ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ | ಭಾರತ್ ಜೋಡೊ ನ್ಯಾಯ ಯಾತ್ರೆಯ ಬ್ಯಾನರ್‌ ಹರಿದ ಕಿಡಿಗೇಡಿಗಳು

Published 20 ಜನವರಿ 2024, 6:41 IST
Last Updated 20 ಜನವರಿ 2024, 6:41 IST
ಅಕ್ಷರ ಗಾತ್ರ

ಲಖಿಂಪುರ: ಭಾರತ್ ಜೋಡೊ ನ್ಯಾಯ ಯಾತ್ರೆ ಪ್ರಯುಕ್ತ ಅಸ್ಸಾಂನ ಉತ್ತರ ಲಖಿಂಪುರದಲ್ಲಿ ಯಾತ್ರೆ ಹಾದುಹೋಗಲಿರುವ ಮಾರ್ಗದಲ್ಲಿ ಹಾಕಲಾಗಿದ್ದ ಬ್ಯಾನರ್ ಮತ್ತು ಪೋಸ್ಟರ್‌ಗಳನ್ನು ಕಿಡಿಗೇಡಿಗಳು ಹಾನಿಗೊಳಿಸಿದ್ದಾರೆ.

‘ಉತ್ತರ ಲಖಿಂಪುರ ಪಟ್ಟಣದಲ್ಲಿ ಹಾಕಲಾಗಿದ್ದ ಬ್ಯಾನರ್‌ಗಳು, ಪೋಸ್ಟರ್‌ಗಳನ್ನು ಹಾನಿಗೊಳಿಸಲಾಗಿದೆ. ಯಾತ್ರೆ ಯಶಸ್ವಿಯಾದ ಬೆನ್ನಲ್ಲೇ ಕಿಡಿಗೇಡಿಗಳು ಈ ಕೆಲಸಕ್ಕೆ ಕೈ ಹಾಕಿದ್ದಾರೆ’ ಎಂದು ಕಾಂಗ್ರೆಸ್‌ ನಾಯಕ ಭರತ್ ನಾರಾಹ್ ತಿಳಿಸಿದ್ದಾರೆ.

‘ಅಸ್ಸಾಂನ ರಾಜಕೀಯ ಇತಿಹಾಸದಲ್ಲಿ ಒಂದು ರಾಜಕೀಯ ಪಕ್ಷ ಮತ್ತೊಂದು ಪಕ್ಷದ ಬ್ಯಾನರ್ ಮತ್ತು ಪೋಸ್ಟರ್‌ಗಳನ್ನು ಹಾನಿಗೊಳಿಸಿರುವುದನ್ನು ನಾವು ಇದುವರೆಗೂ ಕಂಡಿಲ್ಲ’ ಎಂದು ಅವರು ಹೇಳಿದರು.

‘ರಾಜ್ಯದಲ್ಲಿ ಯಾತ್ರೆ ಸುಗಮವಾಗಿ ನಡೆಯದಂತೆ ಹಲವು ಅಡೆತಡೆಗಳನ್ನು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಸೃಷ್ಟಿಸಿತ್ತು. ಯಾತ್ರೆಗೆ ಜನ ಸೇರದಂತೆ ಮಾಡಲು ಪ್ರಯತ್ನಿಸಿತ್ತು. ಆದರೆ ಯಾತ್ರೆಯ ಯಶಸ್ಸನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ’ ಎಂದರು.

‘ಮೊದಲ ಭಾರತ್‌ ಜೋಡೊ ಯಾತ್ರೆ ವೇಳೆ ಬಿಜೆಪಿ ಆಡಳಿತವಿರುವ ರಾಜ್ಯಗಳ ಮೂಲಕ ಹಾದುಹೋಗುವಾಗಲೂ ನಾವು ಇಷ್ಟೊಂದು ತೊಂದರೆ ಅನುಭವಿಸಿರಲಿಲ್ಲ. ಈ ಎರಡು ದಿನಗಳಲ್ಲಿ ಅಸ್ಸಾಂನಲ್ಲಿ ಎದುರಿಸಿದ ಕಷ್ಟಗಳನ್ನು ಹೇಳಲು ಸಾಧ್ಯವಿಲ್ಲ’ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.

‘ನಮ್ಮ ವಿರುದ್ಧ ಎಫ್‌ಐಆರ್‌ ಹಾಕಿ ಜೈಲು ಶಿಕ್ಷೆ ವಿಧಿಸುವ ಬೆದರಿಕೆ ಹಾಕಲಾಗುತ್ತಿದೆ. ಯಾತ್ರೆಗೆ ಜನರು ಸೇರದಂತೆ ತಡೆಯಲಾಗುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.

ರಾಹುಲ್ ಗಾಂಧಿ ನೇತೃತ್ವದ ಯಾತ್ರೆಯು ಅಸ್ಸಾಂನಲ್ಲಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಅರುಣಾಚಲ ಪ್ರದೇಶವನ್ನು ಪ್ರವೇಶಿಸುವ ಮೊದಲು ಲಖಿಂಪುರ ಜಿಲ್ಲೆಯ ಹಲವಾರು ಭಾಗಗಳನ್ನು ಹಾದು ಹೋಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT