ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜತೆಗಿರುವ ಶತ್ರು’ಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಿರುಗೇಟು

ಕುರ್ಚಿ ಭದ್ರಪಡಿಸಿಕೊಂಡ ಬಿಹಾರ ಮುಖ್ಯಮಂತ್ರಿ
Last Updated 15 ಏಪ್ರಿಲ್ 2021, 19:53 IST
ಅಕ್ಷರ ಗಾತ್ರ

ಪಟ್ನಾ: ಐದು ವಿಧಾನಸಭೆಗಳ ಚುನಾವಣೆ ಹಾಗೂ ಕೋವಿಡ್ ಎರಡನೇ ಅಲೆಯ ಬಗ್ಗೆ ಇಡೀ ದೇಶ ಚರ್ಚಿಸುತ್ತಿರುವಾಗ, ಬಿಹಾರದಲ್ಲಿ ಸದ್ದಿಲ್ಲದೆ ಕೆಲವು ವಿದ್ಯಮಾನಗಳು ನಡೆದಿವೆ. ಕಳೆದ ಕೆಲವು ತಿಂಗಳುಗಳಿಂದ ‘ತಮ್ಮ ಜೊತೆಗಿರುವ ಶತ್ರು’ವಿನಿಂದಾಗಿ ದುರ್ಬಲಗೊಂಡಿರುವಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮನ್ನು ಬಲಪಡಿಸಿಕೊಳ್ಳುವತ್ತ ದೃಢವಾದ ಹೆಜ್ಜೆ ಹಾಕಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಲೋಕಜನಶಕ್ತಿ ಪಕ್ಷದ (ಎಲ್‌ಜೆಪಿ) ಏಕೈಕ ಶಾಸಕ ರಾಜ್‌ಕುಮಾರ್ ಸಿಂಗ್ ಅವರನ್ನು ಜೆಡಿಯುಗೆ ಸೇರಿಸಿಕೊಂಡು, ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್‌ಗೆ ಏಟು ಕೊಟ್ಟಿದ್ದರು. 2020ರಲ್ಲಿ ಬಿಹಾರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ನಿತೀಶ್ ವಿರುದ್ಧ ತಿರುಗಿಬಿದ್ದಿದ್ದ ಚಿರಾಗ್‌, ಜೆಡಿಯು ಅನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದರು. ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ ಕೂಡಾ ಒಂದಕ್ಕಿಂತ ಹೆಚ್ಚು ಸೀಟು ಗೆಲ್ಲಲಾಗದಿದ್ದರೂ, ಸುಮಾರು 70 ಕ್ಷೇತ್ರಗಳಲ್ಲಿ ಜೆಡಿಯುಗೆ ಆಘಾತ ನೀಡಿತ್ತು. ಇದರಿಂದ ಎರಡು ಅಂಶಗಳು ಸ್ಪಷ್ಟವಾಗದವು. ರಾಜ್ಯದಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ನಿತೀಶ್ ಅವರು ಎನ್‌ಡಿಎ ಒಳಗೆ ಚೌಕಾಶಿ ಶಕ್ತಿಯನ್ನು ಕಳೆದುಕೊಂಡರು.

ಬಿಜೆಪಿ ಹಾಗೂ ಎಲ್‌ಜೆಪಿಯ ತಂತ್ರಗಾರಿಕೆಗಳ ಬಗ್ಗೆ ಅರಿವಿದ್ದರೂ ನಿತೀಶ್ ಮೌನವಾಗಿದ್ದರು. ಜೆಡಿಯು ವಿರುದ್ಧ ಎಲ್‌ಜೆಪಿ ಕಣಕ್ಕಿಳಿಸಿದ್ದ ಬಹುತೇಕ ಅಭ್ಯರ್ಥಿಗಳು ಬಿಜೆಪಿ ಬಂಡಾಯಗಾರರಾಗಿದ್ದರು. ಎಲ್ಲವನ್ನೂ ಗಮನಿಸುತ್ತಿದ್ದ ನಿತೀಶ್, ತಿರುಗೇಟು ನೀಡಲು ತಮ್ಮ ಸಮಯಕ್ಕಾಗಿ ಕಾಯುತ್ತಿದ್ದರು.

ಎಲ್‌ಜೆಪಿ ಶಾಸಕರನ್ನು ಸೆಳೆಯುವುದಕ್ಕೂ ಮುನ್ನ ಬಿಎಸ್‌ಪಿಯ ಏಕೈಕ ಶಾಸಕ ಜಮಾ ಖಾನ್ ಅವರನ್ನು ಪಕ್ಷಕ್ಕೆ ಕರೆಸಿಕೊಂಡ ನಿತೀಶ್, ಸಚಿವ ಸ್ಥಾನವನ್ನೂ ನೀಡಿದ್ದರು. ಪಕ್ಷೇತರ ಶಾಸಕ ಸುಮಿತ್ ಕುಮಾರ್ ಸಹ ನಿತೀಶ್ ತೆಕ್ಕೆಗೆ ಬಂದು ಮಂತ್ರಿಯೂ ಆದರು.

ಇದು ಇಷ್ಟಕ್ಕೇ ಮುಗಿಯಲಿಲ್ಲ. ಅಷ್ಟೇನೂ ಉತ್ತಮ ಬಾಂಧವ್ಯ ಹೊಂದಿರದ ಉಪೇಂದ್ರ ಕುಶ್ವಾಹ ಜತೆ ರಹಸ್ಯ ಮಾತುಕತೆ ನಡೆಯಿತು. ಕುಶ್ವಾಹ ಅವರು ತಮ್ಮ ರಾಷ್ಟ್ರೀಯ ಲೋಕ ಸಮತಾ ಪಾರ್ಟಿಯನ್ನು ಜೆಡಿಯು ಜೊತೆ ವಿಲೀನ ಮಾಡಿ ಅಚ್ಚರಿ ಮೂಡಿಸಿದರು. ಕುಶ್ವಾಹ ಅವರು ಕೋಯಿರಿ ಸಮುದಾಯಕ್ಕೆ ಹಾಗೂ ನಿತೀಶ್ ಅವರುಒಬಿಸಿಯ ಪ್ರಬಲ ಕುರ್ಮಿ ಸಮುದಾಯಕ್ಕೆ ಸೇರಿದವರು. ‘ಲವ–ಕುಶ’ ಎಂದೇ ಕರೆಯಲಾಗುವ ಈ ಎರಡೂ ಸಮುದಾಯಗಳು ರಾಜ್ಯದ ಶೇ 10ರಷ್ಟು ಮತದಾರರನ್ನು ಹೊಂದಿವೆ. ಹೀಗೆ ನಿತೀಶ್ ಅವರು ಜಾತಿ ಸಮೀಕರಣದ ಮೂಲಕ ತಮ್ಮ ಅಡಿಪಾಯ ಭದ್ರಪಡಿಸಿಕೊಂಡರು.

ಜೊತೆಗೆ ಸ್ಥಿತಿಸ್ಥಾಪಕ ಗುಣವನ್ನೂ ನಿತೀಶ್ ಅಳವಡಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆಯ ಬಳಿಕ ಬಿಜೆಪಿಯು ತಮ್ಮ ವಿರುದ್ಧ ದಾಳಿ ಮಾಡಬಾರದು ಎಂಬ ಉದ್ದೇಶ ಇದರಲ್ಲಿ ಅಡಗಿದೆ. ಏಕೆಂದರೆ ಬಿಜೆಪಿಯು ಈಗಾಗಲೇ ತನ್ನ ಕೆಲವು ನಾಯಕರ ಮೂಲಕ ನೀತೀಶ್ ಅವರನ್ನು ಪರೀಕ್ಷೆಗೆ ಒಳಪಡಿಸುತ್ತಿದೆ. ‘ಯೋಗಿ ಆಡಳಿತ ಮಾದರಿ’ಯನ್ನು ಅನುಸರಿಸುವುದು ಹಾಗೂ ಅಪರಾಧ ಪ್ರಕರಣ ಕಡಿಮೆ ಮಾಡಲು ‘ಎನ್‌ಕೌಂಟರ್’ನಂತಹ ದಿಟ್ಟ ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ಮುಕ್ತ ಅವಕಾಶ ನೀಡುವಂತೆ ನಿತೀಶ್‌ಗೆ ಸಲಹೆ ನೀಡಲಾಗಿತ್ತು. ಈ ಪ್ರಸ್ತಾವಗಳನ್ನು ಜೆಡಿಯು ನಯವಾಗಿಯೇ ತಿರಸ್ಕರಿಸಿದೆ.

ಸಲಹೆ ಎಂಬುದಕ್ಕಿಂತ ಮಿಗಿಲಾಗಿ ಇದೊಂದು ಕಿರುಕುಳದ ನಡೆ ಎಂದೇ ವಿಶ್ಲೇಷಿಸಲಾಗುತ್ತದೆ. ಬಿಜೆಪಿ ಅಧಿಕಾರದಲ್ಲಿರುವ ಆದರೆ, ಬೇರೊಂದು ಪಕ್ಷದ ಮುಖ್ಯಮಂತ್ರಿ ಅಧಿಕಾರ ನಡೆಸುತ್ತಿರುವ ರಾಜ್ಯ ಬಿಹಾರವಾಗಿದೆ. ಹೀಗಾಗಿ ಬಿಹಾರದಲ್ಲಿ ತನ್ನ ಪಕ್ಷದ ಮುಖ್ಯಮಂತ್ರಿ ಇರಬೇಕು ಎಂಬುದು ಬಿಜೆಪಿಯ ಹೆಬ್ಬಯಕೆ.

***

ಬಂಗಾಳ ಚುನಾವಣೆ ಫಲಿತಾಂಶದವರೆಗೆ ಕಾಯಿರಿ. ಅಲ್ಲಿ ಅಭೂತಪೂರ್ವ ಗೆಲುವು ಸಿಕ್ಕರೆ, ಅದು ಬಿಹಾರದಲ್ಲೂ ಪ್ರತಿಫಲಿಸಲಿದೆ

- ಹೆಸರು ಹೇಳಲಿಚ್ಛಿಸದ ಬಿಜೆಪಿ ಸಂಸದ

***

ಬಿಜೆಪಿ ಆಕ್ರಮಣಕಾರಿ ನೀತಿ ಅನುಸರಿಸುತ್ತಿದೆ ಎಂಬುದನ್ನು ಒಪ್ಪಲಾಗದು. ಆದರೆ ಮೋದಿ ಅಚ್ಚರಿ ನೀಡಿದರೂ ನೀಡಬಹುದು

-ಅಜಯ್ ಕುಮಾರ್, ರಾಜಕೀಯ ವಿಶ್ಲೇಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT