ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಇಂಡಿಯಾ' ಮೈತ್ರಿಕೂಟದತ್ತ 9 ಪಕ್ಷಗಳ ಒಲವು

ಮೈತ್ರಿಕೂಟದ ಭಾಗವಾಗಲು ಯತ್ನಿಸುತ್ತಿರುವ ಪ್ರಾದೇಶಿಕ ಪಕ್ಷಗಳು
Published 1 ಸೆಪ್ಟೆಂಬರ್ 2023, 2:30 IST
Last Updated 1 ಸೆಪ್ಟೆಂಬರ್ 2023, 2:30 IST
ಅಕ್ಷರ ಗಾತ್ರ

ಮುಂಬೈ: ಅಸ್ಸಾಂ ಮತ್ತು ಉತ್ತರಪ್ರದೇಶದ ತಲಾ ಮೂರು ಪಕ್ಷಗಳು ಸೇರಿದಂತೆ ಒಟ್ಟು 9 ಪಕ್ಷಗಳು ಬಿಜೆಪಿ ವಿರೋಧಿ ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಲು ಪ್ರಯತ್ನಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ಅಸ್ತಿತ್ವದಲ್ಲಿರುವ ಪಕ್ಷಗಳ ಸಮಾಲೋಚನೆಯ ಬಳಿಕ ಇತರ ಪಕ್ಷಗಳನ್ನು ಮೈತ್ರಿಕೂಟಕ್ಕೆ ಸೇರಿಸಿಕೊಳ್ಳಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲಾಗುವುದು ಎಂದೂ ಮೂಲಗಳು ಹೇಳಿವೆ. 

ಅಸ್ಸಾಂನ ರಾಯ್‌ಜೋರ್ ದಳ, ಅಸ್ಸಾಂ ಜಾತೀಯ ಪರಿಷದ್, ಆಂಚಲಿಕ್ ಗಣ ಮೋರ್ಚಾ, ಉತ್ತರಪ್ರದೇಶದ ಮೂರು ಹಾಗೂ ಪಶ್ಚಿಮ ಬಂಗಾಳದ ಒಂದು ಪಕ್ಷ ಸೇರಿದಂತೆ ಒಟ್ಟು 9 ಪಕ್ಷಗಳು ‘ಇಂಡಿಯಾ’ದ ಭಾಗವಾಗಲು ಆಸಕ್ತಿ ತೋರಿವೆ. 

ಕೆಲ ದಿನಗಳ ಹಿಂದೆಯಷ್ಟೇ ಇತರ ಪಕ್ಷಗಳು ‘ಇಂಡಿಯಾ’ದ ಭಾಗವಾಗಲು ಬಯಸುತ್ತಿವೆ ಎಂದು ಮೈತ್ರಿಕೂಟದ ನಾಯಕರು ಹೇಳಿದ್ದರು.

ಮುಂಬೈನಲ್ಲಿ ‘ಇಂಡಿಯಾ’ ಮೂರನೇ ಸಭೆ ಶುರುವಾಗುವ ಹಿಂದಿನ ದಿನವಷ್ಟೇ ಶಿವಸೇನಾದ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಮೈತ್ರಿಕೂಟಕ್ಕೆ ಹೆಚ್ಚು ಪಕ್ಷಗಳು ಸೇರ್ಪಡೆಗೊಳ್ಳಲು ಬಯಸುತ್ತಿವೆ ಎಂದು ಹೇಳಿದ್ದರು. 

ಹಲವು ಪಕ್ಷಗಳ ಜತೆಗೆ ಸಂಪರ್ಕದಲ್ಲಿರುವ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು, ‘ಈ ಕುರಿತು ನಾನೊಬ್ಬನೇ  ನಿರ್ಧಾರ ತೆಗೆದುಕೊಳ್ಳಲಾಗದು. ಇತರ ಪಕ್ಷಗಳನ್ನು ಮೈತ್ರಿಕೂಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಒಮ್ಮತದ ಮೂಲಕ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದ್ದರು.

ಪಟ್ನಾದಲ್ಲಿ ನಡೆದ ‘ಇಂಡಿಯಾ’ದ ಮೊದಲ ಸಭೆಗೆ 15 ಪಕ್ಷಗಳು ಚರ್ಚೆಯಲ್ಲಿ ಪಾಲ್ಗೊಂಡಿದ್ದವು. ಬೆಂಗಳೂರಿನಲ್ಲಿ 2ನೇ ಸಭೆ ನಡೆದಾಗ ಈ ಸಂಖ್ಯೆಯು 26ಕ್ಕೆ ಏರಿತ್ತು. ಮುಂಬೈನಲ್ಲಿ ನಡೆಯುತ್ತಿರುವ ಮೈತ್ರಿಕೂಟದ ಮೂರನೇ ಸಭೆಯಲ್ಲಿ ಭಾರತೀಯ ಜನರ ಮತ್ತು ಕಾರ್ಮಿಕರ ಪಕ್ಷ (ಪಿಡಬ್ಲ್ಯುಪಿ) ಸೇರಿದಂತೆ ಎರಡು ಪಕ್ಷಗಳು ಸೇರ್ಪಡೆಯಾಗಿವೆ.

ಮೂರನೇ ಸಭೆಯಲ್ಲಿ ಪಾಲ್ಗೊಳ್ಳಲು ಗುರುವಾರ ಮುಂಬೈಗೆ ಬಂದಿದ್ದ ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ ಅವರು, ‘ಮುಂದಿನ ದಿನಗಳಲ್ಲಿ ಸಮಾನ ಮನಸ್ಕ ಪಕ್ಷಗಳು ಸೇರುವ ನಿರೀಕ್ಷೆಯಿದೆ’ ಎಂದು ಹೇಳಿದ್ದರು. 

‘ನಮಗೆ ಸ್ವಲ್ಪ ಸಮಯ ಕೊಡಿ. ಸಮಾನ ಮನಸ್ಥಿತಿಯ ಮತ್ತಷ್ಟು ಪಕ್ಷಗಳು ಮತ್ತು ನಾಯಕರು ‘ಇಂಡಿಯಾ’ಕ್ಕೆ ಸೇರುವ ನಿರೀಕ್ಷೆ ಇದೆ. ಒಂದೇ ರೀತಿಯ ಸಿದ್ಧಾಂತವನ್ನು ಹೊಂದಿರುವ ಪಕ್ಷಗಳು ದೇಶದಾದ್ಯಂತ ಒಗ್ಗೂಡಲಿವೆ ಎಂಬುದನ್ನು ನಾವು ನಿರೀಕ್ಷಿಸುತ್ತಿದ್ದೇವೆ’ ಎಂದೂ ಚೌಧರಿ ಸುದ್ದಿಗಾರರಿಗೆ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT