ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅವಹೇಳನಕಾರಿ ಆರೋಪ:RSSನ ಶಂತನು ವಿರುದ್ಧ BJPಯ ಅಮಿತ್ ಮಾಳವೀಯ ಮಾನನಷ್ಟ ಮೊಕದ್ದಮೆ

Published 12 ಜೂನ್ 2024, 13:06 IST
Last Updated 12 ಜೂನ್ 2024, 13:06 IST
ಅಕ್ಷರ ಗಾತ್ರ

ಕೋಲ್ಕತ್ತ: ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಅವಹೇಳನಕಾರಿ ಆರೋಪ ಹೊರಿಸಿದ್ದಕ್ಕೆ ಸಂಬಂಧಿಸಿ ಆರ್‌ಎಸ್‌ಎಸ್‌ ಸದಸ್ಯ, ಕೋಲ್ಕತ್ತದ ವಕೀಲ ಶಂತನು ಸಿನ್ಹಾ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಬಿಜೆಪಿಯ ಐ.ಟಿ. ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಹೇಳಿದ್ದಾರೆ.

ಮಹಿಳೆಯರ ಘನತೆ ಬಗ್ಗೆ ಮಾತನಾಡಬೇಕಾದ ತೃಣಮೂಲ ಕಾಂಗ್ರೆಸ್ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸುಳ್ಳು ಪ್ರಚಾರ ಮಾಡಲು ನಿರ್ಧರಿಸಿದ್ದು ಆಶ್ಚರ್ಯವೇನಿಲ್ಲ ಎಂದು ‘ಎಕ್ಸ್‌’ನಲ್ಲಿ ಅಮಿತ್ ಮಾಳವೀಯ ಪೋಸ್ಟ್ ಮಾಡಿದ್ದಾರೆ.

ಏನಿದು ಘಟನೆ: 'ಅಮಿತ್‌ ಮಾಳವೀಯ ನೀಚ ಕೃತ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಪಂಚತಾರಾ ಹೋಟೆಲ್‌ಗಳಲ್ಲಿ ಮಾತ್ರವಲ್ಲ, ಪಶ್ಚಿಮ ಬಂಗಾಳದ ಬಿಜೆಪಿ ಕಚೇರಿಯಲ್ಲಿಯೂ ಮಹಿಳೆ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ಆರ್‌ಎಸ್‌ಎಸ್‌ ಸದಸ್ಯ ಶಂತನು ಸಿನ್ಹಾ ಆರೋಪಿಸಿದ್ದಾರೆ' ಎಂದು ಕಾಂಗ್ರೆಸ್‌ ನಾಯಕಿ ಸುಪ್ರಿಯಾ ಶ್ರೀನೆತ್ ಈಚೆಗೆ ಹೇಳಿದ್ದರು.

‘ಮಾಳವೀಯ ನೀಚ ಕೃತ್ಯಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕ ರಾಹುಲ್‌ ಸಿನ್ಹಾ ಅವರ ಸಂಬಂಧಿ ಆರ್‌ಎಸ್‌ಎಸ್‌ನ ಶಂತನು ಸಿನ್ಹಾ ಆರೋಪಿಸಿದ್ದಾರೆ. ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿ 24 ಗಂಟೆ ಕಳೆಯುವುದರೊಳಗೆ, ಇಂತಹ ಗಂಭೀರ ಆರೋಪ ಕೇಳಿಬಂದಿರುವುದು ಆಘಾತಕಾರಿ. ಮಾಳವೀಯ ಅವರನ್ನು ಕೂಡಲೇ ಪಕ್ಷದ ಅಧಿಕಾರದಿಂದ ಕಿತ್ತುಹಾಕಬೇಕು. ಆರೋಪದ ಸಂಬಂಧ ಸ್ವತಂತ್ರ ತನಿಖೆ ನಡೆಯಬೇಕು' ಎಂದು ಒತ್ತಾಯಿಸಿದ್ದರು.

ಅಮಿತ್ ಮಾಳವಿಯಾ ಪ್ರತಿಕ್ರಿಯೆ ಹೀಗಿತ್ತು...: ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ 'ಸುಳ್ಳು ಹಾಗೂ ಅವಹೇಳನಕಾರಿ' ಪೋಸ್ಟ್‌ ಅನ್ನು ತೆಗೆದುಹಾಕಬೇಕು. ಇಲ್ಲದಿದ್ದರೆ ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿರುವ ಶಂತನು ಸಿನ್ಹಾ ವಿರುದ್ಧ ₹10 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಅಮಿತ್‌ ಮಾಳವೀಯ ಹೇಳಿದ್ದರು.

ಶಂತನು ಅವರು ಸುಳ್ಳು ಆರೋಪ ಹೊರಿಸಿದ್ದಾರೆ ಎಂದು ದೂರಿ, ಮಾಳವೀಯ ಅವರು ತಮ್ಮ ವಕೀಲರ ಮೂಲಕ ಶಂತನು ಅವರಿಗೆ ನೋಟಿಸ್ ನೀಡಿದ್ದರು.

ಶಂತನು ಸಿನ್ಹಾ ಹೇಳಿದ್ದೇನು?

ಬಿಜೆಪಿಯ ಐ.ಟಿ. ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಹಾಗೂ ಬಿಜೆಪಿಯ ಪಶ್ಚಿಮ ಬಂಗಾಳ ಘಟಕದ ವಿರುದ್ಧ ಮಾನಹಾನಿಕರ ಆರೋಪ ಹೊರಿಸಿದ್ದಕ್ಕೆ ನೋಟಿಸ್ ಪಡೆದಿರುವ ಕೋಲ್ಕತ್ತದ ವಕೀಲ ಶಂತನು ಸಿನ್ಹಾ ಅವರು, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದರು.

ತಾವು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್‌ ಅನ್ನು ಹಿಂದಕ್ಕೆ ಪಡೆಯುತ್ತಿಲ್ಲ ಎಂದು ಶಂತನು ಸ್ಪಷ್ಟಪಡಿಸಿದ್ದಾರೆ. ಆದರೆ, ಆ ಪೋಸ್ಟ್‌ನಿಂದಾಗಿ ಮಾಳವೀಯ ಅವರಿಗೆ ನೋವಾಗಿದ್ದರೆ, ‘ಪ್ರಾಮಾಣಿಕವಾಗಿ ಖೇದ ವ್ಯಕ್ತಪಡಿಸುವುದಾಗಿ’ ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆಗೆ ಸಂಪರ್ಕಿಸಿದಾಗ ಶಂತನು ಅವರು, ‘ನಾನು ಕ್ಷಮೆ ಕೇಳುತ್ತಿಲ್ಲ, ಬದಲಿಗೆ, ತಪ್ಪು ತಿಳಿವಳಿಕೆಗಳನ್ನು ಸರಿಪಡಿಸುವ ಯತ್ನ ಮಾಡುತ್ತಿದ್ದೇನೆ’ ಎಂದಿದ್ದರು.

‘ದೇಶದ ಅತ್ಯಂತ ಕೊಳಕಿನ ಹಾಗೂ ಭ್ರಷ್ಟ ಪಕ್ಷವಾಗಿರುವ ಕಾಂಗ್ರೆಸ್, ನನ್ನ ಫೇಸ್‌ಬುಕ್‌ ಖಾತೆಯಲ್ಲಿ ಬಂಗಾಳಿ ಭಾಷೆಯಲ್ಲಿ ಪ್ರಕಟಿಸಿದ ಒಂದು ಪೋಸ್ಟ್‌ ಬಳಸಿಕೊಂಡು, ಅಮಿತ್ ಮಾಳವೀಯ ಮತ್ತು ಬಿಜೆಪಿ ಕುರಿತು ದ್ವೇಷದ ಅಭಿಯಾನ ನಡೆಸುತ್ತಿರುವುದು ನನಗೆ ಬಹಳ ಕಿರಿಕಿರಿ ಉಂಟುಮಾಡುತ್ತಿದೆ’ ಎಂದು ಶಂತನು ದೂರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT