ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾ ಹೇಳಿಕೆ ಖಂಡಿಸಿ ಲೇಖನ, ಸಂಸದನಿಗೆ ನೋಟಿಸ್‌!

Published 1 ಮೇ 2023, 16:21 IST
Last Updated 1 ಮೇ 2023, 16:21 IST
ಅಕ್ಷರ ಗಾತ್ರ

ನವದೆಹಲಿ: ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ಖಂಡಿಸಿ, ಟೀಕಿಸಿ ಪತ್ರಿಕೆಯಲ್ಲಿ ಲೇಖನ ಬರೆದಿದ್ದ ಸಿಪಿಎಂನ ರಾಜ್ಯಸಭಾ ಸದಸ್ಯ ಜಾನ್‌ ಬ್ರಿಟ್ಟಾ ಅವರಿಗೆ ರಾಜ್ಯಸಭೆಯ ಸಭಾಪತಿ ಜಗದೀಪ್ ಧನ್‌ಕರ್‌ ನೋಟಿಸ್ ನೀಡಿದ್ದು ವಿವರಣೆ ನೀಡಲು ತಮ್ಮ ಎದುರು ಹಾಜರಾಗುವಂತೆ ಸೂಚಿಸಿದ್ದಾರೆ.

ಸಭಾಪತಿಯ ಈ ಕ್ರಮವನ್ನು ಬ್ರಿಟ್ಟಾ ಖಂಡಿಸಿದ್ದಾರೆ. ಈ ಮಧ್ಯೆ ಬ್ರಿಟ್ಟಾ ಅವರ ಪರ ಹಲವು ಸಂಸದರು ಧ್ವನಿ ಎತ್ತಿದ್ದಾರೆ. ‘ಇದು, ವಿರೋಧದ ಧ್ವನಿಯನ್ನು ಹತ್ತಿಕ್ಕುವ ಯತ್ನ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನೋಟಿಸ್ ಜಾರಿ ಕುರಿತು ಪ್ರತಿಕ್ರಿಯಿಸಿರುವ ಬ್ರಿಟ್ಟಾ, ‘ರಾಜಕೀಯ ದ್ವೇಷ ಸಾಧನೆಗೆ ಸಾಂವಿಧಾನಿಕ ಸಂಸ್ಥೆಗಳನ್ನು ಬಿಜೆಪಿಯು ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ಆಕ್ಷೇಪಿಸಿದ್ದಾರೆ.

ಲೋಕಸಭೆ ಸಚಿವಾಲಯದ ಮಾಜಿ ಪ್ರಧಾನ ಕಾರ್ಯದರ್ಶಿ ಪಿಡಿಟಿ ಆಚಾರ್ಯ ಅವರು, ‘ಕ್ರಿಮಿನಲ್‌ ಆರೋಪ ಪ್ರಕರಣದ ವಿಚಾರಣೆಯನ್ನು ರಾಜ್ಯಸಭೆ ಸಭಾಪತಿ ನಡೆಸುವುದು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದ್ದಾರೆ. ‘ದೂರಿನಲ್ಲಿ ದೇಶದ್ರೋಹದ ಉಲ್ಲೇಖವಿದ್ದರೂ, ಸರಿಯಾಗಿ ನಮೂದಿಸಿಲ್ಲ‘ ಎಂದು ಹೇಳಿದ್ದಾರೆ.

‘ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯ. ಲೇಖನ ಕುರಿತಂತೆ ಬಿಜೆಪಿಯ ಕಾರ್ಯಕರ್ತರೊಬ್ಬರು ನೀಡಿರುವ ದೂರು, ಅದನ್ನು ರಾಜ್ಯಸಭೆ ಸಭಾಪತಿ ನಿರ್ವಹಿಸುತ್ತಿರುವ ಬಗೆ ಎರಡೂ ಗೊಂದಲ ಮೂಡಿಸುತ್ತಿವೆ. ಇದು, ರಾಜಕೀಯ ದ್ವೇಷದ ಪ್ರಕರಣ. ದ್ವೇಷ ಸಾಧನೆಗೆ ಸಾಂವಿಧಾನಿಕ ಸಂಸ್ಥೆ ದುರ್ಬಳಕೆ ಆಗುತ್ತಿದೆ‘ ಎಂದರು.

ಕೇರಳದ ಬ್ರಿಟ್ಟಾ ಅವರು, ಕೇರಳ ಕುರಿತಂತೆ ಶಾ ಆಡಿದ ಮಾತು ಉಲ್ಲೇಖಿಸಿ, ಗೃಹ ಸಚಿವರನ್ನು ಟೀಕಿಸಿ ಲೇಖನ ಬರೆದಿದ್ದರು. ಶಾ ಅವರಿಂದ ಉತ್ತರವನ್ನು ಬಯಸಿದ್ದರು.

‘ಈ ಲೇಖನವು ಪ್ರತ್ಯೇಕತಾ ಭಾವನೆಯನ್ನು ಒಳಗೊಂಡಿದೆ. ದೇಶದ್ರೋಹ ವರ್ತನೆಗಾಗಿ ಈ ಸಂಬಂಧ ಸೂಕ್ತ ಕ್ರಮ ಅಗತ್ಯವಾಗಿದೆ’ ಎಂದು ದೂರು ನೀಡಿದ್ದ ಕಾರ್ಯಕರ್ತ ಒತ್ತಾಯಿಸಿದ್ದರು.

‘ಲೇಖನ ಬರೆಯುವುದು ನನ್ನ ಮೂಲಭೂತ ಹಕ್ಕು. ಕೇರಳ ಕುರಿತಂತೆ ಶಾ ಆಡಿರುವ ಮಾತಿಗೆ ಪ್ರತಿಕ್ರಿಯಿಸುವ ಸ್ವಾತಂತ್ರ್ಯ ನನಗಿದೆ‘ ಎಂದು ಸಭಾಪತಿಗೆ ಬ್ರಿಟ್ಟಾ ಪ್ರತಿಕ್ರಿಯಿಸಿದ್ದರು.

‘ಇಂತಹ ಪ್ರಕರಣದಲ್ಲಿ ಸದಸ್ಯರಿಗೆ ನೋಟಿಸ್‌ ನೀಡಲಾಗದು. ಇದು, ಹಕ್ಕುಚ್ಯುತಿ ವ್ಯಾಪ್ತಿಗೆ ಬರುವುದಿಲ್ಲ. ಸಚಿವರನ್ನು ಟೀಕಿಸುವ ಹಕ್ಕು ಎಲ್ಲ ಸಂಸದರಿಗೆ ಇರುತ್ತದೆ. ಅಲ್ಲದೆ, ಇದು, ಸಂಸತ್ತಿನ ಹೊರಗೆ ಆಡಿರುವ ಮಾತು. ಹಕ್ಕುಚ್ಯುತಿ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಆಚಾರ್ಯ ಹೇಳಿದರು. ‘

‘ಉಲ್ಲೇಖಿತ ಲೇಖನ ದೇಶದ್ರೋಹವಾಗಲಿದೆ ಎಂದು ಹೇಳಿರುವುದೇ ದೂರುದಾರನ ಮೂರ್ಖತನ. ಬಹುಶಃ ಅರ್ಥಮಾಡಿಕೊಳ್ಳದೆಯೇ ಆ ಪದ ಬಳಸಿರಬೇಕು. ಬಹುಶಃ, ಅಧ್ಯಕ್ಷರು ಇದರ ವಿಚಾರಣೆ ನಡೆಸಬಹುದು ಎಂದು ಭಾವಿಸಿ ಆತ ದೂರು ನೀಡಿರಬಹುದು‘ ಎಂದು ಹೇಳಿದರು.

‘ನಿಯಮಗಳ ಪ್ರಕಾರ, ಸಭಾಪತಿ ಪ್ರಕರಣದ ವಿಚಾರಣೆ ನಡೆಸಲಾಗದು. ಅವರಿಗೆ ಸದನದೊಳಗೂ ಈ ಅಧಿಕಾರ ಇಲ್ಲ. ಏಕೆಂದರೆ, ಏನು ಕ್ರಮ ಕೈಗೊಳ್ಳಬೇಕು ಎಂದು ನಿರ್ಧರಿಸುವುದು  ಸದನ. ‘ದೇಶದ್ರೋಹದ ವರ್ತನೆ ಗಂಭೀರ ಆರೋಪ. ಆದರೆ, ಈ ಪ್ರಕರಣವನ್ನು ರಾಜ್ಯಸಭೆಯ ವಿಚಾರಣೆಗೆ ಪರಿಗಣಿಸಬಾರದು’ ಎಂದು ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ರಿಟ್ಟಾ ಪರ ಧ್ವನಿ ಎತ್ತಿದ ಹಲವು ಸಂಸದರು

ಕೇರಳದ ಸಂಸದ ಜಾನ್‌ ಬ್ರಿಟ್ಟಾ ಅವರನ್ನು ಬೆಂಬಲಿಸಿ ವಿರೋಧ ಪಕ್ಷಗಳ ಸಂಸದರು ಧ್ವನಿ ಎತ್ತಿದ್ದು, ಅವರ ಬೆಂಬಲಕ್ಕೆ ನಿಂತಿದ್ದಾರೆ. 

ತೃಣಮೂಲ ಕಾಂಗ್ರೆಸ್‌ ಪಕ್ಷದ, ಲೋಕಸಭೆ ಸದಸ್ಯೆ ಮಹುಅ ಮೊಯಿತ್ರಾ ಅವರು, ‘ಇದು, ನಿಜಕ್ಕೂ ಆಶ್ಚರ್ಯಕರ ಸಂಗತಿ. ಅಮಿತ್‌ ಶಾ ಅವರನ್ನು ಟೀಕಿಸಿದ್ದು ಏಕೆ ಎಂದು ರಾಜ್ಯಸಭೆ ಸಭಾಪತಿ ಕೇಳುತ್ತಾರೆ. ನಾನು ಹಲವು ಬಾರಿ ಟೀಕೆ ಮಾಡಿದ್ದೇನೆ. ಈಗ ನನಗೆ ಕರೆ ಬರುವುದನ್ನು ಕಾಯುತ್ತಿದ್ದೇನೆ’ ಎಂದರು.

ಆರ್‌ಜೆಡಿ ಪಕ್ಷದ ಹಿರಿಯ ಸಂಸದ ಮನೋಜ್‌ ಕೆ.ಜಾ, ‘ಇಲ್ಲಿ, ಸಚಿವರ ಹೇಳಿಕೆಯೇ ದೇಶದ್ರೋಹ ಆರೋಪಕ್ಕೆ ಉತ್ತಮ ಉದಾಹರಣೆ. ಅದಕ್ಕೆ ಪ್ರತಿಕ್ರಿಯಿಸಿ ಬ್ರಿಟ್ಟಾ ಬರೆದಿರುವ ಲೇಖನವಲ್ಲ. ಇಡೀ ಪ್ರಕರಣವು ಆಡಳಿತವು ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ತಿಳಿಸುತ್ತಿದೆ‘ ಎಂದು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ ಅವರು ಟ್ವೀಟ್‌ನಲ್ಲಿ, ರಾಜ್ಯಸಭೆ ಸಭಾಪತಿ ಸಂಸದನಿಗೆ ಲೇಖನ ಕುರಿತಂತೆ ನೋಟಿಸ್ ನೀಡುತ್ತಾರೆ. ಬಿಜೆಪಿ ನಾಯಕರು ಲೇಖನವನ್ನು ದೇಶದ್ರೋಹ ಎಂದು ಬಣ್ಣಿಸುತ್ತಾರೆ. ಬಹುಶಃ, ಸತ್ಯ ಹೇಳಿದ್ದಕ್ಕೆ ಜಾನ್ ಬ್ರಿಟ್ಟಾ ಮೇಲೆ ಮುಗಿಬೀಳಲಾಗಿದೆ‘ ಎಂದು ಅಭಿಪ್ರಾಯಪಟ್ಟಿದ್ದಾರೆ.

ಡಿ.ಎಂ.ಕೆ ಸಂಸದೆ ಕನಿಮೋಳಿ ಅವರು, ‘ಇದು ದಿಗ್ಭ್ರಮೆ ಮೂಡಿಸುವ ಸಂಗತಿ. ಮುಂದೆ ನಾವು ಇನ್ನು ಏನೆನನ್ನು ನಿರೀಕ್ಷಿಸಬಹುದು? ವಿರೋಧ ಪಕ್ಷಗಳ ಎಲ್ಲ ಸಂಸದರಿಗೂ ನೋಟಿಸ್‌ ಜಾರಿ? ನಾವು ನೀಡುವ ಪ್ರತಿ ಹೇಳಿಕೆಗೂ ವಿಚಾರಣೆ? ಪ್ರಜಾಪ್ರಭುತ್ವವನ್ನು ಕತ್ತಲು ಆವರಿಸುವ ದಿನಗಳು ಬಹುಶಃ ತುಂಬಾ ಹತ್ತಿರದಲ್ಲಿಯೇ ಇವೆ ಎನಿಸುತ್ತದೆ’ ಎಂದು ಅವರು ಟ್ವೀಟ್‌ನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಕೇರಳದ ಮಾಜಿ ಹಣಕಾಸು ಸಚಿವ ಥಾಮಸ್‌ ಇಸಾಕ್‌ ಅವರು, ಮೋದಿ ಅವರು ಹಿಂದೊಮ್ಮೆ ಕೇರಳವನ್ನು ಸೋಮಾಲಿಯಾ ಎಂದಿದ್ದರು. ಶಾ ಅವರು ಕೇರಳವನ್ನು ಧಿಕ್ಕರಿಸಿ ಹೇಳಿಕೆ ನೀಡಿದ್ದಾರೆ. ಅವರು ಕೇರಳವನ್ನು ನಿಂದಿಸಬಹುದು. ಆದರೆ, ಕೇರಳ ಸಂಸದ ಮಾತ್ರ ಅವರ ಬಣ್ಣ ಬಯಲು ಮಾಡುವಂತಿಲ್ಲ. ಬ್ರಿಟ್ಟಾ ಅವರಿಗೆ ನೋಟಿಸ್ ನೀಡಿರುವುದರ ಉದ್ದೇಶವಾದರೂ ಏನು’ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT