ಫರೀದಾಬಾದ್ (ಹರಿಯಾಣ): ಮಳೆಯಿಂದಾಗಿ ಜಲಾವೃತಗೊಂಡಿದ್ದ ರೈಲ್ವೆ ಅಂಡರ್‌ಪಾಸ್‌ನಲ್ಲಿ ಸಾಗುತ್ತಿದ್ದ ಕಾರು ನೀರಿನಲ್ಲಿ ಮುಳುಗಿ ಖಾಸಗಿ ಬ್ಯಾಂಕ್‌ನ ಇಬ್ಬರು ಉದ್ಯೋಗಿಗಳು ಸಾವಿಗೀಡಾರುವ ಘಟನೆ ಹರಿಯಾಣದ ಫರೀದಾಬಾದ್ ನಗರದಲ್ಲಿ ನಡೆದಿದೆ.
ಮೃತರನ್ನು ಪುಣ್ಯಾಶ್ರಯ್ ಶರ್ಮಾ (48) ಹಾಗೂ ವಿರಾಜ್ (26) ಎಂದು ಗುರುತಿಸಲಾಗಿದೆ. ಈ ಇಬ್ಬರೂ ಗುರುಗ್ರಾಮದಿಂದ ಫರೀದಾಬಾದ್‌ಗೆ ಹಿಂದಿರುಗುತ್ತಿದ್ದ ವೇಳೆ ಶುಕ್ರವಾರ ರಾತ್ರಿ ಇಲ್ಲಿನ ಹಳೆ ರೈಲ್ವೆ ಅಂಡರ್‌ಪಾಸ್‌ನಲ್ಲಿ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ಇಡೀ ದಿನ ಸುರಿದ ಭಾರಿ ಮಳೆಯಿಂದಾಗಿ ರೈಲ್ವೆ ಅಂಡರ್‌ಪಾಸ್ ಸಂಪೂರ್ಣ ಜಲಾವೃತಗೊಂಡಿತ್ತು. ಹೀಗಾಗಿ ಅತ್ತ ವಾಹನಗಳು ಚಲಿಸದಂತೆ ಎಚ್ಚರಿಕೆ ನೀಡಲಾಗಿತ್ತು. ಆದರೂ ಇದನ್ನು ನಿರ್ಲಕ್ಷಿಸಿ ರಾತ್ರಿ 11.50ರ ಸುಮಾರಿಗೆ ಎಕ್ಸ್‌ಯುವಿ 700 ಕಾರು ಅಂಡರ್‌ಪಾಸ್ ಪ್ರವೇಶಿಸಿತು. ಬಳಿಕ ಕಾರಿಗೆ ನೀರು ನುಗ್ಗಿ ಅವಘಡ ಸಂಭವಿಸಿದೆ.
ಭಾರಿ ಪ್ರಯತ್ನ ನಡೆಸಿದ ಬಳಿಕ ಸ್ಥಳದಲ್ಲಿದ್ದ ಜನರು ಇಬ್ಬರನ್ನೂ ಹೊರತೆಗೆಯುವಲ್ಲಿ ಯಶಸ್ವಿಯಾದರು. ಆದರೆ ವಿರಾಜ್ ಸ್ಥಳದಲ್ಲೇ ಸಾವಿಗೀಡಾಗಿದ್ದರು. ಪುಣ್ಯಾಶ್ರಯ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಬಳಿಕ ಕೊನೆಯುಸಿರೆಳೆದರು ಎಂದರು.