ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಬ್ಯಾಂಕ್‌ಗಾಗಿ ಉಗ್ರ ದಾಳಿಗಳ ಬಗ್ಗೆ ಮೌನ: ಅಮಿತ್‌ ಶಾ ವಾಗ್ದಾಳಿ

ಪಶ್ಚಿಮ ಬಂಗಾಳ, ಬಿಹಾರದಲ್ಲಿ ಅಮಿತ್‌ ಶಾ ರ್‍ಯಾಲಿ; ವಿರೋಧ ಪಕ್ಷಗಳ ಮೇಲೆ ವಾಗ್ದಾಳಿ
Published 6 ಮೇ 2024, 16:08 IST
Last Updated 6 ಮೇ 2024, 16:08 IST
ಅಕ್ಷರ ಗಾತ್ರ

ದುರ್ಗಾಪುರ/ಸಮಸ್ತಿಪುರ: ಕೇಂದ್ರದಲ್ಲಿ ಯುಪಿಎ ಅಧಿಕಾರದ ವೇಳೆ ದೇಶದಲ್ಲಿ ಭಯೋತ್ಪಾದಕ ದಾಳಿಗಳು ನಡೆದಾಗ ತಮ್ಮ ಮತಬ್ಯಾಂಕ್‌ಗೆ ನೋವಾಗಬಹುದು ಎನ್ನುವ ಭಯದಿಂದ ಕಾಂಗ್ರೆಸ್ ಹಾಗೂ ಟಿಎಂಸಿ ಮೌನ ವಹಿಸಿದ್ದವು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳದ ಬರ್ಧಮನ್–ದುರ್ಗಾಪುರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ‘10 ವರ್ಷಗಳ ಆಡಳಿತದಲ್ಲಿ ಎನ್‌ಡಿಎ ಭಯೋತ್ಪಾದನೆ ಬಗ್ಗೆ ಕಠಿಣ ನಿಲುವು ತಳೆದಿತ್ತು ಮತ್ತು ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ರಾಜಿ ಮಾಡಿಕೊಂಡಿರಲಿಲ್ಲ. ಆದರೆ, ಟಿಎಂಸಿ ಕೂಡ ಭಾಗವಾಗಿದ್ದ ಯುಪಿಎ ಆಡಳಿತದ ಅವಧಿಯಲ್ಲಿ ಭಯೋತ್ಪಾದನೆ ಬಗ್ಗೆ ಮೃದು ಧೋರಣೆ ಅನುಸರಿಸಲಾಗಿತ್ತು’ ಎಂದು ಟೀಕಿಸಿದರು.

‘ತಮ್ಮ ಮತಬ್ಯಾಂಕ್ ಭದ್ರಪಡಿಸಿಕೊಳ್ಳಲು ಒಳನುಸುಳುವಿಕೆಗೆ ಅವಕಾಶ ನೀಡಿದ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿಗೆ  ನಾಚಿಕೆಯಾಗಬೇಕು’ ಎಂದು ಟೀಕಿಸಿದರು.

ನಂತರ ಬಿಹಾರದ ಸಮಸ್ತಿಪುರದಲ್ಲಿ ಕೇಂದ್ರ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ನಿತ್ಯಾನಂದ ರಾಯ್ ಪರ ಪ್ರಚಾರ ನಡೆಸಿದ ಅವರು, ‘ಇಂಡಿಯಾ’ ಕೂಟದ ಕಾಂಗ್ರೆಸ್ ಮತ್ತು ಆರ್‌ಜೆಡಿ ಅಧಿಕಾರಕ್ಕೆ ಬಂದರೆ, ದೇಶದಲ್ಲಿ ‘ಜಂಗಲ್ ರಾಜ್’ ಉಂಟಾಗಲಿದೆ ಎಂದು ಹೇಳಿದರು.

‘ಇಂಡಿಯಾ’ ಕೂಟವು ಅಧಿಕಾರಕ್ಕೆ ಬಂದರೆ ಪ್ರಧಾನಿ ಯಾರಾಗಲಿದ್ದಾರೆ ಎಂದು ಪ್ರಶ್ನಿಸಿದ ಅವರು, ಮತಬ್ಯಾಂಕ್ ಕಾರಣಕ್ಕಾಗಿ ಕಾಂಗ್ರೆಸ್ ಮತ್ತು ಆರ್‌ಜೆಡಿ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗವಹಿಸಲಿಲ್ಲ ಎಂದು ಟೀಕಿಸಿದರು.                       

‘ಜೂನ್ 4 ಬಿಜೆಡಿ ಸರ್ಕಾರದ ಅಂತಿಮ ದಿನ’

ಬೆಹ್ರಾಂಪುರ/ನವರಂಗಪುರ : ಪುರಿ ಜಗನ್ನಾಥನ ತವರು ನೆಲ ಒಡಿಶಾದಲ್ಲಿ ಚುನಾವಣಾ ಪ್ರಚಾರ ನಡೆಸುವ ವೇಳೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ತಮ್ಮನ್ನು ತಾವು ‘ಜಗನ್ನಾಥನ ಪುತ್ರ’ ಎಂದು ಕರೆದುಕೊಂಡರು.

ಜೂನ್ 4 ಒಡಿಶಾದಲ್ಲಿ ಬಿಜೆಡಿ ಸರ್ಕಾರದ ಅಂತಿಮ ದಿನವಾಗಲಿದೆ ಎಂದು ಪ್ರತಿಪಾದಿಸಿದರು. ರಾಜ್ಯದಲ್ಲಿ ಮೊದಲ ಚುನಾವಣಾ ರ್‍ಯಾಲಿ ನಡೆಸಿದ ಅವರು ‘ಒಡಿಶಾದಲ್ಲಿ ಬಿಜೆಡಿ ಮುಳುಗುವ ಸೂರ್ಯನಾಗಿದೆ. ಕಾಂಗ್ರೆಸ್ ಜರ್ಜರಿತವಾಗಿದೆ. ಜನ ಬಿಜೆಪಿಯೇ ಖಚಿತ ಎಂದು ಭಾವಿಸಿದ್ದಾರೆ. ಜನರಿಗೆ ಬಿಜೆಪಿ ಭರವಸೆಯ ಏಕೈಕ ಕಿರಣವಾಗಿದೆ’ ಎಂದು ಹೇಳಿದರು. ‘ನೀವು ಕಾಂಗ್ರೆಸ್‌ಗೆ 50 ವರ್ಷ ನೀಡಿದ್ದೀರಿ. ಬಿಜೆಡಿಗೆ 25 ವರ್ಷ ನೀಡಿದ್ದೀರಿ. ಬಿಜೆಪಿಗೆ ಕೇವಲ 5 ವರ್ಷ ನೀಡಿ. ಒಡಿಶಾವನ್ನು ದೇಶದಲ್ಲಿ ‘ನಂಬರ್ ವನ್’ ರಾಜ್ಯವನ್ನಾಗಿ ಮಾಡುತ್ತೇವೆ’ ಎಂದರು.

ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಗುರಿಯಾಗಿಸಿಕೊಂಡು ‘ಒಡಿಶಾಗೆ ಒಡಿಯಾ ಭಾಷೆ ಮತ್ತು ಸಂಸ್ಕೃತಿ ಅರ್ಥಮಾಡಿಕೊಳ್ಳುವ ಮುಖ್ಯಮಂತ್ರಿ ಬೇಕಾಗಿದ್ದಾರೆ’ ಎಂದು ಹೇಳಿದರು. ಆಯುಷ್ಮಾನ್ ಭಾರತ್ ಸೇರಿದಂತೆ ಕೇಂದ್ರದ ಹಲವು ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೆ ತರದೇ ಇದ್ದುದನ್ನು ಟೀಕಿಸಿದ ಮೋದಿ ‘ಜೂನ್ 10 ರಂದು ಬಿಜೆಪಿಯ ಮುಖ್ಯಮಂತ್ರಿ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ನಿಮ್ಮನ್ನು ಸ್ವಾಗತಿಸಲು ನಾನು ಬಂದಿದ್ದೇನೆ. ನವೀನ್ ಪಟ್ನಾಯಕ್ ಸರ್ಕಾರ ತಡೆಯುತ್ತಿರುವ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಆರೋಗ್ಯ ಯೋಜನೆಯನ್ನು ಜಾರಿ ಮಾಡುತ್ತೇವೆ. ಈ ಯೋಜನೆಯ ಅಡಿಯಲ್ಲಿ ಜಗನ್ನಾಥನ ಪುತ್ರ ಎಲ್ಲ ಹಿರಿಯ ನಾಗರಿಕರ ಬಗ್ಗೆ ಕಾಳಜಿ ವಹಿಸುತ್ತಾನೆ’ ಎಂದು ತಿಳಿಸಿದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT