ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

1992ರ ಅಜ್ಮೀರ್ ಅತ್ಯಾಚಾರ ಪ್ರಕರಣ: ಮತ್ತೆ 6 ಮಂದಿಗೆ ಜೀವಾವಧಿ ಶಿಕ್ಷೆ

Published 20 ಆಗಸ್ಟ್ 2024, 12:59 IST
Last Updated 20 ಆಗಸ್ಟ್ 2024, 12:59 IST
ಅಕ್ಷರ ಗಾತ್ರ

ಜೈಪುರ: 1992ರಲ್ಲಿ 100ಕ್ಕೂ ಹೆಚ್ಚು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿ, ಬೆದರಿಕೆ ಹಾಕಿದ್ದ ಅಜ್ಮೇರ್‌ ಲೈಂಗಿಕ ಪ್ರಕರಣದಲ್ಲಿ ಮತ್ತೆ ಆರು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಇಲ್ಲಿನ ಪೋಕ್ಸೊ ನ್ಯಾಯಾಲಯ ತೀರ್ಪು ನೀಡಿದೆ.

ಆರೋಪಿಗಳಾದ ನಫೀಸ್ ಚಿಶ್ತಿ, ನಸೀಮ್ ಅಲಿಯಾಸ್ ಟಾರ್ಜನ್, ಸಲೀಂ ಚಿಶ್ತಿ, ಇಕ್ಬಾಲ್ ಭಾಟಿ, ಸುಹೇಲ್‌ ಘನಿ ಕ್ರಿಸ್ಟಿ ಮತ್ತು ಸೈಯದ್ ಜಮೀರ್ ಹುಸೇನ್ ಕೃತ್ಯ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ಜತೆಗೆ ತಲಾ ₹5 ಲಕ್ಷ ದಂಡ ವಿಧಿಸಿ ನ್ಯಾಯಾಧೀಶ ರಂಜನ್ ಸಿಂಗ್ ಆದೇಶ ಹೊರಡಿಸಿದ್ದಾರೆ.

ಪ್ರಕರಣದಲ್ಲಿ 18 ಮಂದಿಯನ್ನು ಅಪರಾಧಿಗಳೆಂದು ಗುರುತಿಸಲಾಗಿದೆ. ಈ ಪೈಕಿ 2007ರಲ್ಲಿ ಒಬ್ಬನಿಗೆ, 2008ರಲ್ಲಿ ಎಂಟು ಮಂದಿಗೆ  ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಒಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶಾಲೆ ಮತ್ತು ಕಾಲೇಜಿಗೆ ಹೋಗುತ್ತಿದ್ದ 11ರಿಂದ 20 ವರ್ಷ ವಯಸ್ಸಿನ ಹೆಣ್ಣುಮಕ್ಕಳನ್ನು ಪರಿಚಯಿಸಿಕೊಂಡು ಅವರ ನಗ್ನ ಚಿತ್ರ ತೆಗೆದು, ಬಳಿಕ ಅವರ ಮೇಲೆ ಅತ್ಯಾಚಾರ ಎಸಗಲಾಗಿತ್ತು.

ಏನಿದು ಪ್ರಕರಣ?

1992ರ ಅಜ್ಮೀರ್‌ ಲೈಂಗಿಕ ಪ್ರಕರಣದ ಪ್ರಮುಖ ಆರೋಪಿ ಸುಹೇಲ್‌ ಘನಿ ಕ್ರಿಸ್ಟಿ 26 ವರ್ಷಗಳ ನಂತರ (2018ರ ಫೆ.16ರಂದು) ಪೊಲೀಸರಿಗೆ ಶರಣಾಗಿದ್ದ.

ಜೈಪುರ ಖಾದಿಮ್‌ ಮೊಹಲ್ಲಾ ನಿವಾಸಿಯಾಗಿದ್ದ ಸುಹೇಲ್‌ ಮೊದಲು ಯುವತಿಯರ ಸ್ನೇಹ ಮಾಡಿ ನಂತರ ಅವರ ಮೇಲೆ ಅತ್ಯಾಚಾರ ಎಸಗುತ್ತಿದ್ದ. ಬಳಿಕ ಅವರ ನಗ್ನ ಚಿತ್ರ ತೆಗೆದು ಬ್ಲಾಕ್‌ಮೇಲ್‌ ಮಾಡುತ್ತಿದ್ದ. ಹಗರಣ ಬಹಿರಂಗಗೊಂಡ ನಂತರದಲ್ಲಿ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದರು.

ಈ ಪ್ರಕರಣದಲ್ಲಿ ಸುಮಾರು 80 ಯುವತಿಯರ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಅವರ ನಗ್ನ ಚಿತ್ರಗಳನ್ನು ಬಳಸಿ ಬೆದರಿಕೆ ಹಾಕಲಾಗಿತ್ತು. ಈ ಪೈಕಿ 30 ಶಾಲಾ ವಿದ್ಯಾರ್ಥಿನಿಯರು. 30 ಸಂತ್ರಸ್ತೆಯರು ದೂರು ನೀಡಲು ಮುಂದೆ ಬಂದಿದ್ದರು. ಇವರಲ್ಲಿ 12 ಮಂದಿ ಮಾತ್ರ ದೂರು ದಾಖಲಿಸಿದ್ದರು. ಆದರೆ, ವಿಚಾರಣೆಗೆ ಹಾಜರಾಗಿದ್ದು ಕೇವಲ ಇಬ್ಬರು ಮಾತ್ರ ಎಂದು ಹೇಳಿದ್ದರು.

ಯುವತಿಯರ ನಗ್ನ ಚಿತ್ರಗಳನ್ನು ಅಭಿವೃದ್ಧಿಪಡಿಸಲು ಸ್ಟುಡಿಯೊಗೆ ಕಳುಹಿಸಿದ್ದಾಗ ಪ್ರಕರಣ ಬೆಳಕಿಗೆ ಬಂದಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದರು.

ಹಗರಣದಲ್ಲಿ ಭಾಗಿಯಾಗಿರುವ ಆರೋಪಿಗಳಲ್ಲಿ ಯುವ ಕಾಂಗ್ರೆಸ್‌ ಮಾಜಿ ಮುಖಂಡ ಫಾರೂಖ್‌ ಕ್ರಿಸ್ಟಿ ಮಾನಸಿಕ ಅಸ್ವಸ್ಥ ಎಂದು ಕೋರ್ಟ್‌ ವಿಚಾರಣೆ ವೇಳೆ ಘೋಷಿಸಿತ್ತು. ಮೂವರು ಆರೋಪಿಗಳು ಜೈಲಿನೊಳಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಮತ್ತೊಬ್ಬ ಆರೋಪಿ ಸಲೀಂ ನಫೀಸ್‌ ಕ್ರಿಸ್ಟಿಯನ್ನು 2012ರಲ್ಲಿ ಬಂಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT