ಬರೇಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರವನ್ನು ಬಾಂಬ್ ಹಾಕಿ ಧ್ವಂಸಗೊಳಿಸಲಾಗುತ್ತದೆ ಎಂದು ದೂರವಾಣಿ ಕರೆ ಬಂದ ಹಿನ್ನೆಲೆಯಲ್ಲಿ ಬರೇಲಿ ಮೂಲದ 12 ವರ್ಷದ ಬಾಲಕ ಮತ್ತು ಆತನ ತಂದೆಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿ ನಂತರ ಮನೆಗೆ ಕಳುಹಿಸಿದ್ದಾರೆ.
ಘಟನೆ ಹಿನ್ನೆಲೆ: ಮಂಗಳವಾರ ಪೊಲೀಸ್ ತುರ್ತು ಸಹಾಯವಾಣಿ ಸಂಖ್ಯೆ 112ಕ್ಕೆ ಕರೆ ಮಾಡಿದ ಬಾಲಕ, ಸೆಪ್ಟೆಂಬರ್ 21ರಂದು ಬಾಂಬ್ ಸ್ಫೋಟಿಸಿ ರಾಮಂದಿರವನ್ನು ಧ್ವಂಸಗೊಳಿಸಲಾಗುತ್ತದೆ ಎಂದು ಹೇಳಿದ್ದ. ಈ ಕುರಿತು ತನಿಖೆ ನಡೆಸಿದಾಗ ಫತೇಹ್‌ಗಂಜ್(ಪೂರ್ವ) ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಹಳ್ಳಿಯೊಂದರಿಂದ ಕರೆ ಬಂದಿರುವುದು ಗೊತ್ತಾಯಿತು. ಬಳಿಕ ಬಾಲಕ ಮತ್ತು ಆತನ ತಂದೆಯನ್ನು ಕಚೇರಿಗೆ ಕರೆತಂದು ವಿಚಾರಣೆ ನಡೆಸಲಾಯಿತು ಎಂದು ಪೊಲೀಸ್ ವರಿಷ್ಠಾಧಿಕಾರಿ ಮುಕೇಶ್ ಚಂದ್ರ ಮಿಶ್ರಾ ತಿಳಿಸಿದ್ದಾರೆ.
‘ಸಾಮಾಜಿಕ ಮಾಧ್ಯಮದಲ್ಲಿ ರಾಮಂದಿರವನ್ನು ಧ್ವಂಸಗೊಳಿಸುವುದಾಗಿ ಇರುವ ವಿಡಿಯೊವೊಂದನ್ನು ನೋಡಿದ್ದು, ಅದನ್ನು ತಿಳಿಸಲು ಕರೆ ಮಾಡಿದ್ದೇನೆಯೇ ಹೊರತು ಪೊಲೀಸರಿಗೆ ಬೆದರಿಕೆಯೊಡ್ಡುವ ಉದ್ದೇಶವಿರಲಿಲ್ಲ ಎಂದು ಬಾಲಕ ತಿಳಿಸಿದ್ದಾನೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.