ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗನ್‌ ಸೋದರಮಾವ ಟಿಟಿಡಿ ಅಧ್ಯಕ್ಷ ಸುಬ್ಬಾರೆಡ್ಡಿಗೆ ‘ಧರ್ಮ’ ಸಂಕಟ

Last Updated 23 ಜೂನ್ 2019, 11:51 IST
ಅಕ್ಷರ ಗಾತ್ರ

ಹೈದರಾಬಾದ್‌: ತಿರುಪತಿ ತಿರುಮಲ ದೇಗುಲ ಆಡಳಿತ ಮಂಡಳಿಗೆ ಆಂಧ್ರದ ಮುಖ್ಯಮಂತ್ರಿ ವೈ.ಎಸ್‌ ಜಗನ್‌ ಮೋಹನ ರೆಡ್ಡಿ ಅವರು ತಮ್ಮ ಸೋದರಮಾವವೈ. ವಿ ಸುಬ್ಬಾರೆಡ್ಡಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದೇ ತಡ ಆಂಧ್ರದಲ್ಲಿ ವಿವಾದವೊಂದು ಮನೆ ಮಾಡಿತ್ತು. ಕ್ರೈಸ್ತ ಧರ್ಮೀಯರಾದ ಸುಬ್ಬಾರೆಡ್ಡಿ ಅವರು ಹಿಂದೂಗಳ ಅತಿದೊಡ್ಡ ದೇಗುಲವನ್ನು ಮುನ್ನಡೆಸುವಂತಾಗಿದೆ ಎಂಬ ಗುಲ್ಲೆದ್ದಿತು. ಆದರೆ, ‘ಸುಬ್ಬಾರೆಡ್ಡಿ ತಾವು ಕ್ರೈಸ್ತರಲ್ಲ. ಇಂದು, ಎಂದು ಎಂದೆಂದೂ ತಾವು ಹಿಂದುವೇ,’ ಎಂದು ಸ್ಪಷ್ಟಪಡಿಸಿದ್ದಾರೆ.

ಅಷ್ಟಕ್ಕೂ ವಿವಾದ ಆರಂಭವಾಗಿದ್ದು ಇನ್ಫೋಸಿಸ್‌ನ ಸುಧಾ ಮೂರ್ತಿ ಅವರು ರಾಜೀನಾಮೆ ನೀಡುವುದರ ಮೂಲಕ. ಟಿಡಿಪಿಯ ಸದಸ್ಯರಾಗಿದ್ದ ಅವರು ಅನ್ಯ ಕಾರಣಗಳಿಗಾಗಿ ರಾಜೀನಾಮೆ ನೀಡಿದ್ದರು. ಅವರು ಅತ್ತ ರಾಜೀನಾಮೆ ನೀಡುತ್ತಲೇ ಇತ್ತ ಸಾಮಾಜಿಕ ತಾಣಗಳಲ್ಲಿ ವೈ.ವಿ ಸುಬ್ಬಾರೆಡ್ಡಿ ಅವರ ಧರ್ಮದ ಕುರಿತು ಚರ್ಚೆಗಳು ಆರಂಭವಾದವು.

‘ಟಿಡಿಪಿಯ ಸದಸ್ಯತ್ವಕ್ಕೆ ಸುಧಾ ಮೂರ್ತಿ ರಾಜೀನಾಮೆ ನೀಡಿದ್ದಾರೆ. ಜಗನ್‌ ಮೋಹನ್‌ ರೆಡ್ಡಿ ಅವರು ತಮ್ಮ ಸೋದರಮಾವಯೆಹೋವಾ ವಿನ್ಸೆಂಟ್‌ ಸುಬ್ಬಾರೆಡ್ಡಿ (ವೈ.ವಿ ಸುಬ್ಬಾರೆಡ್ಡಿ) ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಅವರು ಕಟ್ಟಾ ಕ್ರೈಸ್ತವಾದಿ. ತಿರುಪತಿ ತಿರುಮಲ ದೇವಾಲಯದ ಅಗಾಧ ಹಣದ ಮೂಲಕ ಅವರು ಆಂಧ್ರದಲ್ಲಿ ಕ್ರೈಸ್ತ ಧರ್ಮಕ್ಕೆ ಪ್ರೋತ್ಸಾಹ ನೀಡಲಿದ್ದಾರೆ,’ ಎಂದು ಸಂದೇಶಗಳು ಹರಿದಾಡಿದವು. ಜನರೂ ಅದನ್ನು ಇತರರೊಂದಿಗೆ ಹಂಚಿಕೊಂಡರು. ಎಷ್ಟರ ಮಟ್ಟಿಗೆ ಎಂದರೆ, ಆಂಧ್ರದ ಖ್ಯಾತ ಶಿಕ್ಷಣ ತಜ್ಞೆ ಮಧು ಪೂರ್ಣಿಮಾ ಕ್ವಿಶ್ವಾರ ಅವರು ಆ ಸಂದೇಶವನ್ನು ತಮ್ಮ ಟ್ವಿಟರ್‌ ಖಾತೆ ಮೂಲಕ ಹಂಚಿಕೊಂಡಿದ್ದರು.

‘ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಒಬ್ಬ ವ್ಯಕ್ತಿಯನ್ನು ಹಿಂದೂ ದೇಗುಲ ಆಡಳಿತ ಮಂಡಳಿಗೆ ನೇಮಕ ಮಾಡುವ ಮೂಲಕ ಜಗನ್‌ ಅವರು ರಾಜ್ಯದಲ್ಲಿ ಕ್ರೈಸ್ತ ಧರ್ಮಕ್ಕೆ ಪ್ರೋತ್ಸಾಹ ನೀಡಲು ಹೊಂಚು ಹಾಕಿದ್ದಾರೆ,’ ಎಂದೆಲ್ಲ ಚರ್ಚೆಗಳಾದವು.

ವಿಕಿಪೀಡಿಯಾದಲ್ಲೂ ಸುಬ್ಬಾರೆಡ್ಡಿ ಅವರ ಮಾಹಿತಿಯನ್ನು ಹಲವು ಬಾರಿ ಬದಲಿಸಲಾಯಿತು. ವಿವಾದಕ್ಕೂ ಮೊದಲು ವಿಕಿಪೀಡಿಯಾದಲ್ಲಿ ಸುಬ್ಬಾರೆಡ್ಡಿ ಕುರಿತು ಇದ್ದ ಮಾಹಿತಿ ಕೇವಲ ಮೂರು ಸಾಲುಗಳು. ನಂತರ ಅದು ಬೆಳೆಯುತ್ತಾ ಹೋಯಿತು. ಸುಬ್ಬಾರೆಡ್ಡಿ ಧರ್ಮವನ್ನು ‘ಕ್ರೈಸ್ತ‘ ಎಂದು ನಮೂದಿಸಲಾಯಿತು.

ಆದರೆ, ವಿವಾದದ ಬೆನ್ನು ಬಿದ್ದ ಸತ್ಯ ಶೋಧನಾ ವೆಬ್‌ಸೈಟ್‌ ‘ಬೂಮ್‌ಲೈವ್’ ರೆಡ್ಡಿ ಚಿಕ್ಕಪ್ಪ ಕ್ರೈಸ್ತರಲ್ಲ ಹಿಂದೂ ಎಂಬುದನ್ನು ಬಯಲು ಮಾಡಿದೆ.

‘BOOM’ ಮೊದಲಿಗೆ ರೆಡ್ಡಿ ಚಿಕ್ಕಪ್ಪ ಸುಬ್ಬಾರೆಡ್ಡಿ ಅವರನ್ನು ಮಾತನಾಡಿಸಿದೆ. ಈ ವೇಳೆ ತಾವು ಅಪ್ಪಟ ಹಿಂದೂ ಎಂಬುದನ್ನು ಅವರು ಸಾಕ್ಷಿ ಸಹಿತ ವಿವರಿಸಿದ್ದಾರೆ. ‘ನಾನು ಹಿಂದೂ ಆರಾಧಕ. ಈ ಜನ ನನ್ನ ವಿರುದ್ಧ ಇಲ್ಲ ಸಲ್ಲದ್ದನ್ನು ಹರಡುತ್ತಿದ್ದಾರೆ. ನನ್ನ ಇಡೀ ಕುಟುಂಬ ಹಿಂದೂ. ನನ್ನ ತಂದೆ, ತಾಯಿ, ಪತ್ನಿ, ಮಕ್ಕಳು ಎಲ್ಲರೂ ಹಿಂದೂಗಳೇ. ನಾವು ಹಿಂದೂ ಧರ್ಮದ ಅನುಯಾಯಿಗಳು,’ ಎಂದು ಸ್ಪಷ್ಟಪಡಿಸಿದ್ದಾರೆ.

ಈ ವಿವಾದವು ತಮ್ಮ ಚಾರಿತ್ರ್ಯವಧೆ ಮಾಡುವ ಪ್ರಯತ್ನಗಳು ಎಂದು ಅವರು ಹೇಳಿದ್ದಾರೆ. ಅಲ್ಲದೆ, ‘ನಾನು ಮೂರ್ನಾಲ್ಕು ತಿಂಗಳಿಗೊಮ್ಮೆ ಶಿರಡಿಗೆ ಭೇಟಿ ನೀಡುತ್ತೇನೆ. ಪೂಜೆ ಮಾಡುತ್ತೇನೆ. ಶಬರಿಮಲೆಗೆ ನಿರಂತರವಾಗಿ ಹೋಗುತ್ತಿದ್ದೇನೆ. ನನ್ನ ಮನೆಯಲ್ಲಿ ಹಿಂದೂ ದೇವದೇವತೆಗಳನ್ನು ಪೂಜಿಸುತ್ತಿದ್ದೇನೆ. ಇಷ್ಟಾದರೂ ಈ ಜನ ಹೇಗೆ ಇಂಥ ಸುದ್ದಿಗಳನ್ನು ಹರಡಲು ಸಾಧ್ಯ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಇತ್ತೀಚೆಗೆ ಅವರು ಆಂಧ್ರದ ಸ್ಥಳೀಯ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಅವರ ಕೊರಳಲ್ಲಿ ವೆಂಕಟೇಶ್ವರನ ಪದಕದ ಚಿನ್ನದ ಸರ ಕಂಡು ಬಂದಿತ್ತು.


ರೆಡ್ಡಿ ಅವರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲೂ ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ನಮೂದು ಮಾಡಿದ್ದಾರೆ.

ಇನ್ನು ತಮ್ಮ ಪೂರ್ಣ ಹೆಸರಿನ ಕುರಿತು ಎದ್ದಿರುವ ಗುಸುಗುಸುಗಳಿಗೂ ಸ್ಪಷ್ಟನೆಯನ್ನೂ ನೀಡಿದ್ದಾರೆ ಸುಬ್ಬಾ ರೆಡ್ಡಿ. ನನ್ನ ಪೂರ್ಣ ಹೆಸರು ‘ಯರ್ರಂ ವೆಂಕಟ ಸುಬ್ಬಾ ರೆಡ್ಡಿ.’ ಎಲ್ಲರೂ ತಿಳಿದುಕೊಂಡಂತೆ ‘ಯಹೋವಾ ವಿನ್ಸೆಂಟ್‌ ಸುಬ್ಬಾರೆಡ್ಡಿ’ ಅಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಸುಬ್ಬಾ ರೆಡ್ಡಿ ಅವರ ಧರ್ಮದ ಕುರಿತು ಹರಿದಾಡುತ್ತಿರು ಸಂದೇಶವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದ ಶಿಕ್ಷಣ ತಜ್ಞೆ ಮಧು ಪೂರ್ಣಿಮ ಕಿಶ್ವಾರ ಅವರನ್ನೂ ‘BOOM’ ಮಾತನಾಡಿಸಿದೆ. ‘ತಾವು ಏಕೆ ಈ ಸಂದೇಶವನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿರಿ?’ ಎಂದು ಕೇಳಿದ ಪ್ರಶ್ನೆಗೆ ಅವರು ನೀಡಿದ ಉತ್ತರ ಹೀಗಿತ್ತು. ‘ಒಬ್ಬ ಹಿರಿಯ ಟಿ.ವಿ ಪತ್ರಕರ್ತರಿಂದ ಆ ಸಂದೇಶ ನನಗೆ ಬಂದಿತ್ತು. ಹೀಗಾಗಿ ನಾನೂ ನಂಬಿದೆ. ಎಲ್ಲವನ್ನೂ ಎಲ್ಲರೂ ಪರಿಶೀಲಿಸಲು ಆಗುವುದಿಲ್ಲ,’ ಎಂದಿದ್ದಾರೆ. ಅಲ್ಲದೆ, ಈ ಸಂದೇಶವನ್ನು ‘ನೀವು ನಂಬುತ್ತೀರಾ?’ ಎಂದು ಕೇಳಿದ ಪ್ರಶ್ನೆಗೆ, ‘ವೈ.ಎಸ್‌ ರಾಜಶೇಖರ ರೆಡ್ಡಿ ಅವರು ಬದುಕಿದ್ದಾಗ ಕ್ರೈಸ್ತ ಧರ್ಮಕ್ಕೆ ಪ್ರೋತ್ಸಾಹಿಸಿದ್ದು ಗೊತ್ತಿರುವ ಸತ್ಯವಲ್ಲವೇ?’ ಎಂದು ಅವರು ಮರುಪ್ರಶ್ನೆ ಮಾಡಿದರಾದರೂ, ಸುಬ್ಬಾರೆಡ್ಡಿ ಕ್ರೈಸ್ತರು ಎಂಬುದಕ್ಕೆ ಅವರು ಯಾವುದೇ ಸಾಕ್ಷ್ಯ ಒದಗಿಸಲಿಲ್ಲ.

ಸುಬ್ಬಾರೆಡ್ಡಿ ಯಾರು?

ಅಷ್ಟಕ್ಕೂ ಸುಬ್ಬಾರೆಡ್ಡಿ ಅವರು ಜಗನ್‌ ಅವರ ತಂದೆಯ ಕಡೆಯ ಸಂಬಂಧಿ ಅಲ್ಲ. ಬದಲಿಗೆ ತಾಯಿಯ ಕಡೆಯ ಸಂಬಂಧಿ. ಜಗನ್‌ ಕುಟುಂಬದ ಜತೆಗೆ ತಳುಕು ಹಾಕಿಕೊಂಡಿರುವ ಧರ್ಮದ ಒಗಟನ್ನು ಆಂಧ್ರದ ಹಿರಿಯ ಪತ್ರಕರ್ತರೊಬ್ಬರು ಸರಳವಾಗಿ ಬಿಡಿಸಿಟ್ಟಿದ್ದಾರೆ.

‘ಜಗನ್‌ ಅವರ ತಾತ ವೈ.ಎಸ್‌ ವೆಂಕಟ ರೆಡ್ಡಿ ಅವರು ಮೊದಲು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ನಂತರ ವೈಎಸ್‌ ರಾಜಶೇಖರ ರೆಡ್ಡಿ ಅವರೂ ತಂದೆ ಹಾದಿಯಲ್ಲೇ ಸಾಗಿದರು. ಆದರೆ, ಇಲ್ಲಿ ಸುಬ್ಬಾರೆಡ್ಡಿ ಅವರ ವಿಚಾರದಲ್ಲಿ ಧರ್ಮದ ವಿಚಾರವೇ ಅಪ್ರಸ್ತುತ. ಏಕೆಂದರೆ, ಸುಬ್ಬಾರೆಡ್ಡಿ ಅವರು ಜಗನ್‌ ತಾಯಿಯ ಕಡೆಯ ಸಂಬಂಧಿ. ಅವರ ತಾಯಿಯ ಮನೆಯವರು ಹಿಂದಿನಿಂದಲೂ ಹಿಂದೂಗಳೇ. ಆಕೆಯ ಸೋದರ ಸಂಬಂಧಿಗಳೆಲ್ಲರೂ ಈಗಲೂ ಹಿಂದೂಗಳಾಗಿಯೇ ಇದ್ದಾರೆ,’ ಎಂದು ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT