ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಸ್ವತಿ ಪೂಜೆ ನಿರಾಕರಣೆ: ಶಿಕ್ಷಕಿ ಅಮಾನತು

ರಾಜಸ್ಥಾನದಲ್ಲಿ ಗಣರಾಜ್ಯೋತ್ಸವದಂದು ನಡೆದಿದ್ದ ಘಟನೆ
Published 24 ಫೆಬ್ರುವರಿ 2024, 16:17 IST
Last Updated 24 ಫೆಬ್ರುವರಿ 2024, 16:17 IST
ಅಕ್ಷರ ಗಾತ್ರ

ಜೈಪುರ: ಸರಸ್ವತಿ ದೇವಿಯನ್ನು ಪೂಜಿಸಲು ನಿರಾಕರಿಸಿದ ಸರ್ಕಾರಿ ಶಾಲೆಯ ಶಿಕ್ಷಕಿಯನ್ನು ರಾಜಸ್ಥಾನ ಸರ್ಕಾರ ಅಮಾನತುಗೊಳಿಸಿದೆ.

ಬಾರಾನ್‌ ಜಿಲ್ಲೆಯ ಕಿಶನ್‌ಗಂಜ್ ಪ್ರದೇಶದ ಲಡ್ಕೈ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಜ. 26ರಂದು ನಡೆದ ಗಣರಾಜ್ಯೋತ್ಸವದಲ್ಲಿ ಸರಸ್ವತಿ ದೇವಿಯನ್ನು ಪೂಜಿಸಲು ನಿರಾಕರಿಸಿದ್ದಕ್ಕಾಗಿ ಹಾಗೂ ಸ್ಥಳೀಯರ ಧಾರ್ಮಿಕ ಭಾವನೆಗಳನ್ನು ನೋಯಿಸಿದ್ದಕ್ಕಾಗಿ, ಪ್ರಾಥಮಿಕ ಶಾಲಾ ಶಿಕ್ಷಕಿ ಹೇಮಲತಾ ಬೈರ್ವಾ ಅಮಾನತುಗೊಂಡಿದ್ದಾರೆ.

ತಕ್ಷಣದಿಂದಲೇ ಅಮಾನತುಗೊಳಿಸುವ ಆದೇಶವನ್ನು ಬಾರಾನ್‌ ಜಿಲ್ಲಾ ಶಿಕ್ಷಣ (ಪ್ರಾಥಮಿಕ) ಅಧಿಕಾರಿ ಪಿಯೂಷ್‌ ಕುಮಾರ್‌ ಶರ್ಮಾ ಶುಕ್ರವಾರ ಹೊರಡಿಸಿದ್ದಾರೆ. ಬಿಕಾನೇರ್‌ನ ಪ್ರಾಥಮಿಕ ಶಿಕ್ಷಣ ನಿರ್ದೇಶನಾಲಯಕ್ಕೆ ವರದಿ ಮಾಡಿಕೊಳ್ಳುವಂತೆ ಶಿಕ್ಷಕಿಗೆ ಸೂಚಿಸಲಾಗಿದೆ.

ಕಿಶನ್‌ಗಂಜ್‌ನಲ್ಲಿ ಗುರುವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಶಿಕ್ಷಣ ಸಚಿವ ಮದನ್ ದಿಲಾವರ್, ಶಿಕ್ಷಕಿ ಹೇಮಲತಾ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ‘ಸರಸ್ವತಿಯ ಕೊಡುಗೆ ಏನು ಎಂದು ಶಾಲೆಯಲ್ಲೇ ಕೇಳಿದ್ದಾರೆ. ಈ ಮಾತನ್ನು ಯಾರೇ ಹೇಳಿದರೂ ಅವರನ್ನು ಅಮಾನತುಗೊಳಿಸುವೆ’ ಎಂದು ಸಚಿವರು ಸಭೆಯಲ್ಲಿ ಹೇಳಿದ್ದರು. ಮರುದಿನವೇ ಅಮಾನತು ಆದೇಶ ಹೊರಡಿಸಲಾಗಿದೆ.

ಜ. 26ರಂದು ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ವೇದಿಕೆಯ ಮೇಲೆ ಸರಸ್ವತಿಯ ಭಾವಚಿತ್ರವಿಡಲು ಹೇಮಲತಾ ನಿರಾಕರಿಸಿದರು. ಸ್ಥಳದಲ್ಲಿದ್ದ ಕೆಲವರು ಈ ವಿಷಯಕ್ಕೆ ಸಂಬಂಧಿಸಿದಂತೆ ಶಿಕ್ಷಕಿ ಜೊತೆ ವಾಗ್ವಾದ ನಡೆಸಿದರು. ವೇದಿಕೆಯಲ್ಲಿ ಸರಸ್ವತಿಯ ಭಾವಚಿತ್ರ ಇರದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಹೂವುಗಳಿಂದ ಪೂಜಿಸುವಂತೆ ಒತ್ತಾಯಿಸಿದರು. ಶಿಕ್ಷಕಿ ಈ ಬೇಡಿಕೆಯನ್ನು ನಿರಾಕರಿಸಿದರು.

‘ಪೂಜಿಸಬೇಕಾಗಿದ್ದು ಸಾವಿತ್ರಿ ಬಾಯಿ ಫುಲೆ ಅವರನ್ನು. ಶಿಕ್ಷಣಕ್ಕೆ ಸರಸ್ವತಿ ಯಾವ ಕೊಡುಗೆ ನೀಡಿದ್ದಾರೆ’ ಎಂದು ಶಿಕ್ಷಕಿ ಪ್ರಶ್ನಿಸಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ‘ಹೇಮಲತಾ’ ಹ್ಯಾಷ್‌ಟ್ಯಾಗ್‌ನೊಂದಿಗೆ ಇದು ಟ್ರೆಂಡಿಂಗ್‌ನಲ್ಲಿತ್ತು. ಇದಕ್ಕೆ ಮೆಚ್ಚುಗೆ–ಟೀಕೆ ವ್ಯಕ್ತವಾಗಿದ್ದವು.

ಮತಾಂತರದಲ್ಲಿ ತೊಡಗಿದ್ದಾರೆ ಎಂಬ ಆರೋಪದಲ್ಲಿ ಕೋಟಾದ ಸಂಗೋಡ್ ಪ್ರದೇಶದಲ್ಲಿ ಇಬ್ಬರು ಶಿಕ್ಷಕರನ್ನು ಈ ಹಿಂದೆ ಅಮಾನತುಗೊಳಿಸಲಾಗಿದೆ. ಶಿಕ್ಷಕರೊಬ್ಬರ ವಿರುದ್ಧ ತನಿಖೆಯೂ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT