ತಿರುವನಂತಪುರ: ಸರಣಿ ಭೂಕುಸಿತದಿಂದ ತತ್ತರಿಸಿರುವ ಕೇರಳದಲ್ಲಿ ಇದೀಗ 'ಮಿದುಳು ತಿನ್ನುವ ಅಮೀಬಾ ಸೋಂಕು' ಪ್ರಕರಣಗಳು ವರದಿಯಾಗಿವೆ.
ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು, ಮೂವರಲ್ಲಿ ಸೋಂಕು ದೃಢಪಟ್ಟಿದೆ. ಅವರಿಗೆ ತಿರುವನಂತಪುರದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕಲುಷಿತ ನೀರಿನ ಬಳಕೆಯಿಂದ ಸೋಂಕು ತಗುಲಿದೆ ಎಂದಿರುವ ಸಚಿವರು, ಸಾರ್ವಜನಿಕರು ಜಾಗೃತರಾಗಿರಬೇಕು ಎಂದೂ ಮನವಿ ಮಾಡಿದ್ದಾರೆ.
ಈ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ ಆರೋಗ್ಯ ಸಚಿವಾಲಯ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕಲುಷಿತ ನೀರನ್ನು ಸ್ನಾನ, ಪ್ರಾಣಿಗಳನ್ನು ತೊಳೆಯಲು ಅಥವಾ ಇತರ ಕಾರ್ಯಗಳಿಗೆ ಬಳಸುವುದು ಸೋಂಕು ಹರಡಲು ಕಾರಣವಾಗಲಿದೆ ಎಂದು ಎಚ್ಚರಿಸಿದೆ.
ಈ ಸೋಂಕಿನ ಪ್ರಕರಣಗಳು ತೀರಾ ಅಪರೂಪವಾದರೂ ಗಂಭೀರವಾದವು. ಹಾಗಾಗಿ, ವಿಪರೀತ ತಲೆನೋವು, ಜ್ವರ, ನೆಗಡಿ, ವಾಂತಿ ಅಥವಾ ಕುತ್ತಿಗೆ ನೋವು ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಎಂದು ಸಲಹೆ ನೀಡಿದೆ.
ಜಾಗೃತಿ ಮೂಡಿಸುವ ಪ್ರಯತ್ನಗಳನ್ನು ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದೂ ತಿಳಿಸಿದೆ.
14 ವರ್ಷದ ಬಾಲಕನೊಬ್ಬ ಕಳೆದ ತಿಂಗಳು ಈ ಸೋಂಕಿನಿಂದ ಮೃತಪಟ್ಟಿದ್ದ. ರಾಜ್ಯದಲ್ಲಿ ಮೇ ತಿಂಗಳಿಂದ ಈಚೆಗೆ ವರದಿಯಾದ ನಾಲ್ಕನೇ ಪ್ರಕರಣ ಇದಾಗಿದ್ದು, ಎಲ್ಲರೂ ಮಕ್ಕಳೇ ಎಂಬುದು ಆಘಾತಕಾರಿ.
ಈ ಸೋಂಕು ಪ್ರಕರಣಗಳು ಆಲಪ್ಪುಳ ಜಿಲ್ಲೆಯಲ್ಲಿ 2017 ಹಾಗೂ 2023ರಲ್ಲಿಯೂ ವರದಿಯಾಗಿದ್ದವು.
Thiruvananthapuram: Kerala Health Minister Veena George has urged the public to take precautions following confirmed cases of amoebic meningoencephalitis in the city. People using stagnant water for bathing or washing animals should be cautious. Seek medical attention if severe…
— ANI (@ANI) August 5, 2024
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.