ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರದ ವಿವಿಧ ಇಲಾಖೆ ಕಚೇರಿಗಳ ಬಾಡಿಗೆ ₹1,000 ಕೋಟಿ ಎಂಬುದು ನಿಜವೇ?

Published 1 ಜೂನ್ 2023, 1:11 IST
Last Updated 1 ಜೂನ್ 2023, 1:11 IST
ಅಕ್ಷರ ಗಾತ್ರ

‘ದೆಹಲಿಯಲ್ಲಿರುವ ಸರ್ಕಾರದ ವಿವಿಧ ಇಲಾಖಾ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ಇವೆ. ವರ್ಷಕ್ಕೆ ಅಂದಾಜು ₹600 ಕೋಟಿ ಬಾಡಿಗೆ ಕಟ್ಟಲಾಗುತ್ತಿದೆ. ಈ ಎಲ್ಲಾ ಕಟ್ಟಡಗಳ ಮಾಲೀಕರು ಕಾಂಗ್ರೆಸ್ಸಿಗರು, ಎಡಪಕ್ಷಗಳವರು, ಕೆಲ ಪತ್ರಕರ್ತರು. ಮೋದಿಜೀ ಈಗ ಆ ಎಲ್ಲಾ ಕಟ್ಟಡಗಳನ್ನು ಹೊಸ ಸಂಸತ್ ಭವನಕ್ಕೆ ಸ್ಥಳಾಂತರಿಸಲಿದ್ದಾರೆ. ಮೋದಿ ಅವರು, ಎರಡು ವರ್ಷದ ಬಾಡಿಗೆ ಹಣದಲ್ಲಿ ಹೊಸ ಸಂಸತ್ ಭವನ ಕಟ್ಟಡವನ್ನೇ ನಿರ್ಮಿಸಿದ್ದಾರೆ. ತಮಗೆ ಬರುವ ಬಾಡಿಗೆ ಹಣ ಖೋತಾ ಆಯಿತು ಎಂದು ವಿರೋಧ ಪಕ್ಷಗಳು ಬಾಯಿಬಡಿದುಕೊಳ್ಳುತ್ತಿವೆ’ ಎಂಬ ವಿವರ ಇರುವ ಪೋಸ್ಟ್‌ ಮತ್ತು ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಇದು ತಪ್ಪು ಮಾಹಿತಿ.

ದೆಹಲಿಯಲ್ಲಿರುವ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿವೆ. ಅದಕ್ಕೆ ವಾರ್ಷಿಕ ಸುಮಾರು ₹1,000 ಕೋಟಿ ಬಾಡಿಗೆ ಕಟ್ಟಬೇಕು ಎಂದು 2020ರಲ್ಲಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿತ್ತು. ಆದರೆ ಈ ಬಗ್ಗೆ ವಿವರ ನೀಡಿರಲಿಲ್ಲ. ಇನ್ನು ಈ ಬಗ್ಗೆ ಲೋಕಸಭೆಯಲ್ಲಿ ಪ್ರಶ್ನಿಸಿದಾಗ, ‘ಯಾವ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿಇವೆ, ಕಡ್ಡಗಳ ಮಾಲೀಕರು ಯಾರು ಮತ್ತು ಕಟ್ಟಲಾಗುತ್ತಿರುವ ಬಾಡಿಗೆ ಎಷ್ಟು ಎಂಬುದರ ಬಗ್ಗೆ ಮಾಹಿತಿ ಲಭ್ಯವಿಲ್ಲ’ ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು 2021ರ ಜುಲೈನಲ್ಲಿ ಮಾಹಿತಿ ನೀಡಿತ್ತು. ಹೀಗಾಗಿ ವಿರೋಧ ಪಕ್ಷಗಳ ನಾಯಕರ ಕಟ್ಟಡಗಳಲ್ಲಿ ಸರ್ಕಾರಿ ಕಚೇರಿಗಳು ಬಾಡಿಗೆಗೆ ಇವೆ ಎಂಬ ಆರೋಪಕ್ಕೆ ಆಧಾರವಿಲ್ಲ. ಜತೆಗೆ ₹600 ಕೋಟಿ ಬಾಡಿಗೆ ಕಟ್ಟಲಾಗುತ್ತಿದೆ ಎಂಬುದೂ ಸುಳ್ಳು ಮಾಹಿತಿ. ಇನ್ನು ಸೆಂಟ್ರಲ್‌ ವಿಸ್ತಾ ಯೋಜನೆ ಅಡಿ ಹಲವು ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಸೆಂಟ್ರಲ್‌ ವಿಸ್ತಾ ಯೋಜನೆಯ ವೆಚ್ಚ ₹20,000 ಕೋಟಿ. ಆ ಕಟ್ಟಡಗಳಿಗೆ ಎಲ್ಲಾ ಸರ್ಕಾರಿ ಕಚೇರಿಗಳನ್ನು ಸ್ಥಳಾಂತರಿಸಲಾಗುತ್ತಿದೆ. ಆ ಕಚೇರಿಗಳನ್ನು ನೂತನ ಸಂಸತ್ ಭವನಕ್ಕೆ ಸ್ಥಳಾಂತರಿಸುತ್ತಿಲ್ಲ. ವೈರಲ್‌ ಆಗಿರುವ ಪೋಸ್ಟ್‌ ಮತ್ತು ಪೋಸ್ಟರ್‌ನಲ್ಲಿ ಇರುವ ಮಾಹಿತಿ ತಪ್ಪಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT