ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾರಾಷ್ಟ್ರದಲ್ಲಿ 24 ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ

Published : 23 ಜೂನ್ 2018, 10:26 IST
ಫಾಲೋ ಮಾಡಿ
Comments

ಪುಣೆ: ಮಹಾರಾಷ್ಟ್ರದ ಗ್ರಾಮವೊಂದರಲ್ಲಿ 24 ದಲಿತ ಕುಟುಂಬಗಳಿಗೆ ಬಲವಂತವಾಗಿ ಸಾಮಾಜಿಕ ಬಹಿಷ್ಕಾರ ಹಾಕಲಾಗಿದ್ದು ಆ ಕುಟುಂಬಗಳು ಗ್ರಾಮ ತೊರೆದು ಬೇರೆ ಕಡೆ ವಾಸವಾಗಿವೆ.

ಲಾತೂರ್‌ ಜಿಲ್ಲೆಯ ಉದ್ಗಿರ್‌ ತಾಲ್ಲೂಕಿನ ರುದ್ರವಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.ದಲಿತ ಸಮುದಾಯದ ಕೆಲ ಯುವಕರು ಗ್ರಾಮದ ಮಾರುತಿ ದೇವಾಲಯ ಪ್ರವೇಶಿಸಿದರು ಎಂಬ ಕಾರಣಕ್ಕೆ ಅವರನ್ನು ಮೇಲ್ಜಾತಿಯವರು ಥಳಿಸಿದ್ದಾರೆ. ಇದರಿಂದ ಕುಪಿತಗೊಂಡ ದಲಿತರು, ಮೇಲ್ಜಾತಿಯವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದರು. ಇದರಿಂದ ಮೇಲ್ಜಾತಿಯವರು ದಲಿತರಿಗೆ ಕೆಲಸ ಕೊಡದೆ, ಅಂಗಡಿ, ಹೊಟೇಲ್‌ಗಳಿಗೂ ಪ್ರವೇಶ ನಿರಾಕರಿಸಿ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆಎಂದು ದಿವೈರ್‌ ಸುದ್ದಿ ತಾಣ ವರದಿ ಮಾಡಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷರು ಸೇರಿದಂತೆ 100ಕ್ಕೂ ಹೆಚ್ಚು ಜನರು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದ್ದಾರೆ. ಇವರು ಗ್ರಾಮದ ಹೊರ ಭಾಗದಲ್ಲಿರುವ ಸರ್ಕಾರಿ ಹಾಸ್ಟೆಲ್‌ನಲ್ಲಿ ವಾಸವಾಗಿದ್ದಾರೆ. ಇವರಲ್ಲಿ 40 ಮಹಿಳೆಯರು ಮತ್ತು 15 ಮಕ್ಕಳು ಸೇರಿದ್ದಾರೆ.

ಗ್ರಾಮದಲ್ಲಿ ನಮ್ಮ ಸಮುದಾಯದವರ ವಿವಾಹ ಕಾರ್ಯಕ್ರಮವಿತ್ತು. ಈ ವೇಳೆ ಮಾರುತಿ ದೇವರ ದರ್ಶನ ಪಡೆಯಲು ಕೆಲವರು ದೇವಾಲಯಕ್ಕೆ ಹೋಗಿದ್ದರು. ಈ ವೇಳೆ ಮೆಲ್ಜಾತಿಯವರು ಅವರ ಮೇಲೆ ಹಲ್ಲೆ ಮಾಡಿದ್ದರಿಂದ ನಾವು ಪೊಲೀಸ್‌ ಠಾಣೆಗೆ ತೆರಳಿ ಜಾತಿ ನಿಂದನೆ ಪ್ರಕರಣ ದಾಖಲು ಮಾಡಿದೆವು. ಈ ಹಿನ್ನೆಲೆಯಲ್ಲಿ ಬಹಿಷ್ಕಾರ ಹಾಕಲಾಗಿದೆ ಎಂದು ರುದ್ರವಾಡಿ ಗ್ರಾಮದ ದಲಿತ ಸಮುದಾಯದ ಮುಖಂಡ ಹಾಗೂ ಗ್ರಾಮಪಂಚಾಯ್ತಿಯ ಅಧ್ಯಕ್ಷರಾಗಿರುವ ಶಾಲೂಬಾಯಿ ಶಿಂದೆ ಹೇಳಿದ್ದಾರೆ.

ಹಿಂದಿನಿಂದಲೂ ಮಾರುತಿ ದೇವಾಲಯಕ್ಕೆ ದಲಿತರ ಪ್ರವೇಶ ಇರಲಿಲ್ಲ, ವಿವಾಹದ ಹಿನ್ನೆಲೆಯಲ್ಲಿ ದೇವರ ಆಶಿರ್ವಾದ ಪಡೆಯುವುದು ತಪ್ಪೆ ಎಂದು ಶಾಲೂಬಾಯಿ ಶಿಂದೆ ಪ್ರಶ್ನೆ ಮಾಡಿದ್ದಾರೆ. ಮೇಲ್ಜಾತಿಯ ಕೆಲವರು ನಮ್ಮ ಮೇಲೆ ಹಲ್ಲೆ ಮಾಡಿದರು, ನಮ್ಮ ಯುವಕರು ಕೂಡ ಅವರ ಮೇಲೆ ಹಲ್ಲೆ ಮಾಡಿದರು ಎಂದು ಶಿಂದೆ ಹೇಳಿದ್ದಾರೆ.

ಈ ಘಟನೆ ನಡೆದಿದ್ದು ಮೇ 8ರಂದು. ಎರಡು ದಿನಗಳ ಬಳಿಕ ಮೇ 10 ಎರಡು ಸಮುದಾಯಗಳು ಮಾತುಕತೆ ನಡೆಸಲು ಮುಂದಾಗಿದ್ದವು, ಆದರೆ ಮಾತುಕತೆ ನಡೆಯದೇ ಮತ್ತೆ ಜಗಳ ನಡೆದಿದೆ. ಈ ವೇಳೆ ಮೆಲ್ಜಾತಿಯವರು ನಮ್ಮ ಸಮುದಾಯದ ಯುವಕನೊಬ್ಬನ ಮೇಲೆ ಮಾರಾಂತಿಕವಾಗಿ ಹಲ್ಲೆ ಮಾಡಿದ್ದರಿಂದ ನಾವು ಮೇ 11ರಂದು ಪೊಲೀಸ್‌ ಠಾಣೆಗೆ ತೆರಳಿ ದೂರು ದಾಖಲಿಸಿದೆವು ಎಂದುಶಾಲೂಬಾಯಿ ಶಿಂದೆ ಹೇಳಿದ್ದಾರೆ.

ಈ ಘಟನೆ ಬಳಿಕ 23 ಜನರ ವಿರುದ್ಧ ಎಫ್‌ಐಆರ್‌ ದಾಖಲಿಸಿ 16 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಂಧಿತ ಆರೋಪಿಗಳು ಜೂನ್‌ 7 ರಂದು ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ ಎಂದುಲಾತೂರ್‌ ಜಿಲ್ಲಾ ಉಪ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀದರ್ ಪವಾರ್‌ ತಿಳಿಸಿದ್ದಾರೆ.

ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಾಮಾಜಿಕ ನ್ಯಾಯ ಅಂದೋಲನದ ಮುಖ್ಯಸ್ಥ ದ್ಯಾನೇಶ್ವರ್‌ ಸಾವಂತ್‌ ಆರೋಪಿಸಿದ್ದಾರೆ.

ನನಗೆ ಯಾವುದೇ ಅಧಿಕಾರ ಬೇಡ, ಈ ಸಮಸ್ಯೆ ಬಹುಬೇಗನೆ ಇತ್ಯಾರ್ಥವಾಗಬೇಕು ಎಂದು ಶಾಲೂಬಾಯಿ ಶಿಂದೆ ಹೇಳಿದ್ದಾರೆ.

ರುದ್ರವಾಡಿ ಗ್ರಾಮದಲ್ಲಿ ನೆಲೆಸಿರುವ ದಲಿತರಿಗೆ ಯಾವುದೇ ಜಮೀನು ಇಲ್ಲ. ಇವರೆಲ್ಲ ಕೂಲಿ ಕಾರ್ಮಿಕರಾಗಿದ್ದು ಮೇಲ್ಜಾತಿಯವರ ಜಮೀನುಗಳಲ್ಲಿ ದುಡಿದು ಜೀವನ ಸಾಗಿಸುತ್ತಿದ್ದಾರೆ. ಈ ಕೂಡಲೇ ನಮಗೆ ಪುನರ್ವಸತಿ ಕಲ್ಪಿಸಿ, ಉದ್ಯೋಗ ನೀಡುವಂತೆ ಬಹಿಷ್ಕಾರಕ್ಕೆ ಒಳಗಾಗಿರುವ ದಲಿತ ಕುಟುಂಬಗಳು ಸರ್ಕಾರವನ್ನು ಆಗ್ರಹಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT