ಲಖನೌ: ಉತ್ತರ ಪ್ರದೇಶ ಸಮಾಜವವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಕಾಂಗ್ರೆಸ್ ಪಕ್ಷವು ತಮಗೆ ಮೋಸ ಮಾಡಿ, ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ. ಇದರೊಂದಿಗೆ ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ'ದಲ್ಲಿ ಬಿರುಕು ಮೂಡಿದಂತಾಗಿದೆ.
ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ವೇಳೆ ಎಸ್‌ಪಿಗೆ ಕ್ಷೇತ್ರಗಳನ್ನು ಬಿಟ್ಟುಕೊಡದಿರುವುದಕ್ಕೆ ಕಾಂಗ್ರೆಸ್ ವಿರುದ್ಧ ಅಖಿಲೇಶ್ ಅಸಮಾಧಾನಗೊಂಡಿದ್ದಾರೆ.
230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಗೆ ನವೆಂಬರ್ 17ರಂದು ಚುನಾವಣೆ ನಿಗದಿಯಾಗಿದೆ. ಡಿಸೆಂಬರ್ 3ರಂದು ಮತ ಎಣಿಕೆ ನಡೆಯಲಿದೆ.
ಉತ್ತರ ಪ್ರದೇಶದ ಸಿತಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, 'ಕಾಂಗ್ರೆಸ್ ನಾಯಕರು ನಮ್ಮನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಆ ಪಕ್ಷ ನಮಗೆ ಮೋಸ ಮಾಡಿದೆ. 'ಇಂಡಿಯಾ' ಮೈತ್ರಿಕೂಟ ವಿಧಾನಸಭೆ ಚುನಾವಣೆಗಳಿಗಾಗಿ ಅಲ್ಲ ಎಂಬುದು ಗೊತ್ತಿದೆ. ಕಾಂಗ್ರೆಸ್‌ನವರು ಮಧ್ಯಪ್ರದೇಶದ ವಿಧಾನಸಭೆ ಚುನಾವಣೆ ವೇಳೆ ಆರು ಕ್ಷೇತ್ರಗಳನ್ನು ಬಿಟ್ಟುಕೊಡುವುದಾಗಿ ಭರವಸೆ ನೀಡಿದ ಮೇಲೆ ಆ ಪಕ್ಷದ ನಾಯಕ ಕಮಲನಾಥ್ ಅವರನ್ನು ಭೇಟಿ ಮಾಡಲು ಸಮಾಜವಾದಿ ಪಕ್ಷದ ನಾಯಕರನ್ನು ಕಳುಹಿಸಲಾಗಿತ್ತು. ಆದರೆ, ಅವರು ನಮ್ಮನ್ನು ವಂಚಿಸಿದ್ದಾರೆ' ಎಂದು ದೂರಿದ್ದಾರೆ.
'ಕಾಂಗ್ರೆಸ್ ನಾಯಕರು ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ' ಎಂದು ಬೇಸರದಿಂದ ಹೇಳಿರುವ ಅವರು, 'ಕಾಂಗ್ರೆಸ್ ನಮಗೇನು ಮಾಡಿದೆಯೋ ಅದನ್ನೇ ನಾವೂ ಮಾಡುತ್ತೇವೆ' ಎಂದು ಎಚ್ಚರಿಸಿದ್ದಾರೆ.
ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರೈಗೆ ತಿರುಗೇಟು
'ಉತ್ತರಾಖಂಡದಲ್ಲಿ ಇತ್ತೀಚೆಗೆ ಮುಕ್ತಾಯವಾದ ಬಾಗೇಶ್ವರ ವಿಧಾನಸಭೆ ಚುನಾವಣೆ ಕಣದಿಂದ ಹಿಂದೆ ಸರಿಯದೆ ಸಮಾಜವಾದಿ ಪಕ್ಷವು ಕಾಂಗ್ರೆಸ್‌ಗೆ ಮೋಸ ಮಾಡಿದೆ' ಎಂದು ಉತ್ತರಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಆರೋಪಿಸಿದ್ದರು. ಅಲ್ಲದೆ, 'ನಾವು ಲೋಕಸಭೆ ಚುನಾವಣೆ ವೇಳೆ ಉತ್ತರಪ್ರದೇಶದ ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧರಿದ್ದೇವೆ' ಎಂದಿದ್ದರು.
ಇದೀಗ ಅಖಿಲೇಶ್ ಅವರು ರೈ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
'ಇಂತಹ (ಅಜಯ್ ರೈ) ನಾಯಕರಿಗೆ ಯಾವುದೇ ನಿಲುವು ಇಲ್ಲ. ಮುಂಬೈನಲ್ಲಿ ನಡೆದ ಇಂಡಿಯಾ ನಾಯಕರ ಸಭೆಗೆ ಅವರು ಹಾಜಾಗಿದ್ದರೇ? ಅವರಿಗೆ ಏನೂ ಗೊತ್ತಿಲ್ಲ' ಎಂದು ಕುಟುಕಿದ್ದಾರೆ. ರೈ 'ಕೆಳಮಟ್ಟದ ನಾಯಕ' ಎಂದೂ ಛೇಡಿಸಿದ್ದಾರೆ.
ಉತ್ತರ ಪ್ರದೇಶ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕಣಕ್ಕಿಳಿಸಲು ಬಯಸುವ ಅಭ್ಯರ್ಥಿಗಳ ಪಟ್ಟಿಯನ್ನು ಬಹಿರಂಗ ಪಡಿಸುವಂತೆ ಅಖಿಲೇಶ್ ಕೇಳಿದ್ದಾರೆ.
'ಇಷ್ಟು ಸ್ಥಾನ ಬೇಕು ಎಂದು ಬೇಡಿಕೆ ಇಟ್ಟರೆ ಸಾಲದು. ತಾನು ಬಯಸುತ್ತಿರುವ ಕ್ಷೇತ್ರಗಳು ಹಾಗೂ ಕಣಕ್ಕಿಳಿಸಲು ಉದ್ದೇಶಿಸುತ್ತಿರುವ ಅಭ್ಯರ್ಥಿಗಳು ಯಾರು ಎಂಬುದನ್ನು ತಿಳಿಸಲಿ. ಆಯಾ ಕ್ಷೇತ್ರಗಳಲ್ಲಿ ಗೆಲ್ಲಲು ಕಾಂಗ್ರೆಸ್‌ಗೆ ಸಾಧ್ಯವೇ ಎಂಬುದನ್ನು ಪರಿಶೀಲಿಸಬಹುದು' ಎಂದಿದ್ದಾರೆ.
ಅಖಿಲೇಶ್ ಯಾದವ್ ಅವರು ಕೆಲವು ದಿನಗಳ ಹಿಂದೆ, 'ನಮಗೆ ಸ್ಥಾನಗಳನ್ನು ಬಿಟ್ಟುಕೊಡುವಂತೆ ಇಂಡಿಯಾ ಒಕ್ಕೂಟವನ್ನು ಕೇಳುವುದಿಲ್ಲ. ಬದಲಾಗಿ ಮೈತ್ರಿಯ ಸಹ ಪಕ್ಷಗಳಿಗೆ ಕ್ಷೇತ್ರಗಳನ್ನು ನೀಡುತ್ತೇವೆ' ಎಂದಿದ್ದರು.
ಎಸ್‌ಪಿ ನಾಯಕರು ಹಾಗೂ ಅಜಯ್ ರೈ ಇತ್ತೀಚಿನ ದಿನಗಳಲ್ಲಿ ಆರೋಪ–ಪ್ರತ್ಯಾರೋಪಗಳಲ್ಲಿ ತೊಡಗಿಕೊಂಡಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಎಲ್ಲ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಕಣಕ್ಕಿಳಿಯಲಿದೆ ಎಂದು ಇತ್ತೀಚೆಗೆ ರೈ ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.