ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಅಬಕಾರಿ ನೀತಿ ಹಗರಣ | ಎಎಪಿ ಪ್ರಮುಖ ಫಲಾನುಭವಿ: ಇ.ಡಿ

Published 25 ಏಪ್ರಿಲ್ 2024, 12:11 IST
Last Updated 25 ಏಪ್ರಿಲ್ 2024, 12:11 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದ ಅಪರಾಧದ ಆದಾಯದಲ್ಲಿ ಎಎಪಿ ಪ್ರಮುಖ ಫಲಾನುಭವಿ ಆಗಿದ್ದು, ಅದರ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌ ಮೂಲಕ ಹಣ ಅಕ್ರಮ ವರ್ಗಾವಣೆ ಅಪರಾಧ ಎಸಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಎಎಪಿ 2022ರ ಗೋವಾ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಸುಮಾರು ₹45 ಕೋಟಿ ನಗದು ಬಳಸಿದ್ದು, ಅದು ಈ ಅಪರಾಧದ ಅದಾಯದ ಒಂದು ಭಾಗವಾಗಿದೆ ಎಂಬುದು ಇದುವರೆಗಿನ ತನಿಖೆಯಿಂದ ಗೊತ್ತಾಗಿದೆ. ಈ ನಗದನ್ನು ಸಮೀಕ್ಷಾ ಕೆಲಸಗಾರರು, ಪ್ರದೇಶಗಳ ವ್ಯವಸ್ಥಾಪಕರು ಮತ್ತು ವಿಧಾನಸಭಾ ಕ್ಷೇತ್ರಗಳ ವ್ಯವಸ್ಥಾಪಕರು ಸೇರಿದಂತೆ ಹಲವರಿಗೆ ಪಾವತಿಸಲಾಗಿದೆ ಎಂದು ಹೇಳಿದೆ. ಈ ಸಂಬಂಧ ಇ.ಡಿ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದೆ.

‘ಈ ರೀತಿ ಎಎಪಿಯು ಕೇಜ್ರಿವಾಲ್‌ ಅವರ ಮೂಲಕ ಹಣ ವರ್ಗಾವಣೆಯ ಅಪರಾಧ ಮಾಡಿದೆ. ಈ ಅಪರಾಧಗಳು ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) 2002ರ ಸೆಕ್ಷನ್‌ 70ರ ವ್ಯಾಪ್ತಿಗೆ ಬರುತ್ತವೆ’ ಎಂದು ಇ.ಡಿ ಹೇಳಿದೆ.

ಎಎಪಿಯ ರಾಷ್ಟ್ರೀಯ ಸಂಚಾಲಕರು ಮತ್ತು ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರೂ ಆಗಿರುವ ಕೇಜ್ರಿವಾಲ್‌ ಅವರು ಚುನಾವಣೆಯಲ್ಲಿ ಬಳಸಲಾದ ಹಣಕ್ಕೆ ಅಂತಿಮವಾಗಿ ಜವಾಬ್ದಾರರಾಗಿದ್ದಾರೆ. ಕೇಜ್ರಿವಾಲ್‌ ಅವರು ಎಎಪಿಯ ಹಿಂದಿನ ಮಿದುಳು ಮಾತ್ರವಲ್ಲದೇ, ಅದರ ಪ್ರಮುಖ ಚಟುವಟಿಕೆಗಳ ನಿಯಂತ್ರಕರೂ ಆಗಿದ್ದಾರೆ. ದೆಹಲಿ ಅಬಕಾರಿ ನೀತಿ ನಿರ್ಧರಿಸುವಲ್ಲಿ ಅವರು ಭಾಗಿಯಾಗಿದ್ದರು ಎಂಬುದು ಸಾಕ್ಷಿಗಳ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ ಎಂದು ಅದು ತಿಳಿಸಿದೆ.

‘ಇ.ಡಿ– ಸುಳ್ಳು ಹೇಳುವ ಯಂತ್ರ’:

ಇ.ಡಿ ಸಲ್ಲಿಸಿರುವ ಅಫಿಡವಿಟ್‌ಗೆ ಪ್ರತಿಕ್ರಿಯಿಸಿರುವ ಎಎಪಿ, ‘ತನಿಖಾ ಸಂಸ್ಥೆಯು ಸುಳ್ಳು ಹೇಳುವ ಯಂತ್ರವಾಗಿದೆ’ ಎಂದು ಆರೋಪ ಮಾಡಿದೆ.

‘ಕಿಕ್‌ಬ್ಯಾಕ್‌ ಬೇಡಿಕೆಯಲ್ಲೂ ಭಾಗಿ’
‘ಕೇಜ್ರಿವಾಲ್‌ ಅವರು ಕಿಕ್‌ಬ್ಯಾಕ್ ಬೇಡಿಕೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಅದು ಅಪರಾಧದ ಮತ್ತಷ್ಟು ಆದಾಯವನ್ನು ಗಳಿಸಿದೆ. ಹೀಗಾಗಿ ಎಎಪಿ ಮಾತ್ರವಲ್ಲದೇ ಕೇಜ್ರಿವಾಲ್‌ ಅವರೂ ಪಿಎಂಎಲ್‌ಎ ಸೆಕ್ಷನ್‌ 4ರ ಅಡಿ ಶಿಕ್ಷಾರ್ಹ ಅಪರಾಧ ಎಸಗಿದ್ದಾರೆ. ಅಲ್ಲದೆ ಅವರು ಪಿಎಂಎಲ್‌ಎ ಸೆಕ್ಷನ್‌ 70ರ ಅಡಿಯಲ್ಲೂ ಕಾನೂನು ಕ್ರಮ ಮತ್ತು ಶಿಕ್ಷೆಗೆ ಗುರಿಯಾಗುತ್ತಾರೆ’ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.  ‘ದೆಹಲಿಯ ಮುಖ್ಯಮಂತ್ರಿ ಸ್ಥಾನವನ್ನು ಬಳಸಿಕೊಂಡು ಅವರು ಹಣ ಅಕ್ರಮ ವರ್ಗಾವಣೆಯನ್ನು ಸುಲಭಗೊಳಿಸಿದರು‘ ಎಂದು ಹೇಳಿರುವ ಜಾರಿ ನಿರ್ದೇಶನಾಲಯ ತನ್ನ ಬಂಧನವನ್ನು ಪ್ರಶ್ನಿಸಿ ಕೇಜ್ರಿವಾಲ್‌ ಸಲ್ಲಿಸಿರುವ ಅರ್ಜಿಯಲ್ಲಿ ಅರ್ಹತೆಯ ಅಂಶಗಳಿಲ್ಲವಾಗಿದ್ದು ವಜಾಗೊಳಿಸಲು ಸೂಕ್ತವಾಗಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT