ಚಾಕುವಿನಿಂದ ಇರಿದು ನೃತ್ಯ ಶಿಕ್ಷಕನ ಕೊಲೆ

7
ಹಣಕ್ಕಾಗಿ ಕೃತ್ಯವೆಸಗಿದ ಸುಲಿಗೆಕೋರರು

ಚಾಕುವಿನಿಂದ ಇರಿದು ನೃತ್ಯ ಶಿಕ್ಷಕನ ಕೊಲೆ

Published:
Updated:

ಬೆಂಗಳೂರು: ಗೊರಗುಂಟೆಪಾಳ್ಯ ಬಳಿ ದುಷ್ಕರ್ಮಿಗಳು, ಪ್ರೇಮ್‌ ಗೌತಮ್‌ (30) ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ಹಾಸನದ ಪ್ರೇಮ್‌, ನೃತ್ಯ ಶಿಕ್ಷಕ. ಅವರ ಸ್ನೇಹಿತರೊಬ್ಬರು ಕಿರುಚಿತ್ರ ನಿರ್ಮಿಸುತ್ತಿದ್ದಾರೆ. ಅದರ ನೃತ್ಯ ಸಂಯೋಜನೆಗೆಂದು ಪ್ರೇಮ್‌ ನಗರಕ್ಕೆ ಬಂದಿದ್ದಾಗಲೇ ಈ ಘಟನೆ ನಡೆದಿದೆ.

ಬಸ್ಸಿನಲ್ಲಿ ಶನಿವಾರ ತಡರಾತ್ರಿ ನಗರಕ್ಕೆ ಬಂದು ಗೊರಗುಂಟೆಪಾಳ್ಯದಲ್ಲಿ ಇಳಿದಿದ್ದ ಅವರು, ಸ್ನೇಹಿತನ ಸ್ಟುಡಿಯೊದತ್ತ ನಡೆದುಕೊಂಡು ಹೊರಟಿದ್ದರು. ಅದೇ ವೇಳೆ ಅವರನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು, ಹಣ ಹಾಗೂ ಮೊಬೈಲ್‌ ಸುಲಿಗೆ ಮಾಡಲು ಯತ್ನಿಸಿದ್ದರು ಎಂದು

ಆರ್‌.ಎಂ.ಸಿ ಯಾರ್ಡ್‌ ಪೊಲೀಸರು ಹೇಳಿದರು.

ದುಷ್ಕರ್ಮಿಗಳಿಂದ ತಪ್ಪಿಸಿಕೊಂಡ ಪ್ರೇಮ್‌ ಓಡಲಾರಂಭಿಸಿದ್ದರು. ಬೆನ್ನಟ್ಟಿ ಹೋದ ದುಷ್ಕರ್ಮಿಗಳು ಅವರ ತೊಡೆಗೆ ಚಾಕುವಿನಿಂದ ಮೂರು ಬಾರಿ ಇರಿದಿದ್ದಾರೆ. ಕತ್ತಿಗೂ ಚಾಕು ಚುಚ್ಚಿದ್ದಾರೆ. ನಂತರ ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದರು.

ತೀವ್ರ ಗಾಯಗೊಂಡ ಅವರು ರಕ್ತಸ್ರಾವವಾಗುತ್ತಿದ್ದ ಸ್ಥಿತಿಯಲ್ಲೇ ಸ್ಟುಡಿಯೊದತ್ತ ನಡೆದುಕೊಂಡು ಹೊರಟಿದ್ದರು. ದಾರಿಮಧ್ಯೆಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು.

‘ಸುಲಿಗೆಕೋರರೇ ಈ ಕೃತ್ಯ ಎಸಗಿದ್ದಾರೆ. ಅವರ ಪತ್ತೆಗಾಗಿ ಘಟನಾ ಸ್ಥಳದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲನೆ ನಡೆಸುತ್ತಿದ್ದೇವೆ’ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry