ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಕ್ರೇನ್–ರಷ್ಯಾ ಸಂಘರ್ಷ ಅಂತ್ಯಗೊಳಿಸುವ ಸಲುವಾಗಿ ಚರ್ಚೆ: ಡೊಭಾಲ್ ರಷ್ಯಾಗೆ ಭೇಟಿ

Published : 8 ಸೆಪ್ಟೆಂಬರ್ 2024, 13:15 IST
Last Updated : 8 ಸೆಪ್ಟೆಂಬರ್ 2024, 13:15 IST
ಫಾಲೋ ಮಾಡಿ
Comments

ನವದೆಹಲಿ/ವಾಷಿಂಗ್ಟನ್‌: ಉಕ್ರೇನ್‌–ರಷ್ಯಾ ಸಂಘರ್ಷವನ್ನು ಅಂತ್ಯಗೊಳಿಸುವ ಸಲುವಾಗಿ ಚರ್ಚಿಸಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಅವರು ಇದೇ ವಾರದಲ್ಲಿ ರಷ್ಯಾಗೆ ಭೇಟಿ ನೀಡಲಿದ್ದಾರೆ.

ಆಗಸ್ಟ್‌ 23ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್‌ಗೆ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ್ದ ಅವರು, ‘ಮಾತುಕತೆ ಮೂಲಕ ಉಭಯ ದೇಶಗಳು ಬಿಕ್ಕಟ್ಟು ಬಗೆಹರಿಸಿಕೊಳ್ಳಬೇಕು. ಈ ದಿಸೆಯಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಿಕೊಳ್ಳಲು ಸಿದ್ಧವಿದೆ’ ಎಂದಿದ್ದರು. ಎರಡು ದಿನಗಳ ಬಳಿಕ ರಷ್ಯಾ ಅಧ್ಯಕ್ಷ ವಾದ್ಲಿಮಿರ್‌ ‍ಪುಟಿನ್‌ ಅವರಿಗೂ ಕರೆ ಮಾಡಿ ಚರ್ಚಿಸಿದ್ದರು.

‘ಪ್ರಧಾನಿ ಮೋದಿ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್‌ ಅವರು ನಡೆಸಿದ ಸಂಭಾಷಣೆಯ ವೇಳೆ, ಶಾಂತಿ ಮಾತುಕತೆಗಾಗಿ ಅಜಿತ್‌ ಡೊಭಾಲ್‌ ಅವರು ರಷ್ಯಾಗೆ ಭೇಟಿ ನೀಡುವುದರ ಕುರಿತು ನಿರ್ಧಾರವಾಗಿತ್ತು’ ಎಂದು ಮೂಲಗಳು ತಿಳಿಸಿರುವುದಾಗಿ ಎನ್‌ಡಿಟಿವಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

‘ಯುದ್ಧವನ್ನು ಅಂತ್ಯ ಗೊಳಿಸುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಬಹುದು’ ಎಂದು ಕೆಲವು ದಿನಗಳ ಹಿಂದಷ್ಟೇ ರಷ್ಯಾ ಅಧ್ಯಕ್ಷ ವಾದ್ಲಿಮಿರ್‌ ‍ಪುಟಿನ್‌ ಅಭಿಪ್ರಾಯಪಟ್ಟಿದ್ದರು.

ಹೀಗಾಗಿ, ಡೊಭಾಲ್‌ ಅವರ ರಷ್ಯಾ ಭೇಟಿ ‍ಪ್ರಾಮುಖ್ಯತೆ ಪಡೆದುಕೊಂಡಿದೆ. ಯುದ್ಧ ಕೊನೆಗೊಳಿಸಬೇಕು ಎಂಬ ಒತ್ತಾಯ ಹೆಚ್ಚುತ್ತಿರುವ ಹೊತ್ತಿನಲ್ಲೇ  ಬ್ರಿಕ್ಸ್‌ ದೇಶಗಳ ಭದ್ರತಾ ಸಲಹೆಗಾರರ ಶೃಂಗಸಭೆಯು ರಷ್ಯಾದಲ್ಲಿ ನಡೆಯಲಿದ್ದು, ಇದರಲ್ಲಿಯೂ ಡೊಭಾಲ್‌ ಭಾಗವಹಿಸಲಿದ್ದಾರೆ. ಕಳೆದ ಶನಿವಾರವಷ್ಟೇ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ, ಉಕ್ರೇನ್‌ ಪ್ರಧಾನಿ ಝೆಲೆನ್‌ಸ್ಕಿ ಅವರೊಂದಿಗೆ ಮಾತುಕತೆ ನಡೆಸಿದ್ದರು. ‘ಸಂಘರ್ಷವನ್ನು ಇನ್ನಷ್ಟು ಮುಂದುವರಿಸುವ ಬದಲು, ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾವು ಪ್ರಮುಖ ಪಾತ್ರ ವಹಿಸಬಲ್ಲವು’ ಎಂದು ಹೇಳಿದ್ದರು.

ಇರಾನ್‌ನಿಂದ ರಷ್ಯಾಗೆ ಶಸ್ತ್ರಾಸ್ತ್ರ ಪೂರೈಕೆ

ಉಕ್ರೇನ್‌ ವಿರುದ್ಧ ಯುದ್ಧವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಇರಾನ್‌, ಕಿರು ವ್ಯಾಪ್ತಿಯ ಶೆಲ್‌, ಕಿರುಕ್ಷಿಪಣಿಗಳನ್ನು ರಷ್ಯಾಗೆ ನೀಡಿದೆ ಎಂದು ಅಮೆರಿಕದ ಗುಪ್ತಚರವು ಮಾಹಿತಿ ಸಂಗ್ರಹಿಸಿದೆ ಎಂದು ಕೆಲವು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮಾಹಿತಿಯನ್ನು ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಸುತ್ತಿರುವ ದೇಶಗಳೊಂದಿಗೆ ಅಮೆರಿಕವು ಹಂಚಿಕೊಂಡಿದೆ.

‘ಯಾವ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಇರಾನ್‌ ರವಾನಿಸಿದೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಶ್ವೇತ ಭವನ ಕೂಡ ಈ ಕುರಿತು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ, ರಷ್ಯಾದೊಂದಿಗೆ ಇರಾನ್‌ ತನ್ನ ಸಂಬಂಧವನ್ನು ಗಟ್ಟಿ ಪಡಿಸಿಕೊಳ್ಳುತ್ತಿದೆ ಎಂದಷ್ಟೇ ಅದು ಹೇಳಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ. ರಷ್ಯಾಗೆ ಶಸ್ತ್ರಾಸ್ತ್ರ ರವಾನಿಸಬಾರದು ಎಂದು ಅಮೆರಿಕವು ಇರಾನ್‌ಗೆ ಹಲವು ತಿಂಗಳಿನಿಂದ ಎಚ್ಚರಿಸುತ್ತಲೇ ಬಂದಿದೆ. ‘ಇರಾನ್‌ ಹಾಗೂ ರಷ್ಯಾದ ಬಾಂಧವ್ಯವು ಐರೋಪ್ಯ ದೇಶಗಳ ಭದ್ರತೆಗೆ ಬೆದರಿಕೆ ಒಡ್ಡಲಿದೆ. ದೇಶಗಳನ್ನು ಅಸ್ಥಿರಗೊಳಿಸುವ ಇರಾನ್‌ನ ಯತ್ನಗಳು ಈ ಮಧ್ಯಪ್ರಾಚ್ಯ ದೇಶಗಳನ್ನು ಮೀರಿ ಇಡೀ ಜಗತ್ತನ್ನು ಒಳಗೊಳ್ಳುತ್ತಿದೆ’ ಎಂದು ಅಮೆರಿಕ ರಾಷ್ಟ್ರೀಯ ಭದ್ರತಾ ಸಮಿತಿಯ ವಕ್ತಾರ ಶಾನ್‌ ಸವೆಟ್‌ ಹೇಳಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT