ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶದಲ್ಲಿ ಹೆಚ್ಚಿದ ಬಿಸಿ ಗಾಳಿ: ದೇವಿ ಕಾಳಿಯ ಪಾದ ತೊಳೆದು ಮಳೆಗೆ ಪ್ರಾರ್ಥನೆ

Published 1 ಮೇ 2024, 13:06 IST
Last Updated 1 ಮೇ 2024, 13:06 IST
ಅಕ್ಷರ ಗಾತ್ರ

ಅಗರ್ತಲಾ: ದೇಶವ್ಯಾಪಿ ಬಿಸಿಗಾಳಿಯ ಪ್ರಮಾಣ ಹೆಚ್ಚಾಗಿದ್ದು, ತಾಪಮಾನ ಏರಿಕೆಯಿಂದ ಜನರು ಹೈರಾಣಾಗಿದ್ದಾರೆ. ಬಿಸಿಗಾಳಿಯಿಂದ ರಕ್ಷಿಸುವಂತೆ ಮತ್ತು ಮಳೆ ಸುರಿಸುವಂತೆ ಪ್ರಾರ್ಥಿಸಿ ಕಾಳಿ ದೇವಿಯ ಪಾದಗಳನ್ನು ತೊಳೆದು ಪ್ರಾರ್ಥಿಸಲಾಗಿದೆ.

‘ದೀರ್ಘಕಾಲದ ಒಣಹವೆ ಮುಂದುವರಿದರೆ ಮಳೆ ಸುರಿಸುವಂತೆ ಕೋರಿ ದೇವಿ ಕಾಳಿಯ ಪಾದಗಳನ್ನು ತೊಳೆಯುವುದು ಮತ್ತು ದೇವಾಲಯದ ಆವರಣವನ್ನು ಶುಚಿಗೊಳಿಸುವ ಕಾರ್ಯವನ್ನು ಕೈಗೊಳ್ಳುವ ಸಂಪ್ರದಾಯವಿದೆ. ಬಿಸಿಗಾಳಿ ಮುಂದುವರಿದ ಕಾರಣ, ಹತ್ತಿರದ ಕೊಳದಲ್ಲಿ ನೀರು ಸಂಗ್ರಹಿಸಿ, ದೇವಿಯ ಪಾದಗಳನ್ನು ತೊಳೆದು ಬೇಡಿಕೊಳ್ಳಲಾಯಿತು’ ಎಂದು ತ್ರಿಪುರಾದ ಬಿಜೆಪಿ ಶಾಸಕಿ ಅಂತರಾ ದೇವ್ ಸರ್ಕಾರ್ ಹೇಳಿದ್ದಾರೆ.

‘ಸನಾತನ ಧರ್ಮದಲ್ಲಿ ದೇವರು ಮತ್ತು ಪ್ರಕೃತಿಯನ್ನು ಪೂಜಿಸಬೇಕು. ಪ್ರಕೃತಿ ಅಪಾಯದಲ್ಲಿರುವ ಕಾರಣ ಬಿಸಿಗಾಳಿ ಬೀಸುತ್ತಿದೆ. ಇದಕ್ಕೆ ಪರಿಹಾರವನ್ನು ದೇವಿ ಕಾಳಿ ನೀಡಲಿದ್ದಾರೆ ಎಂಬ ನಂಬಿಕೆ ನಮ್ಮದು’ ಎಂದಿದ್ದಾರೆ.

ಶಾಸಕಿ ಅಂತರಾ ಅವರೊಂದಿಗೆ ಸ್ಥಳೀಯ ಮಹಿಳೆಯರೂ ಈ ಪೂಜೆಯಲ್ಲಿ ಪಾಲ್ಗೊಂಡರು. ಬಿಸಿಗಾಳಿಯಿಂದ ತಾಪಮಾನ ಏರಿಕೆಯಾಗಿದ್ದು, ರಾಜ್ಯದಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ.

ಇನ್ನೂ 5ರಿಂದ 10 ದಿನ ಬೀಸಲಿದೆ ಬಿಸಿಗಾಳಿ: ಹವಾಮಾನ ಇಲಾಖೆ

ಕರ್ನಾಟಕದ ರಾಯಚೂರು, ಬಾಗಲಕೋಟೆ, ರಾಯಚೂರು, ಯಾದಗಿರಿ, ವಿಜಯಪುರದಲ್ಲಿ 45 ಡಿಗ್ರಿ ಸೆಲ್ಸಿಯಸ್‌ಗೂ ಮೀರಿ ತಾಪಮಾನ ಏರಿಕೆಯಾಗಿದೆ. ಉತ್ತರ ಭಾರತದಲ್ಲೂ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಿಸಿಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ದಕ್ಷಿಣ ರಾಜಸ್ಥಾನ, ಪಶ್ಚಿಮ ಮಧ್ಯಪ್ರದೇಶ, ವಿದರ್ಭ, ಮರಾಠವಾಡ ಹಾಗೂ ಗುಜರಾತ್ ಭಾಗದಲ್ಲಿ ಮೇ ತಿಂಗಳಲ್ಲಿ 8ರಿಂದ 10 ದಿನಗಳ ಕಾಲ ಬಿಸಿಗಾಳಿ ಬೀಸಲಿದೆ ಎಂದು ಅಂದಾಜಿಸಲಾಗಿದೆ. ಕರ್ನಾಟಕವನ್ನೂ ಒಳಗೊಂಡು ರಾಜಸ್ಥಾನ, ಪೂರ್ವ ಮಧ್ಯಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ, ಛತ್ತೀಸಗಢದ ಕೆಲ ಭಾಗಗಳು, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ ಹಾಗೂ ತೆಲಂಗಾಣದಲ್ಲಿ ಮೇ ತಿಂಗಳಲ್ಲಿ ಕನಿಷ್ಠ 5 ದಿನಗಳ ಕಾಲ ಬಿಸಿಗಾಳಿ ಬೀಸಲಿದೆ ಎಂದು ಇಲಾಖೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT