ್ಟದಲ್ಲಿ ಉನ್ನತ ರ‍್ಯಾಂಕಿಂಗ್‌ ಪಡೆಯಲು ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಏಕೆ ಸಾಧ್ಯವಾಗುತ್ತಿಲ್ಲ?

ಯುಜಿಸಿ, ರೂಸಾ ಸೇರಿದಂತೆ ವಿವಿಧೆಡೆಯಿಂದ ವಿಶೇಷ ಅನುದಾನ ಪಡೆಯುವ ಉದ್ದೇಶಕ್ಕಾಗಿ ಮಾತ್ರ ಶಿಕ್ಷಣ ಸಂಸ್ಥೆಗಳು ನ್ಯಾಕ್‌ ಮೌಲ್ಯಾಂ

ಕನಕ್ಕೆ ಒಳಗಾಗುತ್ತಿವೆ. ಇದಕ್ಕಷ್ಟೇ ಸೀಮಿತವಾಗದೆ, ಉನ್ನತ ಧ್ಯೇಯಗಳೊಂದಿಗೆ ಈ ಸಂಸ್ಥೆಗಳು ಕೆಲಸ ಮಾಡಬೇಕು. ಈಗ ನ್ಯಾಕ್‌ ಮಾನ್ಯತೆ ಕಡ್ಡಾಯವಾಗಿದೆ. ನ್ಯಾಕ್‌ ತಂದಿರುವ ಸುಧಾರಿತ ಮೌಲ್ಯಾಂಕನ ವಿಧಾನದಿಂದ ಮುಂದಿನ ದಿನಗಳಲ್ಲಿ ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ಉನ್ನತ ರ‍್ಯಾಂಕ್‌ಗಳನ್ನು ಪಡೆದು ಮಿಂಚಲಿವೆ.

* ನಕಲಿ ಅಂಕಪಟ್ಟಿ, ಅಕ್ರಮ ನೇಮಕಾತಿಗಳಿಗೆ ತಡೆ ಹೇಗೆ?

ಅಂಕಪಟ್ಟಿಗಳಿಗೆ ವಾಟರ್‌ ಮಾರ್ಕಿಂಗ್‌ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೊಳಿಸಿದರೆ ನಕಲಿ ಅಂಕಪಟ್ಟಿ ಪ್ರಶ್ನೆಯೇ ಬರುವುದಿಲ್ಲ.

* ಖಾಸಗಿ ವಿ.ವಿ. ಗಳಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅನುಮತಿ ಕೊಡುವ ಅಗತ್ಯವಿದೆಯಾ?

ಉನ್ನತ ಶಿಕ್ಷಣ ಪ್ರವೇಶಿಸುವವರ ಅನುಪಾತ ಹೆಚ್ಚಿಸಬೇಕು ಎಂಬ ಗುರಿಯಿದೆ. ಆದರೆ ಆ ಗುರಿ ಈಡೇರಿಸಲು ದೇಶದಲ್ಲಿರುವ ಸರ್ಕಾರಿ ವಿಶ್ವವಿದ್ಯಾಲಯ, ಕಾಲೇಜುಗಳಿಂದ ಸಾಧ್ಯವೇ? ಅದಕ್ಕಾಗಿ ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುಮತಿ ನೀಡುವುದರಲ್ಲಿ ತಪ್ಪಿಲ್ಲ. ಆದರೆ ಖಾಸಗಿ ವಿಶ್ವವಿದ್ಯಾಲಯಗಳು ಮಿತಿ ಮೀರಿ ಶುಲ್ಕ ವಿಧಿಸುವುದು ತಪ್ಪು. ಈ ವಿಷಯದಲ್ಲಿ ಅವುಗಳು ಸಾಮಾಜಿಕ ಬದ್ಧತೆ ಮತ್ತು ಸಾಮಾಜಿಕ ನ್ಯಾಯ ಕಾಯ್ದುಕೊಳ್ಳಬೇಕು.

* ವಿ.ವಿ. ಮತ್ತು ಕಾಲೇಜುಗಳು ವಿದ್ಯಾರ್ಥಿಗಳಲ್ಲಿ ಜ್ಞಾನ, ಶಿಸ್ತು ಮೂಡಿಸುವ ಮತ್ತು ವಿವೇಕವನ್ನು ವಿಸ್ತರಿಸುವ ಕೇಂದ್ರಗಳಾಗಿದ್ದವು. ಆದರೆ ಈಗ ಇವು ಉದ್ಯೋಗ ತರಬೇತಿ ಕೇಂದ್ರಗಳಾಗಿರುವುದು ವಿಪರ್ಯಾಸ ಅಲ್ಲವೇ. ಇದರ ಬದಲಾವಣೆ ಹೇಗೆ?

ಉನ್ನತ ಶಿಕ್ಷಣ ಸಂಸ್ಥೆಗಳು ಪದವಿಯ ಜತೆಗೆ ಶಿಸ್ತು, ವಿವೇಕವನ್ನು ಕಲಿಸಲೇಬೇಕು. ಆದರೆ ವಿಶ್ವವಿದ್ಯಾಲಯ ನೀಡುವ ಪದವಿಗಳಿಂದಲೇ ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆಯುವುದಿಲ್ಲ. ಅದಕ್ಕೆ ಬೇಕಾದ ಕೌಶಲವನ್ನು ಅವರು ಕಲಿಯಲೇಬೇಕು. ಅದಕ್ಕೆ ಉನ್ನತ ಶಿಕ್ಷಣ ಸಂಸ್ಥೆಗಳೇ ವೇದಿಕೆ ಕಲ್ಪಿಸಬೇಕು.

* ನಿಮ್ಮ ಮುಂದಿರುವ ಗುರಿ, ಯೋಜನೆಗಳಾವುವು?

ದೇಶದ ಕುಗ್ರಾಮಗಳಲ್ಲಿರುವ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಬೇಕು. ಈ ನಿಟ್ಟಿನಲ್ಲಿ ಕ್ರಿಯಾ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವ ಗುರಿ ಇದೆ. ಹೊಸ ವಿಧಾನಕ್ಕೆ ಅಗತ್ಯವಿರುವ ಸಾಫ್ಟ್‌ವೇರ್‌ ಅನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ. ದೇಶದ ವಿವಿಧ ರಾಜ್ಯಗಳಲ್ಲಿನ ಶೈಕ್ಷಣಿಕ ಗುಣಮಟ್ಟದ ಸಮಗ್ರ ಅಧ್ಯಯನಕ್ಕೆ ಸಂಶೋಧನಾ ಘಟಕವನ್ನು ಸ್ಥಾಪಿಸುವ ಉದ್ದೇಶವಿದೆ. ಹಿಂದಿನ ವರ್ಷಗಳ ದತ್ತಾಂಶಗಳನ್ನು ಸಂಗ್ರಹಿಸಿ, ಅವುಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಶಿಕ್ಷಣ ಸಂಸ್ಥೆಗಳ ಗುಣಮಟ್ಟಕ್ಕೆ ಸ್ಪಷ್ಟ ದಿಕ್ಕು ನೀಡುವ ಯೋಜನೆಯಿದೆ.

* ರಾಜ್ಯದ ಹೊಸ ಸಮ್ಮಿಶ್ರ ಸರ್ಕಾರಕ್ಕೆ ನಿಮ್ಮ ಸಲಹೆಗಳೇನು?

ಉನ್ನತ ಶಿಕ್ಷಣಕ್ಕೆ ಸರ್ಕಾರ ಆದ್ಯತೆ ನೀಡಬೇಕು. ಬೋಧಕರಿಗೆ ಉನ್ನತಮಟ್ಟದ ತರಬೇತಿ ನೀಡಿ, ಸಂಶೋಧನಾ ಚಟುವಟಿಕೆಗೆ ಉತ್ತೇಜಿಸಬೇಕು. ಜತೆಗೆ ಶಿಕ್ಷಣ ಸಂಸ್ಥೆಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.