ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ನೀರು: ಪ್ರಧಾನಿಗೆ ಸ್ಟಾಲಿನ್‌ ಪತ್ರ

Published 4 ಆಗಸ್ಟ್ 2023, 15:35 IST
Last Updated 4 ಆಗಸ್ಟ್ 2023, 15:35 IST
ಅಕ್ಷರ ಗಾತ್ರ

ಚೆನ್ನೈ: ರಾಜ್ಯದ ಕುರುವೈ (ಅಲ್ಪಾವಧಿ) ಬೆಳೆಗಳನ್ನು ಉಳಿಸಬೇಕಿದೆ. ಕೂಡಲೇ ಮಧ್ಯಪ್ರವೇಶಿಸಿ, ಕಾವೇರಿ ನೀರು ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಬೇಕು ಎಂದು ಪ್ರಧಾನಿ ನರೇಂದ ಮೋದಿ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಶುಕ್ರವಾರ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರಧಾನಿಗೆ ಪತ್ರ ಬರೆದಿರುವ ಸ್ಟಾಲಿನ್, ಕಾವೇರಿ ಮುಖಜಭೂಮಿ ಪ್ರದೇಶದ ರೈತರು ಎದುರಿಸುತ್ತಿರುವ ಸಮಸ್ಯೆಯನ್ನು ವಿವರಿಸಿದ್ದಾರೆ.

‘ಅಂದಾಜು 5 ಲಕ್ಷ ಎಕರೆಯಲ್ಲಿ ಭತ್ತದ ಕೃಷಿ ಮಾಡಲಾಗುತ್ತದೆ. ಜೂನ್‌ ಮತ್ತು ಜುಲೈ ಕೋಟಾದಡಿ 30 ಟಿಎಂಸಿ ಅಡಿಯಷ್ಟು ನೀರನ್ನು ಕಾವೇರಿ ನದಿಗೆ ಬಿಡಬೇಕಿತ್ತು. ಕುರುವೈ ಬೆಳೆಯನ್ನು ಉಳಿಸುವ ಸಲುವಾಗಿ ಕಾವೇರಿ ನೀರಿನಲ್ಲಿ ತಮಿಳುನಾಡಿನ ಪಾಲನ್ನು ಕೂಡಲೇ ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಸೂಚಿಸಬೇಕು’ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

‘ನೈರುತ್ಯ ಮುಂಗಾರು ಅವಧಿಯಲ್ಲಿ ಕಾವೇರಿ ಮುಖಜಭೂಮಿ ಪ್ರದೇಶದಲ್ಲಿ ಕಡಿಮೆ ಪ್ರಮಾಣದಲ್ಲಿ ಮಳೆ ಬೀಳುತ್ತದೆ. ಕುರುವೈ ಮತ್ತು ಸಾಂಬಾ ಭತ್ತದ ನಾಟಿ ಕಾರ್ಯವು ಸಂಪೂರ್ಣವಾಗಿ ಮೆಟ್ಟೂರು ಅಣೆಕಟ್ಟೆಯಿಂದ ಬಿಡುಗಡೆ ಮಾಡುವ ನೀರನ್ನೇ ಅವಲಂಬಿಸಿದ್ದು, ಈ ಅಣೆಕಟ್ಟೆಗೆ ಕರ್ನಾಟಕದಿಂದ ನೀರು ಬರಬೇಕು’ ಎಂದು ವಿವರಿಸಿದ್ದಾರೆ.

‘ಇದೇ ವಿಚಾರವಾಗಿ ಜುಲೈ 5 ಮತ್ತು 19ರಂದು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್ ಅವರಿಗೆ ಪತ್ರ ಬರೆಯಲಾಗಿತ್ತು’ ಎಂದೂ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT