ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ನೇಮಕಾತಿ ಅಧಿಸೂಚನೆ ವಿರುದ್ಧ ಧರಣಿ; ಆಂಧ್ರ ಕಾಂಗ್ರೆಸ್ ಕಾರ್ಯಕರ್ತರ ಬಂಧನ

Published 22 ಫೆಬ್ರುವರಿ 2024, 11:12 IST
Last Updated 22 ಫೆಬ್ರುವರಿ 2024, 11:12 IST
ಅಕ್ಷರ ಗಾತ್ರ

ವಿಜಯವಾಡ: ಆಂಧ್ರಪ್ರದೇಶದಲ್ಲಿ ಶಿಕ್ಷಕರ ನೇಮಕಾತಿಗೆ ಇತ್ತೀಚೆಗೆ ಹೊರಡಿಸಿರುವ ಅಧಿಸೂಚನೆ ವಿರುದ್ಧ 'ಚಲೋ ಸೆಕ್ರೇಟರಿಯೆಟ್‌' ಪ್ರತಿಭಟನಾ ಮೆರವಣಿಗೆ ನಡೆಸಲು ಉದ್ದೇಶಿಸಿದ್ದ ಕಾಂಗ್ರೆಸ್‌ ಪಕ್ಷದ 40 ಕಾರ್ಯಕರ್ತರನ್ನು ಗುರುವಾರ ಬಂಧಿಸಲಾಗಿದೆ.

ಆಂಧ್ರ ಪ್ರದೇಶ ಪ್ರಾದೇಶಿಕ ಕಾಂಗ್ರೆಸ್‌ ಸಮಿತಿ (ಎಪಿಸಿಸಿ) ಅಧ್ಯಕ್ಷೆ ವೈ.ಎಸ್‌.ಶರ್ಮಿಳಾ ಅವರನ್ನೂ ಬಂಧಿಸಲಾಗಿದೆ.

ನಗರದಲ್ಲಿರುವ ಪಕ್ಷದ ಕಚೇರಿಯಿಂದ ಸಿಬ್ಬಂದಿ ಸಚಿವಾಲಯ ಭವನದವರೆಗೆ ಇಂದು ಪ್ರತಿಭಟನಾ ಮೆರವಣಿಗೆ ನಡೆಸಲು ಎಪಿಸಿಸಿ ಕರೆ ನೀಡಿತ್ತು.

'ಏಲೂರು ರಸ್ತೆಯಲ್ಲಿ ಘೋಷಣೆ ಕೂಗುತ್ತಾ, ಸಂಚಾರಕ್ಕೆ ಅಡ್ಡಿಪಡಿಸಿದ್ದ ಕಾಂಗ್ರೆಸ್‌ ಪಕ್ಷದ 40 ಕಾರ್ಯಕರ್ತರನ್ನು ಬಂಧಿಸಿದ್ದೇವೆ' ಎಂದು ವಿಜಯವಾಡ (ದಕ್ಷಿಣ) ಡಿಸಿಪಿ ಬಿ.ರವಿ ಕಿರಣ್‌ ತಿಳಿಸಿದ್ದಾರೆ.

ನಿರುದ್ಯೋಗಿಗಳ ಪರ ನಿಂತಿರುವ ಕಾಂಗ್ರೆಸ್‌ ಕಾರ್ಯಕರ್ತರನ್ನು ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ (ವೈಎಸ್‌ಆರ್‌ಸಿಪಿ) ಸರ್ಕಾರ ಬಂಧಿಸಿದೆ ಎಂದು ಶರ್ಮಿಳಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರವು 23,000 ಉದ್ಯೋಗದ ಭರವಸೆ ನೀಡಿತ್ತು. ಆದರೆ, ಕೇವಲ 6,000 ಹುದ್ದೆಗಳಿಗೆ ಜಿಲ್ಲಾ ಆಯ್ಕೆ ಸಮಿತಿಯು (ಡಿಎಸ್‌ಸಿ) ಅಧಿಸೂಚನೆ ಹೊರಡಿಸಿದೆ ಎಂದು ಕಿಡಿಕಾರಿರುವ ಶರ್ಮಿಳಾ, ವೈಎಸ್‌ಆರ್‌ಸಿಪಿ ಸರ್ಕಾರ ನಿರುದ್ಯೋಗಿಗಳ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.

ವೈಎಸ್‌ಆರ್‌ಸಿಪಿಯ ನಿರಂಕುಶ ಆಡಳಿತವು ಡಿಎಸ್‌ಸಿಯ ವಂಚನೆಯನ್ನು ಬಯಲು ಮಾಡಿದ್ದಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸುತ್ತಿದೆ. ನಮ್ಮ ಸುತ್ತಲೂ ಸಾವಿರಾರು ಪೊಲೀಸರನ್ನು ನಿಯೋಜಿಸಿ, ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌/ಟ್ವಿಟರ್‌ನಲ್ಲಿ ದೂರಿದ್ದಾರೆ.

ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿರುವ ಶರ್ಮಿಳಾ, 'ಚಲೋ ಸೆಕ್ರೇಟರಿಯೆಟ್‌' ಮೆರವಣಿಗೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಮುಖಂಡರನ್ನು ತಡೆಯಲು ಪೊಲೀಸರು ಕಳೆದ ಎರಡು ದಿನಗಳಿಂದ ಕಟ್ಟೆಚ್ಚರ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.

'ನಮ್ಮ ತಪ್ಪೇನು? ನಾವು ಮಾಡಿದ ಆಪರಾಧವಾದರೂ ಏನು? ಅವರೇನು (ಬಂಧಿತರು) ಕಳ್ಳರೇ ಅಥವಾ ಡಕಾಯಿತರೇ? ಸರ್ಕಾರ ನಮ್ಮನ್ನು ತಡೆಯುವ ಅಗತ್ಯವೇನಿತ್ತು? ನಿಮ್ಮ ಸರ್ಕಾರ ನಿಜವಾಗಿಯೂ ಉತ್ತಮ ಕೆಲಸ ಮಾಡಿದ್ದರೆ, ನಮ್ಮ ಪ್ರತಿಭಟನೆಗೆ ಹೆದರುತ್ತಿರುವುದು ಏಕೆ?' ಎಂದು ಸರಣಿ ಪ್ರಶ್ನೆ ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT