ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಕೊನೆಯಾಗುತ್ತಿಲ್ಲ ದಲಿತರ ಮೇಲಿನ ದೌರ್ಜನ್ಯ

Last Updated 13 ಅಕ್ಟೋಬರ್ 2022, 1:27 IST
ಅಕ್ಷರ ಗಾತ್ರ

ದೇಶದಾದ್ಯಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಮೇಲಿನ ದೌರ್ಜನ್ಯ ಪ್ರತಿ ವರ್ಷ ಏರಿಕೆಯಾಗುತ್ತಲೇ ಇದೆ. ಆದರೆ, ಈಚಿನ ವರ್ಷಗಳಲ್ಲಿ ಏರಿಕೆ ಪ್ರಮಾಣ ವಿಪರೀತವಾಗಿದೆ. 2021ರಲ್ಲಿ ಇಂತಹ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಆ ವರ್ಷ ಒಟ್ಟು 60,045 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಈವರೆಗೆ ವರ್ಷವೊಂದರಲ್ಲಿ ದಾಖಲಾದ ಪ್ರಕರಣಗಳ ಅತ್ಯಂತ ಗರಿಷ್ಠ ಸಂಖ್ಯೆ ಇದಾಗಿದೆ. ಜತೆಗೆ ಪ್ರತಿ ವರ್ಷ ಇಂತಹ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ.

ಇವುಗಳಲ್ಲಿ ಪರಿಶಿಷ್ಟ ಜಾತಿಯ ಜನರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳೂ ಸೇರಿವೆ, ಪರಿಶಿಷ್ಟ ಪಂಗಡದ ಜನರ ಮೇಲೆ ನಡೆದ ದೌರ್ಜನ್ಯಗಳೂ ಸೇರಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊವಿನ ವರದಿಯ ಪ್ರಕಾರ 2021ರಲ್ಲಿ ದೇಶದಾದ್ಯಂತ ಪರಿಶಿಷ್ಟ ಜಾತಿಯ ಜನರ ಮೇಲೆ ದೌರ್ಜನ್ಯ ನಡೆದ 50,900 ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ ಪರಿಶಿಷ್ಟ ಪಂಗಡದ ಜನರ ಮೇಲೆ ದೌರ್ಜನ್ಯ ನಡೆದ ಒಟ್ಟು 9,145 ಪ್ರಕರಣಗಳು ದಾಖಲಾಗಿವೆ. ಎರಡೂ ಸ್ವರೂಪದ ಪ್ರಕರಣಗಳಲ್ಲಿ 2021ರಲ್ಲಿ ದಾಖಲಾದ ಸಂಖ್ಯೆಯೇ ಈವರೆಗಿನ ಗರಿಷ್ಠ.

[object Object]

2015ರಲ್ಲಿ ದೇಶದಾದ್ಯಂತ ಇಂತಹ 44,946 ಪ್ರಕರಣಗಳು ದಾಖಲಾಗಿದ್ದವು. 2021ರಲ್ಲಿ ಪ್ರಕರಣಗಳ ಸಂಖ್ಯೆ ಇದೇ ಮೊದಲ ಬಾರಿಗೆ 60 ಸಾವಿರದ ಗಡಿ ದಾಟಿದೆ.2015ಕ್ಕೆ ಹೋಲಿಸಿದರೆ, 2021ರ ಅಂತ್ಯಕ್ಕೆ ಇಂತಹ ಪ್ರಕರಣಗಳ ಸಂಖ್ಯೆಯಲ್ಲಿ ಆದ ಏರಿಕೆ ಪ್ರಮಾಣ ಶೇ 34ರಷ್ಟು. ಏಳು ವರ್ಷಗಳಲ್ಲಿ, ವರ್ಷವೊಂದರ ಪ್ರಕರಣಗಳ ಸಂಖ್ಯೆಯಲ್ಲಿ 15,099ದಷ್ಟು ಏರಿಕೆಯಾಗಿದೆ.

2015ರಿಂದ 2021ರ ಮಧ್ಯೆ ದಾಖಲಾದ ಇಂತಹ ಪ್ರಕರಣಗಳ ದತ್ತಾಂಶವನ್ನು ಪರಿಶೀಲಿಸಿದಾಗ, ಪ್ರತಿ ವರ್ಷ ಪ್ರಕರಣಗಳ ಸಂಖ್ಯೆಯಲ್ಲಿ ಸರಾಸರಿ 3,000ದಷ್ಟು ಏರಿಕೆಯಾಗಿದೆ. ಆದರೆ, 2020ರಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆಯಲ್ಲಿ 5,000ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಇದು ಈ ಏಳು ವರ್ಷಗಳಲ್ಲೇ ಅತ್ಯಂತ ಗರಿಷ್ಠ ಪ್ರಮಾಣದ ಏರಿಕೆಯಾಗಿದೆ.ಒಟ್ಟಾರೆ ದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ನಿಯಂತ್ರಣಕ್ಕೆ ಬರುತ್ತಿಲ್ಲ. ಬದಲಿಗೆ ದೌರ್ಜನ್ಯ ಹೆಚ್ಚಾಗುತ್ತಲೇ ಇದೆ ಎಂಬುದನ್ನು ಈ ದತ್ತಾಂಶಗಳು ಸೂಚಿಸುತ್ತವೆ.

ಹಿಂದಿಭಾಷಿಕ ರಾಜ್ಯಗಳಲ್ಲೇ ಹೆಚ್ಚು ದೌರ್ಜನ್ಯ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಮೇಲೆ 2021ರಲ್ಲಿ ನಡೆದ ದೌರ್ಜನ್ಯಗಳಲ್ಲಿ, ಮಧ್ಯಭಾರತದ ಹಿಂದಿ ಭಾಷಿಕ ರಾಜ್ಯಗಳುಅಧಿಕ ಪಾಲು ಹೊಂದಿವೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಬಿಹಾರ ರಾಜ್ಯಗಳಲ್ಲಿ ಅತ್ಯಧಿಕ ಪ್ರಕರಣಗಳು ವರದಿಯಾಗಿವೆ.ಅಚ್ಚರಿಯೆಂದರೆ, ಈಶಾನ್ಯ ಭಾರತದ ಐದು ರಾಜ್ಯಗಳಲ್ಲಿ ಒಂದೂ ಪ್ರಕರಣ ದಾಖಲಾಗಿಲ್ಲ. ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲೂ ಯಾವುದೇ ಪ್ರಕರಣ ಇಲ್ಲ.ಉತ್ತರ ಪ್ರದೇಶದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದ ಅತಿಹೆಚ್ಚು (13,150) ಜನರು ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಇಲ್ಲಿ ಎಸ್‌ಟಿ ಸಮುದಾಯದ ಮೇಲೆ ದೌರ್ಜನ್ಯ ನಡೆದ ಸಂಬಂಧ ಕೇವಲ ನಾಲ್ಕು ಪ್ರಕರಣ ವರದಿಯಾಗಿದ್ದರೆ, ಉಳಿದೆಲ್ಲವೂ ಎಸ್‌ಸಿ ಸಮುದಾಯದವರ ಮೇಲೆ ದಾಖಲಾಗಿವೆ. ಮಧ್ಯಪ್ರದೇಶ ಹಾಗೂ ರಾಜಸ್ಥಾನಗಳು ಕ್ರಮವಾಗಿ ನಂತರದ ಎರಡು ಸ್ಥಾನದಲ್ಲಿದ್ದು, ಇಲ್ಲಿ ವರ್ಷದಲ್ಲಿ ದಾಖಲಾದ ಪ್ರಕರಣಗಳು 10,000ದ ಸನಿಹದಲ್ಲಿವೆ.

ಶೇ 64ರಷ್ಟು ಪ್ರಕರಣಗಳಲ್ಲಷ್ಟೇ ಆರೋಪಪಟ್ಟಿ

[object Object]

ಪರಿಶಿಷ್ಟಜನರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳಲ್ಲಿ, ಆರೋಪಪಟ್ಟಿ ದಾಖಲಾಗುವ ಪ್ರಕರಣಗಳ ಪ್ರಮಾಣ ಕಡಿಮೆ ಇದೆ. 2021ರಲ್ಲಿ ದಾಖಲಾದ ಒಟ್ಟು ಪ್ರಕರಣಗಳಲ್ಲಿ ಆರೋಪಪಟ್ಟಿ ದಾಖಲಾಗಿದ್ದು ಶೇ 64ರಷ್ಟು ಪ್ರಕರಣಗಳಲ್ಲಿ ಮಾತ್ರ. ಉಳಿದ
ಶೇ 36ರಷ್ಟು ಪ್ರಕರಣಗಳಲ್ಲಿ ಹಲವು ವಿವಿಧ ಕಾರಣಗಳಿಂದ ವಜಾ ಆಗಿವೆ ಮತ್ತು ಹಲವು ಪ್ರಕರಣಗಳ ತನಿಖೆ ಆರಂಭವೇ ಆಗಿಲ್ಲ. ದೇಶದಾದ್ಯಂತ ಇಂತಹ 60 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದರೂ, ಸುದ್ದಿಯಾಗುತ್ತಿರುವುದು ಕೆಲವೇ ಪ್ರಕರಣಗಳು ಮಾತ್ರ. ಸುದ್ದಿಯಾಗಿ, ಜನರ ಗಮನ ಸೆಳೆದು, ನ್ಯಾಯಕ್ಕಾಗಿ ಆಗ್ರಹಿಸಲಾಗುವ ಪ್ರಕರಣಗಳು ಬೆರಳೆಣಿಕೆಯಷ್ಟು. 2021ರಲ್ಲಿ ದೇಶದಾದ್ಯಂತ ದಾಖಲಾದ ಇಂತಹ ಪ್ರಕರಣಗಳಲ್ಲಿ ಇನ್ನೂ ಶೇ 14.6ರಷ್ಟು ಪ್ರಕರಣಗಳ ತನಿಖೆಯೇ ಪೂರ್ಣಗೊಂಡಿಲ್ಲ.

2.95 ಲಕ್ಷ ಪ್ರಕರಣಗಳು ಬಾಕಿ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಮೇಲೆ ನಡೆದ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದಲ್ಲಿ ವಿಲೇವಾರಿ ಆಗುತ್ತಿಲ್ಲ ಎಂದು ದತ್ತಾಂಶಗಳು ಹೇಳುತ್ತವೆ. 2021ರ ಅಂತ್ಯಕ್ಕೆ ದೇಶದ ಎಲ್ಲಾ ನ್ಯಾಯಾಲಯಗಳ ಎದುರು ಒಟ್ಟು 2.95 ಲಕ್ಷ ಪ್ರಕರಣಗಳು ಬಾಕಿ ಉಳಿದಿವೆ.ಇಂತಹ ಪ್ರಕರಣಗಳ ವಿಚಾರಣೆ ಮುಗಿದು ತೀರ್ಪು ಪ್ರಕಟವಾಗುವುದು ಬಾಕಿಯಾಗಿರುವ ಕಾರಣದಿಂದಲೇ, ಪರಿಶಿಷ್ಟರ ಮೇಲಿನ ದೌರ್ಜನ್ಯ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ವಿಶ್ಲೇಷಿಸಲಾಗಿದೆ.

2021ರಲ್ಲಿ ದೇಶದ ಎಲ್ಲಾ ನ್ಯಾಯಾಲಯಗಳ ಎದುರು ಒಟ್ಟು 3.07 ಲಕ್ಷ ಪ್ರಕರಣಗಳು ವಿಚಾರಣೆಗೆ ಬಂದಿದ್ದವು. ಆದರೆ, ಅವುಗಳಲ್ಲಿ ಇತ್ಯರ್ಥವಾಗಿದ್ದು 11,192 ಪ್ರಕರಣಗಳು ಮಾತ್ರ. ಇತ್ಯರ್ಥವಾದ ಪ್ರಕರಣಗಳಲ್ಲಿ ಖುಲಾಸೆಯಾದ ಪ್ರಕರಣಗಳ ಸಂಖ್ಯೆಯೇ ಗರಿಷ್ಠ. 2021ರಲ್ಲಿ ಇತ್ಯರ್ಥವಾದ ಒಟ್ಟು ಪ್ರಕರಣಗಳಲ್ಲಿ 6,980 ಪ್ರಕರಣಗಳಲ್ಲಿ ಖುಲಾಸೆ ಆಗಿದೆ. ಇನ್ನು 1,096 ಪ್ರಕರಣಗಳು ವಿವಿಧ ಕಾರಣಕ್ಕೆ ವಜಾ ಆಗಿವೆ. ಕೊನೆಗೆ ಶಿಕ್ಷೆಯಾದ ಪ್ರಕರಣಗಳ ಸಂಖ್ಯೆ 4,212 ಮಾತ್ರ. 2021ರಲ್ಲಿ ನ್ಯಾಯಾಲಯದ ಎದುರು ಇದ್ದ ಪ್ರಕರಣಗಳಿಗೆ ಹೋಲಿಸಿದರೆ, ಶಿಕ್ಷೆಯಾದ ಪ್ರಕರಣಗಳ ಪ್ರಮಾಣ ಶೇ 1.36ರಷ್ಟು ಮಾತ್ರ. ಇತ್ಯರ್ಥವಾದ ಪ್ರಕರಣಗಳಲ್ಲಿ ಶಿಕ್ಷೆ ಘೋಷಣೆಯಾದ ಪ್ರಕರಣಗಳ ಪ್ರಮಾಣ ಶೇ 37.6ರಷ್ಟಿದೆ. ಒಟ್ಟಾರೆ ಪ್ರಕರಣಗಳ ಶಿಕ್ಷೆ ಪ್ರಮಾಣ ಕಡಿಮೆ ಇದೆ.

ಆಧಾರ: ಎನ್‌ಸಿಆರ್‌ಬಿಯ ‘ಭಾರತದಲ್ಲಿ ಅಪರಾಧ ವರದಿ’ಗಳು

ಆಧಾರ: ಎನ್‌ಸಿಆರ್‌ಬಿಯ ‘ಭಾರತದಲ್ಲಿ ಅಪರಾಧ’ ವರದಿಗಳು ಪ್ರಜಾವಾಣಿ ಗ್ರಾಫಿಕ್ಸ್‌

[object Object]

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT