ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಪರಾಧ ಕಾನೂನಿಗೆ ತಿದ್ದುಪಡಿ; ಅತ್ಯಾಚಾರಿಗಳಿಗೆ ಗಲ್ಲು ಕಾಯಂ: ಮಮತಾ ಬ್ಯಾನರ್ಜಿ

Published : 28 ಆಗಸ್ಟ್ 2024, 9:35 IST
Last Updated : 28 ಆಗಸ್ಟ್ 2024, 9:35 IST
ಫಾಲೋ ಮಾಡಿ
Comments

ಕೋಲ್ಕತ್ತ: ‘ಪಶ್ಚಿಮ ಬಂಗಾಳದಲ್ಲಿರುವ ತೃಣಮೂಲ ಕಾಂಗ್ರೆಸ್ ನೇತೃತ್ವದ ಸರ್ಕಾರವು ಅತ್ಯಾಚಾರದಂತ ಘೋರ ಅಪರಾಧಗಳ ಕುರಿತು ಶೂನ್ಯ ಸಹಿಷ್ಣುತೆ ಹೊಂದಿದ್ದು, ಸದ್ಯ ಇರುವ ಕಾನೂನಿನಲ್ಲಿ ಅತ್ಯಾಚಾರ ಎಸಗುವವರಿಗೆ ಗಲ್ಲು ಶಿಕ್ಷೆಯಾಗುವಂತೆ ತಿದ್ದುಪಡಿಯನ್ನು ತರಲಾಗುವುದು’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು.

‘ಮುಂದಿನ ವಾರದಿಂದ ಆರಂಭವಾಗಲಿರುವ ವಿಧಾನಸಭಾ ವಿಶೇಷ ಅಧಿವೇಶನದಲ್ಲಿ ತಿದ್ದುಪಡಿಯನ್ನು ಮಂಡಿಸಲಾಗುವುದು. ಇದಕ್ಕೆ ರಾಜ್ಯಪಾಲರು ಒಪ್ಪಿಗೆ ಸೂಚಿಸಲು ವಿಳಂಬ ಮಾಡಿದಲ್ಲಿ ರಾಜಭವನದ ಎದುರು ಧರಣಿ ನಡೆಸಲಾಗುವುದು. ನಂತರ ಅನುಮೋದನೆಗೆ ರಾಷ್ಟ್ರಪತಿಗೆ ಕಳುಹಿಸಲಾಗುವುದು’ ಎಂದಿದ್ದಾರೆ.

ಕಳೆದ 20 ದಿನಗಳಿಂದ ಧರಣಿ ನಡೆಸುತ್ತಿರುವ ಕಿರಿಯ ವೈದ್ಯರಲ್ಲಿ ಮನವಿ ಮಾಡಿಕೊಂಡಿರುವ ಮಮತಾ, ‘ತುರ್ತು ಸೇವೆಗಳು ಸ್ಥಗಿತಗೊಂಡಿದ್ದು, ತಕ್ಷಣ ಕರ್ತವ್ಯಕ್ಕೆ ಮರಳಬೇಕು’ ಎಂದಿದ್ದಾರೆ.

‘ತಮ್ಮ ಸಹೋದ್ಯೋಗಿಯ ಸಾವಿಗೆ ನ್ಯಾಯಕ್ಕಾಗಿ ಬೇಡಿಕೆ ಇಟ್ಟಿರುವ ವೈದ್ಯರು ಮುಷ್ಕರ ಆರಂಭಿಸಿದ ದಿನದಿಂದಲೇ ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗಿದೆ. ಅವರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಮುಷ್ಕರ ನಡೆಸುತ್ತಾ ಬಹಳ ದಿನಗಳು ಕಳೆದಿವೆ. ನಿಮ್ಮ ನೋವು ನಮಗೆ ಅರ್ಥವಾಗುತ್ತಿದೆ. ಆದರೆ, ರೋಗಿಗಳು ಪರದಾಡುತ್ತಿದ್ದಾರೆ. ಅವರಿಗೆ ಚಿಕಿತ್ಸೆಯ ಅಗತ್ಯವಿದೆ’ ಎಂದಿದ್ದಾರೆ.

ಬಿಜೆಪಿ ಕರೆ ನೀಡಿರುವ 12 ಗಂಟೆಗಳ ಬಂದ್‌ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬ್ಯಾನರ್ಜಿ, ‘ಮೃತದೇಹವನ್ನಿಟ್ಟುಕೊಂಡು ರಾಜಕೀಯ ಲಾಭವನ್ನು ಹುಡುಕುವ ಬಿಜೆಪಿ, ಬಂದ್‌ಗೆ ಕರೆ ನೀಡಿದೆ. ಯುವತಿಯ ಸಾವಿನ ಲಾಭವನ್ನು ಪಡೆದು, ಮುಗ್ದ ಹಾಗೂ ಸಾಮಾನ್ಯ ಜನರ ಭಾವನೆಗಳೊಂದಿಗೆ ಆಟವಾಡುತ್ತಿದೆ. ಬಂಗಾಳದೊಂದಿಗೆ ಆಟವಾಡುತ್ತಿರುವ ಬಿಜೆಪಿ ಮುಖಂಡರು, ಸುಳ್ಳು ಕಥೆಗಳನ್ನು ಕಟ್ಟುವ ಮೂಲಕ ತನಿಖೆಯ ಹಾದಿ ತಪ್ಪಿಸುತ್ತಿದ್ದಾರೆ. ಇದರಿಂದ ಮೃತ ಯುವತಿಯ ಕುಟುಂಬಕ್ಕೆ ಯಾವುದೇ ನ್ಯಾಯ ಸಿಗದಂತೆ ಮಾಡುವುದೇ ಅವರ ಮುಖ್ಯ ಉದ್ದೇಶವಾಗಿದೆ’ ಎಂದು ಬ್ಯಾಜನರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT