ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಪ್ರಾಣ ಪ್ರತಿಷ್ಠಾಪನೆ: ಹೈಲೈಟ್ಸ್ ಇಲ್ಲಿವೆ..

ಇಂದು ನಡೆಯಲಿರುವ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಅಯೋಧ್ಯೆ ನಗರ ಸಜ್ಜಾಗಿದೆ. ಇದಕ್ಕಾಗಿ ದೇಶದ ಅನೇಕ ನಗರ, ಪಟ್ಟಣ, ಗ್ರಾಮಗಳಲ್ಲಿ ಸಂಭ್ರಮ ಮನೆ ಮಾಡಿದೆ.
Published 22 ಜನವರಿ 2024, 3:35 IST
Last Updated 22 ಜನವರಿ 2024, 3:35 IST
ಅಕ್ಷರ ಗಾತ್ರ

ಯಶಸ್ವಿಯಾಗಿ ನೆರವೇರಿದ ಪ್ರಾಣ ಪ್ರತಿಷ್ಠಾಪನೆ

ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಇಂದು ಅಯೋಧ್ಯೆಯ ರಾಮ ಮಂದಿರದಲ್ಲಿ ನೆರವೇರಿತು. ಅರ್ಚಕರು, ಪಂಡಿತರು ಯಜಮಾನ ಸ್ಥಾನದಲ್ಲಿದ್ದ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಿದರು. ಈ ವೇಳೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಯೋಗಿ ಆದಿತ್ಯನಾಥ್, ಗುಜರಾತ್ ಮಾಜಿ ಸಿಎಂ ಆನಂದಿಬೇನ್ ಪಟೇಲ್ ಇದ್ದರು.

ಪೂರ್ವ ದಿಕ್ಕಿನಿಂದ ಬಾಗಿಲು ಪ್ರವೇಶ

ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ‘ಮುಖ್ಯ ಯಜಮಾನ’ (ಪುರೋಹಿತರು ಇವರ ಪರವಾಗಿ ವಿಧಿ ವಿಧಾನಗಳನ್ನು ನಡೆಸುತ್ತಾರೆ) ಆಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇವಸ್ಥಾನ ಸಂಕೀರ್ಣವನ್ನು ಪೂರ್ವ ದಿಕ್ಕಿನ ಬಾಗಿಲಿನಿಂದ ಪ್ರವೇಶಿಸಲಿದ್ದಾರೆ.

ವಿಧಿವಿಧಾನಗಳು ಆರಂಭ

ಅಯೋಧ್ಯೆಯಲ್ಲಿ ಪೂಜಾ ಕೈಂಕರ್ಯಗಳು ಪ್ರಾರಂಭವಾಗಿದ್ದು ಪೂಜಾರಿಗಳು ವಿವಿಧ ಪೂಜಾ ವಿಧಿ ವಿಧಾನಗಳನ್ನು ಶಾಸ್ತ್ರೊಕ್ತವಾಗಿ ನೆರವೇರಿಸುತ್ತಿದ್ದಾರೆ.

ಇಂದು ನಡೆಯಲಿರುವ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶದ ಅಯೋಧ್ಯೆ ನಗರ ಸಡಗರದಿಂದ ಸಜ್ಜಾಗಿದ್ದು, ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ, ಸಾಧು ಸಂತರು, ಪ್ರಮುಖ ಕೈಗಾರಿಕೋದ್ಯಮಿಗಳು, ಬಾಲಿವುಡ್‌ ತಾರೆಯರು ಸೇರಿದಂತೆ ಸುಮಾರು ಎಂಟು ಸಾವಿರ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳ 14 ದಂಪತಿ ‘ಯಜಮಾನ’ರಾಗಿ ಪಾಲ್ಗೊಳ್ಳಲಿದ್ದಾರೆ. ರಾಮ ಮಂದಿರ ಸುತ್ತಮುತ್ತ ಸೇರಿದಂತೆ ಅಯೋಧ್ಯೆ ನಗರದಲ್ಲಿ ಭಾರಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.

ಈ ಕಾರ್ಯಕ್ರಮದ ಹೈಲೈಟ್‌ಗಳು ಇಲ್ಲಿವೆ

ಹತ್ತು ಬಗೆಯ ದಾನ

ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ‘ಮುಖ್ಯ ಯಜಮಾನ’ (ಪುರೋಹಿತರು ಇವರ ಪರವಾಗಿ ವಿಧಿ ವಿಧಾನಗಳನ್ನು ನಡೆಸುತ್ತಾರೆ) ಆಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇವಸ್ಥಾನ ಸಂಕೀರ್ಣವನ್ನು ಪೂರ್ವ ದಿಕ್ಕಿನ ಬಾಗಿಲಿನಿಂದ ಪ್ರವೇಶಿಸಲಿದ್ದಾರೆ ಎಂದು ಸಮಾರಂಭದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿರುವ ಸ್ವಾಮೀಜಿಯೊಬ್ಬರು ತಿಳಿಸಿದರು. ಮಂದಿರ ನಿರ್ಮಾಣದ ಉಸ್ತುವಾರಿ ಹೊತ್ತಿರುವ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರನ್ನು ಮೋದಿ ಅವರು ಭೇಟಿ ಮಾಡಲಿದ್ದಾರೆ. ಪ್ರಧಾನಿಯವರು ಹತ್ತು ಬಗೆಯ ದಾನ ಕಾರ್ಯ ನಡೆಸಲಿದ್ದಾರೆ. ಅದಾದ ಬಳಿಕ ಅವರು ಗರ್ಭ ಗೃಹ ಪ್ರವೇಶಿಸಲಿದ್ದಾರೆ ಎಂದು ಸ್ವಾಮೀಜಿ ತಿಳಿಸಿದರು.

ಇಂದಿನ ಕಾರ್ಯಕ್ರಮಗಳು

  • ಪ್ರಾಣ ಪ್ರತಿಷ್ಠಾಪನೆಯ ಶುಭ ಮುಹೂರ್ತ ಇರುವುದು 84 ಸೆಕೆಂಡುಗಳಷ್ಟು ಮಾತ್ರ. ಅದು 12 ಗಂಟೆ 29 ನಿಮಿಷ 8 ಸೆಕೆಂಡುಗಳಿಂದ 12 ಗಂಟೆ 30 ನಿಮಿಷ 32 ಸೆಕೆಂಡುಗಳವರೆಗೆ ಇರಲಿದೆ

  • ಪ್ರಾಣ ಪ್ರತಿಷ್ಠಾಪನೆಗೆ ಸಂಬಂಧಿಸಿದ ಕಾರ್ಯಕ್ರಮವು 12.20ರಿಂದ 12.45ರವರೆಗೆ ನಡೆಯಲಿದೆ.

  • ಮಹಾವಿಷ್ಣುವಿನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಶುರುವಾಗಲಿದೆ

  • ಪುರೋಹಿತರು ಮಂತ್ರಗಳ ಮೂಲಕ ಶ್ರೀರಾಮನನ್ನು ಆವಾಹನೆ ಮಾಡುತ್ತಾರೆ

  • ಗರ್ಭಗೃಹದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಸಂಬಂಧಿಸಿದ ವಿಧಿವಿಧಾನಗಳು ನಡೆಯುತ್ತವೆ

  • ಧಾರ್ಮಿಕ ವಿಧಿವಿಧಾನಗಳನ್ನು 121 ಮಂದಿ ವೈದಿಕ ವಿದ್ವಾಂಸರು, ಆಚಾರ್ಯ ಗಣೇಶ್ವರ ದ್ರಾವಿಡ್ ಮತ್ತು ಆಚಾರ್ಯ ಲಕ್ಷ್ಮೀಕಾಂತ ದ್ವಿವೇದಿ ಮಾರ್ಗದರ್ಶನದಲ್ಲಿ ನಡೆಸಲಿದ್ದಾರೆ

  • ಪ್ರಾಣ ಪ್ರತಿಷ್ಠಾಪನೆಯ ನಂತರದಲ್ಲಿ, ಅಯೋಧ್ಯೆಯಲ್ಲಿ ಸೋಮವಾರ ಸಂಜೆ ದೀಪೋತ್ಸವ ನಡೆಯಲಿದೆ. ಒಟ್ಟು ಹತ್ತು ಲಕ್ಷ ಹಣತೆಗಳನ್ನು ಬೆಳಗಿಸಲಾಗುತ್ತದೆ

ಅಯೋಧ್ಯೆಯಲ್ಲಿ ಭದ್ರತೆ ಹೇಗಿದೆ?

ಬಹು ಹಂತದ ಬಿಗಿ ಭದ್ರತೆ

ಅಯೋಧ್ಯೆ (ಪಿಟಿಐ): ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಯೋಧ್ಯೆಯಾದ್ಯಂತ ಬಹು ಹಂತದ ಬಿಗಿ ಭದ್ರತೆ ಏರ್ಪಡಿಸಲಾಗಿದೆ. 

ಧರ್ಮಪೀಠದಿಂದ ರಾಮಪಥವರೆಗೆ ಮತ್ತು ಹನುಮಗಿರಿಯಿಂದ ಅಶರ್ಫೀ ಭವನದವರೆಗಿನ ಎಲ್ಲ ರಸ್ತೆಗಳಲ್ಲಿ ಪೊಲೀಸರು ಗಸ್ತು ತಿರುಗುವುದು ಕಾಣಿಸುತ್ತದೆ. ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ದಳದ (ಎಟಿಎಸ್‌) ಸಿಬ್ಬಂದಿ ಭಾನುವಾರ ಅಯೋಧ್ಯೆಯಲ್ಲಿ ಪಥಸಂಚಲನ ನಡೆಸಿದರು. 

‘ಪ‍್ರಾಣ ಪ್ರತಿಷ್ಠಾ‍ಪ‍ನಾ ಸಮಾರಂಭಕ್ಕಾಗಿ ಉತ್ತರ ಪ್ರದೇಶ ಪೊಲೀಸರು ವ್ಯಾಪಕ ಭದ್ರತಾ ವ್ಯವಸ್ಥೆ ಕೈಗೊಂಡಿದ್ದಾರೆ’ ಎಂದು ಕಾನೂನು ಮತ್ತು ಸುವ್ಯವಸ್ಥೆಯ ಡಿಜಿ ಪ್ರಶಾಂತ್‌ ಕುಮಾರ್ ತಿಳಿಸಿದ್ದಾರೆ. 

‘ಕಾರ್ಯಕ್ರಮದ ಸ್ಥಳದಲ್ಲಿ ಬಿಗಿ ಭದ್ರತೆ ಖಚಿತಪಡಿಸಿಕೊಳ್ಳಲು, ತಂತ್ರಜ್ಞಾನವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗಿದೆ. ಅಯೋಧ್ಯೆ ಜಿಲ್ಲೆಯಾದ್ಯಂತ 10 ಸಾವಿರ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ’ ಎಂದು ಹೇಳಿದ್ದಾರೆ.

‘ಇಡೀ ಪಟ್ಟಣದ ಮೇಲೆ ಕಣ್ಗಾವಲು ಇಡಲು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆಧಾರಿತ ಡ್ರೋನ್‌ಗಳನ್ನೂ ಬಳಸಲಾಗುತ್ತಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಯೊಬ್ಬರು ತಿಳಿಸಿದರು. 

ಬಹುಭಾಷೆ ಬಲ್ಲ ಪೊಲೀಸರ ಪ್ರತ್ಯೇಕ ಮಫ್ತಿ ತಂಡಗಳು ಕಾರ್ಯಕ್ರಮದ ತಾಣದಲ್ಲಿ ನಿಯೋಜನೆಗೊಂಡಿವೆ. ಸರಯೂ ನದಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 

ಬೆಂಗಳೂರಲ್ಲಿ ಸಂಭ್ರಮ

ಬೆಂಗಳೂರು: ಅಯೋಧ್ಯೆಯಲ್ಲಿ ಬಾಲ ರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಿಲ್ಲದವರಿಗೆ ನಗರದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಗಿರಿನಗರದ ವಾಸವಿ ದೇವಸ್ಥಾನದಲ್ಲಿ ಅಯೋಧ್ಯೆಯ ರಾಮ ಮಂದಿರದ ಪ್ರತಿಕೃತಿ ತಯಾರಾಗಿದೆ.

ಅಯೋಧ್ಯೆ ರಾಮಮಂದಿರದ ಪ್ರತಿಕೃತಿಯನ್ನು ವಾಸವಿ ದೇಗುಲದ ಅಳತೆಗೆ ತಕ್ಕಂತೆ ರೂಪಿಸಲಾಗಿದೆ. 24 ಅಡಿ ಉದ್ದ, 18 ಅಡಿ ಅಗಲದ ರಾಮಮಂದಿರದ ಗೋಪುರ 16 ಅಡಿಯಿದೆ.

ಬಸವನಗುಡಿಯ ಶಾಸಕ ರವಿ ಸುಬ್ರಹ್ಮಣ್ಯ ಅವರು ಈ ಪ್ರತಿಕೃತಿ ಯನ್ನು  ಜ.22ರಂದು  ಉದ್ಘಾಟಿಸ ಲಿದ್ದಾರೆ. ರಾಮನಿಗೆ ಅಭಿಷೇಕ, ಪೂಜೆ, ಭಜನೆಗಳು ನಡೆಯಲಿವೆ. ಜ.30ರವರೆಗೆ ಬೆಳಗ್ಗಿನಿಂದ ರಾತ್ರಿವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಅಯೋಧ್ಯೆ ಹೋರಾಟದ ಹಾದಿ

ಅಯೋಧ್ಯೆ ಹೋರಾಟದ ಹಾದಿ

ಅಯೋಧ್ಯೆಯಲ್ಲಿ ಹಲವೆಡೆ ಸ್ವಾಗತ ಕಮಾನು

ಅಯೋಧ್ಯೆಯ ಹಲವು ಕಡೆಗಳಲ್ಲಿ ಸ್ವಾಗತ ಕಮಾನುಗಳನ್ನು ಅಳವಡಿಸಲಾಗಿದೆ. ಇವು ‘ಜೈ ಸಿಯಾ ರಾಮ್‌’ ಬರಹದೊಂದಿಗೆ ಜನರನ್ನು ಸ್ವಾಗತಿಸುತ್ತಿವೆ. ‘ಜೈಶ್ರೀರಾಮ್‌’ ಘೋಷಣೆಯು ಎಲ್ಲೆಡೆ ಕೇಳಿಸುತ್ತಿದೆ. ಅಲ್ಲಲ್ಲಿ ಬೇರೆ ಬೇರೆ ಬಣ್ಣಗಳನ್ನು ಬಳಸಿ ರಂಗೋಲಿ ಬರೆಯಲಾಗಿದೆ. ಇಲ್ಲಿನ ಮನೆಗಳು, ದೇವಸ್ಥಾನಗಳು ಹಾಗೂ ಮಠಗಳ ಮೇಲೆ ಬಣ್ಣಬಣ್ಣದ ದೀಪಗಳನ್ನು ಅಳವಡಿಸಲಾಗಿದ್ದು, ಇಲ್ಲಿ ಈಗ ದೀಪಾವಳಿ ಆಚರಣೆ ನಡೆದಿದೆಯೇನೋ ಅನಿಸುವಂತಿದೆ.

ಅಯೋಧ್ಯೆಯಲ್ಲಿ ದಟ್ಟ ಮಂಜು

ಉತ್ತರ ಭಾರತದ ಹಲವು ಭಾಗಗಳಲ್ಲಿರುವಂತೆ ಅಯೋಧ್ಯೆಯಲ್ಲೂ ಸೋಮವಾರ ಬೆಳಿಗ್ಗೆ ದಟ್ಟ ಮಂಜು ಆವರಿಸಿದೆ. ಮಂಜು ಮುಸುಕಿದ ವಾತಾವರಣ ಕಾರಣ ಬೆಳಿಗ್ಗೆ ಮಂದಿರದ ಗೋಚರತೆ ಕಡಿಮೆ ಇದೆ , ಗರಿಷ್ಠ ತಾಪಮಾನ 15–17 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT