ಲಖನೌ: ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ತಂದೆಯೊಬ್ಬರು ನಾಲ್ಕನೇ ಮಗಳು ಜನಿಸಿದ್ದಕ್ಕೆ ಆಕ್ರೋಶಗೊಂಡು ನವಜಾತ ಶಿಶುವನ್ನು ನೆಲಕ್ಕೆ ಹೊಡೆದು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಇಟಾವಾನಗರದಲ್ಲಿ ನಡೆದಿದೆ.
ಕುಡಿದ ಅಮಲಿನಲ್ಲಿ ಹಿಂಸಾತ್ಮಕ ಕೃತ್ಯ ಎಸಗಿದ ಆರೋಪದ ಮೇಲೆ 30 ವರ್ಷದ ಬಾಬ್ಲು ದಿವಾಕರ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ದಿವಾಕರ್ ಅವರ ಮೊದಲ ಪತ್ನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅವರು ಮೃತಪಟ್ಟಿದ್ದಾರೆ. ಬಳಿಕ ಎರಡನೇ ಮದುವೆಯಾಗಿದ್ದ. ಆದರೆ, ಎರಡನೇ ಹೆಂಡತಿಗೂ ಮೊದಲು ಹೆಣ್ಣು ಮಗು ಜನಿಸಿತ್ತು. ಆಕೆಗೆ ಎರಡನೇ ಬಾರಿ ಗಂಡು ಮಗು ಜನಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ದಿವಾಕರ್, ಮತ್ತೆ ಹೆಣ್ಣು ಮಗು ಜನಿಸಿದ್ದಕ್ಕಾಗಿ ತೀವ್ರ ಅಸಮಾಧಾನಗೊಂಡಿದ್ದ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ವರ್ಮಾ ತಿಳಿಸಿದ್ದಾರೆ.
ಗಂಡು ಮಗು ಬೇಕು ಎಂದು ಒತ್ತಾಯಿಸಿ ದಿವಾಕರ್ ನಿತ್ಯ ಕುಡಿದು ಬಂದು ಪತ್ನಿಯೊಡನೆ ಜಗಳವಾಡುತ್ತಿದ್ದ. ಈ ವೇಳೆ ಹೆಂಡತಿಯ ಮಡಿಲಿಂದ ಒಂದು ತಿಂಗಳ ಹೆಣ್ಣು ಮಗುವನ್ನು ಕಸಿದುಕೊಂಡು ಮನಸೋಇಚ್ಛೆ ನೆಲಕ್ಕೆ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಮಗು ಮೃತಪಟ್ಟಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಪತ್ನಿ ದೀಪು ನೀಡಿದ ದೂರಿನ ಆಧಾರದ ಮೇಲೆ ದಿವಾಕರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.