ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್ ಕಣ್ಣಿಗೆ ಬಟ್ಟೆ ಕಟ್ಟಿದ್ದ ಮೋದಿ ಕಣ್ಣಿಗೇ ಬಟ್ಟೆ: ಸರ್ಕಾರಕ್ಕೆ ಎಎಪಿ ಚಾಟಿ

‘ಬೊಮ್ಮಾಯಿ ಗುಂಡಿ ಮುಚ್ಚಿಸಿದರು ಮೋದಿ’ ಎಂಬ ಹ್ಯಾಷ್‌ಟ್ಯಾಗ್‌ ಬಳಸಿ ‘ಆಪ್‌’ ಟೀಕೆ
Last Updated 10 ನವೆಂಬರ್ 2022, 4:12 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮೋದಿ ಆಗಮನದ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಮುಚ್ಚುತ್ತಿರುವ ರಾಜ್ಯ ಬಿಜೆಪಿ ಸರ್ಕಾರವನ್ನು ಆಮ್‌ ಆದ್ಮಿ ಪಕ್ಷದ ರಾಜ್ಯ ಘಟಕ ತರಾಟೆಗೆ ತೆಗೆದುಕೊಂಡಿದೆ.

ರಾಜಧಾನಿಗೆ ನ.11ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಮಿಸುತ್ತಿರುವುದರಿಂದ ಬಿಬಿಎಂಪಿ ತ್ವರಿತಗತಿಯಲ್ಲಿ ರಸ್ತೆಗಳಿಗೆ ಕಾಯಕಲ್ಪ ನೀಡುವ ಕಾರ್ಯದಲ್ಲಿ ತೊಡಗಿದೆ.

ಪ್ರಧಾನಿ ಸಾಗುವ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು ಪಾಲಿಕೆ ಆದ್ಯತೆ ನೀಡಿದ್ದು, ಸಮರೋಪಾದಿಯಲ್ಲಿ ಈ ಕಾರ್ಯ ನಡೆದಿದೆ. ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಗುಬ್ಬಿ ತೋಟದಪ್ಪ ರಸ್ತೆ, ಎಚ್‌ಎಎಲ್ ವಿಮಾನ ನಿಲ್ದಾಣ ರಸ್ತೆ ಮತ್ತು ಓಕಳೀಪುರಂ ರಸ್ತೆ ಸೇರಿ ನಗರದ ವಿವಿಧ ರಸ್ತೆಗಳಿಗೆ ಡಾಂಬರೀಕರಣ ಮತ್ತು ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ.

‘ಬೆಂಗಳೂರಿಗೆ ಮೋದಿ ಭೇಟಿ: ರಸ್ತೆಗಳಿಗೆ ತರಾತುರಿ ಕಾಯಕಲ್ಪ!’ ಎಂಬ ಶೀರ್ಷಿಕೆಯ ಅಡಿಯಲ್ಲಿ ಈ ಬಗ್ಗೆ ಪ್ರಜಾವಾಣಿಯು ಬುಧವಾರ ವರದಿ ಪ್ರಕಟಿಸಿತ್ತು. ಈ ವರದಿಯನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿರುವ ಎಎಪಿ, ರಾಜ್ಯ ಸರ್ಕಾರವನ್ನು ಗೇಲಿ ಮಾಡಿದೆ.

‘ಮಾಡುವುದು 40ಪರ್ಸೆಂಟ್‌ ಅನಾಚಾರ, ಮೋದಿ ಬಂದಾಗ ಮಾಡ್ತಾರೆ ಬೃಂದಾವನ. ಇಷ್ಟೇ ಯಾಕೆ , ಬಿಟ್ರೆ ಅಕ್ಕಪಕ್ಕ ಏನು ಕಾಣದಂತೆ ಬಿಳಿಯ ಬಟ್ಟೆ ಕಟ್ಟಿಬಿಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಕಣ್ಣಿಗೆ ಬಟ್ಟೆ ಕಟ್ಟಿದ್ದರು. ಬಿಜೆಪಿಯವರು ಮೋದಿ ಕಣ್ಣಿಗೆ ಬಟ್ಟೆ ಕಟ್ಟೋ ಮನೋಭಾವದವರು’ ಎಂದು ವ್ಯಂಗ್ಯ ಮಾಡಿದೆ.

'ಬನ್ನಿ ಮೋದಿ ನಮ್ಮ ಊರಿಗೆ... ಟಾರು ಕಾಣದ ನಮ್ಮ ಬೀದಿಗೆ... 40-80ಪರ್ಸೆಂಟ್‌ ನುಂಗಿದ ನಿಮ್ಮ ಬಿಜೆಪಿ ನಾಯಕರ ಭ್ರಷ್ಟಾಚಾರದ ತವರಿಗೆ, ಹೇಳಿಬಿಡಿ ನಿಮ್ಮದೆಷ್ಟು - ನಿಮ್ಮ ಕೋರ್ ಕಮಿಟಿಗೆಷ್ಟು?’ ಎಂದು ಚಾಟಿ ಬೀಸಿದೆ.

ಈ ಟ್ವೀಟ್‌ಗಳಲ್ಲಿ #ಬೊಮ್ಮಾಯಿಗುಂಡಿಮುಚ್ಚಿಸಿದರುಮೋದಿ ಎಂಬ ಹ್ಯಾಷ್‌ಟ್ಯಾಗನ್ನೂ ಬಳಸಿರುವ ಎಎಪಿ, ‘ಧನ್ಯವಾದಗಳು ಮೋದಿಯವರೇ ತಿಂಗಳಿಗೊಮ್ಮೆ ಬರ್ತಾ ಇರಿ’ ಎಂದು ಕುಹಕವಾಡಿದೆ.

2020ರ ಫೆಬ್ರುವರಿ ತಿಂಗಳಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಗುಜರಾತ್‌ನ ಅಹಮದಾಬಾದ್‌ಗೆ ಭೇಟಿ ನೀಡಿದ್ದರು.

ಅದು ವರೆಗೆ ಗುಂಡಿಗಳು ತುಂಬಿದ್ದ ಅಹಮದಾಬಾದಿನ ಅನೇಕ ರಸ್ತೆಗಳು ಟ್ರಂಪ್‌ ಆಗಮನದ ಹಿನ್ನೆಲೆಯಲ್ಲಿ ಡಾಂಬರಿನಿಂದ ಕಂಗೊಳಿಸಿದ್ದವು. ರಸ್ತೆಯ ಎರಡೂ ಬದಿಗಳಲ್ಲಿ ಪಾದಚಾರಿ ಮಾರ್ಗಗಳು ನಿರ್ಮಾಣವಾಗಿದ್ದವು. ಮೇಲಾಗಿ ರಸ್ತೆಯ ಇಕ್ಕೆಲಗಳಲ್ಲಿ ಹರಡಿಕೊಂಡಿದ್ದ ಎಲ್ಲಾ ಬಗೆಯ ‘ಅಂದಗೇಡಿ ಆಕೃತಿ’ಗಳನ್ನು ಮರೆಮಾಚಲು ಹಸಿರು ಬಣ್ಣದ ಪರದೆಗಳನ್ನು ಕಟ್ಟಲಾಗಿತ್ತು. ಅದಕ್ಕಿಂತ ಮುಖ್ಯವಾಗಿ ಟ್ರಂಪ್‌ ಸಂಚರಿಸುವ ಹಾದಿಯಲ್ಲಿ ಇರುವ ಒಂದೆರಡು ಕೊಳೆಗೇರಿಗಳು ಗೋಚರಿಸದಂತೆ ಗೋಡೆಗಳು ಎದ್ದುನಿಂತಿದ್ದವು. ಟ್ರಂಪ್‌ ಆಗಮನಕ್ಕಾಗಿ ಗುಜರಾತ್‌ನ ಬಿಜೆಪಿ ಸರ್ಕಾರ ಮಾಡಿದ್ದ ಈ ವ್ಯವಸ್ಥೆ ಭಾರೀ ಟೀಕೆಗೆ ಗುರಿಯಾಗಿತ್ತು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT